-ಎಂ.ಗಣಪತಿ ಕಾನುಗೋಡು
ಇದು ನಗಲಿಕ್ಕಾಗಿ ಕಟ್ಟಿದ ಕಥೆಯಲ್ಲ. ವಾಸ್ತವಿಕ ಸಂಗತಿ. ಮನೆಯ ಯಜಮಾನಿ ಸ್ವಲ್ಪ ವಯಸ್ಸಾದವಳು. ಮೇಲ್ಭಾಗದ ಮುಂದಿನ ಎರಡು ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಅದನ್ನು ಬಾಯಿಗೆ ಜೋಡಿಸಿಕೊಳ್ಳುವುದು, ರಾತ್ರಿ ತೆಗೆದಿಡುವುದು ಎಂದಿನ ರೂಢಿ.
ಮಗನ ಮದುವೆಯಾದ ವರ್ಷ. ದೀಪಾವಳಿಯ ಹೊಸ ಹಬ್ಬಕ್ಕೆ ಕರೆಯಲು ಸೊಸೆಯ ಮನೆಯ ಬೀಗರು ಬಂದಿದ್ದಾರೆ. ಹೊಸ ಬೀಗರಿಗೆ ಔತಣ ಎಂದ ಮೇಲೆ ತಯಾರಿ ಭರ್ಝರಿಯಾಗಿಯೇ ನಡೆದಿತ್ತು.
ಬೆಳಿಗ್ಗೆಯಿಂದ ಮಧ್ಯಾಹ್ನದ ಊಟದ ಹೊತ್ತಿನವರೆಗೂ ಪುರುಷೋತ್ತಿಲ್ಲದಷ್ಟು ಕೆಲಸ ಯಜಮಾನಿಗೆ. ಬೀಗರನ್ನು ಇನ್ನೇನು ಊಟಕ್ಕೆ ಒಳಗೆ ಕರೆಯಬೇಕು ಅನ್ನುವಷ್ಟರಲ್ಲಿ ಯಜಮಾನಿ ಮುಖ ತೊಳೆದು ಒಮ್ಮೆ ತಲೆ ಬಾಚಲಿಕ್ಕಾಗಿ ಕನ್ನಡಿ ನೋಡಿದ್ದಾಳೆ. ಬಾಯಿಯೊಳಗಿನ ಎರಡು ಹಲ್ಲಿನ ಸೆಟ್ ಎಲ್ಲಿಯೋ ಬಿದ್ದು ಹೋಗಿದೆ. ಅಯ್ಯೋ ದೇವರೇ ….!?
ಬಿದ್ದು ಹೋಗಿದ್ದು ಪರವಾಗಿಲ್ಲ. ಕೆಡುವುದೇನು? ಅತ್ತೆಯ ಚಂದ ನೋಡಿ ಬೀಗರೇನು ಅವರನ್ನು ಮೆಚ್ಚಿಕೊಳ್ಳಬೇಕಾಗಿಲ್ಲವಲ್ಲ ! ಆದರೆ ಅದು ಎಲ್ಲಿ ಬಿತ್ತು ಅಂತ ಬೇಕಲ್ಲ. ಹೊರಗಡೆ ಎಲ್ಲಾದರೂ ಬಿತ್ತೋ ಅಥವಾ ಅಡುಗೆಯ ಐಟಂಗಳಲ್ಲಿ ಯಾವುದಾದರಲ್ಲೂ ಬಿದ್ದು ಹೋಗಿದೆಯೋ?. ಅದು ಬೀಗರ ಊಟದ ಪ್ಲೇಟಿಗೆ ಬಂದರೆ ಏನು ಗತಿ? ಶಿವ…..ಶಿವಾ…..
ವಿಷಯವನ್ನು ಮಗನಿಗೆ ಮತ್ತು ಗಂಡನಿಗೆ ತಿಳಿಸಿದ್ದು ಆಯಿತು. ಸೊಸೆಗೂ ಗುಟ್ಟಾಗಿ ಪಿಸುಗುಟ್ಟಿದ್ದಾಯಿತು. ಆಕೆಗೆ ತಿಳಿಸಿದರೆ ಅಪ್ಪನಿಗೆ ಹೇಳಿಬಿಟ್ಟಾಳು ಎಂದು ಮುಚ್ಚಿಟ್ಟರೆ ಮುಂದಿನ ಪ್ರಸಂಗದಿಂದ ಅದು ಅವಳಿಗೆ ತಿಳಿಯದೇ ಇರುತ್ತದೆಯೇ? ಆಗಲೇ ಗಂಟೆ ಮಧ್ಯಾಹ್ನ ೧.೩೦ ಆಗಿದೆ. ಬೀಗರು ೩.೦೦ ಗಂಟೆ ಬಸ್ಸಿಗೆ ಊರಿಗೆ ಮರಳಬೇಕು ಎಂದು ಬಂದ ಕೂಡಲೇ ಹೇಳಿದ್ದು ಬೇರೆ. ಅಯ್ಯೋ….ದೇವರೇ….!
ಮಗ ತಡಮಾಡಲಿಲ್ಲ. ಶೆಲ್ಪ್‌ನಲ್ಲಿದ್ದ ಹರಿವಾಣಗಳನ್ನಷ್ಟೇ ಅಲ್ಲ ಮಹಡಿಯ ರೂಮ್‌ನಲ್ಲಿದ್ದ ಹತ್ತಾರು ಹರಿವಾಣಗಳನ್ನು ತೊಳೆದು ತಂದು ಅಡುಗೆಮನೆಯ ಉದ್ದಗಲಕ್ಕೆ ಹರಡಿದ. ಅನ್ನದಿಂದ ಹಿಡಿದು ಸಾರು, ಸಾಂಬಾರು, ಹುಣಸೆಹಣ್ಣಿನ ಮಂದನೆಯ ಗೊಜ್ಜು, ಪಲ್ಯ, ಕೋಸುಂಬರಿ, ಪಾಯಸ, ಬಾಣಲೆ ತುಂಬಾ ಸಣ್ಣಕ್ಕಿ ಕೇಸರಿಬಾತು, ಚಿತ್ರಾನ್ನ ಒಂದೇ.. ಎರಡೇ.. ಹೀಗೆ.. ಹೀಗೆ.. ಎಲ್ಲವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹರಿವಾಣಕ್ಕೆ ಸುರವಿ ಸೌಟಿನಲ್ಲಿ ಹರವಿ ಹರವಿ ನೋಡಿದ್ದಾಯ್ತು. ಇದರಿಂದ ಪದಾರ್ಥಗಳು ಆರಿ ಹೋಯಿತೇ ವಿನಃ ಹಲ್ಲುಸೆಟ್ಟು ಸಿಗಲಿಲ್ಲ. ಒಬ್ಬೊಬ್ಬರು ಒಂದೊಂದನ್ನು ಜಾಲಾಡಿದರು. ಸೆಟ್ಟು ಸಿಕ್ಕದಿದ್ದಕ್ಕಾಗಿ ಸಿಡಿಮಿಡಿಗೊಂಡು ಅವನು ಸರಿಯಾಗಿ ನೋಡಲಿಲ್ಲವೇನೋ ಎಂದು ಇವನು ಇವನು ಸರಿಯಾಗಿ ನೋಡಿಲಿಲ್ಲವೇನೋ ಎಂದು ಅವನು ಹೀಗೆ ಒಬ್ಬರಿಗೊಬ್ಬರು ಗಾಬರಿಯಲ್ಲಿ ಬೈಯ್ದಾಡಿಕೊಂಡಿದ್ದೂ ಆಯಿತು. ಪಾತ್ರೆಯ ಶಬ್ದ, ಮಾತಿನ ಗೊಣಗಾಟದಲ್ಲಿ ಗಂಟೆ ಎರಡೂವರೆಯೂ ಆಯಿತು.
ಜಗುಲಿಯ ಮೇಲೆ ಕುಳಿತಿದ್ದ ಬೀಗರಿಬ್ಬರು ಮನೆಯ ಯಜಮಾನನ್ನು ಹೊರಗೆ ಕರೆದರು. ಇನ್ನು ಅರ್ಧಗಂಟೆಯಲ್ಲಿ ತಾವು ಊರಿಗೆ ಹೊರಡಬೇಕು ಎಂದರು. ಅದು ಹಳ್ಳಿ ಬೇರೆ. ಬಿಟ್ಟರೆ ಮರುದಿನವೇ ಗತಿ. ಏನು ಬೀಗರೆ ಬಹಳ ವಿಶೇಷ ಔತಣ ಮಾಡಿಬಿಟ್ಟಿದ್ದೀರಿ ಅಂತ ಕಾಣುತ್ತೆ. ನಾವು ನಮ್ಮ ಹಲ್ಲಿನಲ್ಲಿ ಅಗಿದು ತಿಂದು ಜೀರ್ಣಿಸಿಕೊಳ್ಳಲಿಕ್ಕೆ ಆಗುತ್ತೋ ಇಲ್ಲವೋ, ಏನು ಮಹಾರಾಯರೆ ಎಂದು ತಮ್ಮ ಮಗಳ ಮಾವನನ್ನು ಕೇಳಿದರು. ಮಾವನ ಗತಿಯೋ ? ಅವನು ಬಾಯಿ ಬಿಟ್ಟರೆ ಕೆಟ್ಟ.!
ಜಗುಲಿಯಲ್ಲಿ ಬೀಗರು ಅರ್ಜೆಂಟ್ ಮಾಡಿದ್ದನ್ನು ಯಜಮಾನ ಒಳಗೆ ಬಂದು ಹೇಳಿದ. ಅನಿವಾರ್ಯ. ಸಿದ್ದತೆ ಮಾಡಿದರು. ನೆಂಟರು ಅವಸರ ಅವಸರದಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದೂ ಆಯಿತು.
ದೇವರು ದೊಡ್ಡವ ಅಂತೂ ಬೀಗರ ಬಾಯಿಗೆ ನನ್ನ ಹಲ್ಲು ಸೆಟ್ಟು ಬಂದು ಕೂರಲಿಲ್ಲವಲ್ಲ. ಭಗವಂತ ನಮಸ್ಕಾರ. ಯಜಮಾನಿಯಿಂದ ದೇವರಿಗೆ ಥ್ಯಾಂಕ್ಸ್.
ನೆಂಟರನ್ನು ಕಳುಹಿಸಿ ಮನೆಯವರೆಲ್ಲಾ ಪ್ರಕರಣದಲ್ಲಿ ದಣಿದು ಊಟ ಮುಗಿಸುವ ಹೊತ್ತಿಗೆ ಸಂಜೆ ೫.೦೦ ಗಂಟೆಯಾಗಿತ್ತು. ಅಡುಗೆ ಮನೆಯನ್ನು ಸೇರಿಸುವ ಕೆಲಸವನ್ನು ಸೊಸೆಗೆ ವಹಿಸಿ ಅತ್ತೆ ಮನಸ್ಸಿನ ಬೇಸರದಿಂದ ಸ್ವಲ್ಪ ವಿಶ್ರಾಂತಿಗೆ ಹೋದಳು.
ಕಸ ಮುಸುರೆ ಮುಗಿಸಿ ಬಂದ ಸೊಸೆ ಅತ್ತೆಯ ಮಂಚದ ಎದುರಿಗೆ ಬಂದು ನಿಂತಳು. ಅತ್ತೆ ಇಲ್ಲಿ ಸಿಕ್ಕಿತು ನಿಮ್ಮ ಹಲ್ಲು ಸೆಟ್ಟು ಎಂದಳು. ಅಯ್ಯೋ ಎಲ್ಲಿತ್ತೆ ಪುಣ್ಯಾತ್ಗಿತ್ತೀ ಎಂದು ಹೌಹಾರಿದಳು ಅತ್ತೆ. ಸೊಸೆ ಹೇಳಿದಳು. ಅದು ಅಡುಗೆ ಮನೆಯ ಅಕ್ಕಿ ತೊಳೆದ ನೀರಿನ ಬಕೆಟಿನಲ್ಲಿತ್ತು.