-ಅನಸೂಯ ಎಮ್.ರಾವ್ ಹೊನಗೋಡು
12-10-2012
ಶರದ್ ಋತುವಿನಲ್ಲಿ ಆಚರಿಸುವ ನವರಾತ್ರಿಯಲ್ಲಿ ವಿಶೇಷವಾಗಿ ಶಕ್ತಿ ದೇವತೆಯನ್ನು ಆರಾಧಿಸುತ್ತಾರೆ. ಆಶ್ವೀಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಒಂಬತ್ತು ದಿನಗಳಲ್ಲಿ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿಯ ಮೊದಲ ಮೂರು ದಿನಗಳು ಋಗ್ವೇದ ಸ್ವರೂಪಳಾದ ಮಹಾಕಾಳಿಯನ್ನು, ದ್ವಿತೀಯ ಮೂರು ದಿನಗಳನ್ನು ಸಾಮವೇದ ಸ್ವರೂಪಳಾದ ಮಹಾ ಸರಸ್ವತಿಯನ್ನು,ತೃತೀಯ ಮೂರು ದಿನಗಳನ್ನು ಯಜುರ್ವೇದ ಸ್ವರೂಪಳಾದ ಮಹಾಲಕ್ಷ್ಮಿಯನ್ನು ಅರ್ಚಿಸುತ್ತಾರೆ. ಏಳನೆಯ ದಿನ ಶಾರದಾ ಪೂಜೆಯನ್ನು ಹಾಗು ಹತ್ತನೆಯ ದಿನ ವಿಜಯ ದಶಮಿಯನ್ನು ಆಚರಿಸುತ್ತಾರೆ.
ದೇವಿಗೆ ಪ್ರಿಯವಾದ ಹಾಲು ಪಾಯಸ,ಚಿತ್ರಾನ್ನ ಹಾಗು ಮೊಸರನ್ನವನ್ನು ನೈವೇದ್ಯ ಮಾಡುತ್ತಾರೆ. ಇದರ ಜೊತೆಗೆ ಪ್ರತಿದಿನವೂ ವಿಶೇಷ ಭಕ್ಷ್ಯಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ಈ ಭಕ್ಷ್ಯಗಳನ್ನು ತಯಾರಿಸುವ ವಿಧಾನವನ್ನು ಈ ಕೇಳಗೆ ನೀಡಲಾಗಿದೆ.
೧-ಮೊದಲನೆಯ ದಿನ-
ಖಾದ್ಯ-ಸೌತೆಕಾಯಿ ಸುಟ್ಟವು
ಬೇಕಾಗುವ ಸಾಮಗ್ರಿಗಳು;
ಸೌತೆಕಾಯಿ ತುರಿ-೧ ಕಪ್
ಅಕ್ಕಿ-೨ ಕಪ್
ಬೆಲ್ಲ- ೧/೪ ಕಪ್
ಏಲಕ್ಕಿ
ತುಪ್ಪ
ಉಪ್ಪು
ಮಾಡುವ ವಿಧಾನ-ಅಕ್ಕಿಯನ್ನು ಆರು ತಾಸು ನೀರಲ್ಲಿ ನೆನೆ ಹಾಕಿ ಸೌತೆಕಾಯಿ ತುರಿಯೊಂದಿಗೆ ರುಬ್ಬಿ. ಬೆಲ್ಲ,ಏಲಕ್ಕಿ ಪುಡಿ ಹಾಗು ಉಪ್ಪನ್ನು ರುಚಿಗೆ ತಕ್ಕಷ್ಟು ಸೇರಿಸಿ. ರುಬ್ಬಿದ ಹಿಟ್ಟನ್ನು ಒಲೆಯ ಮೇಲಿಟ್ಟು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಿ. ದೊಸೆ ಮಾಡುವ ಕಾದ ತವಾದ ಮೇಲೆ ಸಣ್ಣ ಸಣ್ಣ ದೋಸೆಗಳನ್ನು ಮಾಡಿ ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ.
೨-ಎರಡನೆಯ ದಿನ
ಖಾದ್ಯ-ಎರಿಯಪ್ಪ
ಬೇಕಾಗುವ ಸಾಮಗ್ರಿಗಳು;
ಅಕ್ಕಿ- ೧ ಕಪ್
ಗೋದಿ ಹಿಟ್ಟು- ೧ ಕಪ್
ಬೆಲ್ಲ- ೧/೨ ಕಪ್
ಕರಿಯಲು ಎಣ್ಣೆ
ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ಗೋದಿ ಹಿಟ್ಟು,ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. (ಮಿಶ್ರಣವು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು). ಮಧ್ಯ ಗುಂಡಿ ಇರುವ ಎಣ್ಣೆ ಬಾಣಲಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಹಿಟ್ಟನ್ನು ಸೌಟಿನಿಂದ ಎಣ್ಣೆಗೆ ಹಾಕಬೇಕು. ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಬೇಕು.
೩-ಮೂರನೆಯ ದಿನ
ಖ್ಯಾದ್ಯ-ಸುಕ್ಕಿನ ಉಂಡೆ
ಬೇಕಾಗುವ ಸಾಮಗ್ರಿಗಳು;
ಕಡ್ಲೆ ಬೇಳೆ-೧/೨ ಕಪ್
ಕಾಯಿತುರಿ-೧/೨ ಕಪ್
ಬೆಲ್ಲ-೧ ಕಪ್
ಗೋದಿ ಹಿಟ್ಟು- ೨ ಕಪ್
ಚಿಟಿಕೆ ಉಪ್ಪು
ಏಲಕ್ಕಿ ಪುಡಿ
ಕರಿಯಲು ಎಣ್ಣೆ
ಮಾಡುವ ವಿಧಾನ- ಕಡಲೆ ಬೇಳೆಯನ್ನು ಚೆನ್ನಾಗಿ ಬೇಯಿಸಿ ಕಾಯಿತುರಿ ಮತ್ತು ಬೆಲ್ಲವನ್ನು ಸೇರಿಸಿ ಒಲೆಯ ಮೇಲಿಟ್ಟು ಚೆನ್ನಾಗಿ ಆರಿಸಿಕೊಳ್ಳ ಬೇಕು. ನಂತರ ಕಡಲೆ ಬೆಳೆ ಮಿಶ್ರಣವನ್ನು ರುಬ್ಬಿಕೊಂಡು ಏಲಕ್ಕಿ ಪುಡಿ ಸೇರಿಸಿ ನಿಂಬೆ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಬೇಕು. ಗೋದಿ ಹಿಟ್ಟಿಗೆ ಒಂದು ಚಮಚ ಬೆಲ್ಲ ಮತ್ತು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕದಡಿಕೊಳ್ಳಬೇಕು. ಉಂಡೆಯನ್ನು ಗೋದಿ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು.
೪-ನಾಲ್ಕನೆಯ ದಿನ
ಖಾದ್ಯ-ಕಾಯಿ ಕಡುಬು
ಬೇಕಾಗುವ ಸಾಮಗ್ರಿಗಳು;
ಅಕ್ಕಿ-೧ ಕಪ್
ಗೋದಿ ಹಿಟ್ಟು-೧/೨ ಕಪ್
ಕಾಯಿ ತುರಿ-೧ ಕಪ್
ಬೆಲ್ಲ-೧/೨ ಕಪ್
ತುಪ್ಪ-೪ ಚಮಚ
ಏಲಕ್ಕಿ ಪುಡಿ
ಉಪ್ಪು
ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬ ಬೇಕು. ರುಬ್ಬಿದ ಹಿಟ್ಟಿಗೆ ಗೋದಿ ಹಿಟ್ಟು ಮತ್ತು ಉಪ್ಪನ್ನು ಸೇರಿಸಬೇಕು. ತಯಾರಿಸಿದ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ನೀರಾಗಿರಬೇಕು. ಹಿಟ್ಟನ್ನು ಒಂದು ಬಾಣಲಿಗೆ ಹಾಕಿ ತುಪ್ಪವನ್ನು ಸೇರಿಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವವರೆಗೆ ಮಗುಚಬೇಕು. ಉಂಡೆ ಕಟ್ಟುವ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ. ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಉಂಡೆ ಮಾಡಿ ಬಟ್ಟಲಿನ ಆಕಾರ ಮಾಡಿ ಕಾಯಿ-ಬೆಲ್ಲದ ಹೂರಣವನ್ನು ಒಳಗಿಟ್ಟು ಮಡಿಚಿ ಸುತ್ತಲೂ ಸೇರಿಸಬೇಕು. ನಂತರ ಉಗಿಯ ಮೇಲೆ ಹತ್ತು ನಿಮಿಷ ಬೇಯಿಸಬೇಕು.
೫-ಐದನೆಯ ದಿನ
ಖಾದ್ಯ-ಖರ್ಜಿ ಕಾಯಿ
ಬೇಕಾಗುವ ಸಾಮಗ್ರಿಗಳು;
ತೆಂಗಿನ ತುರಿ-೧ ಕಪ್
ಬೆಲ್ಲ-೧/೨ ಕಪ್
ಮೈದ-ಅರ್ಧ ಕಪ್
ಚಿರೋಟಿ ರವೆ- ಅರ್ಧ ಕಪ್
ಏಲಕ್ಕಿ ಪುಡಿ
ತುಪ್ಪ-೨ ಚಮಚ
ಕರಿಯಲು ಎಣ್ಣೆ
ಉಪ್ಪು
ಮಾಡುವ ವಿಧಾನ- ತೆಂಗಿನ ತುರಿ,ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ಕುದಿಸಿ ಹೂರಣ ತಯಾರಿಸಿಟ್ಟುಕೊಳ್ಳಿ. ಮೈದಾ ಮತ್ತು ರವೆಯನ್ನು ಸ್ವಲ್ಪ ತುಪ್ಪ ಮತ್ತು ಉಪ್ಪು ಹಾಕಿ ಕಲಸಿ ಎರಡು ತಾಸು ಹಾಗೇ ಬಿಡಿ. ನಂತರ ಪೂರಿಯಂತೆ ಲಟ್ಟಿಸಿ ಒಳಗೆ ಹೂರಣವನ್ನಿಟ್ಟು ಮಡಚಿ ಸುತ್ತಲೂ ಸೇರಿಸಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವ ಹಾಗೆ ಕರಿಯಿರಿ.
೬-ಆರನೆಯ ದಿನ
ಖಾದ್ಯ-ಹಾಲುಂಡೆ ಕಡುಬು
ಬೇಕಾಗುವ ಸಾಮಗ್ರಿಗಳು;
ಅಕ್ಕಿ ರವೆ-೧ ಕಪ್
ಬೆಲ್ಲ- ಒಂದುವರೆ ಕಪ್
ಹಾಲು-೧ ಕಪ್
ಕಾಯಿ ತುರಿ-೧ ಕಪ್
ಏಲಕ್ಕಿ ಪುಡಿ-೧/೨ ಚಮಚ
ಉಪ್ಪು
ಮಾಡುವ ವಿಧಾನ- ಅಕ್ಕಿ ರವೆಯನ್ನು ಚೆನ್ನಾಗಿ ಹುರಿದುಕೊಂಡು ಅದಕ್ಕೆ ಬಿಸಿ ನೀರು ಮತ್ತು ಹಾಲು ಹಾಕಿ ಬೇಯಿಸಬೇಕು. ಬೆಂದ ನಂತರ ಬೆಲ್ಲ,ಕಾಯಿತುರಿ ಹಾಗು ಉಪ್ಪು ಹಾಕಿ ಮಗುಚಬೇಕು. ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ನಂತರ ನಿಂಬೆ ಗಾತ್ರದ ಉಂಡೆ ಮಾಡಿ ಹಬೆಯಲ್ಲಿ ಹತ್ತು ನಿಮಿಷ ಬೇಯಿಸಬೇಕು.
೭-ಏಳನೆಯ ದಿನ
ಖಾದ್ಯ-ಶ್ಯಾವಿಗೆ
ಬೇಕಾಗುವ ಸಾಮಗ್ರಿಗಳು;
ಅಕ್ಕಿ-೨ ಕಪ್
ಬೆಲ್ಲ-ಅರ್ಧ ಕಪ್
ಏಲಕ್ಕಿ ಪುಡಿ-ಅರ್ಧ ಚಮಚ
ಉಪ್ಪು
ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬಿ. ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರುವಂತೆ ಹಿಟ್ಟನ್ನು ತಯಾರಿಸಿಕೊಳ್ಳಿ. ಬೆಲ್ಲ,ಉಪ್ಪು ಹಾಗು ಏಲಕ್ಕಿ ಪುಡಿ ಸೇರಿಸಿ. ನಂತರ ಹಿಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ ಆವಿಯಲ್ಲಿ ಹತ್ತು ನಿಮಿಷ ಬೇಯಿಸಿ ಬಿಸಿ ಇರುವಾಗಲೇ ಶ್ಯಾವಿಗೆ ಒರಳಿನಲ್ಲಿ ಹಾಕಿ ಒತ್ತಿ.
೮-ಎಂಟನೆಯ ದಿನ
ಖಾದ್ಯ- ಅರಳು ಕಡುಬು
ಬೇಕಾಗುವ ಸಾಮಗ್ರಿಗಳು;
ಅಕ್ಕಿ-೨ ಕಪ್
ಅರಳು- ೨ ಕಪ್
ಬೆಲ್ಲ- ಅರ್ದ ಕಪ್
ಉಪ್ಪು ಹಾಗು ಏಲಕ್ಕಿ ಪುಡಿ
ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಿ. ಅರಳನ್ನು ನೆನೆಸಿ ನುಣ್ಣಗೆ ರುಬ್ಬಿ ಬೆಲ್ಲ,ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ. ರುಬ್ಬಿದ ಮಿಶ್ರಣ ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು. ರುಬ್ಬಿಟ್ಟ ನಾಲ್ಕು-ಐದು ತಾಸಿನ ನಂತರ ಇಡ್ಲಿ ತಟ್ಟೆಗೆ ಹಾಕಿ ಉಗಿಯಲ್ಲಿ ಬೇಯಿಸಿ.
೯-ಒಂಬತ್ತೆನೆಯ ದಿನ
ಖಾದ್ಯ- ಚಕ್ಲಿ ಮತ್ತು ಪಾಯಸ
ಚಕ್ಲಿಗೆ ಬೇಕಾಗುವ ಸಾಮಗ್ರಿಗಳು;
ದಪ್ಪ ಅಕ್ಕಿ-೩ ಕಪ್
ಉದ್ದಿನ ಬೇಳೆ-ಅರ್ಧ ಕಪ್
ಹೆಸರು ಬೇಳೆ-ಅರ್ಧ ಕಪ್
ಹುರಿಗಡಲೆ- ಅರ್ಧ ಕಪ್
ಕಡ್ಲೆ ಬೇಳೆ-೨ ಚಮಚ
ಜೀರಿಗೆ-೨ ಚಮಚ
ಓಮಿನ ಕಾಳಿನ ಪುಡಿ-ಅರ್ಧ ಚಮಚ
ಉಪ್ಪು
ಬೆಣ್ಣೆ-ನಿಂಬೆ ಗಾತ್ರ
ಚಕ್ಲಿ ಮಾಡುವ ವಿಧಾನ- ಅಕ್ಕಿಯನ್ನು ತೊಳೆದು ನೀರನ್ನು ಬಸಿದು ಆರಿದ ನಂತರ ಚೆನ್ನಾಗಿ ಹುರಿಯಬೇಕು. ಕಾಳು ಕಡಿಗಳನ್ನು ಪ್ರತ್ಯೇಕವಾಗಿ ಹುರಿದು ಅಕ್ಕಿಯ ಜೊತೆ ಎಲ್ಲವನ್ನೂ ಸೇರಿಸಿ ನುಣ್ಣಗೆ ಹಿಟ್ಟು ಮಾಡಿಟ್ಟುಕೊಳ್ಳಬೇಕು. ಕುದಿಯುವ ನೀರಿನಲ್ಲಿ ಉಪ್ಪು,ಬೆಣ್ಣೆ ಹಾಗು ಹಿಟ್ಟನ್ನು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲೆಸಿ. ಚಕ್ಕುಲಿ ಒರಳಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಬೇಕು.
ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು;
ಅಕ್ಕಿ-೧ ಕಪ್
ಹಾಲು-೨ ಕಪ್
ಬೆಲ್ಲ-ಅರ್ಧ ಕಪ್
ಏಲಕ್ಕಿ ಪುಡಿ
ಪಾಯಸ ಮಾಡುವ ವಿಧಾನ– ಅಕ್ಕಿಯನ್ನು ತೊಳೆದುಕೊಂಡು ಮೆತ್ತಗಿನ ಅನ್ನ ಮಾಡಿ. ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಕುದಿಸಿ, ಹಾಲು ಏಲಕ್ಕಿ ಪುಡಿ ಸೇರಿಸಿ.
೧೦- ಹತ್ತನೆಯ ದಿನ
ಖಾದ್ಯ-ಹೋಳಿಗೆ
ಬೇಕಾಗುವ ಸಾಮಗ್ರಿಗಳು;
ಕಡ್ಲೆ ಬೇಳೆ-೧ ಕಪ್
ಬೆಲ್ಲ-೧ ಕಪ್
ಗೋದಿ ಹಿಟ್ಟು-ಅರ್ಧ ಕಪ್
ಮೈದ ಹಿಟ್ಟು-ಅರ್ಧ ಕಪ್
ಕೊಬರಿ ಎಣ್ಣೆ-೪ ಚಮಚ
ಏಲಕ್ಕಿ ಪುಡಿ
ಉಪ್ಪು ಹಾಗು ಅರಿಶಿನ ಪುಡಿ-ಒಂದು ಚಿಟಿಕೆ
ಮಾಡುವ ವಿಧಾನ- ಕಡ್ಲೆ ಬೇಳೆಯನ್ನು ಬೇಯಿಸಿ ಬೆಲ್ಲ ಹಾಕಿ ಆರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು. ರುಬ್ಬಿದ ಹೂರಣಕ್ಕೆ ಏಲಕ್ಕಿ ಪುಡಿ ಸೇರಿಸಿ. ಗೋದಿ ಹಿಟ್ಟು,ಮೈದಾ ಹಿಟ್ಟು,ಎಣ್ಣೆ,ಉಪ್ಪು ಹಾಗು ಅರಿಶಿನ ಪುಡಿ ಸೇರಿಸಿ ಕಣಕವನ್ನು ಮಾಡಿಟ್ಟುಕೊಳ್ಳಿ. ಕಣಕದಲ್ಲಿ ಹೂರಣವನ್ನಿಟ್ಟು ಎಣ್ಣೆ ಅಥವ ಮೈದಾ ಹಿಟ್ಟಿನಲ್ಲಿ ಅದ್ದಿ ತೆಳ್ಳಗೆ ಲಟ್ಟಿಸಿ ತವಾದ ಮೇಲೆ ಬೇಯಿಸಿ.
**************************************