ಸಂಗೀತ ಕ್ಷೇತ್ರದಲ್ಲಿ ತಮ್ಮ ಹೆಸರು ಅಚ್ಚಾಗಿರಬೇಕೆಂದು ಅನೇಕರು ಹರಸಾಹಸ ಪಡುತ್ತಿರುವ ಸನ್ನಿವೇಶಗಳು ಇಂದು ಸರ್ವೇಸಾಮಾನ್ಯ.ಹಾಗಾಗಿ ಇಂದು ಸಂಗೀತ ಕ್ಷೇತ್ರದ ಬೆಳವಣಿಗೆ ಬೇಗನೆ ಆಗುತ್ತಿರುವುದು ಕಾಣುತ್ತಿದ್ದೇವೆ.ಸುಗಮ ಸಂಗೀತ ಕ್ಷೇತ್ರದ ಸಾಗರದಲ್ಲಿ ಅಪರಿಮಿತ ಗಾಯಕರುಗಳ ಅವಿಶ್ರಾಂತ ಬೆಳವಣಿಗೆಯ ಜೊತೆ-ಜೊತೆಗೆ ಬರವಣಿಗೆ,ರಾಗಸಂಯೋಜನೆ,ಗಾಯನದಲ್ಲಿ ತಮ್ಮನ್ನು ತೊಡಗಿಸಿಕೊಂಡು 25ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಬಿ.ಎಸ್.ಮೀರಾ,ಆಲಾಪನಾ ಸಂಸ್ಥೆಯ ಅಧ್ಯಕ್ಷರಾಗಿಯೂ ಯುವಗಾಯಕರುಗಳಿಗೆ ಮಾದರಿಯಾಗಿದ್ದಾರೆ.
ಮೀರಾ ಬೆಳೆದು ಬಂದ ಹಾದಿ
ಮೀರಾ ಮೂಲತ: ಬೆಂಗಳೂರಿನವರಾಗಿದ್ದು ಹುಟ್ಟಿದ್ದು ಏಪ್ರಿಲ್ 3, 1971.ತಂದೆ ಬಿ.ಎನ್.ಸೀತಾರಾಮಯ್ಯ ತಾಯಿ ಕಮಲಮ್ಮರವರ ಸುಪುತ್ರಿ.ಬಿ.ಕಾಂ ಪದವೀಧರೆಯಾದ ಮೀರಾ, ದಿ.ಬಿ.ಎಸ್ ಹೇಮಾವತಿ ಮೊದಲ ಶಾಸ್ತ್ರೀಯ ಹಾಗೂ ಭಾವಗೀತೆಯ ಗುರುಗಳಾದರೆ,ವಿದೂಷಿ ಸುಧಾರತ್ನ ರವರ ಬಳಿಯೂ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿರುತ್ತಾರೆ. 5ನೇ ತರಗತಿ ಇರುವಾಗಲೇ ವೇದಿಕೆಯನ್ನೇರಿ ಕಾರ್ಯಕ್ರಮ ನೀಡುವ ಉತ್ಸಾಹವಿದ್ದ ಮೀರಾ,ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿರುತ್ತಾರೆ. ಆಕಾಶವಾಣಿ ಬಿ ಹೈ ಗ್ರೇಡ್ ಕಲಾವಿದೆಯಾಗಿ, ನಾಡಿನ ಪ್ರಖ್ಯಾತ ಗಾಯಕಿ ಮಂಗಳಾರವಿ ಜೊತೆಗೂಡಿ ಅನೇಕ ಸಭೆ-ಸಮಾರಂಭಗಳಲ್ಲಿ ಗಾಯನ ಕಾರ್ಯಕ್ರಮ ನೀಡುತ್ತಿರುವ ಮೀರಾ,ಕೊಳಲು ವಾದಕಿಯೂ ಹೌದು.
ಗುರುಗಳ ಮಾರ್ಗದರ್ಶನ
ವಿ.ಶಿವರಾಮಯ್ಯ ರವರ ಬಳಿ ಕೊಳಲುವಾದನವನ್ನು ಅಭ್ಯಾಸ ಮಾಡಿರುವ ಮೀರಾ ಆಗಿನ ಕಾಲದಲ್ಲೇ ರಾಜುಅನಂತಸ್ವಾಮಿಯವರ ಕಾರ್ಯಕ್ರಮಗಳಿಗೆ ಕೊಳಲಿನ ಪಕ್ಕವಾದ್ಯ ಸಹಕಲಾವಿದೆಯಾಗಿ ಅನೇಕ ವೇದಿಕೆಗಳಲ್ಲಿ ಮಿಂಚಿದ್ದಾರೆ.ಇದೆಲ್ಲದ ಜೊತೆ-ಜೊತೆಗೆ ಸಾಹಿತ್ಯ ರಚನೆಯಲ್ಲಿಯೂ ಆಸಕ್ತಿಹೊಂದಿದ್ದು ತಮ್ಮನ್ನು ಗೀತಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಮೀರಾ,ತಮ್ಮದೇ ಸಾಹಿತ್ಯ,ತಮ್ಮದೇ ರಾಗಸಂಯೋಜನೆಯಡಿಯಲ್ಲಿ ಅನೇಕ ಗೀತೆಗಳ ಲೇಖನಿಯಾಗಿದ್ದಾರೆ.
ತಮ್ಮ ಗೀತೆಗಳ ರಚನೆ,ರಾಗಸಂಯೋಜನೆ ಯಾವುದಾದರೂ ಒಂದು ರೂಪ ತಾಳಬೇಕೆಂಬ ಹಂಬಲವಿದ್ದ ಮೀರಾಗೆ ಅದನ್ನು ಕೂಡಿಟ್ಟು ಒಂದು ಧ್ವನಿಸಾಂದ್ರಿಕೆ ಮಾಡಬೇಕೆಂಬ ಮಹದಾಸೆಯಾಯಿತು.ಅಲ್ಲದೇ ತಮ್ಮದೇ ಒಂದು ಸಂಸ್ಥೆಯನ್ನೂ ಮಾಡಬೇಕೆಂಬ ಕನಸು ಕಾಣಲಾರಂಭವಾಯಿತು.ಇದೆಲ್ಲವೂ ರೂಪ ತಾಳಿದ್ದು 2008 ರಲ್ಲಿ.”ಆಲಾಪನಾ” ಎಂಬ ಸಂಸ್ಥೆಯ ಅಧ್ಯಕ್ಷೆಯಾಗಿ ತಮ್ಮ ಕನಸು ನನಸು ಮಾಡಿಕೊಂಡ ಮೀರಾ,2009 ರಲ್ಲಿ ತಮ್ಮ ಸಾಹಿತ್ಯ ರಚನೆಯ ಅಕ್ಷರಗಳಿಗೆ ರಾಗ ಕೊಟ್ಟು ಸಂಯೋಜಿಸಿ ಓಂಕಾರ ಗಣಪ ಎನ್ನುವ ಧ್ವನಿಸಾಂದ್ರಿಕೆಯನ್ನು ಹೊರತಂದೇ ಬಿಡುತ್ತಾರೆ.
ಹಲವು ವೇದಿಕೆಗಳನ್ನು ತಮ್ಮದಾಗಿಸಿಕೊಂಡಾಗ
ನಂತರ ಮೀರಾಗೆ ಒಂದರಮೇಲೊಂದು ಅವಕಾಶಗಳು ಬರಲಾರಂಭವಾದವು.ಹಲವಾರು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾದಲ್ಲಿ ಸಾಹಿತ್ಯ ಹಾಗೂ ಗಾಯನದ ಮೂಲಕ ಚಿರಪರಿಚಿತರಾದ ಮೀರಾ,ಸಂಗೀತ ಕ್ಷೇತ್ರದ ದಿಗ್ಗಜರುಗಳ ವೇದಿಕನ್ನೂ ಹಂಚಿಕೊಂಡಿದ್ದಾರೆ.ಉಪಾಸನಾ ಸಂಸ್ಥೆಯ ಮೋಹನ್‍ರವರ ಧ್ವನಿಸಾಂದ್ರಿಕೆಗಳಲ್ಲಿ ಹಾಗೂ ಇನ್ನೂ ಅನೇಕ ಸಂಸ್ಥೆಗಳು ಹೊರತಂದ ಸಿ.ಡಿ.ಗಳಲ್ಲಿ ತಮ್ಮ ಸುಮಧುರ ಗಾಯನದ ಸುಧೆ ಹರಿಸಿದ್ದಾರೆ.ನಂತರದಲ್ಲಿ ತಮ್ಮ ಆಲಾಪನಾ ಸಂಸ್ಥೆಯ ಮಕ್ಕಳನ್ನೂ ಒಳಗೂಡಿ ಅನೇಕ ಪ್ರತಿಷ್ಠಿತ ವೇದಿಕೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಉಪಾಸನಾ ಸಂಸ್ಥೆ ಕಾರ್ಯಕ್ರಮಗಳು,ಸ್ವರಸ್ಥಿತ,ಸಂಗೀತಧಾಮ,ಅದಮ್ಯ ಚೇತನಾ ಸಂಸ್ಥೆ ಸೇರಿದಂತೆ ನಾಡಿನ ಉನ್ನತ ಮಹೋತ್ಸವವಾದ ಹಂಪಿ ಉತ್ಸವ,ಮೇಲುಕೋಟೆ ಉತ್ಸವ,ಸುಗಮ ಸಂಗೀತ ಪರಿಷತ್ ಕಾರ್ಯಕ್ರಮಗಳು ಸೇರಿದಂತೆ ಹಲವು ವೇದಿಕೆಗಳಲ್ಲಿ ನಮ್ಮ ಕವಿವರ್ಯರ ಗೀತೆಗಳಿಗೆ ದನಿಯಾಗಿದ್ದಾರೆ.
ಧಾರಾವಾಹಿ-ಸಿನಿಮಾಗಳತ್ತ ಮುಖಮಾಡಿದಾಗ
ಶಾಲಾ ದಿನಗಳಲ್ಲಿ ಭಕ್ತಿಗೀತೆಗಳನ್ನು ರಚಿಸುವ ಗೀಳನ್ನು ಅಂಟಿಸಿಕೊಂಡ ಮೀರಾ,ಇದುವರೆಗೂ ಸರಿಸುಮಾರು 50ಕ್ಕೂ ಅಧಿಕ ಭಕ್ತಿಗೀತೆಗಳನ್ನು ರಚಿಸಿ ಸಿ.ಡಿ.ಯನ್ನು ಹೊರತಂದಿರುತ್ತಾರೆ.ಟಿ.ಎನ್.ಸೀತಾರಾಮ್ ನಿರ್ದೇಶನದ ಕಾಫಿತೋಟ ಚಿತ್ರನಿರ್ಮಾಣದ ಸಂದರ್ಭದಲ್ಲಿ ಮ್ಯೂಸಿಕ್ ಡೈರೆಕ್ಟರ್ ಹಂಟ್ ನಲ್ಲಿ ಆಯ್ಕೆಗೊಂಡ ಹೆಗ್ಗಳಿಕೆ ಮೀರಾರವರದ್ದು.ಸತತ 25ವರ್ಷದಿಂದ ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರಲ್ಲದೇ,ಸಂಗೀತವನ್ನೇ ತಮ್ಮ ಜೀವ-ಜೀವನ ಎಂದು ಬಣ್ಣಿಸುವ ಮೀರಾ,ಹೊರದೇಶದಲ್ಲಿ ನಡೆಯುವ ಅಕ್ಕ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಅವರ ಸ್ವರಚಿತ ಕವನವು ಪ್ರಕಟಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.ಕನ್ನಡ ಚಿತ್ರರಂಗದತ್ತವೂ ಮುಖಮಾಡಿದ ಮೀರಾ,ಪುಟಾಣಿ ಪಂಟರ್ಸ್ ಚಿತ್ರಕ್ಕಾಗಿ ಮೂರುಗೀತೆಗಳಿಗೆ ಸಾಹಿತ್ಯ ರಚನೆ ಮಾಡಿರುತ್ತಾರೆ.
ಪ್ರಶಸ್ತಿ-ಪುರಸ್ಕಾರಗಳು
ಇಷ್ಟೆಲ್ಲ ಸಂಗೀತ ಸಾಹಿತ್ಯ ಕೆಲಸಗಳ ನಡುವೆ ಮೀರಾರಿಗೆ 2017ರಲ್ಲಿ ಇವರ ಕಾರ್ಯವೈಖರಿಗಾಗಿ ಶ್ರೇಷ್ಠಗಾಯನಕ್ಕಾಗಿ ಉಪಾಸನಾ ಸಂಸ್ಥೆ ನೀಡುವ “ಉಪಾಸನಾ ಪ್ರಶಸ್ತಿ”,2019 ರಲ್ಲಿ ಭಾವನಾಂತರಂಗ ಟ್ರಸ್ಟ್ ವತಿಯಿಂದ “ಗಾನಸಿರಿ ಪ್ರಶಸ್ತಿ”ಲಭಿಸಿದೆ.ಅಲ್ಲದೇ ಮೀರಾ,ತಮ್ಮ ಸಂಸ್ಥೆ ವತಿಯಿಂದ ಅನೇಕ ಸಂಗೀತ ತರಬೇತಿಗಳನ್ನು ನೀಡುತ್ತಿದ್ದು ಆಲಾಪನಾ ಸಂಸ್ಥೆ ಬೇಸಿಗೆ ಶಿಬಿರವನ್ನೂ ಸಹಾ ಹಮ್ಮಿಕೊಳ್ಳುತ್ತಿರುತ್ತದೆ.ಅನೇಕ ಸಂಗೀತ ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವ ಮೀರಾ,ತಮ್ಮ ಜೀವನದುದ್ದಕ್ಕೂ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು-ಮಗದಷ್ಟು ಕೆಲಸ ಕಾರ್ಯಗಳನ್ನು ಮಾಡಬೇಕೆಂಬ ಮಹದಾಸೆ ಹೊಂದಿದ್ದಾರೆ.
ಆಲಾಪನದ ಜೊತೆಗೆ ತಮ್ಮ ಸಾಮಥ್ರ್ಯ ಮೀರಿ,ಕರ್ತವ್ಯ ನಿರ್ವಹಿಸುತ್ತಿರುವ ಮೀರಾ,ಮತ್ತಷ್ಟು ಹೆಸರು ಮಾಡಲಿ, ಹೆಗ್ಗಳಿಕೆಗೆ ಪಾತ್ರವಾಗಲಿ ಹಾಗೂ ಇನ್ನಷ್ಟು ವೇದಿಕೆಗಳನ್ನು ತಮ್ಮದಾಗಿಸಿಕೊಳ್ಳಲಿ ಎಂಬುದು ನಮ್ಮ ಆಶಯ.
ಬರಹ :
ಸಂಧ್ಯಾ ಅಜಯ್ ಕುಮಾರ್
19-7-2020