ಸಂಗೀತ ಸಮಯ

ಹಾಡು ನಿಂತ ಕಲಾವಿದನ ಹಾಡು ಮತ್ತೆ ಶುರು…? ಸುಭಾಷ್ ಹಾರೆಗೊಪ್ಪ “ನೆನಪಿನಲ್ಲಿ….” !

ಸಾವೆಂಬುದು ಈ ಲೋಕದಲ್ಲಿ ಯಾರನ್ನು ಬಿಟ್ಟಿದೆ ಹೇಳಿ. ಸಾವು ಯಾರನ್ನೂ ಬಿಡುವುದಿಲ್ಲ. ನಾವು ನೀವೂ ಹೊರತಲ್ಲ. ಸಾಗರದ ಅಲೆ ಅಲೆಗಳಂತೆ ಈ ಜೀವದ ತೀರಕ್ಕೆ ಬಂದು ಹೋಗುವ ನಾವು ಮತ್ತೆ ಮತ್ತೆ ಬರುತ್ತೇವೆ ಹೋಗುತ್ತೇವೆ. ಎಂತಹ ವಿಜ್ನಾನಕ್ಕೂ ಸಾವನ್ನು ಗೆಲ್ಲಲಾಗಲಿಲ್ಲ. ಆದರೆ ಒಬ್ಬ ಒಳ್ಳೆಯ ಕಲಾವಿದ ಮಾತ್ರ ಸಾವನ್ನೂ ಗೆಲ್ಲ ಬಲ್ಲ ! ಅದು ಹೇಗೆನ್ನುವಿರಾ?! ತಾನು ಬಿಟ್ಟು ಹೋದ ಕಲಾಕೃತಿಗಳಿಂದ ! ಅಲೆಯಂತೆ ಬರುವಾಗ ತನ್ನ ಸಾಧನೆಯ ಚಿಪ್ಪಿನೊಳಗೆ ಅಮೂಲ್ಯವಾದ ಮುತ್ತುಗಳನ್ನಿಟ್ಟು ಅದನ್ನು ಜೀವಿಗಳ ತೀರದಲ್ಲೇ ಬಿಟ್ಟು ಹೋಗುವ ಕಲಾವಿದ ತಾನು ಬಿಟ್ಟು ಹೋದ ಕಲಾರಚನೆಗಳಿಂದಲೇ ಚಿರಕಾಲ ಜೀವಂತವಾಗಿರುತ್ತಾನೆ. ಹೀಗೆ ಇಂತಹ ಅನರ್ಘ್ಯರತ್ನಗಳೊಂದಿಗೆ ಇಂದಿಗೂ ನಮ್ಮೊಡನೆ ಜೀವಂತವಾಗಿರುವ ಕಲಾವಿದರು ಈ ನಾಡಿನಲ್ಲಿ ಸಾಕಷ್ಟಿದ್ದಾರೆ. ಅಂಥವರಲ್ಲಿ ಸುಭಾಷ್ ಹಾರೇಗೊಪ್ಪ ಎಂಬ ಅಪ್ರತಿಮ ಸುಗಮ ಸಂಗೀತಗಾರ ಕೂಡ ಒಬ್ಬರಾಗಿದ್ದರು ಎಂಬುದು ನಮ್ಮಲ್ಲಿ ಬಹಳಷ್ಟು ಮಂದಿಗೆ ಗೊತ್ತಿಲ್ಲದಿರಬಹುದು.

 

ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಹಾಗು ಸಿ.ಅಶ್ವಥ್ ಇಂತಹ ಘಟಾನುಘಟಿ ಸುಗಮ ಸಂಗೀತಗಾರರ ಸಾಲಿನಲ್ಲೇ ಮಿನುಗಬೇಕಾಗಿದ್ದ ತಾರೆಯೊಂದು ವಿಧಿಯಾಟಕ್ಕೆ ತುತ್ತಾಗಿ ನಮ್ಮಿಂದ ಶಾಶ್ವತವಾಗಿ ಮರೆಯಾಗಿ ಹೋಗಿದ್ದು ಈಗ ಮೂರು ವರ್ಷಗಳ ಹಿಂದೆ ಎಂಬುದು ಕಹಿಸತ್ಯ ! ಹೌದು..೨೦೧೦ ಏಪ್ರಿಲ್ ನಾಲ್ಕರಂದು ಅಪಾರ ಸಂಗೀತ ಪ್ರೇಮಿಗಳನ್ನು ದೈಹಿಕವಾಗಿ ಅಗಲಿದ ಸುಭಾಷ್ ಹಲವಾರು ಗೀತೆಗಳ ಅನರ್ಘ್ಯರತ್ನಗಳನ್ನು ಮಾತ್ರ ನಮಗಾಗಿ ಬಿಟ್ಟು ಹೋಗಿದ್ದಾರೆ. ಚದುರಿ ಹೋಗಿದ್ದ ಗೀತರತ್ನಗಳನ್ನೆಲ್ಲಾ ಹೆಕ್ಕಿ ತಂದಿರುವ ಅವರ ಪ್ರೀತಿಯ ಮಡದಿ ಪದ್ಮಶ್ರೀ ಎಮ್.ಪಿ೩ ಸಿ.ಡಿ ರೂಪದಲ್ಲಿ ಸುಗಮ ಸಂಗೀತ ಲೋಕಕ್ಕೆ ನೀಡುತ್ತಿದ್ದಾರೆ. ಇದಕ್ಕೆ ಸಾಥ್ ನೀಡುತ್ತಿರುವುದು ಸುಹಾಸಂ (ಸುಭಾಷ್ ಹಾರೆಗೊಪ್ಪ ಸಂಗೀತ) ಪ್ರತಿಷ್ಠಾನ. ಇದೇ ಎಪ್ರಿಲ್ ೨೭ರಂದು ಸಾಗರದ ಶ್ರೀ ಶಾರದಾಂಬಾ ಸಭಾಭವನದಲ್ಲಿ ನೂತನವಾಗಿ ಉದ್ಘಾಟನೆಯಾಗುತ್ತಿರುವ ಈ ಸಂಸ್ಥೆ ಸುಭಾಷ್ ಅವರ ಸಂಸ್ಮರಣೆಯ ಅಂಗವಾಗಿ ಅವರೇ ರಾಗಸಂಯೋಜಿಸಿ ಅಲ್ಲಲ್ಲಿ ಕಾರ್ಯಕ್ರಮಗಳಲ್ಲಿ ಈ ಹಿಂದೆ ಹಾಡಿರುವ ಗೀತೆಗಳ ಗುಚ್ಛ “ನೆನಪಿನಲ್ಲಿ” ಎಂಬ ಅಡಕ ಮುದ್ರಿಕೆಯನ್ನು ಹೊರತರುತ್ತಿದೆ. ನೀನಾಸಂನ ರಂಗಕರ್ಮಿ ಕೆ.ವಿ ಅಕ್ಷರ ಈ ಸಂಸ್ಥೆಗೆ ಚಾಲನೆ ನೀಡುತ್ತಿದ್ದಾರೆ. ಇನ್ನೊಬ್ಬ ಹಿರಿಯ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ಉಪಸ್ಥಿತರಿದ್ದು ಆಶಯ ಭಾಷಣ ಮಾಡಲಿದ್ದಾರೆ. ಕಿರುತೆರೆ ನಟ-ನಿರ್ದೇಶಕ ರಮೇಶ್ ಬೇಗಾರ್ ಅಡಕ ಮುದ್ರಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ.

ಸಹಜವಾಗಿ ಮಹಾನಗರಿಗಳಲ್ಲಿರುವ ಕಲಾವಿದರು ಮಾತ್ರ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಗರ ಸಮೀಪದ ಗ್ರಾಮೀಣ ಭಾಗದಿಂದ ಬೆಳೆದು ಬಂದಿದ್ದ ಸುಭಾಷ್ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದ್ದ ಪ್ರತಿಭಾವಂತರಾಗಿದ್ದರು. ಆಗಲೇ ಬಾಳಗೀತೆಗೆ ಅಂತ್ಯ ಹಾಡುವಂತಾಯಿತು. ಮೂರು ವರ್ಷಗಳ ನಂತರ ಅವರ ಭರಪೂರ ೮೦ ಹಾಡುಗಳು ಲೋಕಾರ್ಪಣೆಯಾಗುತ್ತಿರುವುದು ಸಂತಸದ ಸಂಗತಿ. ಈ ಮೂಲಕವಾದರೂ ಸುಭಾಷ್ ಅವರ ವಿಶಿಷ್ಠ ಬಗೆಯ ರಾಗ ಸಂಯೋಜನೆ ಹಾಗು ಗಾಯನ ಶೈಲಿ ಸುಗಮ ಸಂಗೀತ ಲೋಕಕ್ಕೆ ಅರ್ಪಿಸಲ್ಪಡುತ್ತಿರುವುದು ಬರೀ ಮನರಂಜನೆಗೆ ಮಾತ್ರವಲ್ಲದೆ ಅಧ್ಯಯನಕ್ಕೂ ಯೋಗ್ಯವಾಗಿದೆ ಎಂಬುದು ಹಲವು ಹಿರಿಯ ಸಂಗೀತಗಾರರ ಅಭಿಪ್ರಾಯ. ಅಂದ ಹಾಗೆ ಸಿ.ಡಿ ಬಿಡುಗಡೆಯ ನಂತರ ಇದೇ ಕಾರ್ಯಕ್ರಮದಲ್ಲಿ ಸುಭಾಷ್ ಅವರ ಹಾಡುಗಳನ್ನು ಅವರ ಸಹವರ್ತಿಗಳಾದ ಗಾಯಕ ರವಿ ಮೂರೂರು ಹಾಗು ಪಂಡಿತ್ ನಾಗಭೂಷಣ ಹೆಗಡೆ ಇವರುಗಳು ಹಾಡಲಿದ್ದಾರೆ. ನೀವೂ ತಪ್ಪದೆ ಬನ್ನಿ…

ಸುಭಾಷ್ ಹಾರೆಗೊಪ್ಪ-ಕಿರುಪರಿಚಯ

ನಿಮಗೆ ನೆನಪಿರಬಹುದು ಈಗ ನಾಲ್ಕು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತಿದ್ದ “ಏಕೆ ಹೀಗೆ ನಮ್ಮ ನಡುವೆ ” ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಗೆ ರಾಗಸಂಯೋಜಿಸಿ ಹಾಡಿದವರು ಇದೇ ಸುಭಾಷ್. ಅದೇ ಗೀತೆಯ ಸಂಗೀತಕ್ಕೆ ಕಿರುತೆರೆಯ ಸಂಘದಿಂದ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಯ ಪಕ್ಕದ ಹಾರೆಗೊಪ್ಪ ಎಂಬ ಊರಿನ ಹೆಚ್.ಎಸ್ ಶ್ರೀಪಾದ್ ಭಟ್ ದಂಪತಿಗಳ ಮಗನಾಗಿ ಜನಿಸಿದ ಸುಭಾಷ್ ಕೇವಲ ೩೪ ವರ್ಷ ಬದುಕಿದರೂ ಆ ಊರಿಗೆ ಕೀರ್ತಿ ತಂದು ಕೊಟ್ಟ ಸಂಗೀತ ತಪಸ್ವಿ. ಸೊರಬ ನಾರಾಯಣಪ್ಪ ಹಾಗು ಹುಮಾಯುನ್ ಹರ್ಲಾಪುರ ಅವರಲ್ಲಿ ಆರಂಭಿಕವಾಗಿ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದ ಇವರು ಮುಂದೆ ಧಾರವಾಡ ವಿವಿಯಲ್ಲಿ ಸಂಗೀತ ವಿಭಾಗದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಮುಂದೆ ವೆಂಕಟೇಶ್ ಕುಮಾರ್, ಕೈವಲ್ಯ ಕುಮಾರ್ ಗುರವ್ ಹಾಗು ಪರಮೇಶ್ವರ ಭಟ್ ಅವರಲ್ಲಿಯೂ ಶಿಷ್ಯವೃತ್ತಿ ಮಾಡಿದ್ದರು. ತುಮಕೂರಿನ ಟಿವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಹೆಚ್ಚು ಹೆಚ್ಚು ಕಾರ್ಯಕ್ರಮಗಳ ಒತ್ತಡದಿಂದಾಗಿ ಅಲ್ಲಿಂದ ಬಿಟ್ಟು ಬಂದು ಮತ್ತೆ ಹಾರೆಗೊಪ್ಪದಲ್ಲಿಯೇ ನೆಲೆಯೂರಿದ್ದರು. ಭೀಮನಕೋಣೆಯ ಸ್ವರಾಂಜಲಿ ತಂಡದ ಪ್ರಮುಖ ಗಾಯಕರಾಗಿದ್ದರು. ಸುಭಾಷ್ ನೀಡಿದ್ದು ಸಾವಿರಾರು ಸಂಗೀತ ಕಾರ್ಯಕ್ರಮಗಳು ಹಾಗು ಪಡೆದದ್ದು ಸಾವಿರಾರು ಪುರಸ್ಕಾರಗಳು. ಅವನ್ನೆಲ್ಲ ಇಲ್ಲಿ ಬರೆಯುತ್ತಾ ಹೋದರೆ ಪುಟಗಳು ಸಾಲುವುದಿಲ್ಲ ! ಸಂಗೀತದ ಹಲವು ಪ್ರಾಕಾರಗಳಾದ ಶಾಸ್ತ್ರೀಯ, ಸುಗಮ, ರಂಗ ಸಂಗೀತ, ಜಾನಪದ ಸಂಗೀತ ಹೀಗೆ ಎಲ್ಲದರಲ್ಲೂ ಪರಿಣಿತರಾಗಿ ಪಳಗಿದ್ದ ಸುಭಾಷ್ ದಾಸರಪದ ಹಾಗು ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡುವಾಗ ಇವೆಲ್ಲದರ ಸಮ್ಮಿಶ್ರಣವಾಗಿ ಒಂದು ವಿಶೇಷ ರಾಗಲಯವಿನ್ಯಾಸದ ಭಾವ ಹೊರಹೊಮ್ಮಿ ಅಲ್ಲೊಂದು ಅನನ್ಯತೆ ಮೂಡುತ್ತಿತ್ತು. ಹೆಗ್ಗೊಡಿನ ನೀನಾಸಂ ನಾಟಕಗಳಿಗೆ ಹಲವಾರು ಶೈಲಿಯಲ್ಲಿ ಪ್ರಯೋಗ ಮಾಡಿ ರಂಗಭೂಮಿಯ ಪಂಡಿತರಿಂದಲೂ ಸೈ ಎನಿಸಿಕೊಂಡಿದ್ದರು ! ದೂರದರ್ಶನ ಹಾಗು ಹಲವು ವಾಹಿನಿಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿ ಜನಮೆಚ್ಚುಗೆ ಪಡೆದಿದ್ದರು. “ನಮ್ಮ ರಂಗನ ಕಂಡೀರೇನೆ?” ಹಾಗು “ರಾಮ ರಾಘವ ಕೃಷ್ಣ ಮಾಧವ” ಇವರ ಎರಡು ಜನಪ್ರಿಯ ಧ್ವನಿಮುದ್ರಿಕೆಗಳಾಗಿ ಆಡಿಯೊ ಮಾರುಕಟ್ಟೆಯನ್ನು ಕೊಳ್ಳೆ ಹೊಡೆದಿದ್ದವು ! ಈಗ ದಿವಂಗತರಾದ ನಂತರ ಅವರ ಮೊದಲ ಅಡಕ ಮುದ್ರಿಕೆ (ಅವರ) “ನೆನಪಿನಲ್ಲಿ” ಹೊರಬರುತ್ತಿದೆ. ಬಿಡುಗಡೆಯ ನಂತರ ಸಿ.ಡಿಗಳಿಗಾಗಿ ಈ ದೂರವಾಣಿಗಳಿಗೆ ಸಂಪರ್ಕಿಸಬಹುದು, ೦೮೧೮೩-೨೧೨೧೮೦ / ೨೬೦೦೯೨,  ೯೬೮೬೦೫೪೯೦೬, ೯೮೪೫೧೧೭೭೩೧೦.

-ಚಿನ್ಮಯ ಎಂ.ರಾವ್ ಹೊನಗೋಡು

19-4-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.