-ಚಿನ್ಮಯ ಎಂ.ರಾವ್ ಹೊನಗೋಡು
ಭಾರತೀಯ ಸಂಗೀತ ಲೋಕದಲ್ಲಿ ಪದ್ಮಭೂಷಣ ಡಾ.ಕೆ.ಜೆ ಏಸುದಾಸ್ ಸದಾ ಮಿನುಗುವ ಧೃವತಾರೆ. ೧೯೪೦ರಲ್ಲಿ ಜನಿಸಿದ ಸ್ವರಸಾಮ್ರಾಜ್ಯದ ಅಧಿಪತಿ ಗಾನಗಂಧರ್ವ ಡಾ. ಕೆ.ಜೆ ಏಸುದಾಸ್ ಈ ಜನವರಿ ಹತ್ತರಂದು ಎಪ್ಪತ್ಮೂರನೆಯ ವಸಂತಕ್ಕೆ ಕಾಲಿಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ೫೧ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಅವರನ್ನು ಮಾನಸಗುರು ಎಂದೇ ಭಾವಿಸಿರುವ ನನ್ನ ಮನಸ್ಸು ಅವರನ್ನು ಕಂಡಂತೆ..ಅಕ್ಷರರೂಪದಲ್ಲಿ ತೋರುವ ಪ್ರಯತ್ನ ಮಾಡಿದೆ. ಒಬ್ಬ ಅಸಾಮಾನ್ಯ ಸಂಗೀತಗಾರ ನನ್ನಂತಹ ಸಾಮಾನ್ಯ ಸಂಗೀತ ವಿದ್ಯಾರ್ಥಿಯ ಜೀವನದಲ್ಲಿ ಹೇಗೆ ಪರಿಣಾಮ ಬೀರಿದ್ದಾರೆ ಎಂಬುದನ್ನು ಹಂಚಿಕೊಳ್ಳಲು ಮೂರು ಕಂತುಗಳ ಈ ಲೇಖನ ಮಾಲಿಕೆ ನಿಮಗಾಗಿ..
ಭಾಗ-1-ನದಿಮೂಲ ಋಷಿಮೂಲದಂತೆ ಅಭಿಮಾನದ ಮೂಲ..?!
ಅಂತಹ ಒಬ್ಬ ಅತ್ಯದ್ಭುತ ಕಂಠದ ಗಾಯಕ ತನ್ನ ದನಿಯಿಂದ ನನ್ನ ಜೀವನದ ಸಂಗೀತ ಸಾಧನೆಗೆ ಅದು ಎಂದು ಎಲ್ಲಿ ಹೇಗೆ ಜೀವದನಿ…ಜೀವನದಿಯಾದನೋ ಗೊತ್ತಿಲ್ಲ. ಆದರೆ ಇಂದಿನ ಈ ನನ್ನ ಜೀವನದಿ ಈ ಪರಿಯಾಗಿ ಆ ವ್ಯಕ್ತಿ…ವ್ಯಕ್ತಿತ್ವ..ಆವರಿಸಿಕೊಂಡಿದೆಯೆಂದರೆ ಅದಕ್ಕೆ ಕಾರಣ…ಗೊತ್ತಿಲ್ಲ. ಒಬ್ಬ ಕ್ರಿಕೇಟಿಗ ಒಂದು ಆಟದಲ್ಲಿ ಫೋರ್,ಸಿಕ್ಸ್ ಬಾರಿಸಿ ಸೆಂಚುರಿ ಹೊಡೆದು ಮ್ಯಾನ್ ಆಫ್ ದಿ ಮ್ಯಾಚ್ ಪಡೆದಾಗ ಆತನ ಮೇಲೆ ಹುಟ್ಟುವ ಹುಚ್ಚು ಅಭಿಮಾನ..ಅದೇ ಆಟಗಾರ ಮುಂದಿನ ಆಟಗಳಲ್ಲಿ ವಿಫಲವಾದಾಗ ಹುಟ್ಟುವ ನಿರಭಿಮಾನ..ಒಬ್ಬ ನಾಯಕ ಯಶಸ್ವಿಯಾಗುತ್ತಿರುವಾಗ ಅವನ ಚಿತ್ರಗಳನ್ನು ನೋಡಿ ಹೊಗಳುವ ಹುಚ್ಚು..ಅದೇ ನಾಯಕ ಫ್ಲಾಪ್ ಆದಾಗ ತೆಗಳುವ ಹುಚ್ಚು..ಈ ರೀತಿಯಾಗಿ ಯಾವುದೋ ಒಂದಷ್ಟು ಕಾಲ ಕ್ಷಣಿಕವಾಗಿ ಬಂದು ಹೋಗುವ ಹುಚ್ಚಲ್ಲ ಇದು. ಜೀವನಪೂರ್ತಿ ಆತನನ್ನು ಆರಾಧಿಸುವ ಹುಚ್ಚು ! ಒಂದು ವ್ಯಕ್ತಿ ಅಥವಾ ವಸ್ತುವಿನ ಮೇಲಿನ ಹುಚ್ಚಿನ ಆಯಸ್ಸು ಎಷ್ಟಿರಬಹುದೆಂದು ನಮಗೆ ನಾಲ್ಕಾರು ವರ್ಷಗಳಲ್ಲೇ ಗೊತ್ತಾಗಿಬಿಡುತ್ತದೆ. ಅದೇ ಹತ್ತಾರು ವರ್ಷಗಳ ನಂತರವೂ ಒಂದು ಹುಚ್ಚು ವಿಸ್ತಾರವಾಗುತ್ತಾ ಹೋದರೆ …ಆ ಹುಚ್ಚಿಗೊಂದು ಅರ್ಥವಿದ್ದರೆ…ನಮ್ಮ ಜೀವನದ ಗತಿಯೇ ಬದಲಾಗುತ್ತಾ ಹೋಗುತ್ತದೆ ಎನ್ನಬಹುದು. ನನಗೆ ಆ ಗಾಯಕನ ವಿಷಯದಲ್ಲೂ ಆಗಿದ್ದೂ ಅದೇ. ಬಾಲ್ಯದಿಂದ ಸಹಜವಾಗಿ ಕೇಳುತ್ತಿದ್ದ ಅವರ ಹಾಡು ಇಂದು ನನ್ನ ಜೀವನದ ಹಾಡಾಗಿಹೋಗಿದೆ..ಜೀವನವೇ ಹಾಡಾಗಿ ಹೋಗಿದೆ.
“ಪ್ರೇಮಲೋಕದಿಂದ ಬಂದ ಪ್ರೇಮದ ಸಂಗೀತ..” ಎಂಬ ನಾನು ಕೇಳಿದ ಅವರ ಮೊದಲ ಹಾಡು..ಅಥವಾ ನನ್ನ ಅರಿವಿಗೆ ಬಂದ ಅವರ ಮೊದಲ ಹಾಡು (ನನ್ನ ಅರಿವಿಗೆ ಬಂದಿದ್ದು ಸಾಕ್ಷಾತ್ ರವಿಂಚಂದ್ರನ್ನೇ ಹಾಡುತ್ತಾರೆ ಎಂದು !) ಆ ಹಾಡಿನ ಆರಂಭದ ಪದ “ಪ್ರೇ” ಎಂಬಲ್ಲೇ ಅವರ ಶೈಲಿಯ ಸೀಲನ್ನು ಕೇಳುಗರ ಮನಸ್ಸಿನ ಪುಟದ ಮೇಲೆ ಸ್ಫೂಟವಾಗಿ ಮೂಡಿಸಿದ್ದರು. ಅಂದರೆ ಇಂದಿನ ನನ್ನ ಅಲ್ಪ ತಿಳುವಳಿಕೆಯ ಪ್ರಕಾರ ವಿಶ್ಲೇಷಿಸುವುದಾದರೆ ಯಾವುದೇ ಗಾಯಕ ತನ್ನ ಬೇಸ್ ದನಿಯಿಂದ ಅಂದರೆ ಕಿಬ್ಬೊಟ್ಟೆಯ ಆಳದಿಂದ ಎಷ್ಟು ಪ್ರಮಾಣದ ದನಿ ನೀಡುತ್ತಾನೆ ಹಾಗು ನಾಭಿಯಿಂದ ಎಷ್ಟು ಪ್ರಮಾಣದ ದನಿ ನೀಡುತ್ತಾನೆ…ಇವೆರಡರ ಬೇರೆ ಬೇರೆ ಪ್ರಮಾಣದ ಮಿಶ್ರಣದಿಂದಾಗಿ ಬೇರೆ ಬೇರೆ ರೀತಿಯ ಧ್ವನಿಗಳು ಉದ್ಭವಿಸುತ್ತವೆ. ಈ “ಪ್ರೇ” ಎಂಬಲ್ಲೇ ಈ ಗಾಯಕರದ್ದು ಬೇಸ್ ಹಾಗು ನಾಭಿಯ ದನಿ ಇವೆರಡೂ ಎಷ್ಟು ಪ್ರಬಲವಾಗಿದೆ.. ಎಷ್ಟು ಪ್ರಖರವಾಗಿದೆ…ಎಷ್ಟು ಪ್ರಬುದ್ಧವಾಗಿದೆ..ಎಂದು ಅರಿವಾಗುತ್ತದೆ. ಆಗ ರವಿಚಂದ್ರನ್‌ಗೆ ಕಂಠದಾನ ಮಾಡುತ್ತಿದ್ದ ಶ್ರೀನಿವಾಸ ಪ್ರಭು ಅವರ ದನಿಯಲ್ಲೂ ನಾಭಿಯಿಂದ ಹೊರಡುವ ದನಿ ಸ್ವಲ್ಪ ಹೆಚ್ಚಾಗಿಯೇ ಇದ್ದುದರಿಂದ ಈ ಗಾಯಕರ ದನಿ ರವಿಚಂದ್ರನ್ ಅಭಿನಯಕ್ಕೆ ಸರಿಹೊಂದುತ್ತಿತ್ತೇನೋ ಎಂದು ನನ್ನ ತರ್ಕ.
ಅದೇನೇ ಇರಲಿ ಇಂಥಹ ಇಂಪಾದ ಹಾಡುಗಳನ್ನು ಆಗ ನಮ್ಮೊಳಗೆ ಭದ್ರಗೊಳಿಸಲು..ಸುಭದ್ರಗೊಳಿಸಲು..ಆಕಾಶವಾಣಿಯೇ ದನಿ. ಚಳಿಗಾಲದ ಎಳೆಬಿಸಿಲಿನಲ್ಲಿ ಅಡಿಕೆ ಹರಗುವ ಕೊನೆಯ ಚಾಪೆಯ ಒಂದು ಮೂಲೆಯಲ್ಲಿ..ಹಾಲು ಕರೆವಾಗ ಕೊಟ್ಟಿಗೆಯ ಕಟ್ಟೆಯಲ್ಲಿ..ಅಡಿಗೆ ಮನೆಯ ಅಡಿಗಡಿಗಳಲ್ಲಿ (ಒಬ್ಬಬ್ಬರೂ ತಮ್ಮ ಪಕ್ಕದಲ್ಲೇ ಇರಲಿ ಎಂದು ) ಹೀಗೆ ಎಲ್ಲೆಂದರಲ್ಲಿ ನಾವು ಮಾಡುವ ಕೆಲಸ ಜಾಗದಲ್ಲಿ ರೇಡಿಯೋ ಕೂಡ ತನ್ನ ಕೆಲಸ ಮಾಡಲು ರೆಡಿ. ಆಗೆಲ್ಲಾ ಆಕಾಶವಾಣಿಯಲ್ಲಿ ಚಿತ್ರಗೀತೆ ಆರಂಭಕ್ಕೆ ಮೊದಲು ಚಿತ್ರದ ಹೆಸರು, ಗೀತಸಾಹಿತ್ಯ-ಸಂಗೀತ ನಿರ್ದೇಶಕ, ಗಾಯಕರ ಹೆಸರು ಹೇಳುವ ಪರಿಪಾಠವಿತ್ತು. ಈಗಲೂ ಕೂಡ ಆಕಾಶವಾಣಿಯವರು ಆ ಅಭ್ಯಾಸ ಇಟ್ಟುಕೊಂಡಿರುವುದು ಸಂತಸದ ಸಂಗತಿ. ನಮ್ಮ ಪುಣ್ಯವೋ ಏನೋ ಎಫ್.ಎಮ್ ನವರ ದುರ್ಬುದ್ಧಿ ದುರಹಂಕಾರ ನಾನ್ ಸೆನ್ಸ್ ಯಾವುದೂ ಆಕಾಶವಾಣಿಗೆ ಅಂಟಿಕೊಂಡಿಲ್ಲ.
ಆಗ ನೆಚ್ಚಿನ ಚಿತ್ರಗೀತೆಗಳನ್ನು ಕೇಳುತ್ತಿದ್ದ ನನಗೆ ಚಿತ್ರ-ಪ್ರೇಮಲೋಕ..ಚಿತ್ರ-ರಾಮಾಚಾರಿ..ಚಿತ್ರ-ಹೊಸಜೀವನ ಅಂದರೆ ಕಿವಿ ನೆಟ್ಟಗಾಗುತ್ತಿತ್ತು. ಸಾಮಾನ್ಯವಾಗಿ ಆ ಮೂರು ಚಿತ್ರಗಳ ಹೆಸರು ಕೇಳಿಬಂದರೆ ಸಾಕು ಮುಂತಾದ ವಿವರಗಳನ್ನು ಹೇಳುವ ಮುನ್ನವೇ ಗಾಯಕ ಕೆ.ಜೆ.ಏಸುದಾಸ್ ಎಂದು ಸ್ಪಷ್ಟವಾಗುತ್ತಿತ್ತು. ಇನ್ನು ಹಾಡು ಕೇಳಿ ಅದರೊಟ್ಟಿಗೆ ಹಾಡುವುದಷ್ಟೇ ಬಾಕಿ.
ಹೀಗೆ ಮುಂದುವರೆದ ಈ ಶೋಕಿ ಪಿ.ಯೂ.ಸಿಯಲ್ಲಿ ಇನ್ನೊಂದು ಹಂತ ತಲುಪಿತು. ಹಂಸಲೇಖ-ರವಿಚಂದ್ರನ್ ಜೋಡಿಯ “ಸಿಪಾಯಿ” ಚಿತ್ರದ ಹಾಡುಗಳನ್ನು ಸಾವಿರಾರು ಬಾರಿ ಕೇಳಿ ೨-೩ ಕ್ಯಾಸೆಟ್‌ಗಳಿಗೆ ಅಂತ್ಯಸಂಸ್ಕಾರ ಮಾಡಿಬಂದಿದ್ದ ನನಗೆ ಮತ್ತೆ ಮತ್ತೆ ಏಸುದಾಸ್ ಹಾಡುಗಳನ್ನು ಕೇಳುವ ಹುಚ್ಚು ಮಾತ್ರ ಅಂತ್ಯವಾಗಲಿಲ್ಲ. ಅದರ ಬದಲು ಪ್ರತೀ ಹಂತದಲ್ಲೂ ಬೇರೆ ಬೇರೆ ರೀತಿಯಾಗಿ ಏಸುದಾಸ್ ಅವರ ಮೇಲೆ ನನಗಿದ್ದ ಅಭಿಮಾನ ಬೇರೆಂದು ರೀತಿಯಲ್ಲಿ ಚಿಗುರೊಡೆಯುತ್ತಾ ಹೋಯಿತು. ಹಂಸಲೇಖ-ರವಿಚಂದ್ರನ್ ಜೋಡಿಯ ಆಡಿಯೋ ರಿಲೀಸ್ ಆಗುವುದನ್ನೇ ಕಾಯುತ್ತಿದ್ದ ನನಗೆ ಅದರಲ್ಲಿ ಏಸುದಾಸ್ ಹಾಡುಗಳು ಕಟ್ಟಿಟ್ಟ ಬುತ್ತಿ ಎಂದು ಆಗಲೇ ಗೊತ್ತಾಗಿ ಹೋಗಿತ್ತು. ಶಾಸ್ತ್ರೀಯ ಸಂಗೀತದ ಪಾಠವನ್ನು ಮುದ್ರಿಸಿಕೊಳ್ಳಲು ಮನೆಯಲ್ಲಿ ನನಗೆ ಕೊಡಿಸಿದ್ದ ವಾಕ್‌ಮನ್ ಅದಕ್ಕಿಂತ ಹೆಚ್ಚು ಬಳಕೆಯಾದದ್ದು ಏಸುದಾಸ್ ಹಾಡುಗಳನ್ನು ಕೇಳುವುದಕ್ಕೆ. ಆಗಷ್ಟೇ ಮಾರುಕಟ್ಟೆಗೆ ಬಂದಿದ್ದ “ಪ್ರೀತ್ಸೋದ್ ತಪ್ಪಾ?” ಚಿತ್ರದ ಕ್ಯಾಸೆಟ್ಟಿನ ಜೊತೆ ಕೆಂಪು ಬಣ್ಣದ ಎರಡು ಸ್ಪೀಕರ್‌ಗಳನ್ನು ಶಿವಮೊಗ್ಗದ ನನ್ನ ಹಾಸ್ಟೆಲ್ ಕೊಣೆಗೆ ಹೊತ್ತು ತಂದಿದ್ದೆ. ಕಿವಿಗಳಿಗೆ ಇಯರ್ ಫೋನ್ ತುರುಕಿಕೊಂಡು ನಾನೊಬ್ಬನೇ ಕೇಳುವುದರ ಬದಲು ನನ್ನ ಇಬ್ಬರು ರೂಮ್ ಮೇಟ್‌ಗಳಿಗೂ ಏಸುದಾಸ್ ಹಾಡುಗಳನ್ನು ಕೇಳಿಸೋಣವೆಂಬ ಅತ್ಯುತ್ಸಾಹ ನನ್ನದಾಗಿತ್ತು. ಆದರೆ ಅದರಲ್ಲಿ ಒಬ್ಬನಿಗೆ ಏಸುದಾಸ್ ಕಂಠ ಇಷ್ಟವಾದರೆ ಇನ್ನೊಬ್ಬನಿಗೆ ಕ್ಯಾಸೆಟ್ ಕವರ್‌ನಲ್ಲಿದ್ದ ಶಿಲ್ಪ ಶೆಟ್ಟಿಯ ಸೊಂಟವೇ ಇಷ್ಟವಾಗಿತ್ತು!
ನಾವು ಮೂವರೂ ಈ ರೀತಿ ನಮ್ಮ ಕೋಣೆಯಲ್ಲಿ ಸ್ಪೀಕರ್ ಇಟ್ಟುಕೊಂಡು ಹಾಡು ಕೇಳುವುದನ್ನು ಸಹಿಸದ ಯಾವನೋ ಒಬ್ಬ ವಾರ್ಡನ್ ಬಳಿ ಹೋಗಿ “ಚಿನ್ಮಯ ರೂಮಿನಲ್ಲಿ ಪುಟ್ಟ ಟಿ.ವಿ ಇಟ್ಟುಕೊಂಡಿದ್ದಾನೆ..” ಎಂದು ದೂರು ಕೊಟ್ಟ. ಸೀದಾ ನಮ್ಮ ರೂಮಿಗೆ ಅಬ್ಬರಿಸುತ್ತಾ ನುಗ್ಗಿದ ವಾರ್ಡನ್ ಸುಂದರೇಶ (ಹೆಸರಿಗೆ ಮಾತ್ರ ಸುಂದರೇಶ..!) “ಏನಯ್ಯ? ನೀನು ರೂಮಿನಲ್ಲಿ ಟಿ.ವಿ ಇಟ್ಟುಕೊಂಡಿದ್ದೀಯಂತೆ..?” ಎಂದಾಗ ನಾನು ತಲೆಕೆಡಿಸಿಕೊಳ್ಳದೆ ಏಸುದಾಸ್ ಅವರ “ಅಯ್ಯಪ್ಪ”ನ ಹಾಡು ಹಾಕಿ ಕೇಳಿಸಿದೆ. ಕ್ಯಾಸೆಟ್ ಕವರ್ ಹಿಡಿದು ಅದರಲ್ಲಿದ್ದ ಗಾಯಕನ ಚಿತ್ರವನ್ನು ನೋಡುತ್ತಾ ಗಾಯನವನ್ನು ಕೇಳುತ್ತಾ ತಲೆದೂಗಿದ ವಾರ್ಡನ್ ಮತ್ತೆ ನಮ್ಮ ರೂಮಿನತ್ತ ತಲೆಹಾಕಲಿಲ್ಲ. ಆಮೇಲೆ ನನಗೆ ಬಂದ ನಿಖರ ಮಾಹಿತಿಯ ಪ್ರಕಾರ ಆತ ಕೂಡ ಏಸುದಾಸ್ ಭಕ್ತನಾದ !
(ಮುಂದುವರೆಯುವುದು..)
2-1-2013