ಹೊಸ ಪರಿಚಯ

ರಾಧಿಕಾ ಗೌಡ ಎಂಬ ಹೊಸ ಮಿಂಚು ಕನ್ನಡ ತಾರಾ ಲೋಕಕ್ಕೆ…

ಬೆಳ್ಳಿತೆರೆಯಲ್ಲಿ ಹಾಗು ಕಿರುತೆರೆಯಲ್ಲಿ ತಾನೂ ಮಿಂಚ ಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ. ಅದರಲ್ಲೂ ಸ್ವಲ್ಪ ಅಂದವಾಗಿದ್ದರಂತೂ ಕೇಳುವುದೇ ಬೇಡ. ನೀನೇಕೆ ಸಿನಿಮಾ ಸೇರಬಾರದು? ಎಂದು ಆಪ್ತರೆಲ್ಲಾ ಸದಾ ಕೇಳುತ್ತಲೇ ಇರುತ್ತಾರೆ. ಇನ್ನು ಕೆಲವರಂತೂ ಸಿನಿಮಾ ಎಂಬ ಮಾಯಾಲೋಕಕ್ಕೆ ಹೋಗಬೇಡ ಎಂದು ಆತ್ಮೀಯರು ಕಿವಿ ಹಿಂಡಿದರೂ ಅದಕ್ಕೆ ಕಿವಿಗೊಡದೆ ಸಿನಿಮಾಲೋಕಕ್ಕೆ ಕಾಲಿಡುತ್ತಾರೆ. ಅದೇನೆ ಇರಲಿ..ಅಭಿನಯವೆಂಬುದೂ ಒಂದು ಅತ್ಯುನ್ನತ ಕಲೆ. ತಾನು ಅಭಿನಯಿಸಿ ಜನಮನವನ್ನು ರಂಜಿಸಬೇಕು..ಆ ಮೂಲಕ ತಾನು ತನ್ನನ್ನೂ ಮರೆಯಬೇಕು..ಇತರರನ್ನೂ ಮರೆಸಬೇಕು ಎಂಬ ಮನೋಭಾವ ಕೆಲವರಲ್ಲಿ ಕೆಲವು ವಯಸ್ಸಿನಲ್ಲಿ ಆಕಸ್ಮಿಕವಾಗಿ ಚಿಗುರೊಡೆಯುತ್ತದೆ.

ಚಿಕ್ಕಂದಿನಿಂದಲೂ ಅಂತಹ ಆಸೆ ಒಳಗೊಳಗೇ ಇದ್ದರೂ ಅದು ಹೊರಬರಲು ಮಾತ್ರ ಒಂದು ಕಾಲಘಟ್ಟ ತಲುಪಬೇಕು. ಅಂತಹ ಕಾಲಘಟ್ಟವನ್ನು ಮೈಸೂರಿನ ಮೈಮನಸೂರೆ ಮಾಡುವಂತಹ ಚೆಲುವೆ ರಾಧಿಕಾ ಗೌಡ ಈಗ ತಲುಪಿದ್ದಾಳೆ. “ಮಿಂಚು” ಎಂಬ ಕಿರುನಾಮದಿಂದ ಕರೆಯಲ್ಪಡುವ ಈಕೆ ಜನಮನವನ್ನು ಬೆಳ್ಳಿತೆರೆಯ ಅಥವಾ ಕಿರುತೆರೆಯ ಮೂಲಕ ತಲುಪುವ ತವಕದಲ್ಲಿದ್ದಾಳೆ.

ಈಗಾಗಲೇ ಧಾರಾವಾಹಿಯ ನಾಯಕಿಯಾಗುವುದಕ್ಕೆ ಮೊದಲ ಹಂತದ ಆಹ್ವಾನವನ್ನು ಪಡೆದಿರುವ ಈಕೆ ಕ್ಯಾಮೆರಾವನ್ನು ಎದುರಿಸುತ್ತಿರುವುದು ಇದೇ ಮೊದಲಂತೆ. ಆದರೂ ಅತ್ಯಂತ ಧೈರ್ಯವಾಗಿ ಸಹಜವಾಗಿರುವ ಈ ಮಿಂಚು ತಾರಾಲೋಕದಲ್ಲಿ ಖಂಡಿತವಾಗಿಯೂ ಮಿಂಚುವಳೇನೋ ಎಂಬ ಭರವಸೆಯನ್ನು ನೀಡುತ್ತಾಳೆ. ಅದು ಈಕೆಯ ವಿವಿಧ ಭಂಗಿಯ ಛಾಯಾಚಿತ್ರಗಳನ್ನು ನೋಡಿದಾಗಲೇ ನಮಗನಿಸುತ್ತದೆ.

ಮೈಸೂರಿನಲ್ಲೇ ಎಮ್.ಕಾಮ್ ಅನ್ನು ಈಗಷ್ಟೇ ಓದಿ ಮುಗಿಸಿಕೊಂಡಿರುವ ಈ ರೂಪವತಿಗೆ ಸಿನಿಮಾಗಳಲ್ಲಿ ಎಕ್ಸ್‌ಪೋಸ್ ಮಾಡಿಕೊಂಡು ನಾಯಕಿಯಾಗಲು ಒಪ್ಪಿಗೆಯಿಲ್ಲವಂತೆ. ಅಭಿನಯಿಸುವಲ್ಲಿ ಎಕ್ಸ್‌ಪೋಸ್ ಬೇಕೇ ಬೇಕು ಎಂದೇನಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾಳೆ. ಆದರೆ ಧಾರಾವಾಹಿಗಳಲ್ಲಿ ಮಾಡ್ರನ್ ಡ್ರೆಸ್‌ಗಳನ್ನು ಧರಿಸಿಕೊಂಡಾದರೂ ನಟಿಸಲು ಬಯಸುತ್ತೇನೆ.. ಆದರೆ ಎಲ್ಲವೂ ಒಂದು ಇತಿಮಿತಿಯಲ್ಲಿದ್ದರೇ ಚೆನ್ನ ಎಂದು ಮಿಂಚು ಮಿಂಚಂತೆ ನುಡಿಯುತ್ತಾಳೆ.

ಅಂದ ಹಾಗೆ ಈಗಷ್ಟೇ ಕನ್ನಡ ತಾರಾಲೋಕಕ್ಕೆ ಕಾಲಿಡುವ ಸಂಭ್ರಮದಲ್ಲಿರುವ ರಾಧಿಕಾ ಗೌಡ ಎಂಬ ಮಿಂಚು ಆದಷ್ಟು ಬೇಗ ಮಿಂಚುವಂತಾಗಿ ಸಂಭ್ರಮಿಸಲಿ..ಸಂತಸಪಡಲಿ…ನೋಡುಗರಿಗೂ ಸಂತಸವನ್ನು ನೀಡಲಿ ಎನ್ನೋಣ ಅಲ್ಲವೆ?

ಚಿನ್ಮಯ ಎಂ.ರಾವ್ ಹೊನಗೋಡು
Monday, ‎October ‎1, ‎2012

Tags

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker
Skip to toolbar