ಹೊಸ ಪರಿಚಯ

ಉಮೇಶ್ ಬದರದಿನ್ನಿ-ಇವರ ಬಗ್ಗೆ ತಿಳಿಯೋಣ ಬನ್ನಿ…

UMESH BADARADINNI-4ಚಿನ್ಮಯ.ಎಂ.ರಾವ್ ಹೊನಗೋಡು

ತಾವೂ ಒಂದು ಚಲನಚಿತ್ರ ನಿರ್ದೇಶಿಸಬೇಕೆಂಬ ಕನಸು ಹೊತ್ತು ಗಾಂಧೀನಗರದಲ್ಲಿ ಅಲೆದಾಡುವ ಯುವಕರಿಗೆ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಚಿತ್ರ ನಿರ್ದೇಶಕರಾಗುವುದಕ್ಕೆ ತಮ್ಮಲ್ಲಿ ಏನು ಅರ್ಹತೆ ಇದೆ, ಅದಕ್ಕಾಗಿ ತಾವೆಷ್ಟು ಸಾಧನೆ ಮಾಡಿದ್ದೇವೆ ಎಂದು ಎಷ್ಟೋ ಜನ ಆತ್ಮಾವಲೋಕನ ಮಾಡಿಕೊಳ್ಳುವುದೇ ಇಲ್ಲ. ಕನ್ನಡ ಸಿನಿಮಾಗಳು ಬಿಡುಗಡೆಯಾಗದೆ, ಬಿಡುಗಡೆಯಾದರೂ ಚಿತ್ರ ಮಂದಿರಗಳಿಂದ ಬೇಗ ಬಿಡುಗಡೆಯಾಗುತ್ತಿರುವುದಕ್ಕೆ ನಿರ್ದೇಶಕರ ಜ್ನಾನದ ಕೊರತೆಯೂ ಕಾರಣ ಎಂದು ಕೆಲವರು ವಿಶ್ಲೇಷಿಸುತ್ತಾರೆ. ಸಿನಿಮಾ ಜ್ನಾನ-ಶಿಕ್ಷಣ ಎಂದಾಕ್ಷಣ ಫಿಲ್ಮ್ ಇನ್‌ಸ್ಟಿಟ್ಯುಟ್‌ಗಳಿಂದಲೇ ಕಲಿಯಬೇಕೆಂದೇನು ಇಲ್ಲ. ಅಲ್ಲಿ ಕಲಿತು ಬಂದವರೆಲ್ಲಾ ಸೂಪರ್ ಹಿಟ್ ಚಿತ್ರಗಳನ್ನು ನೀಡುತ್ತಾರೆ ಎನ್ನುವುದೂ ಸುಳ್ಳು. ಒಳ್ಳೆಯ ಚಿತ್ರಗಳನ್ನು ಬರೀ ಮನರಂಜನೆಗೆ ನೋಡದೆ ಅದನ್ನು ಎಲ್ಲಾ ಕೋನಗಳಿಂದಲೂ ಮನದಾಳದಲ್ಲಿ ಗಮನಿಸುತ್ತಾ ಕಲಿಯುವವರೂ ಒಳ್ಳೆಯ ನಿರ್ದೇಶಕರಾಗಬಹುದೆಂಬುದಕ್ಕೆ ಉತ್ತಮ ಉದಾಹರಣೆ ಬಾಗಲಕೋಟೆಯ ಉಮೇಶ್ ಬಾದರದಿನ್ನಿ.

BIDALAARE YENDU NINNA-POSTERಕಳೆದ ಇಪ್ಪತೈದು ವರ್ಷಗಳಿಂದ ರಂಗಭೂಮಿಯಲ್ಲಿ ನಟರಾಗಿ,ನಿರ್ದೇಶಕರಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದ ಉಮೇಶ್ ಪ್ರಜ್ನಾವಂತ ಪ್ರತಿಭೆ. ಖ್ಯಾತ ರಂಗಭೂಮಿ ಕಲಾವಿದ ಅಶೋಕ್ ಬದರದಿನ್ನಿ ಅವರ ಸಹೋದರ. ಉಮೇಶ್ ಸರಳ ಸಹೃದಯದ ವ್ಯಕ್ತಿ. ಅದೇ ಅವರ ಶಕ್ತಿ. ಸಿನಿಮಾ ಎಂದರೆ ಮೊದಲಿನಿಂದಲೂ ವಿಪರೀತ ಆಸಕ್ತಿ. ಶಂಕರ್ ನಾಗ್ ಅವರ ಆಪ್ತರಾಗಿದ್ದ ಉಮೇಶ್ ಅವರ ನಿರ್ದೇಶನದ ಚಿತ್ರಗಳಲ್ಲಿ ಅವರೊಡನೆ ಒಡನಾಡಿ ಕಲಿತುಕೊಂಡವರು. ನಿರ್ದೇಶಕರಾಗಬೇಕೆಂದು ಗಾಂಧೀನಗರದಲ್ಲಿ ಬಣ್ಣ ಬಣ್ಣದ ಮಾತಾಡಿ ಬಕೇಟ್ ಹಿಡಿದಿದ್ದರೆ ಉಮೇಶ್ ಇಷ್ಟೊತ್ತಿಗಾಗಲೇ ೨೦-೩೦ ಡಬ್ಬಾ ಚಿತ್ರಗಳನ್ನು ನಿರ್ದೇಶಿಸಿಬಿಟ್ಟಿರುತ್ತಿದ್ದರು. ಆದರೆ ಹಾಗೆ ಮಾಡದೆ ಚಿತ್ರ ನಿರ್ದೇಶನವನ್ನು ಅಧ್ಯಯನ ಮಾಡಿಕೊಂಡು ಬಾಗಲಕೋಟೆಯಲ್ಲೇ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದರು. ಕಾಲ ಕೂಡಿ ಬಂತು. ಚಿತ್ರ ನಿರ್ದೇಶನಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಂಡು ತಾವೇ ನಿರ್ಮಿಸಲು ಮುಂದಾದರು. ಕೆಲಸದಲ್ಲಿ ಶ್ರದ್ಧೆ ಹಾಗು ಸಿನಿಮಾ ತಯಾರಿಕೆಯ ಹಿಂದಿರುವ ಇವರ ಸದುದ್ದೇಶವನ್ನು ಗಮನಿಸಿದ ನಿರ್ಮಾಪಕ ಸಿ.ಚಂದ್ರಶೇಖರ್ ಚಿತ್ರ ನಿರ್ಮಾಣದಲ್ಲಿ ಉಮೇಶ್ ಅವರ ಜೊತೆ ಕೈಜೋಡಿಸಿದರು.

umesh badaradinni-2ಅದರ ಫಲಿತಾಂಶವಾಗಿ ನವೀನ್ ಕೃಷ್ಣ ಹಾಗು ಸ್ವಾತಿ ಮುಖ್ಯ ಪಾತ್ರದಲ್ಲಿರುವ “ಬಿಡಲಾರೆ ಎಂದು ನಿನ್ನ” ಎಂಬ ಸುಂದರ ಶೀರ್ಷಿಕೆಯ ಚಿತ್ರ ಚಿತ್ರೀಕರಣ ಪೂರೈಸಿ ಬಿಡುಗಡೆಗೆ ಸಿದ್ಧವಾಗಿದೆ. ರಕ್ತಪಾತ-ಹಿಂಸೆ-ಕ್ರೌರ್ಯಗಳ ಹೊರತಾಗಿ ಸಸ್ಪೆನ್ಸ್ ಕಮ್ ಹಾರಾರ್ ತ್ರಿಲ್ಲರ್ ಚಿತ್ರವನ್ನು ನಾಜೂಕಾಗಿ ಚಿತ್ರೀಕರಿಸಿದ್ದಾರೆ ಉಮೇಶ್. ಪ್ರತೀ ಸೀನ್‌ನಲ್ಲೂ ಭಾವನೆಗಳನ್ನು ಅನುಭವಿಸುವಂತೆ ಮಾಡಿ…ಪದಗಳ ಜೊತೆ ಆಟ ಆಡಿ ಸಂಭಾಷಣೆಯಲ್ಲೇ ಪಟಾಕಿ ಸಿಡಿಸಿದ್ದಾರೆ ಹಿರಿಯ ಪತ್ರಕರ್ತ ವಿನಾಯಕರಾಮ್ ಕಲಗಾರು. ಅಷ್ಟೇ ಅಲ್ಲದೆ ನಿರ್ಮಾಣದ ಪ್ರತೀ ಹಂತದಲ್ಲೂ ಉಮೇಶ ಅವರಿಗೆ ಸೂಕ್ತ ಸಲಹೆ,ಸಹಕಾರ ನೀಡಿದ್ದಾರೆ.

umesh badaradinni-1ಹಾಂ…ಇನ್ನೊಂದು ಹೊಸ ವಿಷಯ. ಉಮೇಶ್ ಈ ಚಿತ್ರದ ಮೂಲಕ ಹೊಸ ಸಂಗೀತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಬಾಗಲಕೋಟೆಯ ಹಿರಿಯ ಹಿಂದುಸ್ಥಾನಿ ಸಂಗೀತ ವಿದ್ವಾಂಸ ಬಾಬು ಮಾಸ್ಟರ್ ಈ ಚಿತ್ರಕ್ಕೆ ಸುಮಧುರವಾದ ಸಂಗೀತ ನೀಡಿದ್ದಾರೆ. ಈ ಕ್ಷೇತ್ರಕ್ಕೆ ಬೇಕಾದ ಪ್ರತಿಭೆ,ಅನುಭವ ಹಾಗು ಸಾಧನೆ ಮಾಡಿರುವ ಯಾರು ಹೊಸಬರಾದರೂ ಸರಿ ಪರಿಚಯಿಸುತ್ತೇನೆ ಎನ್ನುವ ಉಮೇಶ್ ಗೆದ್ದ ಕುದುರೆಯ ಬಾಲ ಹಿಡಿಯುವ ಜಾಯಮಾನದವರಲ್ಲ. ಬದಲಿಗೆ ರಿಸ್ಕ್ ತೆಗೆದುಕೊಂಡು ಹೊಸ ಕುದುರೆಗಳನ್ನು ರೇಸ್‌ಗೆ ಬಿಡುತ್ತಾರೆ. ಅದೇ ವಿಶೇಷ. ಉಮೇಶ್ ಅವರ ರೇಸ್…ಅಂದರೆ ಅವರ ಕಿರಣಗಳು…ಹೊಂಗಿರಣಗಳು ಕನ್ನಡ ಚಿತ್ರರಂಗವನ್ನು ಬೆಳಗಲಿ. ಅವರು ಹೀಗೇ ಹೊಸ ಹೊಸ ಚಿತ್ರಗಳನ್ನು ಕನ್ನಡಿಗರಿಗೆ ನೀಡುತ್ತಿರಲಿ.

ಚಿನ್ಮಯ.ಎಂ.ರಾವ್ ಹೊನಗೋಡು

22-10-2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.