ನೂರಾರು ಭಾವ

ನನ್ನ ಸೋಷಿಯಲ್ ಮಾಷ್ಟ್ರು . . . ಕೆಲವು ಸವಿನೆನಪುಗಳು

shilpa-sreeharsha-writer-ಶಿಲ್ಪ ಶ್ರೀಹರ್ಷ ಕೈತೋಟ

ಅವರ ಹೆಸರು ಎಸ್.ಜಿ.ರಾಮಕೃಷ್ಣ. ನಾನು ಓದುತ್ತಿದ್ದ ಬಿದನೂರು ನಗರ ಹೈಸ್ಕೂಲಿಗೆ, ಹೊಸತಾಗಿ ಅಧ್ಯಾಪಕರಾಗಿ ಬಂದಿದ್ದರು. ನಾವು ಮಿಡ್ಲ್ ಸ್ಕೂಲ್ ಮುಗಿಸಿ ಹೈಸ್ಕೂಲ್ ಸೇರಿದ್ದೆವು. ಆಗಿನ್ನೂ ನಮಗೆ ಮಾಷ್ಟರರನ್ನು ಇನಿಷಿಯಲ್ಸ್‌ನಿಂದ ಕರೆಯುವುದೂ ಗೊತ್ತಿರಲಿಲ್ಲ. ಯಾರು ಯಾವ ವಿಷಯ ಹೇಳಿಕೊಡುತ್ತಾರೋ ಅವರನ್ನು ಆ ವಿಷಯದ ಮಾಷ್ಟ್ರು ಅಂತ ಕರೆಯುತ್ತಿದ್ದೆವು. ಹಾಗೇ ಇವರು ಸಮಾಜ ಹೇಳಿಕೊಡುತ್ತಿದ್ದುದರಿಂದ ಸೋಷಿಯಲ್ ಮಾಷ್ಟ್ರು ಆದರು. ನಂತರದ ಹೈಸ್ಕೂಲ್ ದಿನಗಳಲ್ಲಿ, ಎಂ ಎಸ್ ಕೆ, ಎಸ್ ಎಂ ಎಸ್, ಎಂ ಎನ್ ಜೆ ಅಂತೆಲ್ಲಾ ಹೇಳುವುದು ಅಭ್ಯಾಸವಾದರೂ, ಈ ರಾಮಕೃಷ್ಣ ಮಾತ್ರ ಎಸ್ ಜಿ ಆರ್ ಆಗಲೇ ಇಲ್ಲ-especially ನನ್ನ ಪಾಲಿಗೆ. ಈಗಲೂ ನಾನು ಅವರನ್ನು ನೆನೆಯುವಾಗ ಸೋಷಿಯಲ್ ಮಾಷ್ಟ್ರು ಅಂತಲೇ ನೆನೆಯುತ್ತೇನೆ.

ವಿದ್ಯಾರ್ಥಿ ಜೀವನದಲ್ಲಿ ನಾ ಕಂಡ ಅಧ್ಯಾಪಕರ ಸಂಖ್ಯೆ ೩೦ಕ್ಕೂ ಅಧಿಕ. ಅವರಲ್ಲಿ ತಮ್ಮ ಕಾರ್ಯಗಳಿಂದಾಗಿ ನನ್ನ ಮನಃಪೂರ್ವಕ ಗೌರವವನ್ನು ಗಳಿಸಿಕೊಂಡ ಕೆಲವೇ ಕೆಲವು ಅಧ್ಯಾಪಕರುಗಳಲ್ಲಿ ಅವರೂ ಒಬ್ಬರು. ಹಾಗಂತ ಎಲ್ಲರೂ ನಿರೀಕ್ಷಿಸುವಂತೆ, ಎಲ್ಲರಿಗಿಂತ ಭಿನ್ನವಾದ ಅಥವಾ ಅತಿ ಗಂಭೀರವಾದ ವ್ಯಕ್ತಿತ್ವ ಅವರದಾಗಿರಲಿಲ್ಲ. ಆರು ಅಡಿ ಎತ್ತರದ ನೀಳಕಾಯ, ಅಗಲವಾದ ಹಣೆ, ಹಸನ್ಮುಖ, ಆತ್ಮವಿಶ್ವಾಸದ ಚಿಹ್ನೆಯಂತಿದ್ದ ಕಣ್ಣುಗಳು, ಇಸ್ತ್ರಿ ಹಾಕಿದ, ತಿಳಿಬಣ್ಣದ ತುಂಬುತೋಳಿನ ಷರಟು, ಅದಕ್ಕೊಪ್ಪುವ ಪ್ಯಾಂಟು ಅವರ ಶಿಸ್ತಿನ ಸುದೃಢ ವ್ಯಕ್ತಿತ್ವಕ್ಕೆ ದ್ಯೋತಕವಾಗಿದ್ದವು. ಅವರು ತಮ್ಮ ಊರು ಚಕ್ರಾನಗರದಿಂದ ಸುಮಾರು ಆರೇಳು ಕಿಲೋಮೀಟರ್ ದೂರದ ನಗರಕ್ಕೆ ದಿನಾಲೂ ವಿದ್ಯಾರ್ಥಿಗಳ ಜೊತೆಗೇ ಕೆಪಿಸಿ ಬಸ್ಸಿನಲ್ಲಿ ಬರುತ್ತಿದ್ದರು. ಅವರು ನನ್ನ ಮೆಚ್ಚಿನ ಮಾಷ್ಟ್ರಾಗುವುದಕ್ಕೆ ಕಾರಣಗಳು ಬಹಳಷ್ಟು. ಅವರ ಬುದ್ಧಿವಂತಿಕೆ, ವಿಷಯದ ಬಗೆಗಿನ ಆಳವಾದ ಜ್ಞಾನ. ಅದಕ್ಕೂ ಮಿಗಿಲಾಗಿ ಅದನ್ನು ಮಕ್ಕಳಿಗೆ ವಿವರಿಸುವ ರೀತಿ ನನಗೆ ಅವರ ಬಗ್ಗೆ ಗೌರವ ಇಮ್ಮಡಿಸಲು ಕಾರಣವಾಯಿತು. ಆದರೆ ಬಹುಶಃ ಅವರ ವೃತ್ತಿಜೀವನದಲ್ಲಿ ಅವರು ಮೊದಲ ಬಾರಿಗೆ ಒಬ್ಬ ವಿದ್ಯಾರ್ಥಿ/ನಿಯ ಮೇಲೆ ಸಿಟ್ಟು ಮಾಡಿಕೊಂಡಿದ್ದೆಂದರೆ ಅದು ನನ್ನ ಮೇಲೇ!! ಆಶ್ಚರ್ಯವೇ? ಅದು ನಡೆದದ್ದು ಹೀಗೆ:

ಹೈಸ್ಕೂಲಿನ ಕ್ಲಾಸುಗಳು ಆಗಿನ್ನೂ ಪ್ರಾರಂಭವಾಗಿದ್ದವು. ಜೂನ್ ತಿಂಗಳ ‘ನಗರದ ಮಳೆಗಾಲ’. ನಗರದ ಮಳೆಗಾಲವೆಂದು ಏಕೆ ಹೇಳಿದೆನೆಂದರೆ ಅದೆಂಥ ಭಯಂಕರ ಮಳೆಗಾಲವೆಂಬುದು ಅಲ್ಲಿ ವಾಸಿಸುವವರಿಗೆ ಮಾತ್ರ ಗೊತ್ತು. ಆಕಾಶವೇ ತೂತುತೂತಾಗಿಬಿಟ್ಟಿದೆಯೇನೋ ಎಂಬಂತೆ ಅಲ್ಲಿ ಮಳೆ ಸುರಿಯುತ್ತದೆ. ಅಂಥ ಮಳೆಗಾಲದಲ್ಲಿ ನೆಗಡಿಯಾಗುವುದು ಸರ್ವೇಸಾಮಾನ್ಯ. ಅಂದು ನನಗೂ ನೆಗಡಿಯಾಗಿತ್ತು. ನಾನು ನನಗೇ ಹಾಕಿಕೊಂಡ- ಯಾವುದೇ ಕಾರಣಕ್ಕೂ ಕ್ಲಾಸ್ ತಪ್ಪಿಸಬಾರದೆಂಬ- ಅಲಿಖಿತ ನಿಯಮದ ಪ್ರಕಾರ, ನಾನು ಶಾಲೆಗೆ ಹೋಗಿದ್ದೆ. ಅವರು ಆಗಿನ್ನೂ ಬಿಎಡ್ ಮುಗಿಸಿ ಶಿಕ್ಷಕರಾಗಿ ಸೇರಿದ್ದರು. ಅಂದು ನಮಗೆ ಅವರ ಮೊದಲ ಕ್ಲಾಸ್. ಹೊಸದರಲ್ಲಿ ವಿದ್ಯಾರ್ಥಿಸಮೂಹದ ಮುಂದೆ ನಿಂತು ಮಾತಾಡಲು ಎಲ್ಲರಂತೆಯೇ ಅವರಿಗೂ ಸ್ವಲ್ಪ ಅಳುಕು ಇದ್ದಿತ್ತೇನೋ. ಹೊರಗೆ ಮಳೆಯ ಅಬ್ಬರ. ಒಳಗೆ ಸುಮಾರು ೬೦ ವಿದ್ಯಾರ್ಥಿಗಳ ಸಾಗರ. ಅವರು ಪಾಠ ಮಾಡುತ್ತಿದ್ದರು. ಎಲ್ಲರೂ ಗಂಭೀರವಾಗಿ ಆಲಿಸುತ್ತಿರಬೇಕಾದರೆ ನನಗೆ ಸೀನು ಬಂದು ಅರ್ಧಕ್ಕೇ ನಿಂತುಬಿಟ್ಟಿತು. ಆದರೆ ಆ ಹೊತ್ತಿಗಾಗಲೇ ಒಂದು ರೀತಿಯ ‘ಹಕ್’ ಎಂಬಂಥ ಶಬ್ದ ಬಂದುಬಿಟ್ಟಿತ್ತು. ಮಾಷ್ಟರಿಗೆ ಅದೇನೆಂದು ಗೊತ್ತಾಗಲಿಲ್ಲ. ಒಮ್ಮೆಲೇ ಕೋಪ ಬಂದು ಕಣ್ಣು ಕೆಂಪಾತು. “ಏನದು ಸದ್ದು?” ಗಂಭೀರವಾದ ಸಿಟ್ಟು ಬೆರೆತ ಧ್ವನಿಯಲ್ಲಿ ಕೇಳಿದರು. ನನಗೆ ಹೆದರಿಕೆಯಾತು. ಮೊದಲೇ ಹೊಸ ಮಾಷ್ಟ್ರು, ಸಿಟ್ಟು ಜಾಸ್ತಿಯೆಂದು ಅವರ ಊರಿನಿಂದ ಬರುವ ವಿದ್ಯಾರ್ಥಿಗಳು ಹೇಳಿದ ನೆನಪು, ಆ ಹೈಸ್ಕೂಲಿನ ನೀತಿನಿಯಮಗಳು ಕಠಿಣವಾಗಿರುತ್ತದೆಯೆಂದು ಕೇಳಿದ ನೆನಪು…. ಎಲ್ಲಾ ಯೋಚನೆಗಳೂ ಒಮ್ಮೆಲೇ ಬಂದು ಮುತ್ತಲು ನಾನು ನಡುಗಿಹೋದೆ. ಎದ್ದು ನಿಂತರೆ ಕೆಟ್ಟೆನೆಂದು ಸುಮ್ಮನೇ ಕುಳಿತೆ. ಅಷ್ಟರಲ್ಲೇ ಮತ್ತೆ ಕೇಳಿದರು “ಯಾರದು ನಕ್ಕಿದ್ದು?” ಈಗ ಮತ್ತೂ ಕುಪಿತಗೊಂಡಿದ್ದ ಅವರ ನುಡಿ ಕೇಳಿ ನಾನು ಕುಗ್ಗಿ ಹೋದೆ. ಏಕೆಂದರೆ ನಾನು ಸೀನಿದ್ದು ಅವರಿಗೆ ನಕ್ಕಂತೆ ಕೇಳಿಸಿತ್ತು!! ಏನು ಮಾಡುವುದು, ಆದದ್ದಾಗಲಿ ಎಂದು ನಿಧಾನಕ್ಕೆ ಎದ್ದು ನಿಂತು, “sorry sir, ಸದ್ದು ಮಾಡಿದ್ದು ನಾನೇ; ಆದರೆ ಅದು ನಕ್ಕಿದ್ದಲ್ಲ” ಎಂದೆ. ನಾನು ಮುಂದುವರಿಸುವುದರೊಳಗಾಗಿ “ಮತ್ತೇನು?” ಎಂಬ ಪ್ರಶ್ನೆ ಹೊರಬಿದ್ದಿತ್ತು. ನಾನು ನಡುಗುವ ಧ್ವನಿಂದಲೇ ಹೇಳಿದೆ “ಸೀನು ಬಂದು ಅರ್ಧಕ್ಕೇ ನಿಂತುಬಿಟ್ಟಿತು” ಅಂತ. ಹುಡುಗರೆಲ್ಲಾ ಮುಸಿಮುಸಿ ನಗತೊಡಗಿದರು. ಆಗ ಅವರಿಗೆ ನನ್ನ ಪರಿಸ್ಥಿತಿ ನೋಡಿ ಕನಿಕರ ಬಂತೋ ಅಥವಾ ಸುಳ್ಳು ಹೇಳುತ್ತಿದ್ದಾಳೆಂಬ ಭಾವನೆ ಬಂತೋ ನಾನರಿಯೆ. ಆದರೆ ಅಸಮಾಧಾನದಿಂದಲೇ “ಸರಿ ಕೂತ್ಕೋ” ಎಂದು ಪಾಠ ಮುಂದುವರಿಸಿದರು.

ಸಂಜೆ ಬಿಡುವಿನ ವೇಳೆಯಲ್ಲಿ ಯಾವುದೋ ಅಧ್ಯಾಪಕರ ಬಳಿ ಸಮಸ್ಯೆಯೊಂದರ ಪರಿಹಾರಕ್ಕಾಗಿ ಹೋಗಿದ್ದಾಗ ಮತ್ತೆ ಕರೆದು ಕೇಳಿದರು. “ನೀನೇ ಅಲ್ವಾ ನಕ್ಕಿದ್ದು ಕ್ಲಾಸ್‌ನಲ್ಲಿ?”ಅಂತ. ನನಗೆ ಅಳು ಬಂದೇಬಿಟ್ಟಿತು. ಮತ್ತೊಮ್ಮೆ ಹೇಳಿದೆ – ಹೀಗಾಯ್ತು ನಕ್ಕಿದ್ದಲ್ಲ – ಅಂತ. ಕೊನೆಗೆ ಹೆಸರೇನು, ಯಾವ ಊರು, ಯಾವ ಶಾಲೆಯಲ್ಲಿ ಮುಂಚೆ ಓದಿದ್ದು ಎಂದೆಲ್ಲಾ ವಿಚಾರಿಸಿ ಕಳುಹಿಸಿದರು. ಆ ದಿನ ನನಗೂ ಅವರ ಮೇಲೆ ಸಿಟ್ಟು ಬಂದಿತ್ತು-ಸುಳ್ಳಿ ಎಂದು ಅನುಮಾನಿಸಿದ್ದಕ್ಕಾಗಿ.

ಇದಾಗಿ ಹತ್ತು-ಹದಿನೈದು ದಿನಗಳ ನಂತರ ಒಂದು ದಿನ ಒಬ್ಬ ಅಧ್ಯಾಪಕರು ಬಂದಿರಲಿಲ್ಲ. ಆ ಒಂದು ಅವಧಿಯ ಬಿಡುವಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಏಳನೇ ತರಗತಿಯ ಅಂಕಪಟ್ಟಿಯನ್ನು ತರಲು ಮುಂಚೆ ಓದುತ್ತಿದ್ದ ಶಾಲೆಗೆ ಹೋಗಿದ್ದೆ. ಓರ್ವ ಗೆಳತಿಯೂ ನನ್ನ ಜೊತೆಗಿದ್ದಳು. ಸ್ವಾರಸ್ಯಕರ ವಿಷಯವೆಂದರೆ ನಗರದಲ್ಲಿ ನಮ್ಮ ಮನೆಯಿಂದ ಎಡಬದಿಗೆ ಎರಡು-ಮೂರು ನಿಮಿಷದ ಕಾಲ್ನಡಿಗೆಯ ದಾರಿ ನನ್ನ ಮಾಧ್ಯಮಿಕ ಶಾಲೆಗೆ. ಮನೆಯಿಂದ ಬಲಬದಿಗೆ ಎರಡು-ಮೂರು ನಿಮಿಷದ ಕಾಲ್ನಡಿಗೆಯ ದಾರಿ ನನ್ನ ಪ್ರೌಢಶಾಲೆಗೆ. ನಾನು ಹೊರಟಾಗ ಅಧ್ಯಾಪಕರಾರೂ ತರಗತಿಯಲ್ಲಿರಲಿಲ್ಲ. ಆದರೆ ಹತ್ತು ನಿಮಿಷಗಳೊಳಗೇ ಹಿಂತಿರುಗಿ ಬಂದಾಗ ನಮ್ಮ ತರಗತಿಯೊಳಗೆ ಸೋಷಿಯಲ್ ಮಾಷ್ಟ್ರು ನಿಂತಿದ್ದಾರೆ!! ಯಾವುದೋ ಯೋಚನೆಯಲ್ಲಿದ್ದ ನಾನು ಅವರನ್ನು ಗಮನಿಸದೇ ಸೀದಾ ಒಳಗೆ ಹೋಗಿಬಿಟ್ಟೆ. ಆದರೆ ತಕ್ಷಣ ಹೊಳೆತು, ಕ್ಲಾಸ್ ಇಷ್ಟು ನಿಶ್ಶಬ್ದವಾಗಿದೆಯೆಂದರೆ ಯಾರೋ ಅಧ್ಯಾಪಕರು ಇದ್ದಾರೆ ಎಂದು. ಸುತ್ತಲೂ ನೋಡಿದರೆ ಕ್ಲಾಸಿನ ಮಧ್ಯ ಮಾಷ್ಟ್ರು ನಿಂತು ನನ್ನನ್ನೇ ಕೆಕ್ಕರಿಸಿಕೊಂಡು ನೋಡುತ್ತಿದ್ದಾರೆ!! ನನ್ನ ಜೊತೆ ಬಂದಿದ್ದ ಗೆಳತಿ ಹೊರಗೆ ನಿಂತು ಒಳಗೆ ಬರಬಹುದೆ ಸರ್? ಎಂದು ವಿನಂತಿಸುತ್ತಿದ್ದಾಳೆ! ಒಂದು ಕ್ಷಣ ನನ್ನ ಬುದ್ಧಿಗೆ ಮಂಕು ಕವಿಯಿತು. ಏನು ಮಾಡಬೇಕೆಂದೇ ತೋಚದಾಯಿತು. ತಕ್ಷಣ ಬಾಗಿಲ ಬಳಿ ಓಡಿ ಅಲ್ಲೇ ನಿಂತು “sorry sir, ನೋಡಲಿಲ್ಲ ಒಳಗೆ ಬರಬಹುದೇ ಸರ್?” ಎಂದು ವಿನಂತಿಸಿಕೊಂಡೆ. ಹುಡುಗರೆಲ್ಲಾ ನಗಲಾರಂಭಿಸಿದರು. ಒಂದು ಕಡೆ ಒಂದೇ ಛತ್ರಿ ಇಬ್ಬರನ್ನು ಮಳೆಂದ ರಕ್ಷಿಸಲು ವಿಫಲವಾದ ಪರಿಣಾಮ ಬಟ್ಟೆ ಒದ್ದೆಯಾಗಿ ಛಳಿಯಿಂದ ನಡುಗುತ್ತಿದ್ದೆವು. ಇನ್ನೊಂದು ಕಡೆ ಅಪಮಾನದ ಉರಿ. ಮತ್ತೊಂದು ಕಡೆ ಮೊದಲೇ ನನ್ನ ಮೇಲೆ ಕೋಪಿಸಿಕೊಂಡ ಸೋಷಿಯಲ್ ಮಾಷ್ಟ್ರು ಹುಡುಗರ ಮುಂದೆ ಏನಾದರೂ ಬೈದುಬಿಟ್ಟರೆ ಏನು ಗತಿ? ಎಂಬ ಭಯ-ಎಲ್ಲಾ ಭಾವನೆಗಳೂ ನನ್ನ ಮುಖದಲ್ಲಿ ಉಕ್ಕಲಾರಂಭಿಸಿತು. ಇವಿಷ್ಟೂ ಆದದ್ದು ಕೆಲವೇ ಸೆಕೆಂಡುಗಳಲ್ಲಿ. ಅಷ್ಟರಲ್ಲಿ ಅವರೂ ನಕ್ಕು “ಎಲ್ಲಿಗೆ ಹೋಗಿದ್ದಿರಿ ಶಾಲಾ ಅವಧಿಯಲ್ಲಿ?” ಎಂದು ಪ್ರಶ್ನಿಸಿದರು. ನನ್ನ ಗೆಳತಿ-ನಾನು ಮುಖ ಮುಖ ನೋಡಿಕೊಂಡೆವು. ನಂತರ ನಾನೇ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ, “ಮುಂಚೆ ಓದುತ್ತಿದ್ದ ಸ್ಕೂಲಿಗೆ ಹೋಗಿದ್ವಿ ಸರ್” ಎಂದೆ. ನಾನು ಮಾತು ಮುಗಿಸುವುದರೊಳಗಾಗಿ “ಯಾರನ್ನು ಕೇಳಿ ಹೋಗಿದ್ದಿರಿ?” ಎಂಬ ಪ್ರಶ್ನೆ ಎದುರಿಗೆ ನಿಂತಿತ್ತು. ಅಂಜುತ್ತಲೇ “ಹೆಡ್ ಮಾಷ್ಟ್ರನ್ನ ಕೇಳಿಕೊಂಡು ಹೋಗಿದ್ವಿ ಸರ್” ಎಂದುಸುರಿದೆ. “ಸರಿ ಬನ್ನಿ” ಅಂತ ಕರೆದು “ಎಂತಕೆ ಹೋಗಿದ್ರಿ?” ಅಂತ ಕೇಳ್ತಾ ನನ್ನ ಕೈಲಿದ್ದ ಒದ್ದೆಯಾಗಿದ್ದ laminated marks card ನೋಡಿ ಕೊಡಿಲ್ಲಿ ಅಂದರು. ನಾನು ಕರ್ಚೀಫ್‌ನಿಂದ ಒರೆಸಿ ಅವರಿಗೆ ಕೊಟ್ಟು ನನ್ನ ಜಾಗದಲ್ಲಿ ಕುಳಿತೆ. ಅವರು ಅಂಕಗಳನ್ನು ನೋಡಿದರು. ಮೊದಲಿನಿಂದಲೂ ನಾನು ಓದುವುದರಲ್ಲಿ ಮುಂದಿದ್ದೆ. ಆ ಹಳ್ಳಿಯಲ್ಲಿ ಯಾವುದೇ ರೀತಿಯ ಟ್ಯೂಷನ್ ಕೂಡಾ ಇರಲಿಲ್ಲ. ಆದರೂ ಅದೇ ವರ್ಷ ಪ್ರಾರಂಭವಾಗಿದ್ದ ಪಬ್ಲಿಕ್ ಪರೀಕ್ಷೆಯಲ್ಲಿ, ಒಳ್ಳೆಯ ಅಂಕಗಳು ಬಂದಿತ್ತು. ನಾನು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದೆ. “ಅಬ್ಬಾ ಚನ್ನಾಗಿ ತೆಗೆದಿದ್ದೀಯ!” ಅಂತ ಹೇಳಿ ಪ್ರತಿ ವಿಷಯದ ಅಂಕಗಳನ್ನೂ ಗಟ್ಟಿಯಾಗಿ ಓದಿದರು. “ಯಾರಿಗಾದರೂ ಹೆಚ್ಚಿಗೆ ಅಂಕಗಳು ಬಂದಿವೆಯೇ?”ಅಂತ ಕ್ಲಾಸಿನಲ್ಲಿ ಕೇಳಿದರು. ಯಾರೂ ಇರಲಿಲ್ಲ. ನನಗೂ ನಾನೇ ಹೆಚ್ಚಿಗೆ ಮಾರ್ಕ್ಸ್ ತೆಗೆದವಳೆಂಬುದು ಗೊತ್ತಿರಲಿಲ್ಲವಾದ್ದರಿಂದ ಸಂತೋಷದ ಜೊತೆಗೆ ನಾಚಿಕೆಯೂ ಆತು. ಅಂದಿನಿಂದ ಅವರಿಗೆ ನನ್ನ ಬಗೆಗಿದ್ದ ಅಸಮಾಧಾನ ದೂರವಾಯಿತು.

ನಮ್ಮ ಸೋಷಿಯಲ್ ಮಾಷ್ಟರ ಪಾಠದ ಶೈಲಿ ಹೈಸ್ಕೂಲ್ ಮಟ್ಟಕ್ಕೆ ಸ್ವಲ್ಪ ವಿಭಿನ್ನವಾಗಿತ್ತು. ಅಲ್ಲಿ ಬೇರೆ ಅಧ್ಯಾಪಕರೆಲ್ಲರೂ ನೋಟ್ಸ್ ಕೊಡುತ್ತಿದ್ದರು. ಆದರೆ ಇವರು ಕೊಡುತ್ತಿರಲಿಲ್ಲ. ಪಠ್ಯಪುಸ್ತಕದಲ್ಲಿ ಏನಿತ್ತೋ ಅದಕ್ಕಿಂತ ಹೆಚ್ಚಿಗೆ ವಿಷಯಗಳನ್ನು ಓದಿಕೊಂಡು ಬಂದು ಹೇಳುತ್ತಿದ್ದರು. ಮುಖ್ಯ ವಿಷಯಗಳನ್ನು ಹೈಲೈಟ್ ಮಾಡಿ ಹೇಳುತ್ತಿದ್ದರು. ಹಾಗಾಗಿ ಅವರ ಕ್ಲಾಸ್ ಹಲವರಿಗೆ ಬೋರ್ ಹೊಡೆಸುತ್ತಿತ್ತು. ಆದರೆ ಅವರು ವಿವರಿಸುವ ವಿಷಯಗಳ ಬಗ್ಗೆ ಆಸ್ಥೆ ಇದ್ದುದರಿಂದ ನನಗೆ ಮತ್ತು ಕೆಲ ಸಹಪಾಠಿಗಳಿಗೆ ಇವರ ಕ್ಲಾಸ್ ರಸದೌತಣ ನೀಡುತ್ತಿತ್ತು. ಇವರ ಇತಿಹಾಸದ ಕ್ಲಾಸುಗಳನ್ನು ಕೇಳುವುದೇ ಒಂದು ಹಬ್ಬ. ಈಗಲೂ ಸುಮಾರು ೭-೮ ವರ್ಷಗಳ ನಂತರವೂ ಅವರ ಪಾಠ ಕೇಳಿದ್ದು, ನಿನ್ನೆ-ಮೊನ್ನೆಯೇನೋ ಎಂಬಂತಿದೆ.

ಅವರು ಇತಿಹಾಸದಲ್ಲಿ ರಾಜರ, ಸಾಮ್ರಾಜ್ಯಗಳ ಪಾಠ ಮಾಡಬೇಕಾದರೆ ರಾಜ ಮಹಾರಾಜರ ಶೌರ್ಯ, ರಾಜ್ಯದ ವಿಸ್ತೀರ್ಣದ ಬಗ್ಗೆ ಹೇಳಿದ ನಂತರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದರು. ಹಾಗೆ ವಿವರಿಸುವಾಗ ಯಾವಾಗಲೂ “ಇವರ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು…….” ಎಂದು ಹೇಳುತಿದ್ದರು. ಅದು ನಮಗೂ ಅವರಿಗೂ ಅಭ್ಯಾಸವಾಗಿಬಿಟ್ಟಿತ್ತು. ಅವರು ಪರಿಸ್ಥಿತಿ…. ಎನ್ನುತ್ತಿದ್ದಂತೆ ನಾವೆಲ್ಲ ಉತ್ತಮವಾಗಿತ್ತು ಎನ್ನುತ್ತಿದ್ದೆವು. ಒಮ್ಮೆ ಮಹಮದ್ ಬಿನ್ ತುಘಲಕ್‌ನ ಅತಂತ್ರ ವ್ಯವಸ್ಥೆಯ ಬಗ್ಗೆ ಹೇಳುತಿದ್ದರು. ಆಗ ಅವರು “ಇವನ ಕಾಲದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ…” ಎನ್ನುತ್ತಿದ್ದಂತೆ ನಾವು ಅಭ್ಯಾಸಬಲದಿಂದ ಉತ್ತಮವಾಗಿತ್ತು ಎಂದು ಹೇಳಬೇಕೇ?! ಅವರು ನಗುತ್ತಾ ಪಾಠದ ಮೇಲೆ ಆಸಕ್ತಿ ಇದ್ದರೆ ಸಾಲದು, active ಆಗಿ ಇರಬೇಕು ಎಂದು ಬುದ್ಧಿ ಹೇಳಿ ಮುಂದುವರಿಸಿದ್ದರು.

ಅವರು ಪಾಠ ಮಾಡುವಾಗ ನಾವು ನೋಟ್ಸ್ ಮಾಡಿಕೊಳ್ಳಬೇಕಾಗಿತ್ತು. ಹೀಗೆ ಎರಡೂ ಕಡೆ concentrate ಮಾಡುವುದು ಹಲವರಿಗೆ ಕಷ್ಟವಾಗಿತ್ತು. ಆದರೆ ನಾನು ಮತ್ತು ಕೆಲವು ಗೆಳತಿಯರು ಈ ಕೆಲಸವನ್ನು ಒಂದು ರೀತಿಯ ಚಾಲೆಂಜಿನಂತೆಮಾಡುತ್ತಿದ್ದೆವು. ಯಾರು ಹೆಚ್ಚು ನೋಟ್ಸ್ ಬರೆದುಕೊಳ್ಳುತ್ತಾರೆಂಬ ಸ್ಪರ್ಧೆಯಂತೆ ಬರೆದುಕೊಳ್ಳುತ್ತಿದ್ದೆವು. ಒಮ್ಮೆ ನನ್ನ ನೋಟ್ಸ್ ನೋಡಿದ ಸರ್ ಉದ್ಗರಿಸಿದ್ದರು-“ನನಗೇ ನಾನು ಇಷ್ಟು ಹೇಳಿದ್ದೇನೆಂಬುದನ್ನು ನಂಬಲಾಗುತ್ತಿಲ್ಲ. ಅಷ್ಟು ಚನ್ನಾಗಿ ಬರೆದುಕೊಂಡಿದ್ದೀಯ, ಕಾಲೇಜ್ ಲೆವೆಲ್‌ನಲ್ಲಿ ಬರೆದುಕೊಂಡಿದ್ದೀಯ… good, keep it up.” ನನಗೋ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಯಾರು ಏನೇ ಹೇಳಲಿ, ಸಹಪಾಠಿಗಳೆದುರಿಗೆ ನೀನೇ ಶ್ರೇಷ್ಠ ಎಂದು ಹೊಗಳಿಸಿಕೊಳ್ಳುವಾಗ ಸಿಗುವ ಸಂತೋಷ ಎಷ್ಟು ಕೋಟಿ ದುಡ್ಡು ಕೊಟ್ಟರೂ ಸಿಗಲಿಕ್ಕಿಲ್ಲ.

ಹಾಗೆಂದ ಮಾತ್ರಕ್ಕೆ ಅವರು ನನ್ನನ್ನು ಯಾವಾಗಲೂ ಹೊಗಳುತ್ತಿದ್ದರೆಂದು ಭಾವಿಸಬೇಕಾಗಿಲ್ಲ. ನಾನೂ ಕೆಲವಾರು ಬಾರಿ ಅವರ ಹತ್ತಿರ ಬೈಸಿಕೊಂಡಿದ್ದೂ ಇದೆ. ಒಮ್ಮೆ ನಾನು ಯಾರೊಂದಿಗೋ(ಬಹುಶಃ ಅಮ್ಮನೊಂದಿಗೆ!!) ಜಗಳವಾಡಿ ಬೈಸಿಕೊಂಡ ಪರಿಣಾಮ ನನ್ನ ಮನಸ್ಸು ಸರಿಯಿರಲಿಲ್ಲ. ಪಾಠದ ಮೇಲೆ ಆಸಕ್ತಿ ಇರಲಿಲ್ಲ. ಆ ಆಸಕ್ತಿಯನ್ನು ಬರಿಸಿಕೊಳ್ಳುವ ಸಲುವಾಗಿಯೂ, ನೋಟ್ಸ್ ಬರೆದುಕೊಳ್ಳುವುದರ ವೇಗ ಹೆಚ್ಚಿಸಿಕೊಳ್ಳೂವ ಸಲುವಾಗಿಯೂ ಒಂದು ಪ್ರಯೋಗ ಮಾಡಿದೆ. ಭೂಗೋಳಶಾಸ್ತ್ರದ ಪಾಠ ನಡೆಯುತ್ತಿತ್ತು. ಅಲ್ಲಿ, ಮರಗಿಡಗಳು ಎಂದು ಬರುವಲ್ಲಿ ಮರದ ಚಿತ್ರ, ಬಂಡೆ ಕಲ್ಲುಗಳು ಎಂದು ಬರುವಲ್ಲಿ ಬಂಡೆಯ ಚಿತ್ರ, ಮಳೆ ಎಂದಲ್ಲಿ ಮಳೆಯ ಚಿತ್ರ ಹೀಗೆ ಬರೆದುಕೊಳ್ಳುತ್ತಿದ್ದೆ. ಚಿತ್ರವನ್ನೇನು ಸುಂದರವಾಗಿ ಬಿಡಿಸುತ್ತಾ ಕೂತಿರಲಿಲ್ಲ. ಬೇಗಬೇಗನೇ ಬರೆಯುತ್ತಿದ್ದೆ. ವೇಗ ಹೆಚ್ಚಿಸಿಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಆದರೆ ನಾನು ಸರಿಯಾಗಿ ಪಾಠ ಕೇಳುತ್ತಿಲ್ಲವೆಂದು ಗ್ರಹಿಸಿದ ಮಾಷ್ಟ್ರು ಕ್ಲಾಸ್‌ವರ್ಕ್ ನೋಡಿದರು. ಅದರಲ್ಲಿ ಬರೀ ಚಿತ್ರಗಳಿದ್ದದ್ದು ನೋಡಿ ಚನ್ನಾಗಿ ಬೈದು ಸ್ಟಾಫ್ ರೂಮಿಗೆ ಬಾ ಎಂದು ಗದರಿಸಿ ಪಾಠ ಮುಂದುವರಿಸಿದರು. ನಮಗೆ, ಸ್ಟಾಫ್ ರೂಮಿನಲ್ಲಿ ಎಲ್ಲಾ ಮಾಷ್ಟ್ರ ಮುಂದೆ ಬೈಸಿಕೊಳ್ಳುವುದೆಂದರೆ, ದೊಡ್ಡ ಶಿಕ್ಷೆಯೇ ಆಗಿತ್ತು. ನಾನು ಆಮೇಲೆ ಸ್ಟಾಫ್ ರೂಮಿಗೆ ಹೋಗಿ ವಿಷಯ ತಿಳಿಸಿ, ಚಿತ್ರದ ಅರ್ಥವನ್ನೂ, ನನ್ನ ಉದ್ದೇಶವನ್ನೂ ತಿಳಿಸಿದ ಮೇಲೆ ಅವರ ಸಿಟ್ಟು ನಿವಾರಣೆಯಾತು. ಇದೊಂದು ನನ್ನ ವಿದ್ಯಾರ್ಥಿ ಜೀವನದ ಕಹಿಘಟನೆ. ಇಂದಿಗೂ ನನ್ನ ಸ್ನೇಹಿತೆಯರು ಆ ಘಟನೆಯನ್ನು ನೆನಪಿಸಿಕೊಂಡು “ಅವತ್ತು ನಿನ್ನ ಮುಖ ನೋಡಕ್ಕಗ್ತಿರಲಿಲ್ಲ ಕಣೇ!” ಎಂದು ನಗುತ್ತಾರೆ.

ಅವರು ಬರೀ ಪಾಠದ ವಿಷಯವಷ್ಟೇ ಅಲ್ಲದೇ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವೂ ಹೆಚ್ಚಬೇಕೆಂದು ಬಯಸುತ್ತಿದ್ದರು. ಹಾಗೆಂದು ಸುಮ್ಮನೇ ಕುಳಿತವರಲ್ಲ. ಬಿಡುವಿನ ವೇಳೆಯಲ್ಲಿ ಕ್ಲಾಸ್‌ರೂಮಿನಲ್ಲೇ ಎರಡು ತಂಡಗಳನ್ನು ಮಾಡಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುತ್ತಿದ್ದರು. ಹುಡುಗರದ್ದೊಂದು ತಂಡ, ಹುಡುಗಿಯರದ್ದೊಂದು ತಂಡ ಮಾಡಿ ಸಾಮಾನ್ಯ ಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸರಿಯುತ್ತರಕ್ಕೆ ತಕ್ಕಂತೆ ಅಂಕಗಳನ್ನು ನೀಡಿ ಕೊನೆಯಲ್ಲಿ ವಿಜೇತ ತಂಡವನ್ನು ಘೋಸುತ್ತಿದ್ದರು. ಒಂದು ಬಾರಿ ಹೀಗೆ ಮಾಡುವಾಗ ಹೆಚ್ಚಿನ ಪ್ರಶ್ನೆಗಳಿಗೆ ಹುಡುಗಿಯರ ಕಡೆಯಿಂದ -ಅದರಲ್ಲೂ ಹೆಚ್ಚಾಗಿ ನಾನೇ ಉತ್ತರ ಹೇಳುತ್ತಿದ್ದೆ. ಅದಕ್ಕವರು ಹುಡುಗರನ್ನು ಕುರಿತು “ಏನ್ರೋ ಹುಡುಗರ ಮರ್ಯಾದಿ ತೆಗೀತೀರಲ್ರೋ….” ಅಂತ ತಮಾಷೆ ಮಾಡಿದಾಗ ಒಬ್ಬ ಅವಳೊಬ್ಬಳಿಲ್ಲದಿದ್ರೆ ಖಂಡಿತಾ ನಾವೇ ಗೆಲ್ತಿದ್ವಿ ಅಂದ. ಆಗ ಅವರು “ಅವಳೊಬ್ಬಳು ಇಲ್ಲದಿದ್ರೆ ಅಲ್ಲ ಅವಳೊಬ್ಬಳೇ ಇದ್ದಿದ್ರೂ ನಿಮಗೆ ಸೋಲಿಸೋದು ಕಷ್ಟ ಇತ್ತು” ಅಂದರು. ಅದು ಹುಡುಗರನ್ನು ಅಣಕಿಸಿದ್ದೋ ನನ್ನನ್ನು ಹೊಗಳಿದ್ದೋ ಗೊತ್ತಾಗಲಿಲ್ಲ.

ಆ ಹೊತ್ತಿನಲ್ಲೇ ಒಂದು ಸಂಸ್ಥೆಯವರು ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅಧ್ಯಾಪಕರುಗಳೆಲ್ಲಾ ಆಸಕ್ತರನ್ನು ಹುರಿದುಂಬಿಸಿ ಪರೀಕ್ಷೆ ಕಟ್ಟಿಸಿದರು. ನಮ್ಮ ಶಾಲೆಯೂ ಒಂದು ಸ್ಪರ್ಧಾ ಕೇಂದ್ರವಾಗಿತ್ತು. ಸೋಷಿಯಲ್ ಮಾಷ್ಟ್ರು ಸಹಅಧ್ಯಾಪಕರ ಜೊತೆ ಚರ್ಚಿಸಿ, ಸಂಜೆಯ ಆಟದ ಬಿಡುವಿನಲ್ಲಿ ರಸಪ್ರಶ್ನೆಗೆ ಸಂಬಂಧಪಟ್ಟಂತೆ ತರಗತಿಗಳನ್ನು ತೆಗೆದುಕೊಳ್ಳತೊಡಗಿದರು. ಆ ಹೊತ್ತಿನಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳನ್ನಾಲಿಸಿ ಉತ್ತರ ಹೇಳುತ್ತಿದ್ದರು. ತಮಗೆ ಗೊತ್ತಿಲ್ಲದಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ಅಧ್ಯಾಪಕರ ಬಳಿ ಚರ್ಚಿಸಿ ಉತ್ತರ ತಿಳಿದುಕೊಂಡು ಎಲ್ಲರಿಗೂ ಹೇಳಿಕೊಡುತ್ತಿದ್ದರು. ಹಲವು ಬಾರಿ ಇತರ ಅಧ್ಯಾಪಕರೂ ಕ್ಲಾಸ್ ತೆಗೆದುಕೊಂಡಿದ್ದೂ ಇದೆ. ಇದೆಲ್ಲದರ ಪರಿಣಾಮ ರಸಪ್ರಶ್ನೆಯೆಂದರೆ ಕಷ್ಟದ ವಿಷಯವೆಂದು ತಿಳಿದಿದ್ದ, ಕಾಟಾಚಾರಕ್ಕೆ ಪರೀಕ್ಷೆ ಕಟ್ಟಿದ್ದ ಎಲ್ಲರೂ ಆಸಕ್ತಿಂದ ಭಾಗವಹಿಸಲಾರಂಭಿಸಿದರು. ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ರಸಪ್ರಶ್ನೆಗೆ ಸಂಬಂಧಪಟ್ಟಂತೆ ಇನ್ನೊಂದು ಘಟನೆ ಪ್ರಸ್ತಾಪಿಸಬಯಸುತ್ತೇನೆ. ಒಮ್ಮೆ ನಮ್ಮ ಹೈಸ್ಕೂಲಿನ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಯೋಗವೆಂಬಂತೆ ಉತ್ತರ ಬರೆಯುವಂಥ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದ್ದರು. ಅದರಲ್ಲಿ ಎಲ್ಲಾ ವಿಷಯಕ್ಕೆ ಸಂಬಂಧಪಟ್ಟಂತೆ ಆಯಾಯಾ ಅಧ್ಯಾಪಕರು ಐದು ಅಂಕಗಳ ಪ್ರಶ್ನೆ ಕೇಳುತ್ತಿದ್ದರು. ಆ ಪ್ರಶ್ನೆಗಳಿಗೆ ಸ್ಪರ್ಧಾಳುಗಳು ತಮಗೆ ಕೊಟ್ಟಿರುವ ಉತ್ತರಪತ್ರಿಕೆಯಲ್ಲಿ ಉತ್ತರಗಳನ್ನು ಬರೆಯಬೇಕು. ನಾನೂ ಆ ಸ್ಪರ್ಧೆಗೆ ಸೇರಿದ್ದೆ. ಸ್ಪರ್ಧೆಯಲ್ಲಿ ಚೆನ್ನಾಗಿ ಮಾಡಿದ್ದೆನಾದರೂ ಬೇರೆ ಕ್ಲಾಸಿನವರೂ ಸ್ಪರ್ಧಾಕಣದಲ್ಲಿದ್ದಿದ್ದರಿಂದ ಬಹುಮಾನ ಬರುತ್ತದೆಂಬ ನಿರೀಕ್ಷೆಯಿರಲಿಲ್ಲ. ಮಾರನೇ ದಿನ ಫಲಿತಾಂಶ ಘೋಷಣೆಯೆಂದು ಹೇಳಿದ್ದರಿಂದಾಗಿ ನಾವೆಲ್ಲಾ ನಮ್ಮ ನಮ್ಮ ಕೆಲಸಗಳಲ್ಲಿ ಮಗ್ನರಾದೆವು. ಬಹುಹೊತ್ತಿನ ನಂತರ ನನಗೆ ಯಾವುದೋ ವಿಷಯದಲ್ಲಿ ಸಮಸ್ಯೆದ್ದಿದ್ದಕ್ಕಾಗಿ ಅಧ್ಯಾಪಕರ ಕೊಠಡಿಗೆ ಹೋದೆ. ಆಗಿನ್ನೂ ಶಾಲೆ ಬಿಟ್ಟಿದ್ದರಿಂದ ಒಬ್ಬೊಬ್ಬರೇ ಅಧ್ಯಾಪಕರು ಮನೆಯತ್ತ ಹೊರಟಿದ್ದರು. ಅಲ್ಲಿ ಹೆಚ್ಚು ಜನ ಇರಲಿಲ್ಲ. ನಾನು ನನ್ನ ಪ್ರಶ್ನೆಗೆ ಸಂಬಂಧಪಟ್ಟ ಅಧ್ಯಾಪಕರಿಂದ ಉತ್ತರ ಪಡೆದು ವಾಪಾಸು ಹೊರಟೆ. ಅಷ್ಟರಲ್ಲಿ ಸೋಷಿಯಲ್ ಮಾಷ್ಟ್ರು ಕರೆದರು. ಏಕಿರಬಹುದೆಂಬ ಕುತೂಹಲದೊಂದಿಗೆ ಹೋದೆ. “ಹೇಗೆ ಮಾಡಿದೆ ಸ್ಪರ್ಧೆ?” ಎಂದರು. ನಾನು “ಹ್ಞೂಂ ಸರ್, ಚನ್ನಾಗಿ ಮಾಡಿದ್ದೀನಿ” ಅಂದೆ. “ಏನ್ ಚನ್ನಾಗಿ? ಅಷ್ಟೊಂದು ತಪ್ಪು ಮಾಡಿದ್ದೀಯ? ನಾನು ನೋಡಿದೆ” ಅಂದರು. ನನಗೆ ನಿರಾಸೆಯಾತು. ನಾನು ಬಹುಮಾನ ನಿರೀಕ್ಷಿಸದಿದ್ದರೂ ಅಧ್ಯಾಪಕರ ಮೆಚ್ಚುಗೆಯಾದರೂ ಸಿಗಬಹುದೆಂದೆಣಿಸಿದ್ದೆ, ಆದರೆ ಈಗ….. ನನ್ನ ಮುಖ ಕಳೆಗುಂದಿದ್ದು ನೋಡಿ “ಅವರು ಪ್ರೈಜ್ ಬರಬಹುದೆಂದು ಅಂದುಕೊಂಡಿದ್ದೆಯಾ?” ಅಂದರು. “ಹಾಗೇನಿಲ್ಲ” ಅಂದಿದ್ದಕ್ಕವರು “ಬಂದಿದ್ರೇನ್ಮಾಡ್ತೀಯಾ?” ಅಂದರು. ನನಗೆ ಒಮ್ಮೆ ಖುಷಿಯಾದರೂ ಸುಳ್ಳಲ್ಲವೇ…. ಎಂದೆನಿಸಿ “ಬಂದಿದ್ರೆ ಖುಷಿಯಾಗ್ತಿತ್ತು. ಆದ್ರೆ ಬಂದಿರಲ್ವಲ್ಲಾ….” ಎಂದು ರಾಗ ಎಳೆದೆ. “ಅದು ಹೇಗೆ ಹೇಳ್ತೀಯ?” ಅಂದರು. ನಾನೂ ಪಟ್ಟು ಬಿಡದೆ “ನೀವೇ ಹೇಳಿದ್ರಲ್ಲ ಸರ್, ಅದೂ ಅಲ್ದೇ ಹತ್ತನೇ ಕ್ಲಾಸಿನಲ್ಲಿ ಇಂಟೆಲಿಜೆಂಟ್ ಹುಡುಗರಿದ್ದಾರಲ್ಲ…… ಅವರೆದುರು ನನಗೆ ಹೇಗೆ ಪ್ರೈಜ್ ಬರೋಕೆ ಸಾಧ್ಯ?” ಅಂದೆ. ಅವರು “ಕೆಲವೊಮ್ಮೆ ಯಾವ ಇಂಟೆಲಿಜೆನ್ಸೂ ಕೆಲಸಕ್ಕೆ ಬರಲ್ಲ” ಅಂದರು. ನನಗೆಲ್ಲೋ ಮಿಂಚು ಹೊಳೆದಂತಾತು. “ಅಂದ್ರೆ..?” ಅಂತ ಖುಷಿಯಿಂದ ಕೇಳಿದೆ. ಅದಕ್ಕೆ ಅವರು “ಹೌದು, ನಿನಗೆ ಫಸ್ಟ್ ಪ್ರೈಜ್ ಬಂದಿದೆ” ಅಂದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೂ ಸಂದೇಹದಲ್ಲಿ ಕೇಳಿದೆ “ಮತ್ತೆ… ಅಭಿಷೇಕನಿಗೆ?” ಅಂತ. [ಅಭಿಷೇಕ್ ಹತ್ತನೇ ತರಗತಿಯಲ್ಲಿದ್ದ, ಎಲ್ಲಾ ವಿಷಯಗಳಲ್ಲೂ ಮುಂದಿದ್ದ ವಿದ್ಯಾರ್ಥಿ] “ಅವನಿಗೆ ಸೆಕೆಂಡ್ ಪ್ರೈಜ್ ಎಂದರು. ಆ ದಿನದ ಘಟನೆ ನನ್ನ ಮನದಲ್ಲಿ ಇನ್ನೂ ಹಚ್ಚಹಸಿರಾಗಿದೆ.

ನಮ್ಮ ಶಾಲೆ ಇಂಥ ಪಠ್ಯೇತರ ಚಟುವಟಿಕೆಗಳಿಗೆ ಹೆಸರಾಗಿತ್ತು.ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಗಳನ್ನು ಸಂಬಂಧಪಟ್ಟ ಅಧ್ಯಾಪಕರೊಂದಿಗೆ ಕೇಳಿದರೆ ಉತ್ತರ ದೊರಕುತ್ತಿದ್ದುದಲ್ಲದೇ ಸ್ಟಾಫ್ ರೂಮಿನಲ್ಲಿ ಬಿಸಿಬಿಸಿ ಚರ್ಚೆಯೇರ್ಪಡುತ್ತಿತ್ತು. ಹೊಸ ಹೊಸ ವಿಷಯಗಳು ಹೊರಬರುತ್ತಿದ್ದವು. ಆ ಚರ್ಚೆಗೆ ವಿಷಯ ಒದಗಿಸುವುದು ನನ್ನ ಪ್ರಿಯ ಹವ್ಯಾಸವಾಗಿತ್ತು. ಯಾವುದೋ ಪುಸ್ತಕದಲ್ಲಿ, ಗೊತ್ತಿಲ್ಲದ ವಿಷಯವಿದ್ದರೆ, ಆ ಪುಸ್ತಕದೊಂದಿಗೆ ಸೀದಾ ಸ್ಟಾಫ್ ರೂಮಿನಲ್ಲಿ ಹಾಜರಾಗಿಬಿಡುತ್ತಿದ್ದೆ. ಜಗತ್ತಿನ ದೊಡ್ಡ ನದಿ, ಪರ್ವತ ಮುಂತಾದವುಗಳ ಬಗ್ಗೆ ಬೇರೆ ಬೇರೆ ಪುಸ್ತಕಗಳಲ್ಲಿ ಬೇರೆ ಬೇರೆ ಉತ್ತರಗಳಿದ್ದರೆ ನನಗೆ ಹಬ್ಬ, ಮೇಷ್ಟರುಗಳಿಗೆ ತಲೆನೋವು!! ಹಾಗಾಗಿ ನಾನು ಸ್ಟಾಫ್ ರೂಮಿಗೆ ಬಂದೆನೆಂದರೆ ಸೋಷಿಯಲ್ ಮಾಷ್ಟ್ರು “ಉದ್ದ, ಅಗಲ ಪ್ರಶ್ನೆ ಬಂತು…ರೆಡಿಯಾಗಿರಿ” ಎಂದು ಹಾಸ್ಯ ಮಾಡುತ್ತಿದ್ದರು. ಅಷ್ಟು ಸ್ನೇಹಿತರಂತೆ ಇರುತ್ತಿದ್ದರು.

ಅವರ ಬಗ್ಗೆ ಇನ್ನೊಂದು ಘಟನೆ ಹೇಳದೆ ಹೋದರೆ ತಪ್ಪಾಗುತ್ತದೆ. ನಾವು ಹತ್ತನೇ ತರಗತಿಯಲ್ಲಿದ್ದಾಗ ನಮ್ಮ ಶಾಲೆಯಿಂದ ಬೆಂಗಳೂರು-ಮೈಸೂರಿಗೆ ಪ್ರವಾಸ ಏರ್ಪಡಿಸಿದ್ದರು. ೩ ದಿನಗಳ ಪ್ರವಾಸವದು. ನಗರದಿಂದ ಬೆಂಗಳೂರಿಗೆ ಸುಮಾರು ಏಳೆಂಟು ಘಂಟೆಗಳ ಪ್ರಯಾಣ. ನಮ್ಮ ತರಗತಿಯಿಂದ ನನ್ನ ಬಹಳಷ್ಟು ಗೆಳತಿಯರು ಹೊರಟಿದ್ದರು. ಆದರೆ ಆ ದಿನವೇ ಬೇರೆ ಏನೋ ಕೆಲಸ ನಿಗದಿಯಾಗಿದ್ದ ಕಾರಣ ನಮ್ಮ ಮನೆಯಲ್ಲಿ ನಾನು ಹೋಗುವುದಕ್ಕೆ ಸಮ್ಮತಿಸಿರಲಿಲ್ಲ. ನನಗೆ ಬೆಂಗಳೂರು-ಮೈಸೂರು ನೋಡಬೇಕು ಎಂಬುದಕ್ಕಿಂತ ನನ್ನ ಕೆಲವು ಆಪ್ತ ಗೆಳತಿಯರು ಹೊರಟಿರುವಾಗ ಅವರೊಂದಿಗೆ ಹೋಗಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದೇ ಬಹಳ ಬೇಸರವಾಗಿತ್ತು. ಆದರೆ ನನ್ನ ಗೆಳತಿಯರು ಹೊರಟಿದ್ದರಿಂದ ನಾನೂ ಹೊರಟಿದ್ದೇನೆಂದೇ ಸೋಷಿಯಲ್ ಮಾಷ್ಟ್ರು ಅಂದುಕೊಂಡಿದ್ದರು. ಆದರೆ ನಾನು ಪ್ರವಾಸ ಹೊರಟಿರುವವರ ಪಟ್ಟಿಗೆ ಹೆಸರು ಕೊಟ್ಟಿಲ್ಲವೆಂದು ಗೊತ್ತಾದೊಡನೆ ಅವರು ನನ್ನನ್ನು ಕರೆಸಿ ಏಕೆ ಬರುವುದಿಲ್ಲವೆಂದು ಕೇಳಿದರು. ಅರೆಮನಸ್ಸಿನಿಂದ ನಾನು ಕಾರಣವನ್ನು ಹೇಳಿದೆ. ನನಗೆ ಬರಲು ಇಷ್ಟವಿದೆಯೆಂದು ಗ್ರಹಿಸಿದ ಅವರು “ನಿಮ್ಮ ತಂದೆಯ ಜೊತೆ ಮಾತಾಡಿ ಒಪ್ಪಿಸಲೇ?” ಎಂದು ಕೇಳಿದರು. ನಮ್ಮ ತಂದೆಗೆ ಇಬ್ಬಂದಿತನವಾಗಬಹುದೆಂದೂ, ಅಥವಾ ಅವರು ನಂತರ ನನ್ನನ್ನು ಬೈಯ್ಯಬಹುದೆಂದೂ ನಾನು ಬೇಡವೆಂದೆ. ಅದಕ್ಕವರು ನೀನೇ ಮತ್ತೊಮ್ಮೆ ಕೇಳಿ ನೋಡು ಎಂದು ಹೇಳಿ ಕಳುಹಿಸಿದರು. ಮನೆಯಲ್ಲಿ ಮತ್ತೊಮ್ಮೆ ಕೇಳಿದಾಗ-“ಬೇಡ, ಬೇರೆ ಕೆಲಸ ಇದೆಯೆಂದು ನಿನಗೇ ಗೊತ್ತಿದೆ. ಇನ್ನು ಮೇಲೆ ನಿನ್ನಿಷ್ಟ” ಎಂದುಬಿಟ್ಟರು. ನಾನು ಪ್ರವಾಸ ಹೋಗುವ ಆಸೆಯನ್ನೇ ಕೈಬಿಟ್ಟೆ. ಆದರೂ ಮನದಾಳದಲ್ಲೆಲ್ಲೋ ಆಸೆಯ ತುಣುಕೊಂದು ಉಳಿದಿತ್ತು. ಮತ್ತೊಮ್ಮೆ ಸೋಷಿಯಲ್ ಮಾಷ್ಟ್ರು ಕರೆಸಿ ಕೇಳಿದರು. ನಾನು ಮನೆಯಲ್ಲಿ ಹೇಳಿದ್ದನ್ನೇ ಹೇಳಿದೆ. “ಅದಕ್ಕವರು ನಾನೇ ದುಡ್ಡು ಕೊಟ್ಟಿರುತ್ತೇನೆ, ಹೋಗಿಬರುತ್ತೇನೆಂದು ಮನೆಯಲ್ಲಿ ಹೇಳು, ಬಂದ ಮೇಲೆ ಹಣ ಹಿಂದಿರುಗಿಸಿದರಾತು” ಎಂದರು. ನನಗೆ ಎಲ್ಲೋ ಒಂದು ಕಡೆ ಇವರು ಹೇಳಿದಂತೆ ಕೇಳಿದರೆ ಗೆಳತಿಯರ ಜೊತೆ ಬೆಂಗಳೂರು ನೋಡಬಹುದೆನ್ನಿಸಿದರೂ ಇನ್ನೊಂದು ಕಡೆ ಇವರು ನನ್ನ ತಂದೆ ದುಡ್ಡಿಗಾಗಿ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದುಕೊಂಡು ಅವರಿಗೆ ಅವಮಾನಿಸುತ್ತಿದ್ದಾರೆಂದು ಅನ್ನಿಸಿ ಒಮ್ಮೆಲೇ ಬೇಸರವಾಯಿತು. ಆ ಕ್ಷಣ ಉದ್ವೇಗಗೊಂಡು “ಇಲ್ಲ ಸರ್, ನಾ ಬರಲ್ಲ. ದುಡ್ಡಿನ ಪ್ರಶ್ನೆ ಅಲ್ಲ, ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ, ಅದಕ್ಕೇ ಬರಲ್ಲ” ಅಂತ ಹೇಳಿದೆ. ಕಣ್ಣೀರು ಬಳಬಳನೆ ಉದುರುತ್ತಿತ್ತು. ಅಲ್ಲಿ ನಿಲ್ಲಲಾಗದೇ ಕ್ಲಾಸ್‌ರೂಮಿಗೆ ಬಂದು ಅಳುತ್ತಾ ಕುಳಿತೆ. ಆಟದ ಅವಧಿಯಾಗಿದ್ದರಿಂದ ಯಾರೂ ಒಳಗಿರಲಿಲ್ಲ. ನೀರು ಕುಡಿಯಲು ಬಂದ ನನ್ನ ಗೆಳತಿಯೋರ್ವಳು ನಾನು ಅಳುತ್ತಿರುವುದನ್ನು ಕಂಡು ಯಾಕೆ ಅಳುತ್ತಿದ್ದೀಯಾ ಎಂದು ರಮಿಸಲು ಬಂದಳು. ಆದರೂ ನಾನು ಸುಮ್ಮನಾಗದ್ದನ್ನು ನೋಡಿ ಸ್ಟಾಫ್ರೂಮಿಗೆ ಹೋಗಿ ಹೇಳಿದಳು. ಅಲ್ಲಿ ಸೋಷಿಯಲ್ ಮಾಷ್ಟ್ರು ಮಾತ್ರ ಇದ್ದಿದ್ದು, ಅವರು ಬಹುಶಃ ನಾನು ನೋಡುತ್ತೇನೆ, ನೀನು ಹೋಗಿ ಆಟವಾಡು ಎಂದಿರಬೇಕು, ಅವಳು ಆಮೇಲೆ ಬರಲಿಲ್ಲ. ಆದರೆ ಸೋಷಿಯಲ್ ಮಾಷ್ಟ್ರು ಏನಂದುಕೊಂಡರೋ ಏನೋ, ಅವರು ನಂತರ ಎರಡು ಮೂರು ದಿನ ಮುಖ ನೋಡಿದರೂ, ವಿಷ್ ಮಾಡಿದರೂ ಯಾಂತ್ರಿಕವಾಗಿ ಸ್ವೀಕರಿಸಿ ಮುಂದೆ ಹೋಗುತ್ತಿದ್ದರು. ಮುಂಚಿನಂತೆ ಮುಗುಳ್ನಗು, ಮಾತು ಏನೂ ಇರಲಿಲ್ಲ. ನಾನು ಒಂದೆರಡು ಬಾರಿ ನಕ್ಕೆನಾದರೂ, ಅವರು ನಗದ ಕಾರಣ ನಾನೂ ಸುಮ್ಮನಾದೆ. ಈ ಮಧ್ಯೆ ನಾನೂ ಹೊರಡಬೇಕೆಂದು ಬೇರೆ ಶಿಕ್ಷಕರ-ಸ್ನೇಹಿತರ ಒತ್ತಾಯವೂ ಮುಂದುವರಿದಿತ್ತು. ಅಷ್ಟರಲ್ಲಿ ಪ್ರವಾಸ ಹೊರಡುವ ದಿನ ಬಂತು. ರಾತ್ರಿ ಸುಮಾರು ಒಂಭತ್ತು ಘಂಟೆಯ ವೇಳೆಗೆ ನಮ್ಮ ಶಾಲೆಯಿಂದಲೇ ಹೊರಡುವುದೆಂದೂ, ಎಲ್ಲರೂ ಅಲ್ಲಿಗೇ ಬರಬೇಕೆಂದೂ ಹೇಳಿದ್ದರು. ನಾನು ನನ್ನ ಸ್ನೇಹಿತೆಯರನ್ನು ಬೀಳ್ಕೊಡಲು ಅಲ್ಲಿಗೆ ಹೋದೆ. ಕೆಲವರು ಇನ್ನೂ ಬಂದಿರಲಿಲ್ಲವಾದ್ದರಿಂದ ಬಸ್ ಹೊರಟಿರಲಿಲ್ಲ. ಎಲ್ಲ ಅಧ್ಯಾಪಕರೂ ಅವರೇ ಹಂಚಿಕೊಂಡ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಅಲ್ಲಲ್ಲಿ ನಿಂತಿದ್ದರು. ನಾನು ನನ್ನ ಸ್ನೇಹಿತೆಯೊಡನೆ ಮಾತನಾಡುತ್ತಿರುವಾಗ ಅವಳನ್ನು ಏನೋ ಕೇಳುತ್ತಾ ಬಳಿ ಬಂದ ಸೋಷಿಯಲ್ ಮಾಷ್ಟ್ರು ನಾನು ನಿಂತಿದ್ದು ನೋಡಿ “ಓ ನೀನಾ? ಬರುವುದಿಲ್ಲವೆಂದಿದ್ದೆ…. ಹೊರಟಿದ್ದೀಯಲ್ಲ?” ಎಂದು ಕೇಳಿದರು. ನನಗೆ ಇಷ್ಟು ದಿನ ಸಿಟ್ಟು ಮಾಡಿಕೊಂಡಿದ್ದ ಮಾಷ್ಟ್ರು ಈಗ ಮಾತಾಡಿಸುತ್ತಿದ್ದಾರಲ್ಲಾ (ಅದೂ ತಾವಾಗೇ!!) ಎಂಬ ಸಂತೋಷ ಒಂದು ಕಡೆಗಾದರೆ ಪ್ರವಾಸ ಹೋಗುತ್ತಿಲ್ಲವಲ್ಲಾ…. ಎಂಬ ದುಃಖ ಒತ್ತರಿಸಿ ಬಂದು ಕಣ್ಣಾಲಿಗಳು ತುಂಬಿದವು. ಇಲ್ಲವೆಂಬಂತೆ ತಲೆ ಅಲ್ಲಾಡಿಸಿದೆ. ಇಬ್ಬರಿಗೂ ಪರಿಸ್ಥಿತಿ ಅರ್ಥವಾದಾಗ “ಹೋಗಲಿ ಬಿಡು, ಆದರೂ ಬರ್ತೀಯೇನೋ ಅಂದ್ಕೊಂಡಿದ್ದೆ” ಎಂದು ಹೇಳಿ “ಅಳಬೇಡ, ಖುಷಿಯಿಂದ ಎಲ್ಲರನ್ನೂ ಕಳಿಸಿಕೊಡು. ಹೇಗೂ ೩ ದಿನ. ಹೋಗಿಬಂದ ಮೇಲೆ ಆರು ದಿನ ನಿನ್ನ ಕಿವಿಗೆ ಪುರುಸೊತ್ತಿರಲ್ಲ ನೋಡ್ತಾ ಇರು” ಎಂದು ನನ್ನ ಮಾತಿನ ಮಲ್ಲಿ ಸ್ನೇಹಿತೆಯನ್ನು ಛೇಡಿಸಿ ಬೇರೇನೋ ಕೆಲೆಸ ನೆನಪಿಸಿಕೊಂಡು ಹೋದರು. ಅವರು ಹೇಳಿದ ಮಾತು ನಿಜವಾತೆಂದು ಬೇರೆ ಹೇಳಬೇಕಿಲ್ಲ ತಾನೆ?

ಕ್ರೀಡಾಪ್ರೇಮಿಯಾಗಿದ್ದ ಅವರು ಸ್ವತಃ ಒಳ್ಳೆಯ ವಾಲಿಬಾಲ್ ಪಟುವಾಗಿದ್ದರು. ಬಿಡುವಿನ ವೇಳೆಯಲ್ಲಿ ಅಥವಾ ಸಂಜೆ ಆಟದ ವೇಳೆಯಲ್ಲಿ ಅವರು ಹುಡುಗರೊಂದಿಗೆ, ಸಹ ಅಧ್ಯಾಪಕರೊಂದಿಗೆ ವಾಲಿಬಾಲ್ ಆಡುತ್ತಿದ್ದರೆ ಎಲ್ಲರೂ ಒಟ್ಟುಗೂಡಿ ನೋಡುತ್ತಾ ಕುಳಿತುಬಿಡುತ್ತಿದ್ದರು. ಯಾವುದೋ ಟೂರ್ನಿಯಲ್ಲಿ ಆಡುತ್ತಿರುವಂತೆಯೇ ಭಾವಿಸಿ ತಲ್ಲೀನರಾಗಿ ಆಡುತ್ತಿದ್ದರು. ಆಟಕ್ಕೆ ಅವರಿಗೆ ಜೊತೆಯಾಗಿ ನಮ್ಮ ಹಿಂದಿ ಮಾಷ್ಟ್ರು, ಕನ್ನಡ ಮಾಷ್ಟ್ರು ಯಾವಾಗಲೂ ಇರುತ್ತಿದ್ದರು. ಬಹುಶಃ ಅವರೆಲ್ಲರ ಸಮಾನ ವಯಸ್ಸು ಅವರನ್ನು ಸಹೋದ್ಯೋಗಿಗಳಿಗಿಂತ ಹೆಚ್ಚಾಗಿ ಸ್ನೇಹಿತರನ್ನಾಗಿಸಿತ್ತು. ಈ ಗುಂಪಿಗೆ ಸೇರಿದ್ದ ಮತ್ತೊಬ್ಬ ಅಧ್ಯಾಪಕರೆಂದರೆ ನಮ್ಮ ಕಂಪ್ಯೂಟರ್ ಸರ್ ಜಗದೀಶ್ ಉರುಫ್ ಜಗ್ಗಣ್ಣ.

ಈ ರೀತಿಯ ಉತ್ತಮ ವಾತಾವರಣದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ ನಾನು ಪದವಿಪೂರ್ವ ಕಾಲೇಜಿಗೆ ಬೇರೆ ಊರಿನಲ್ಲಿ ಸೇರಿದೆ. ಆಗಾಗ ನನ್ನ ಗೆಳತಿಯೊಬ್ಬಳಿಂದ ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದ ನಾನು ಸೋಷಿಯಲ್ ಮಾಷ್ಟ್ರು ಆ ಶಾಲೆ ಬಿಟ್ಟು ಬೇರೆ ಶಾಲೆಗೆ ಸೇರಿದ್ದಾಗಿ ಕೇಳಿ ಬೇಸರಗೊಂಡೆ. ನನ್ನ ಗೆಳತಿಗೆ ಒಂದೆರಡು ಬಾರಿ ಅವರು ಸಿಕ್ಕಿದ್ದರಂತೆ. ನನ್ನನ್ನು ಮತ್ತೆ ಕೆಲವು ಗೆಳತಿಯರನ್ನು ಹೆಸರಿಸಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದೆಲ್ಲಾ ವಿಚಾರಿಸಿದರಂತೆ. ಎಷ್ಟು ಮಂದಿ ಸಿಗುತ್ತಾರೆ ಇಂಥವರು?

ಎಲ್ಲರೂ ಹೇಳುತ್ತಾರೆ Student life is golden life ಅಂತ. ಅಂಥ student life ನಲ್ಲಿ ಯಾವುದು ಇಷ್ಟವೆಂದು ಕೇಳಿದರೆ college life ಅಂತನೇ ಹೆಚ್ಚಿನ ವಿದ್ಯಾರ್ಥಿಗಳ ಉತ್ತರ. high school life ಹೆಚ್ಚಿನವರಿಗೆ ಅತಿ ಕಷ್ಟಕರವಾದ ಅವಧಿ. ಏಕೆಂದರೆ ಇಲ್ಲಿ ಎಲ್ಲ strict. ಅದೂ ಅಲ್ಲದೇ ಸಣ್ಣವರ ಸಾಲಿಗೂ ಸೇರದ, ದೊಡ್ಡವರ ಸಾಲಿಗೂ ಸೇರದ ಅನಿಶ್ಚಿತತೆಯ ಅವಧಿ. ಕಾಲೇಜಿನಲ್ಲಾದರೆ ಕ್ಲಾಸಿಗೆ ಚಕ್ಕರ್ ಹೊಡೆದು ಸಿನಿಮಾ ನೋಡಬಹುದು, ಪೇಟೆ ಸುತ್ತಬಹುದು. ಆದರೆ ಹೈಸ್ಕೂಲಿನಲ್ಲಿ ಹಾಗಲ್ಲ. ಜೊತೆಗೇ ಹೆಣ್ಣಿನ ಅಥವಾ ಗಂಡಿನ ಶಾರೀರಿಕ-ಮಾನಸಿಕ ಬದಲಾವಣೆಗಳ ಪರ್ವಕಾಲ. ಹೀಗಾಗಿ ಭಾವನೆಗಳ ಸಂಘರ್ಷದಿಂದ-ಭವಿಷ್ಯದ ಅನಿಶ್ಚಿತತೆಗಳ ತೊಳಲಾಟದಿಂದ ಬೇಯುವ, ಬಹುತೇಕರು ಇಷ್ಟಪಡದ ಕಾಲ. ಆದರೆ ನನಗೆ ಮಾತ್ರ ಹೈಸ್ಕೂಲಿನ ದಿನಗಳು ಮತ್ತೆ ಬರಬಾರದೇ? ಎಂದು ಆರ್ತಳಾಗಿ ಕೋರುವಷ್ಟು ಇಷ್ಟವಾಗುವ ಕಾಲ. ಜೀವನದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿತವಾಗಿರುವ ಸೊಗಸಾದ ನವಿರಾದ ರಸಕವನ. ಈ ಕವನದ ಒಂದು ಸುಂದರ ಚರಣವಾಗಿರುವ, ನಾನು ಸದಾ ಹಸನ್ಮುಖಿಯಾಗಿ ಗೌರವದೊಂದಿಗೆ ಸ್ಮರಿಸುವ ನನ್ನ ಸೋಷಿಯಲ್ ಮಾಷ್ಟರಿಗೆ…..
ನನ್ನ ನಮನಗಳು.

-ಶಿಲ್ಪ ಶ್ರೀಹರ್ಷ ಕೈತೋಟ

5-8-2011

* * * * * * * * * * *

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.