ಸಾಗರ : ಅತಿ ಹೆಚ್ಚು ಶ್ಲೋಕಗಳನ್ನು ಒಂದು ಧ್ವನಿಮುದ್ರಿಕೆಗಾಗಿ ಒಂದೇ ಗಾಯಕ ಹಾಡಿರುವ ವಿಶ್ವದ ಪ್ರಪ್ರಥಮ ಗಾಯಕ ಎಂದು ಇತ್ತೀಚೆಗಷ್ಟೇ ಹಲವಾರು ವಿಶ್ವದಾಖಲೆಗಳನ್ನು ಪಡೆದಿದ್ದ ಯುವಗಾಯಕ ಹೊನಗೋಡಿನ ಚಿನ್ಮಯ ಎಂ.ರಾವ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಒಟ್ಟಾರೆ ಸಾಧನೆಗಳನ್ನು ಪರಿಗಣಿಸಿ ಇಂಡಿಯನ್ ವಚ್ರ್ಯುಯಲ್ ಉನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ಪುಣೆಯಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.
ಮಾರ್ಚ್ 17ರಂದು ಶನಿವಾರ ಪುಣೆಯ ಅಣ್ಣಾಬಾವು ಸಾಥೆ ಸಭಾಂಗಣದಲ್ಲಿ ನಡೆದ ಘಟಿಕೋಟ್ಸವದ ಇದೇ ಸಮಾರಂಭದಲ್ಲಿ ಚಿನ್ಮಯ ಅವರು ತಾವೇ ರಚಿಸಿ ರಾಗಸಂಯೋಜಿಸಿದ ಸೂರ್ಯನ ಕುರಿತಾದ ಸಂಸ್ಕೃತ ಪ್ರಾರ್ಥನಾಗೀತೆಯನ್ನು ಆರಂಭದಲ್ಲಿ ಹಾಡುವಾಗ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರೂ ಹಾಗೂ ಪಾಲ್ಗೊಂಡಿದ್ದ ಎಲ್ಲಾ ಸಭಿಕರೂ ಎದ್ದು ನಿಲ್ಲುವ ಮೂಲಕ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಇಂಡಿಯನ್ ವಚ್ರ್ಯುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್‍ನ ಚೇರ್‍ಮನ್ ಡಾ.ಡಾನಿಯಲ್ ಎಡ್ವಿನ್, ಐ.ವಿ.ಎ.ಪಿ ನಿರ್ದೇಶಕ ಡಾ.ಜಾನ್ ಲೆಸ್ಲಿ, ಮೌಂಟ್ ಅಬು ಬ್ರಹ್ಮಕುಮಾರೀಸ್ ಸಂಸ್ಥೆಯ ಕಾರ್ಯದರ್ಶಿ ರಾಜಯೋಗಿ ಬಿ.ಕೆ ಮೃತ್ಯುಂಜಯಜಿ, ಎಸ್.ಪಿ ಪುಣೆ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ವಿ.ಕೆ ವಾಘ್, ಪುಣೆಯ ಡೀಮ್ಡ್ ವಿಶ್ವವಿದ್ಯಾಲಯದ ಡಿಫೆನ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡೀನ್ ಡಾ.ಸಂಗೀತಾ ಕಲಾ ಹಾಗೂ ಭಾರತ ಸರ್ಕಾರದ ಎಫ್.ಸಿ.ಐ ಮಂಡಳಿಯ ಶ್ರೀ ಅಶೋಕ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರಸ್ತುತ ಚಿನ್ಮಯ ಎಂ.ರಾವ್ ಅವರು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಸಂಸ್ಥಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತಿದ್ದಾರೆ.