ನೂರಾರು ಭಾವ

ಇದು ನನ್ನ ಸ್ವಾನುಭವ : ಈ ಸ್ವಾನಂದ ಲೋಕ ನಿಮ್ಮನ್ನೂ ಸ್ವಾಗತಿಸಬಹುದು…!

ಅಂತಹ ಸುಯೋಗ ನಿಮಗೂ ಕೂಡಿ ಬರಲಿ

ಡಾ.ಚಿನ್ಮಯ ಎಂ.ರಾವ್
25-3-2020
ಯುಗಾದಿ

ಜೀವನದಲ್ಲಿ ಕೆಲವೊಮ್ಮೆ ಕೆಲವೊಂದು ಅಲೌಕಿಕ ಅನುಭೂತಿಯ ಸಂದರ್ಭಗಳು ತಾನೇ ತಾನಾಗಿ ಸಹಜವಾಗಿ ಬಂದೊದಗುತ್ತವೆ. ಎಂದೋ ಘಟಿಸಬೇಕಾದ ಧನಾತ್ಮಕ ಘಟನೆಗಳು ಎಂದೋ ಒಂದು ದಿನದಿಂದ ಇದ್ದಕ್ಕಿದ್ದಂತೆಯೇ ಆರಂಭವಾಗಿ ಬಿಡುತ್ತದೆ. ಅಂದಿನಿಂದ ನಮ್ಮಲ್ಲಿ ಅದು ಆಳವಾಗಿ ತಳವೂರಲಾರಂಭಿಸುತ್ತದೆ. ಅದರ ಆನಂದ, ಅಂತಹ ಅತ್ಯದ್ಭುತ ಸ್ವಾನುಭವ, ಸಾವಧಾನವಾಗಿ ಸಾವಕಾಶವಾಗಿ ನಮ್ಮೊಳಗೆ ಸರ್ವಾಂತರ್ಯಾಮಿಯಾಗಿ ವ್ಯಾಪಿಸಕೊಳ್ಳಲಾರಂಭಿಸುತ್ತದೆ. ಅದರ ವ್ಯಾಪ್ತಿ ನಮ್ಮೊಳಗೆ ಅಗಾಧವಾಗುತ್ತಾ ಹೋದಂತೆ, ಅದೊಂದು ಅನಂತವೆನಿಸುತ್ತಿದ್ದಂತೆ, ಇಂತಹದ್ದೊಂದು ಈ ಮೊದಲೇ ಏಕೆ ನಮ್ಮರಿವಿಗೆ ಬಂದಿರಲಿಲ್ಲ ಎಂದು ಆಶ್ಚರ್ಯವಾಗಲಾರಂಭಿಸುತ್ತದೆ. ನನ್ನ ಜೀವನದಲ್ಲೂ ಮಹತ್ವದ ತಿರುವೊಂದನ್ನು ಪಡೆದುಕೊಳ್ಳಲು ಕಾರಣವಾದ ಇಂತಹ ಆಶ್ಚರ್ಯಕರ ಘಟನೆಯೊಂದನ್ನು ಈ ಕಿರು ಅನುಭವದ ಕಿರುಲೇಖನದ ಮೂಲಕ ನಿಮ್ಮಲ್ಲಿ ನಾನು ಹಂಚಿಕೊಳ್ಳುತ್ತಿದ್ದೇನೆ.

ಬಾಲ್ಯದಿಂದಲೂ ನನ್ನ ಸಂತಸಕ್ಕಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಾನು ಪ್ರಸ್ತುತ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಶಾಸ್ತ್ರೀಯ ಸಂಗೀತ ಶಾಲೆ ನಡೆಸುತ್ತಿದ್ದೇನೆ. ಕಳೆದ ಹಲವಾರು ವರ್ಷಗಳಿಂದ ಸಂಗೀತ ನಿರ್ದೇಶಕನಾಗಿ ಗಾಯಕನಾಗಿ ತೊಡಗಿಸಿಕೊಂಡಿರುವ ನನಗೆ 2011ನೆಯ ಇಸವಿಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಬಾಲು ಶರ್ಮ ಅವರು ಕರೆ ಮಾಡಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನಕ್ಕೆ ಸಂಬಂಧಿಸಿದ ಭಕ್ತಿಗೀತೆಯ ಧ್ವನಿಮುದ್ರಿಕೆಗಾಗಿ ಟ್ರ್ಯಾಕ್ ಹಾಡುವಂತೆ ಮನವಿ ಮಾಡಿಕೊಂಡರು. ಹಿರಿಯ ಗಾಯಕರಾದ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಮ್, ವಾಣಿ ಜಯರಾಮ್, ವಿಜಯ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರು ಹಾಡಬೇಕಿದ್ದ ಹಾಡುಗಳಿಗೆ ನಾನು ಟ್ರ್ಯಾಕ್ ಗಾಯಕನಾಗಿ 8 ಹಾಡುಗಳನ್ನು ಹಾಡಿದೆ. ನಿರ್ಮಾಪಕರಿಗೆ ನನ್ನ ಗಾಯನ ಇಷ್ಟವಾದ ಕಾರಣ ಧ್ವನಿಮುದ್ರಿಕೆಯ ಆರಂಭದಲ್ಲೇ ಎಲ್ಲಾ ಗೀತೆಗಳಿಗಿಂತ ಮೊದಲು ಬರುವ ರತ್ನಗರ್ಭಗಣಪತಿಯ ಶ್ಲೋಕವೊಂದನ್ನು ಸಿಡಿಗಾಗಿ ನನ್ನ ಧ್ವನಿಯಲ್ಲೇ ಹಾಡಿಸಿದರು.

ಮಾತೇ ಬರದಂತಾಗಿದ್ದ ತನ್ನ ಎರಡನೆಯ ಮಗಳಿಗೆ ಮಾತು ಬರುವಂತೆ ಅನುಗ್ರಹಿಸಿದ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳವರಿಗೆ ಭಕ್ತಿಪೂರ್ವಕ ಕಾಣಿಕೆಯಾಗಿ ಈ ಧ್ವನಿಮುದ್ರಿಕೆಯನ್ನು ಸಮರ್ಪಿಸಬೇಕೆಂದು ಶ್ರೀಕಂಠ ಶರ್ಮ ಎಂಬ ನಿರ್ಮಾಪಕರು ಈ ಸಿಡಿಯನ್ನು ತಯಾರಿಸಿದ್ದರೆಂಬುದು ವಿಶೇಷವಾಗಿತ್ತು. “ಗುರುದರುಶನ” ಎಂಬ ಹೆಸರಿನ ಈ ಸಿಡಿಯ ಲೋಕಾರ್ಪಣಾ ಸಮಾರಂಭ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳಿಂದ ಏಪ್ರಿಲ್ 30,2011ರಂದು ಬೆಂಗಳೂರಿನ ಜಯನಗರದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಂದಿನ ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸುವಾಗ ಸ್ವರ್ಣವಲ್ಲೀ ಶ್ರೀಗಳು ಸ್ವಾನಂದದ ಭಂಗಿಯಲ್ಲಿರುವ ವಿಶಿಷ್ಠತೆಯಿಂದ ಕೂಡಿದ ಗಣಪತಿಯ ಫೋಟೋವೊಂದನ್ನು ನನಗೆ ನೀಡಿದ್ದರು. ಕಾರ್ಯಕ್ರಮದ ನಂತರ ಈ ವಿಶೇಷ ಗಣಪತಿಯ ಚಿತ್ರದ ಬಗ್ಗೆ ನಿರ್ಮಾಪಕ ಶ್ರೀಕಂಠ ಶರ್ಮಾ ದಂಪತಿಗಳಿಗೆ ಕೇಳಿದಾಗ ಅವರು ಕನಕಪುರ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸ್ವಾನಂದ ಗಣಪತಿಯ ದೇವಾಲಯದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿ ಕಾಲಾವಕಾಶವಾದಾಗ ಅಲ್ಲಿಗೆ ಭೇಟಿ ನೀಡುವಂತೆ ತಿಳಿಸಿದ್ದರು. ಆಗ ನಾನಿನ್ನೂ ಬೆಂಗಳೂರು ವಾಸಿಯಾಗಿರಲಿಲ್ಲ. ಅಪರೂಪಕ್ಕೆಂಬಂತೆ ಸಂಗೀತದ ಧ್ವನಿಮುದ್ರಿಕೆಗಳ ಕಾರ್ಯಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದ ನಾನು ಬೆಂಗಳೂರಿಗೆ ಬರುತ್ತಿದ್ದಂತೆಯೇ ಕೆಲಸ ಮುಗಿಸಿಕೊಂಡು ನನ್ನೂರಿಗೆ ಬೇಗ ತಲುಪಿಕೊಳ್ಳುವ ಧಾವಂತದಲ್ಲಿರುತ್ತಿದ್ದೆ. ಹಾಗಾಗಿ ಈ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭ ಬಂದೊದಗಿರಲಿಲ್ಲ. ಆದರೆ ಆ ಸ್ವಾನಂದ ಗಣಪತಿಯ ಚಿತ್ರಪಟವನ್ನು ಮಾತ್ರ ಪೂಜಾಕೋಣೆಯಲ್ಲಿಟ್ಟುಕೊಂಡು ಆಗೊಮ್ಮೆ ಈಗೊಮ್ಮೆ ಎಂಬಂತೆ ನೋಡಿ ಆನಂದಪಡುತ್ತಿದ್ದೆ. ಅದನ್ನು ನೋಡಿದಾಗಲೆಲ್ಲಾ ಏನೋ ಒಂದು ಅನನ್ಯತೆಯ ದಿವ್ಯಾನುಭವವಾಗುತ್ತಿತ್ತು ಅಷ್ಟೇ.

2015ನೆಯ ಜೂನ್ ತಿಂಗಳಿನಿಂದ ಬೆಂಗಳೂರಿನಲ್ಲೇ ನಾನು ಕುಟುಂಬ ಸಮೇತ ನೆಲೆಸುವಂತಾಯಿತು. ಸ್ವಾನಂದ ಗಣಪತಿಯ ಫೋಟೊ ಕೂಡ ನನ್ನ ಬೆಂಗಳೂರಿನ ಪೂಜಾಕೊಣೆಯಲ್ಲಿ ವಿರಾಜಮಾನವಾಯಿತು. ಕೆಲಸದ ಒತ್ತಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸ್ವಾನಂದ ಗಣಪತಿಯ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭ ಬಂದೊದಗಿಲ್ಲ. ಅದರ ಬಗ್ಗೆ ಅಷ್ಟಾಗಿ ಗಮನ ಕೊಡಲೇ ಇಲ್ಲ.

2019ರ ಜೂನ್ ತಿಂಗಳಿನಲ್ಲಿ ಪ್ರವೃತ್ತಿಯಾಗಿ ಸಿ.ಆರ್ ಟಿ.ವಿ ಎಂಬ ಯೂಟೂಬ್ ಚಾನೆಲ್ ಒಂದನ್ನು ನಾನು ಆರಂಭಿಸಿದೆ. ಶ್ರೀಕಂಠ ಶರ್ಮ ಅವರ “ಗುರುದರುಶನ” ಸಿಡಿ ಬಿಡುಗಡೆ ಸಮಾರಂಭದಲ್ಲಿ ಶ್ರೀ ಸ್ವರ್ಣವಲ್ಲೀ ಶ್ರೀಗಳು ಪ್ರವಚನಮಾಡಿದ್ದನ್ನೇ ಮೊದಲ ವೀಡಿಯೋ ಆಗಿ ನನ್ನ ಹೊಸ ಸಿ.ಆರ್ ಟಿ.ವಿ ಯೂಟೂಬ್ ಚಾನೆಲ್‍ಗೆ ಹಾಕಿದೆ. ಅದೇ ಸಮಾರಂಭದ ಇನ್ನಿತರ ವೀಡಿಯೋಗಳನ್ನು ವಾರಂತ್ಯದ ಬಿಡುವಿನ ವೇಳೆಯಲ್ಲಿ ಸಂಕಲನ ಮಾಡುತ್ತಾ ಯೂಟೂಬ್ ಚಾನೆಲ್‍ಗೆ ಹಾಕಲಾರಂಭಿಸಿದೆ. ಈ ಕೆಲಸದ ನಡುವೆಯೇ ಒಂದು ಭಾನುವಾರದಂದು ಸೂರ್ಯಾಸ್ತಕ್ಕೂ ಮುನ್ನ ನಾನು ಹಾಗೂ ನನ್ನ ಪಕ್ಕದ ಮನೆಯ ಆತ್ಮೀಯರಾದ ಆಶಿಶ್ ಶರ್ಮ ನಮ್ಮ ರಾಜರಾಜೇಶ್ವರಿನಗರದ ಆಚೆಯಲ್ಲಿರುವ ಗ್ರಾಮೀಣಭಾಗವನ್ನು ನೋಡಬೇಕೆಂಬ ಕುತೂಹಲದಿಂದ ಹೊರಟೆವು. ಹಳ್ಳಿಗಳನ್ನೆಲ್ಲಾ ದಾಟಿ ದಾಟಿ ಮುಂದೆ ಸಾಗುತ್ತಿದ್ದಂತೆ ನಿರ್ಮಾಣವಾಗುತ್ತಿರುವ ದೇವಾಲಯದ ದ್ವಾರವೊಂದರ ಎದುರಿಗೆ ಬಂದೆವು. ನನ್ನ ಮನೆಯಲ್ಲಿದ್ದ ಸ್ವಾನಂದ ಗಣಪತಿಯ ಚಿತ್ರವಿದ್ದ ದೊಡ್ಡ ಬ್ಯಾನರ್ ಒಂದನ್ನು ಆ ದೇವಾಲಯದ ದ್ವಾರದ ಸನಿಹದಲ್ಲಿ ನೋಡಿದಾಗ ನನ್ನಲ್ಲಿ ಒಂದು ಬಗೆಯ ಅನಿರ್ವಚನೀಯ ಕುತೂಹಲ ಮೂಡಿತು. ಆಗಲೇ ಕತ್ತಲಾಗಿದ್ದ ಕಾರಣ ಇನ್ನೊಮ್ಮೆ ಇಲ್ಲಿ ಬಂದರಾಯಿತು ಎಂದು ಅಲ್ಲಿಂದ ನಾವು ಹಿಂದಿರುಗಿ ಮನೆ ಸೇರಿದೆವು. ತಕ್ಷಣವೇ “ಗುರುದರುಶನ” ಸಿಡಿಯ ನಿರ್ಮಾಪಕ ಶ್ರೀಕಂಠ ಶರ್ಮ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದೆ. ಅದೇ ಸ್ವಾನಂದ ಗಣಪತಿ ದೇವಾಲಯ, ಇನ್ನೊಮ್ಮೆ ಅಲ್ಲಿ ಹೋಗಿ ದರ್ಶನ ಮಾಡಿ ಬನ್ನಿ ಎಂದರು. ಇನ್ನೊಂದು ಭಾನುವಾರ ನಮ್ಮ ಗ್ರಾಮೀಣಭಾಗ ಸಂಚಾರದಲ್ಲಿ ಇನ್ನೊಂದು ದಿಕ್ಕಿನಿಂದ ಮತ್ತೆ ಇದೇ ದೇವಾಲಯದ ಎದುರಿಗೆ ಬಂದೆವು. ಅಂದೂ ಅದಾಗಲೇ ಕತ್ತಲೆಯಾಗಿದ್ದ ಕಾರಣ ಇನ್ನೊಂದು ಭಾನುವಾರ ಈ ದೇವಾಲಯವನ್ನು ದರ್ಶನ ಮಾಡಲೆಂದೇ ಪೂರ್ವನಿಯೋಜಿತವಾಗಿ ಬರಬೇಕೆಂದುಕೊಂಡೆವು.

ಅಂತೆಯೇ ಮತ್ತೊಂದು ವಾರಂತ್ಯದಲ್ಲಿ ಶನಿವಾರವೇ ಮಧ್ಯಾಹ್ನ ನಾಲ್ಕು ಗಂಟೆಗೇ ನನ್ನ ವೀಡಿಯೋ ಹಾಗು ಫೋಟೋ ಕ್ಯಾಮೆರವನ್ನು ಅಣಿಗೊಳಿಸಿಕೊಂಡು ಪಕ್ಕದ ಮನೆಯ ಆಶಿಶ್ ಶರ್ಮ ಅವರನ್ನು ಕರೆದುಕೊಂಡು ನೇರವಾಗಿ ಸ್ವಾನಂದ ಗಣಪತಿಯ ದೇವಾಲಯಕ್ಕೆ ಬಂದೆವು. ದೇವಾಲಯದ ದ್ವಾರವನ್ನು ದಾಟಿ ಒಳಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಾನಂದದ ಅನುಭವವಾಯಿತು. ಪರಿಸರ ಅತ್ಯಂತ ಪ್ರಶಾಂತವಾಗಿತ್ತು. ತಾನೇ ತಾನಾಗಿ ಸಹಜವಾಗಿ ನನ್ನೊಳಗೆ ಭಕ್ತಿಭಾವ ಮೂಡಿತು. ಶ್ರೀಕಂಠ ಶರ್ಮ ಅವರಿಗೆ ಕರೆ ಮಾಡಿಕೊಂಡು ಹೋಗಿದ್ದ ಕಾರಣ ಅಲ್ಲಿಯ ವ್ಯವಸ್ಥಾಪಕರೊಬ್ಬರು ಎಲ್ಲವನ್ನು ನನಗೆ ತೋರಿಸಿದರು. ಎಲ್ಲವನ್ನೂ ಚಿತ್ರಿಸಿಕೊಂಡೆ. ನನ್ನ ಮನೆಯ ಪೂಜಾ ಕೋಣೆಯಲ್ಲಿ ಎಂದೋ ನೆಲೆಸಿದ್ದ ಸ್ವಾನಂದ ಗಣಪತಿಯ ಮಂದಿರಕ್ಕೆ ನಾನು ಇಂದು ಬರುವಂತಾಯಿತಲ್ಲ, ಅದರಲ್ಲೂ ಪವಾಡ ಸದೃಶವೆಂಬಂತೆ ಈ ಗಣಪತಿ ತಾನೇ ತಾನಾಗಿ ನನ್ನನ್ನು ತನ್ನಲ್ಲಿಗೆ ಬರ ಮಾಡಿಸಿಕೊಂಡನೇ? ಎಂಬ ಮಹದಾಶ್ಚರ್ಯವೂ ನನ್ನಲ್ಲಿ ಮನೆ ಮಾಡಿತು. ನಾನೇ ನಾನಾಗಿ ಇಷ್ಟು ವರುಷ ಇಂತಹ ಮಹಾನ್ ಕ್ಷೇತ್ರಕ್ಕೆ ಬರುವ ಮನಸ್ಸನ್ನು ನಾನೇಕೆ ಮಾಡಲಿಲ್ಲ ಎಂಬ ಬಗ್ಗೆ ನನಗೇ ಬೇಸರವಾಯಿತು, ಅಥವಾ ಈ ಕ್ಷೇತ್ರದ ದರ್ಶನಭಾಗ್ಯ ಇಂದಿನ ಈ ಶುಭದಿನದಂದು ಆಗಬೇಕೆಂದು ಯೋಗ ಕೂಡಿ ಬಂದಿತ್ತೇ? ಎಲ್ಲವೂ ಅವನಿಚ್ಛೆಯಂತೆ ನಡೆಯುವಾಗ ನಾನೊಬ್ಬ ನೆಪ ಮಾತ್ರದ ಹುಲುಮಾನವ ಎಂದುಕೊಂಡು ನನಗೆ ನಾನೇ ಉತ್ತರಿಸಿಕೊಂಡೆ. ನಾನೂ ಇಲ್ಲೊಬ್ಬ ಸಾಮಾನ್ಯಭಕ್ತನಾಗಿ ಅಳಿಲು ಸೇವೆಯನ್ನು ಮಾಡುವುದರ ಮೂಲಕ ನನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ನಾನು ಬಂದೆ.

ಮನೆಗೆ ಬಂದ ನಂತರ ಅಂದೇ ರಾತ್ರಿ ಸೇವೆಯ ಮೊದಲ ಭಾಗವಾಗಿ ಚಿತ್ರಿಸಿಕೊಂಡು ಬಂದಿದ್ದ ವೀಡಿಯೋವನ್ನು ಎಡಿಟ್ ಮಾಡಿಕೊಂಡು ನನ್ನ ಅತ್ಯಂತ ನೆಚ್ಚಿನ ಗೀತೆ, ನನ್ನದೇ ಸಂಗೀತ-ಸಾಹಿತ್ಯವಿರುವ ಪ್ರಖ್ಯಾತ ಗಾಯಕ ವಿದ್ವಾನ್ ಪಿ ಉನ್ನಿಕೃಷ್ಣನ್ ಹಾಡಿರುವ ” ಓಂ ಗಂ ಗಣಪತಯೇ ನಮಃ, ವಿಘವಿನಾಶಕ ತೇ ನಮಃ, ಚಿನ್ಮಯರೂಪಿ, ಆನಂದನಯನ, ಶಾಂತಾನಂದಾಯ ತೇ ನಮಃ” ಇದನ್ನು ಸ್ವಾನಂದ ಗಣಪತಿ ದೇವಾಲಯ ವೀಡಿಯೋ ಜೊತೆ ಸೇರಿಸಿ ಸಿ.ಆರ್ ಟಿವಿ ಯೂಟೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರೆಕೆಗೆ ಯೂಟೂಬಿನಲ್ಲಿ “ನೆವರ್ ಸ್ಟಾರ್ಟ್ ಇವರ್ ವರ್ಕ್ ಬಿಫೋರ್ ವಿಸಿಟಿಂಗ್ ದಿಸ್ ಪ್ಲೇಸ್” ಎಂಬ ಅತ್ಯಂತ ಆಕರ್ಷಣೀಯ ಶೀರ್ಷಿಕೆಯನ್ನಿಡುವಂತೆ ಆಶಿಶ್ ಶರ್ಮ ಅವರಿಗೆ ಸ್ವಾನಂದ ಗಣಪತಿ ಬುದ್ಧಿ ನೀಡಿದ. ಸ್ವಾನಂದ ಗಣಪತಿಗೆ ನಮ್ಮ ಅಳಿಲು ಸೇವೆ ಆರಂಭವಾಯಿತಲ್ಲ ಎಂಬ ಸಮಾಧಾನ ನನ್ನ ಮನಸ್ಸಿಗಾಯಿತು.

 

ಆನಂತರದಲ್ಲಿ ಈ ದೇವಾಲಯದ ಮುಖ್ಯಸ್ಥರಾದ ಹಿರಿಯರಾದ ಶ್ರೀ ಸಂತೋಷ್ ಅವರ ಅಪೇಕ್ಷೆಯಂತೆ ದೀಪಾವಳಿಯ ದಿನದಂದು ಗಣಪತಿ ಸಹಸ್ರನಾಮಸ್ತೋತ್ರವನ್ನು ಸೇವಾರೂಪದಲ್ಲಿ ನನ್ನ ಗಾಯನದಲ್ಲೇ ಧ್ವನಿಮುದ್ರಣಮಾಡುವಂತಹ ಸುಯೋಗ ನನಗೆ ಕೂಡಿ ಬಂತು ! ಯಶಸ್ವಿಯಾಗಿ ಅದರ ಕಾರ್ಯವೂ ನೆರವೇರಿತು. ಸ್ವಾನಂದ ಗಣಪತಿ ದೇವಾಲಯಕ್ಕೆ ಇನ್ನೂ ಹಲವು ಸೇವೆಗಳಿಗೆ ನನ್ನದೂ ಅಳಿಲು ಸೇವೆ ಸೇರುವಂತಾಗುತ್ತಿದೆ ! ಸ್ವಾನಂದವೂ ನನ್ನೊಳಗೆ ಸೇರಿಕೊಳ್ಳುತ್ತಲೇ ಇದೆ !

 

ನಾವು ಒಂದು ಕ್ಷೇತ್ರದ ದೇವರನ್ನು ದರ್ಶನ ಮಾಡಲೆಂದೇ ಹೋಗುವುದು ಬೇರೆ. ಒಂದು ಕ್ಷೇತ್ರದ ದೇವರೇ ನಮ್ಮನ್ನು ದರ್ಶನ ಮಾಡು ಬಾ ಎಂದು ಕರೆಸಿಕೊಳ್ಳುವುದು ಬೇರೆ. ಈ ಎರಡರಲ್ಲಿ ಎರಡನೆಯದು ಅತ್ಯಂತ ಶ್ರೇಷ್ಠವೆಂದು ನನ್ನ ಅನಿಸಿಕೆ. ಒಂದನೆಯದು ನಮ್ಮಿಚ್ಛೆ, ಎರಡನೆಯದು ದೈವೇಚ್ಛೆ ! ಒಂದನೆಯದು ನಮ್ಮಿಂದ ನಿರ್ಧಾರಿತ, ಎರಡನೆಯದು ದೈವ ನಿರ್ಧಾರಿತ. ಎರಡನೆಯದಕ್ಕೆ ತಾನೇ ತಾನಾಗಿ ಕಾಲ ಕೂಡಿ ಬರಬೇಕು, ಯೋಗ ಕೂಡಿ ಬರಬೇಕು. ಹಾಗೆ ಕೂಡಿ ಬಂದ ಯೋಗವೇ ನಮ್ಮ ಪಾಲಿಗೆ ತಾನೇ ತಾನಾಗಿ ಬಂದ ಅದೃಷ್ಟವೆಂಬಂತೆ ಭಾವಿಸಿ ನಮ್ಮ ಕೈಲಾದ ಸೇವೆಯನ್ನು ಜೀವನಪರ್ಯಂತ ಮಾಡಬೇಕೆನ್ನುವ ಮನೋಭಿಲಾಷೆ ನನ್ನದು. ಆತ್ಮೀಯ ಓದುಗರೇ, ನಿಮಗೂ ಇಂತಹ ಯೋಗ ಕೂಡಿ ಬರಬಹುದು. ಸ್ವಾನಂದ ಗಣಪತಿ ನಿಮ್ಮನ್ನೂ ಸ್ವಾಗತಿಸಬಹುದು…! ಅಂತಹ ಸುಯೋಗ ನಿಮಗೂ ಕೂಡಿ ಬರಲಿ.

 

 

 

SWANANDASHRAMA, AGARA, BANGALORE,  DR.CHINMAYA_RAO  PHOTOGRAPHY

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.