ಸ್ಯಾಂಡಲ್ ವುಡ್

ಉಪ್ಪೂರಿನಿಂದ ಹರಿಯಲಾರಂಭಿಸಿದೆ…ಪ್ರತಿಭೆಯೆಂಬ ಮಹಾನದಿ…!

jerry vincent diaz mahanadi producer-ಚಿನ್ಮಯ ಎಂ.ರಾವ್ ಹೊನಗೋಡು

ಕಳೆದ ಎರಡು ದಶಕಗಳಲ್ಲಿ ನಿರ್ದೇಶಿಸಿದ ಎರಡೂ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದ ಒಬ್ಬ ಅಸಮಾನ್ಯ ನಿರ್ದೇಶಕರನ್ನು ಮೂರನೇಯ ಚಿತ್ರಕ್ಕೆ ಮೀನಾಮೆಷ ಎಣಿಸಿಕೊಂಡು ಬಳಸಿಕೊಳ್ಳುತ್ತಿದೆ ಎಂದರೆ ಕನ್ನಡ ಚಿತ್ರರಂಗ ಪ್ರತಿಭಾವಂತರನ್ನು ಹೇಗೆ ಎಷ್ಟರ ಮಟ್ಟಿಗೆ ಗುರುತಿಸುತ್ತಿದೆ ಎನ್ನುವುದು ಗೊತ್ತಾಗುತ್ತದೆ !

ಉಡುಪಿ ತಾಲುಕಿನ ಉಪ್ಪುರಿನ ಉಪನ್ಯಾಸಕ ಕೃಷ್ಣಪ್ಪನವರು ಬೆಂಗಳೂರು ವಾಸಿಯಲ್ಲ ಎಂಬುದೇ ಇದಕ್ಕೆ ಕಾರಣವಾ? ಅಥವಾ ತಾವಾಗಿಯೇ ಬೇಡಿ ಅವಕಾಶಗಳನ್ನು ಪಡೆಯುವ ಮನೋಭಾವವಿರದ ಕೃಷ್ಣಪ್ಪನವರ ಸಂಕೋಚ ಸ್ವಭಾವ ಇದಕ್ಕೆ ಕಾರಣವಾ? ಅಥವಾ ಪ್ರಶಸ್ತಿ ಪಡೆವ ನಿರ್ದೇಶಕ ಕಲಾತ್ಮಕ ಚಿತ್ರಗಳಿಗೆ ಮಾತ್ರ ಲಾಯಕ್ಕು..ಕಮರ್ಷಿಯಲ್ ಚಿತ್ರ ಮಾಡುವಲ್ಲಿ ಆತ ವೀಕು..ಎಂಬ ಗಾಂಧೀನಗರದ ಪೂರ್ವಾಗ್ರಹಪೀಡಿತ ಕೆಲವು ಮನಸ್ಸುಗಳು ಕಾರಣವಾ? ಅಥವಾ ಕನ್ನಡಿಗರಿಗೆ ಕೃಷ್ಣಪ್ಪನವರಂಥವರು ಮಾಡುವ ಚಿತ್ರಗಳನ್ನು ನೋಡುವ ಅಭಿರುಚಿ ಇಲ್ಲವಾ? ಉಹೂಂ..ಇದ್ಯಾವುದೂ ಅಲ್ಲ. ನೆರೆಯ ಚಿತ್ರರಂಗಗಳಲ್ಲಿರುವಂತೆ ಅದ್ಯಾವ ಮೂಲೆಯಲ್ಲಿದ್ದರೂ ಸೃಜನಾತ್ಮಕ ನಿರ್ದೇಶಕರನ್ನು ಹುಡುಕಿಕೊಂಡು ಹೋಗಿ ಅವರಿಂದ ವಿಭಿನ್ನ ಪರಿಕಲ್ಪನೆಯ ಚಿತ್ರಗಳನ್ನು ತೆಗೆಸುವಷ್ಟು ತಾಳ್ಮೆ ನಮ್ಮ ನಿರ್ಮಾಪಕಗಿಲ್ಲ ಎನ್ನಬಹುದು.

UPPURU KRISHNAPPA-2ಕೊಲೆ,ಸುಲುಗೆ, ದರೋಡೆ, ಅತ್ಯಾಚಾರ, ಉಸ್ಸೆಂದು ಕತ್ತನ್ನು ಕೊಯ್ಯುವ ವಿಕಾರ ವಿಧಾನವನ್ನು ಅತ್ಯದ್ಭುತವೆಂಬಂತೆ ಬಿಂಬಿಸಿ ಅದರಲ್ಲಿ ಸಿಗುವ ವಿಕೃತ ಆನಂದವನ್ನು ಈ ನಾಡಿಗೆ ವೈಭವೋಪೇತವಾಗಿ ಪರಿಚಯಿಸುವಂತಹ ಚಿತ್ರಗಳನ್ನು ನಿರ್ಮಿಸಿ ನೋಡುಗರ ಅಭಿರುಚಿಯನ್ನು ಹಾಳುಗೆಡವಿ ಸಮಾಜದ ಸ್ವಾಸ್ಥ್ಯವನ್ನು ಪರೊಕ್ಷವಾಗಿ ಹಾಳು ಮಾಡುವಂತಹ ನಿರ್ಮಾಪಕರಿಗೆ ಸದಭಿರುಚಿಯ ಸೌಧವನ್ನು ಕಟ್ಟಿ ನಿಲ್ಲಿಸುವ…ಆ ಮೂಲಕ ಮಾತ್ರವೇ ತಾವು ಚಿತ್ರರಂಗದಲ್ಲಿ ನೆಲೆ ನಿಲ್ಲುವ ತಾಕತ್ತು..ಆ ಧೈರ್ಯ ಎಲ್ಲಿಂದ ಬರಬೇಕು? ಅಂಥಹ ಧೈರ್ಯವಿದ್ದಿದ್ದರೆ ಉಪ್ಪೂರು ಕೃಷ್ಣಪ್ಪನಂತಹ ಅದೆಷ್ಟೋ ನಿರ್ದೇಶಕರ ಕಥೆಗಳು ಸದಭಿರುಚಿಯನ್ನು ಸಮೃದ್ಧಗೊಳಿಸುವಂತಹ ಸಾಹಸಗಾಥೆಯನ್ನು ನಿರ್ಮಿಸಿ ಕ್ರಮೇಣ ಮಚ್ಚು ಲಾಂಗುಗಳು ತುಕ್ಕು ಹಿಡಿಯುತ್ತಿದ್ದವು ! ನಮ್ಮ ನಾಡಿನ ಸಂಸ್ಕೃತಿಯನ್ನು ನಮ್ಮವರು ನಿರ್ಮಿಸುವ ಚಿತ್ರಗಳು ಎತ್ತಿ ಹಿಡಿಯುತ್ತಿದ್ದವು !

ನಮ್ಮ ಕೆಲವು ನಿರ್ಮಾಪಕರ ಚಿಂತನೆಗಳ ಬಗ್ಗೆ (ನಿರ್ಮಾಪಕರ ಬಗ್ಗೆ ಖಂಡಿತಾ ಅಲ್ಲ) ಈ ಪರಿಯ ಮುಂಗೋಪಕ್ಕೆ ಕಾರಣ ೧೯೯೭ ರಲ್ಲೇ “ಮಾರಿಬಲೆ”ಯಂತಹ ಕಲಾತ್ಮಕ ಚಿತ್ರವನ್ನು ನಿರ್ದೇಶಿಸಿ ಕಮರ್ಷಿಯಲ್ಲಾಗಿ ಕೂಡ ಹಣ ಬಾಚುವಂತೆ ಮಾಡಿದ ನಿರ್ದೇಶಕರನ್ನು ಬಳಸದೆ..ಬೆಳೆಸದೆ ಇರುವುದು ! ನಟಿ ಭಾವನ ಈ ಚಿತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಗಮನಾರ್ಹ ಸಂಗತಿ ! ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಜ್ಯಪ್ರಶಸ್ತಿ ಪಡೆದದ್ದಲ್ಲದೆ ಗೋಲ್ಡ್ ಮೆಡಲನ್ನೂ ಪಡೆದ ಏಕೈಕ ತುಳು ಚಿತ್ರವಾಗಿ ಹೊರಹೊಮ್ಮಿತ್ತು. ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಪ್ರಶಸ್ತಿಯನ್ನೂ ತನ್ನ ಮುಡಿಗೇರಿಸಿಕೊಂಡಿತ್ತು !

UPPURU KRISHNAPPA-3ಇಷ್ಟೆಲ್ಲಾ ಹೆಗ್ಗಳಿಕೆಯನ್ನು ತನ್ನ ಹೆಗಲಿಗೇರಿಸಿಕೊಂಡರೂ ಇದರ ನಿರ್ದೇಶಕ ಉಪ್ಪೂರು ಕೃಷ್ಣಪ್ಪನವರ ದುರಾದೃಷ್ಟವೋ ಏನೋ..ಮಾರಿಬಾಲೆ ಬಿಡುಗಡೆಯಾಗಿ ೧೩ ವರ್ಷಗಳ ಅಂತರ.. !… ಅಷ್ಟರ ನಂತರ “ಕಂಚಿಲ್ದ ಬಾಲೆ” ಎಂಬ ಎರಡನೆಯ ತುಳು ಚಿತ್ರವನ್ನು ನಿರ್ದೇಶಿಸುವ ಅವಕಾಶ. ತುಳು ನಾಡಿನ ಭೂತಾರಾಧನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕೃಷ್ಣಪ್ಪ ನಿರ್ದೇಶಿಸಿದ್ದ ಆ ಚಿತ್ರಕ್ಕೂ ಅತ್ಯುತ್ತಮ ಚಿತ್ರವೆಂಬ ರಾಜ್ಯ ಪ್ರಶಸ್ತಿ ಲಭಿಸಿದ್ದು ವಿಶೇಷ !

ಹೀಗೆ ಎರಡೇ ಚಿತ್ರಗಳನ್ನು ನಿರ್ದೇಶಿಸಿ ಆ ಎರಡೂ ಚಿತ್ರಗಳಿಗೆ ರಾಜ್ಯಪ್ರಶಸ್ತಿಯನ್ನು ಪಡೆದ ಒಬ್ಬ ನಿರ್ದೇಶಕರನ್ನು ನಮ್ಮವರಾರೂ ಹುಡುಕಿಕೊಂಡು ಹೋಗಿ ಅವಕಾಶ ನೀಡಲಿಲ್ಲವಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿ ! ಕಡೆಗೂ ಸಂಕೋಚವನ್ನು ಸ್ವಲ್ಪ ಬದಿಗೆ ಸರಿಸಿ ಕೃಷ್ಣಪ್ಪನವರೇ ಒಂದು ದಿನ ತಮ್ಮ ಗೆಳೆಯರಾದ..ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಜ಼್ ಹಾಗು ಗ್ಲೆನ್ ಡಯಾಜ಼್ ಅವರ ಬಳಿ ತನ್ನ ಹೊಸ ಕಲ್ಪನೆಯನ್ನು ತೆರೆದಿಟ್ಟಾಗಲೇ ಕನ್ನಡ ಚಿತ್ರರಂಗದಲ್ಲಿ ಹರಿಯಲಾರಂಭಿಸಿದ್ದು ಹೊಸ ವಾಹಿನಿ…”ಮಹಾನದಿ” !

ಪ್ರಾದೇಶಿಕತೆಯ ಕಥೆ ಚಿತ್ರವಾಗಿ

ಕನ್ನಡ ನಾಡಿನ ಒಂದು ಪ್ರದೇಶದ ಒಂದು ಜನಾಂಗದ ಕಷ್ಟ-ಸುಖ, ನೋವು-ನಲಿವುಗಳನ್ನು ತೋರಿಸುತ್ತಾ ಜೊತೆಗೆ ಮನೋರಂಜನೆಯನ್ನೂ ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಮಹಾನದಿಯ ನಿರ್ದೇಶಕ ಉಪ್ಪೂರು ಕೃಷ್ಣಪ್ಪನವರದ್ದು. ಮೂಲತಹ ಕರಾವಳಿಯ ಮೀನುಗಾರರ ಜನಾಂಗದವರಾದ ಕೃಷ್ಣಪ್ಪ ತಾವು ಇಷ್ಟು ವರ್ಷ ಕಣ್ಣಾರೆ ಕಂಡದ್ದನ್ನೇ ಕಣ್ಣಿಗೆ ಕಟ್ಟುವಂತೆ ಚಿತ್ರವಾಗಿಸುವ ಉತ್ಸಾಹ ಮಾಡಿದ್ದಾರೆ.

ಮಹಾನದಿಯೆಂಬ ಕಲಾತ್ಮಕ ಕಮರ್ಷಿಯಲ್ ಟಚ್ ನೀಡುವ ಅವರ ಉಪಾಯಕ್ಕೆ ಸಂಜನಾ ಕೂಡ ಸಾಥ್ ನೀಡಿದ್ದಾರೆ ಎಂದರೆ ಕೇಳಬೇಕಾ? ಕನ್ನಡದಲ್ಲೊಂದು ಆಶಾದಾಯಕ ಬೆಳವಣಿಗೆ ಚಿಗುರೊಡೆಯುತ್ತಿದೆ.

“ಮಹಾನದಿ” ಎಂಬ ಚಿಗುರು ಅರಳಿ ಈ ನಾಡು ಮೆಚ್ಚುವಂತಹ ನಗುವ ಹೂವಾಗಿ ಹೊರ ಹೊಮ್ಮುತ್ತಿದೆ. ಇದೇ ಜೂನ್ ತಿಂಗಳಿನಲ್ಲಿ ಚಿತ್ರ ತೆರೆ ಕಾಣುತ್ತಿದೆ. ಮುಂಗಾರಿನ ಆರಂಭದಲ್ಲೇ ಹರಿಯಲಾರಂಭಿಸುವ “ಮಹಾನದಿ” ಯಶಸ್ಸಿನ ಸಾಗರ ಸೇರಿ ಸಾಗರದಾಚೆ ತಲುಪಲಿ ಎಂಬುದೇ ಸಹೃದಯ ಕನ್ನಡಿಗರ ಆಶಯ. ಆ ಮೂಲಕವಾದರೂ ಉಪ್ಪೂರು ಕೃಷ್ಣಪ್ಪ ಅವರಂತಹ ಪ್ರತಿಭಾವಂತ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಮುಂಚಿಣಿಗೆ ಬರಲಿ ಎಂಬುದೇ ಎಲ್ಲರ ಶುಭಾಶಯ.

-ಚಿನ್ಮಯ ಎಂ.ರಾವ್ ಹೊನಗೋಡು

31-5-2013

Dr.Chinmaya Rao

Dr.Chinmaya M.Rao who is the Founder, Editor and Publisher of KANNADA TIMES, who is from Honagodu, Sagar taluk, Shimoga district, is a significant figure in the world of music. Though born in a family of agriculturists, Rao showed love for music and literature throughout his childhood. For more details visit : https://www.facebook.com/chinmaya.m.rao
Back to top button

Adblock Detected

Please consider supporting us by disabling your ad blocker