ತಮ್ಮದೇ ಆದ ವಿಭಿನ್ನ ಶೈಲಿಯ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘19.20.21’. ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಹುಟ್ಟಿಸಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಟೀಸರ್ ಝಲಕ್ ಬಿಡುಗಡೆಯಾಗಿದ್ದು ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
‘19.20.21’ ಚಿತ್ರದ ಕ್ಯೂರಿಯಾಸಿಟಿ ಹೊತ್ತ ಟೀಸರ್ ಝಲಕ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಿರ್ದೇಶಕ ಮಂಸೋರೆ ಪ್ರೇಕ್ಷಕರಿಗೆ ಮತ್ತೊಂದು ಪ್ರಬಲವಾದ ವಿಚಾರವನ್ನು ತಮ್ಮದೇ ಆದ ಸಿನಿಮ್ಯಾಟಿಕ್ ಶೈಲಿಯಲ್ಲಿ ಹೇಳ ಹೊರಟಿದ್ದಾರೆ ಅನ್ನೋದಕ್ಕೆ ಟೀಸರ್ ಸಾಕ್ಷಿಯಾಗಿದೆ. ಪ್ರಾಮಿಸಿಂಗ್ ಆಗಿ ಮೂಡಿ ಬಂದಿರೋ ಟೀಸರ್ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಟೀಸರ್ ನೊಂದಿಗೆ ಟ್ರೇಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ರಿವೀಲ್ ಮಾಡಿದ್ದು ಇದೇ ತಿಂಗಳ 27ರಂದು ಟ್ರೇಲರ್ ಬಿಡುಗಡೆಯಾಗುತ್ತಿದೆ.
ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ಚಿತ್ರದಲ್ಲಿದ್ದು, ಸೋಶಿಯಲ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ರಂಗಭೂಮಿ ಕಲಾವಿದ ಶೃಂಗ ಬಿ. ವಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ.
19.20.21’ ಚಿತ್ರವನ್ನು ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೆನ್ಸಾರ್ ಅಂಗಳದಲ್ಲಿ ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.