ಗುಲ್ಬರ್ಗ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಲ್ಲಿ ೦೭-೧೨-೧೯೦೮ರ ದತ್ತ ಜಯಂತಿ ದಿನದಂದು ಜನಿಸಿದ ಆ ಬಾಲಕನ ಹೆಸರು ಶ್ರೀಧರ. ಕಮಲಾಬಾಯಿ, ನಾರಾಯಣರಾವ್ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಧರನ ಪ್ರಾಥಮಿಕ ವಿದ್ಯಾಭ್ಯಾಸ ಹೈದರಾಬಾದಿನಿಂದ ಆರಂಭವಾಯಿತು. ಕರ್ಮಠ ಸಂಪ್ರದಾಯಸ್ಥರ ಮನೆಯ ಹುಡುಗನಿಗೆ ಬಾಲ್ಯದಲ್ಲೇ ಸಮರ್ಥ ರಾಮದಾಸರ ಅನುಯಾಯಿ ಸಾಧುಗಳ ಪರಿಚಯವಾಯಿತು. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಬಾಲಕ, ಗುಲ್ಬರ್ಗದಲ್ಲಿನ ಚಿಕ್ಕಮ್ಮನ ಮನೆಗೆ ಬಂದ. ಅಲ್ಲಿ ಒಂದಿಷ್ಟು ಕಾಲ ವಿದ್ಯಾಭ್ಯಾಸ ಮುಂದುವರಿಸಿದ. ಹೆಚ್ಚಿನ ಕಲಿಕೆಯ ಹಂಬಲದಿಂದ ಪುಣೆಯ ಹಾದಿ ಹಿಡಿದ.
ಪುಣೆಯಲ್ಲಿ ಓದುತ್ತಿದ್ದಾಗ ಈ ಬಾಲಕನ ಚಿತ್ತ ತಪಸ್ಸಿನತ್ತ ಹೊರಳಾಡತೊಡಗಿತು. ಸನ್ಯಾಸಿಯಾಗುವ ಹಂಬಲ ಬಲವಾಯಿತು. ಅತಿಯಾಗಿ ಫೇಡಾ ತಿನ್ನುತ್ತಿದ್ದ ಶ್ರೀಧರ, ಫೇಡಾದಲ್ಲಿ ಹಸುವಿನ ಸಗಣಿ ಬೆರೆಸಿ ತನಗಿಷ್ಟವಾದ ಫೇಡಾ ಬಿಟ್ಟ ಹಠಮಾರಿ ಬಾಲಕ. ಅಂತಹ ಬಾಲಕ, ೧೯೨೭ರ ವಿಜಯದಶಮಿಯಂದು ತನ್ನ ಕನಸಿನ ಸನ್ಯಾಸಲೋಕದತ್ತ ಹೆಜ್ಜೆ ಹಾಕಿಯೇ ಬಿಟ್ಟ. ಗುರು ಯಾರು? ಗುರಿ ಏನು? ನಾನು ಎಲ್ಲಿಗೆ ಹೋಗಲಿ? ಎಂಬಿತ್ಯಾದಿ ಸಂಗತಿಗಳ ಕುರಿತು ಆಲೋಚಿಸದೇ ಪುಣೆಯನ್ನು ತ್ಯಜಿಸಿದ. ಹಾಗೆ ಪುಣೆ ಬಿಟ್ಟವನಿಗೆ, ಯಾರೋ ಹಿರಿಯರು ಸಮರ್ಥ ರಾಮದಾಸರ ಕ್ಷೇತ್ರವಾದ ಸಜ್ಜನಗಢದ ಹಾದಿ ತೋರಿಸಿದರು ಎಂಬುದು ಅವರ ಜೀವನ ಚರಿತ್ರೆಯಲ್ಲಿ ದಾಖಲಾಗಿದೆ.
ಛತ್ರಪತಿ ಶಿವಾಜಿಯಂಥ ನಾಯಕರನ್ನು ದೇಶಕ್ಕೆ ದೇಣಿಗೆಯಾಗಿ ನೀಡಿದ ಸಮರ್ಥ ರಾಮದಾಸರ ನಾಡು ಸಜ್ಜನಗಢ. ಅಂತಹ ನಾಡಿಗೆ ಶ್ರೀಧರ ಕಾಲಿಟ್ಟ. ಅಲ್ಲಿನ ದೇವಾಲಯದ ಕೆಲಸ ಮಾಡುವುದು, ರಾತ್ರಿ ವೇಳೆ ಮಂದಿರದೊಳಗೆ ಕುಳಿತು ಧ್ಯಾನ ಮಾಡುವುದು ಆತನ ದಿನಚರಿಯಾಗಿತ್ತು. ‘ಕೌಪೀನವಂತಃ ಖಲು ಭಾಗ್ಯವಂತಃ’ ಎನ್ನುತ್ತ ಐರಣಿ ಮಹಾರಾಜರು ಕೊಟ್ಟ ಬಟ್ಟೆಗಳನ್ನು ತಿರಸ್ಕರಿಸಿದ ಶ್ರಿಧರ ಅಲ್ಲಿ ಅಕ್ಷರಶಃ ವೈರಾಗಿಯಂತೆ ಬದುಕುತ್ತಿದ್ದ ಎಂಬುದು ಚರಿತ್ರೆಯ ಪುಟಗಳಿಂದ ತಿಳಿದುಬರುತ್ತದೆ.
ದಿನಕಳೆದಂತೆ ಶ್ರೀಧರನ ಧ್ಯಾನದ ಗಾಢತೆ ಹೆಚ್ಚಾಗತೊಡಗಿತು. ಬಾಲಕ ಜನರ ಬಾಯಲ್ಲಿ ಶ್ರೀಧರ ಭಗವಾನ್ ಎಂದು ಪರಿವರ್ತನೆಗೊಂಡರು. ಅಕೃತವಾಗಿ ಗುರು ಮುಖೇನ ಸನ್ಯಾಸತ್ವ ಪಡೆಯದಿದ್ದರೂ ಸನ್ಯಾಸಿಯ ತೇಜಸ್ಸು ಶ್ರೀಧರರ ದೇಹದಲ್ಲಿ ರಾರಾಜಿಸತೊಡಗಿತು. ಧಾನ್ಯ, ಪೂಜೆ, ಕೆಲಸ…ಹೀಗೆ ದಿನ ಕಳೆಯುತ್ತಿದ್ದ ಶ್ರೀಧರರು ಅದೊಮ್ಮೆ ದಿಢೀರನೆ ಮಾಯವಾಗಿ ಬಿಟ್ಟಿದ್ದರು ಅಂತಲೂ ಅವರ ಚರಿತ್ರೆಯಲ್ಲಿ ಬರುತ್ತದೆ. ನಿಜವಾಗಿಯೂ ಮಾಯವಾಗಿದ್ದರೋ ಅಥವಾ ಭಕ್ತಿಯ ಪರಾಕಾಷ್ಠೆ ತಲುಪಿದ್ದ ಒಂದಿಷ್ಟು ಜನ ಅಂತಹದ್ದೊಂದು ಸುದ್ದಿ ಹುಟ್ಟಿಸಿದ್ದರೋ ಗೊತ್ತಿಲ್ಲ! ಅದಾದ ನಂತರ ಶ್ರೀಧರರು ಪವಾಡ ಪುರುಷರು ಎಂಬ ಮಾತುಗಳು ಕೇಳಿ ಬರಲಾರಂಭಿಸಿತು. ಅವರನ್ನು ಹುಡುಕಿಕೊಂಡು ಬರುವ ಮಂದಿಯ ಸಂಖ್ಯೆ ಹೆಚ್ಚಾಯಿತು. ಆ ವೇಳೆಗೆ ಶ್ರೀಧರರು ಸಜ್ಜನಗಢ ತೊರೆದು ದಕ್ಷಿಣದತ್ತ ಮುಖ ಮಾಡಿದರು.
ಸಜ್ಜನಗಢದಿಂದ ಕೊಲ್ಲಾಪುರ ಮಾರ್ಗವಾಗಿ ಉತ್ತರ ಕರ್ನಾಟಕದ ಹಾದಿ ಹಿಡಿದರು. ಮೂಲತಃ ಮಹಾರಾಷ್ಟ್ರದವರಾಗಿದ್ದ ಶ್ರೀಧರರು ಸಜ್ಜನಗಢ ತೊರೆದ ನಂತರ ಶಾಶ್ವತವಾಗಿ ನಮ್ಮವರಾಗಿಬಿಟ್ಟರು. ‘ಅವರ ಮಾತೃಭಾಷೆ ಮರಾಠಿಯಾಗಿತ್ತು ಎಂಬುದು ಬಹುಶಃ ಅವರಿಗೂ ಮರೆತಿರಬೇಕು’ ಎನ್ನುವಷ್ಟರ ಮಟ್ಟಿಗೆ ಶ್ರೀಧರರು ಕನ್ನಡಿಗರಾದರು. ಸಿರಸಿ ತಾಲೂಕಿನ ಶೀಗೆಹಳ್ಳಿ ಶ್ರೀಧರರನ್ನು ಕೈಬೀಸಿ ಕರೆಯಿತು. ಅಲ್ಲಿನ ಶ್ರೀಗಳಾದ ಶಿವಾನಂದ ಸ್ವಾಮಿಗಳು ಗುರುಗಳಾಗಿ ಶ್ರೀಧರರ ಬೆನ್ನಿಗೆ ನಿಂತರು.
ಕೆಲ ಕಾಲ ಅಲ್ಲಿ ನೆಲೆಯೂರಿದ್ದ ಶ್ರೀಧರರು, ನಂತರ ಸಿರಸಿ, ಸೊರಬ, ಸಾಗರ, ಹೊಸನಗರ ತಾಲೂಕಗಳತ್ತ ಪ್ರವಾಸ ಕೈಗೊಂಡರು. ಅನೇಕ ಕಡೆಗಳಲ್ಲಿ ಧರ್ಮದ ಕುರಿತು, ಸಾಮಾಜಿಕ ಮೌಢ್ಯತೆಗಳ ಕುರಿತು ಉಪನ್ಯಾಸ ನೀಡಿದರು. ಸ್ವಲ್ಪ ಕಾಲ ಕೊಡಚಾದ್ರಿಯ ತಪ್ಪಲಲ್ಲಿ ಧ್ಯಾನಕ್ಕೆ ಕುಳಿತರು. ಕೊನೆಗೆ ಬನವಾಸಿಯ ಮೂಲಕ ಮತ್ತೆ ಶೀಗೆಹಳ್ಳಿಗೆ ಬಂದರು. ಶೀಗೆಹಳ್ಳಿಯ ಶ್ರೀ ಶಿವಾನಂದ ಸ್ವಾಮಿಗಳು, ಕಮಂಡಲ ಕಾವಿ ಬಟ್ಟೆಗಳನ್ನು ಶ್ರೀಧರರಿಗೆ ನೀಡಿ ಸನ್ಯಾಸ ದೀಕ್ಷೆ ಕೊಟ್ಟರು. ಧರ್ಮಧ್ವಜ ಸ್ಥಾಪಿಸಬೇಕೆಂದು ಆದೇಶವನ್ನಿತ್ತರು. ಈ ಘಟನೆಯ ನಂತರ ಶ್ರೀಧರರು ಮತ್ತೆ ಸಜ್ಜನಗಢದತ್ತ ಸಾಗಿದರು.
ಸಜ್ಜನಗಢದಲ್ಲಿ ಒಂದಿಷ್ಟು ಕಾಲ ಕಳೆಯುತ್ತಿದ್ದಂತೆ ಶ್ರೀ ಶಿವಾನಂದರ ದೇಹತ್ಯಾಗದ ಸುದ್ಧಿ ಶ್ರೀಧರರ ಕಿವಿಗೆ ಬಿತ್ತು. ಅಲ್ಲಿಂದ ಮತ್ತೆ ಶೀಗೆಹಳ್ಳಿಯತ್ತ ಪ್ರಯಾಣ ಬೆಳೆಸಿದರು. ಶ್ರೀಧರರು ಶೀಗೆಹಳ್ಳಿಗೆ ಕಾಲಿಡುವಾಗ ಶಿವಾನಂದರು ಮಕ್ತರಾಗಿ ಎರಡು ವರ್ಷಗಳೇ ಕಳೆದುಹೋಗಿತ್ತು. ಮಠ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಮಠದ ಅಭಿವೃದ್ಧಿಗೆ ಪಣತೊಟ್ಟ ಶ್ರೀಧರರು ಗುರುಗಳ ಸಮಾದಿ ನಿರ್ಮಿಸಿದರು. ಆರಾಧನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವಷ್ಟರ ಮಟ್ಟಿಗೆ ಮಠವನ್ನು ಕಟ್ಟಿ ಬೆಳೆಸಿದರು. ಮಠದ ಆವರಣದಲ್ಲಿ ವೇದ, ಸಂಸ್ಕೃತ ಪಾಠಶಾಲೆ ಆರಂಭಿಸಿದರು. ಇಷ್ಟಾಗಿಯೂ ಶ್ರೀಧರರಿಗೆ ಪೂರ್ಣ ಪ್ರಮಾಣದ ಸನ್ಯಾಸತ್ವ ಸ್ವೀಕರಿಸುವ ಕಾಲ ಕೂಡಿ ಬಂದಿರಲಿಲ್ಲ!
ಆವತ್ತು ಶೀಗೆಹಳ್ಳಿಯತ್ತ ಜನರ ಹಿಂಡು-ಹಿಂಡೇ ಧಾವಿಸಿ ಬಂದಿತ್ತು. ಅಂದಹಾಗೆ ಶೀಗೆಹಳ್ಳಿಯಂಥ ಪುಟ್ಟ ಊರಿನಲ್ಲಿ ಆ ಪರಿ ಜನ ಸೇರಲು ಒಂದು ಕಾರಣವಿತ್ತು. ಊರೂರು ಸುತ್ತುತ್ತಾ ಧರ್ಮ ಪ್ರಚಾರ ಮಾಡುತ್ತಿದ್ದ ಯೋಗಿಯೊಬ್ಬರು ಸನ್ಯಾಸ ಸ್ವೀಕರಿಸುತ್ತಾರಂತೆ ಎಂಬ ಸುದ್ಧಿ ಜನರನ್ನು ಅಲ್ಲಿಗೆ ಎಳೆತಂದಿತ್ತು. ಚಿತ್ರಭಾನು ಸಂವತ್ಸರದ ವಿಜಯ ದಶಮಿಯ(೧೯೪೨) ಶ್ರೀಧರರು , ಹತ್ತಾರು ಗುರುಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾದ ಸನ್ಯಾಸ ದೀಕ್ಷೆ ಪಡೆದರು. ‘ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಬ್ರಹ್ಮಚೈತನ್ಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿ ಮಹಾರಾಜಕೀ ಜೈ’ ಎಂಬ ಜೈಕಾರದ ಸದ್ದು ಎಲ್ಲೆಡೆ ಮೊಳಗಿತು.
‘ಕುಸಿದುಬಿದ್ದಿದ್ದ ಶೀಗೆಹಳ್ಳಿಯ ಮಠವನ್ನು ಮತ್ತೆ ಕಟ್ಟಿದರು. ಒಂದಿಷ್ಟು ಕಾಸು ಕೂಡಿಟ್ಟರು. ಈಗ ಶಾಶ್ವತವಾಗಿ ಇಲ್ಲಿಯೇ ಸ್ವಾಮಿಗಳಾಗಿ ಕೂತರು…!’ ಹಾಗಂತ ಆಡಿಕೊಳ್ಳುತ್ತಿದ್ದ ಜನರ ಲೆಕ್ಕಾಚಾರವನ್ನು ತಲೆಕೆಳಗಾಗಿಸಲು ಶ್ರೀಧರರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಪೀಠ, ಸನ್ಯಾಸಿ ಪಟ್ಟ, ಮಠದ ಸಂಪತ್ತು…ಊಹುಂ ಇವ್ಯಾವುದು ಆ ವೈರಾಗಿಯನ್ನು ಆಕರ್ಷಿಸಲೇ ಇಲ್ಲ. ಊರೂರು ಅಲೆಯುವುದು, ಧರ್ಮ ಪ್ರಚಾರ, ದೀನ ದಲಿತರ ಉದ್ದಾರ… ಇತ್ಯಾದಿಗಳನ್ನೇ ದಿನಚರಿಯನ್ನಾಗಿಸಿಕೊಂಡಿದ್ದ ಶ್ರೀಧರರು, ಭಗವಾನ್ ಅನ್ನಿಸಿಕೊಂಡ ನಂತರವೂ ಶೀಗೆಹಳ್ಳಿಯಲ್ಲಿ ಉಳಿಯಲಿಲ್ಲ. ತಮ್ಮ ನಿತ್ಯದ ಸಮಾಜಮುಖಿ ಬದುಕಿನ ಲೋಕಕ್ಕೆ ಕಾಲಿಟ್ಟರು.
ಶೀಗೆಹಳ್ಳಿ ಬಿಟ್ಟ ನಂತರ ಶ್ರೀಗಳು ಮಾಡಿದ್ದು ಅಕ್ಷರಶಃ ಸಾಮಾಜಿಕ ಕೆಲಸಗಳನ್ನು. ಮೂಢನಂಬಿಕೆಗಳನ್ನು ಹೋಗಲಾಡಿಸುವುದು, ಅನಾಥರು, ಭಿಕ್ಷುಕರು, ರೋಗಿಗಳ ಜತೆ ಬೆರೆಯುವುದು, ಕೈಲಾಗದ ಅಶಕ್ತರಿಗೆ ಆಶ್ರಯ ಒದಗಿಸಿ ಕೊಡುವುದು, ಶ್ರೀಮಂತರಿಂದ ಬಡವರಿಗೆ ಸಹಾಯ ಒದಗಿಸಿಕೊಡುವುದು…ಇಂತಹದ್ದೇ ಕಾರ್ಯಗಳನ್ನು ಕೈಗೆತ್ತಿಕೊಂಡು ತಮ್ಮ ಸಂಚಾರವನ್ನು ಮುಂದುವರಿಸಿದರು. ಲೋಕ ಸಂಚಾರದಲ್ಲಿ ನಿರತವಾಗಿದ್ದ ಶ್ರೀಧರರು ೧೯೫೩ರ ಸುಮಾರಿಗೆ ಶಿವಮೊಗ್ಗ ಜಿಲ್ಲೆಯ ದಟ್ಟ ಅರಣ್ಯಗಳ ಸಾಲಿನಲ್ಲಿ ಒಂದಾಗಿರುವ ಬೆಂಕಟವಳ್ಳಿ ಕಾನಿಗೆ ಬಂದರು. ಅಲ್ಲಿ ಪುಟ್ಟದೊಂದು ದುರ್ಗಾದೇವಿಯ ದೇವಸ್ಥಾನವಿತ್ತು. ಅಲ್ಲಿ ಶ್ರೀಗಳಿಗೆ ಪಾದಪೂಜೆ, ಭಿಕ್ಷಾ ಸೇವೆ ಏರ್ಪಡಿಸಲಾಗಿತ್ತು. ಅದನ್ನು ಸ್ವೀಕರಿಸಿದ ನಂತರ ಮತ್ತೆ ಲೋಕ ಸಂಚಾರ ಮುಂದುವರಿಯಿತು.
೧೯೫೪ ರಲ್ಲಿ ಮತ್ತೆ ಶ್ರೀಗಳು ವದ್ದಳ್ಳಿಯತ್ತ ಮುಖ ಮಾಡಿದರು. ವದ್ದಳ್ಳಿಯನ್ನೇ ತಮ್ಮ ಧರ್ಮಕಾರ್ಯದ ಕೇಂದ್ರವನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಅಲ್ಲಿಂದ ನಂತರ ವರದಹಳ್ಳಿಯ ಬೆಳವಣಿಗೆ ಆರಂಭವಾಯಿತು. ಕಲ್ಲು , ಮುಳ್ಳುಗಳ ಕಾಡಿನಲ್ಲೊಂದು ಧರ್ಮಧ್ವಜ ಸ್ಥಾಪನೆಯಾಯಿತು. ಜತೆಗೆ ‘ಶ್ರೀ ಶ್ರೀಧರಾಶ್ರಮ’ ಎಂಬ ಪುಟ್ಟದೊಂದು ಆಶ್ರಮವೂ ನಿರ್ಮಾಣವಾಯಿತು. ದೇವರ ಧಾರ್ಮಿಕ ಕಾರ್ಯಕ್ರಮಗಳು, ದತ್ತಾತ್ರೇಯ ದೇವರ ಆರಾಧನೆಗಳು ಆರಂಭವಾದವು. ಕಾಡಿನ ನಡುಮಧ್ಯದ ಕುಟೀರದತ್ತ ಜನ ಹರಿದು ಬರಲಾರಂಭಿಸಿದರು. ನೀರಿಲ್ಲದ ನಾಡಿನಲ್ಲಿ ನೀರಿನ ಧಾರೆಯ ಹರಿಯಿತು. ಇವತ್ತಿಗೂ ‘ಶ್ರೀ ಶ್ರೀಧರ ತೀರ್ಥ’ ಎಂಬ ಹೆಸರಿನಡಿಯಲ್ಲಿ ೨೪ ಗಂಟೆಗಳ ಕಾಲವೂ ಬೆಟ್ಟದ ತುದಿಯಿಂದ ನೀರು ಹರಿದು ಬರುವುದು ಈ ಕ್ಷೇತ್ರದ ವೈಶಿಷ್ಟ್ಯಗಳಲ್ಲಿ ಒಂದು.
ವಸತಿಗೊಂದು ಖಾಯಂ ಜಾಗವಾದ ಮೇಲೆ ಸ್ವಾಮಿಗಳ ಭಕ್ತ ವ್ಯಾಪ್ತಿಯೂ ಹೆಚ್ಚಾಯಿತು. ಸಮಾಜಮುಖಿ ಯೋಜನೆಗಳು ವಿಸ್ತಾರವಾಗತೊಡಗಿತು. ಆಶ್ರಮ, ಅನಾಥರಿಗೆ, ಅಶಕ್ತರಿಗೆ, ಬಡವರಿಗೆ ಆಶ್ರಯ ತಾಣವಾಯಿತು. ದುರ್ಬಲರಿಗೆ, ಬೇಡಿ ತಿನ್ನುವವರಿಗೆ ಶ್ರೀಗಳ ನೇತೃತ್ವದಲ್ಲೇ ಊಟೋಪಚಾರದ ವ್ಯವಸ್ಥೆ ಆರಂಭವಾಯಿತು. ಹಾಗಂತ ಶ್ರೀಗಳೇನೂ ಶಾಶ್ವತವಾಗಿ ಆಶ್ರಮದಲ್ಲಿ ಕೂರಲಿಲ್ಲ. ಮತ್ತೆ ಸಂಚಾರ ಕಾರ್ಯ ಮುಂದುವರಿಸಿದರು. ರಾಜ್ಯದ ವಿವಿಧೆಡೆ ಚಾತುರ್ಮಾಸ ವ್ರತ ಆಚರಿಸಿದರು. ಉತ್ತರ ಭಾರತದತ್ತಲೂ ಮುಖ ಮಾಡಿದರು. ಕಾಶಿ, ಉಜ್ಜಯಿನಿ, ಹಿಮಾಲಯದ ತಪ್ಪಲುಗಳನ್ನು ತಿರುಗಿ ಬಂದರು.
ಇಡೀ ಭಾರತದ ಉದ್ದಗಲವನ್ನು ಸಂಚರಿಸಿದ ಶ್ರೀಗಳು ೧೯೬೭ರಲ್ಲಿ ಮತ್ತೆ ವದ್ದಳ್ಳಿಗೆ ವಾಪಸಾದರು. ನಂತರ ಸತತ ಆರು ವರ್ಷಗಳ ಕಾಲ ಏಕಾಂತ ವ್ರತ ಆಚರಿಸಿ ಧಾನ್ಯ ಮಗ್ನರಾದ ಶ್ರೀಗಳು ೧೯-೪-೧೯೭೩ರಂದು ಇಹಲೋಕವನ್ನು ತ್ಯಜಿಸಿದರು. ಅಲ್ಲಿಂದ ನಂತರ ಶ್ರೀ ಕ್ಷೇತ್ರ ವರದಪುರದಲ್ಲಿ ಶ್ರೀಗಳ ಸಮಾದಿಯೇ ಪೂಜಾ ಕೇಂದ್ರವಾಯಿತು. ಈ ಆಶ್ರಮಕ್ಕೆ ಉತ್ತರಾಧಿಕಾರಿಗಳಿಲ್ಲ. ಉತ್ತರಾಧಿಕಾರಿ ಪರಂಪರೆಯ ಮಠವೂ ಇದಲ್ಲ! ವದ್ದಳ್ಳಿಯಲ್ಲಿ ಇವತ್ತಿಗೂ ಧಾರ್ಮಿಕ, ಸಾಮಾಜಿಕ ಕಾರ್ಯಗಳು ನಡೆದುಕೊಂಡು ಬರುತ್ತಿದೆ.
( ಸಂಗ್ರಹ- ಶಿವ ಕುಮಾರ್ ಬೆಂಗಳೂರು )