ಬೆಂಗಳೂರು : ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯಲ್ಲಿತುವ ಬಿಜಿಎಸ್ ಸಭಾಂಗಣದಲ್ಲಿ ಭಾನುವಾರ ನಡೆದ ಸ್ವರಮೇಧಾ ಸಂಗೀತೋತ್ಸವದಲ್ಲಿ ಸತತವಾಗಿ ಎಂಟು ಗಂಟೆಗಳ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ಹಾಗೂ ಸ್ವರಮೇಧಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆದ ಸ್ವರಮೇಧಾ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮದಲ್ಲಿ ಸಂಗೀತದ ಕೃತಿಗಳ ಗಾಯನಕ್ಕೂ ಮೊದಲು ವಾಗ್ಗೇಯಕಾರರ ವಿವರ ಹಾಗೂ ಕೃತಿಗಳ ಭಾವಾನುವಾದವನ್ನು ವಿದ್ಯಾರ್ಥಿಗಳು ವಿವರಿಸಿದರು.
ಸಂಜೆ ಏಳು ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ 82 ವರ್ಷದ ಹಿರಿಯ ಮೃದಂಗ ವಿದ್ವಾಂಸರಾದ ವಿದ್ವಾನ್ ಹೆಚ್ ಎಲ್ ಗೋಪಾಲಕೃಷ್ಣ ಅವರಿಗೆ “ಸ್ವರಮೇಧಾ ಸಂಗೀತರತ್ನ” ಬಿರುದನ್ನು ಪ್ರಧಾನ ಮಾಡಲಾಯಿತು. ಸನ್ಮಾನಿತರಾಗಿ ಮಾತನಾಡಿದ ಗೋಪಾಲಕೃಷ್ಣ ಅವರು ಪಾಶ್ಚಾತ್ಯ ಸಂಗೀತದತ್ತ ಆಕರ್ಷಿತರಾಗುತ್ತಿರುವ ಇಂದಿನ ಯುವಪೀಳಿಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಿಕೆಯತ್ತ ಸೆಳೆಯಬೇಕಿದೆ. ಸ್ವರಮೇಧಾ ಸಂಸ್ಥೆಯ ಸಂಗೀತಗುರು ಡಾ.ಚಿನ್ಮಯ ರಾವ್ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇಂತಹ ಸಂಸ್ಥೆಗಳು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಏರುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ ಎಂದರು.
“ಸ್ವರಮೇಧಾ ಸಂಗೀತ ವಿಭೂಷಣ” ಬಿರುದನ್ನು ಸ್ವೀಕರಿಸಿದ ಹಿರಿಯ ವೀಣಾವಾದಕಿ ಲಲಿತಾ ವಿಜಯಕುಮರ್ ಅವರ ಪರವಾಗಿ ಮಾತನಾಡಿದ ಅವರ ಪತಿ ವಿಜಯ ಕುಮಾರ್ ಅವರು ಸಂಪೂರ್ಣವಾಗಿ ಜ್ಞಾಪಕಶಕ್ತಿಯನ್ನು ಕಳೆದುಕೊಂಡ ಚಿಕ್ಕ ಹುಡುಗಿಯೊಬ್ಬಳು, ಲಲಿತಾ ಅವರಲ್ಲಿ ವೀಣೆಯ ಅಭ್ಯಾಸ ಮಾಡುತ್ತಾ ಮಾಡುತ್ತಾ ಹೇಗೆ ಜ್ಞಾಪಕಶಕ್ತಿಯನ್ನು ಮತ್ತೆ ಪಡೆದಳು ಎಂಬ ರೋಚಕ ನೈಜಘಟನೆಯನ್ನು ವಿವರಿಸಿದರು. ವೈದ್ಯಕೀಯ ಲೋಕವೇ ಈ ಪವಾಡಕ್ಕೆ ಸಾಕ್ಷಿಯಾಗಿದ್ದನ್ನು ಹೇಳಿ ಪ್ರೇಕ್ಷಕರನ್ನು ಆಶ್ಚರ್ಯಚಕಿತಗೊಳಿಸಿದರು. ಇದು ವೀಣಾವಾದಕಿಯ ಶಕ್ತಿ ಎಂಬುದಕ್ಕಿಂತ ಹೆಚ್ಚಾಗಿ ವೀಣೆಯ ದೈವೀಶಕ್ತಿ ಎಂದರು.
“ಸ್ವರಮೇಧಾ ಸಂಗೀತಶ್ರೀ” ಬಿರುದನ್ನು ಪಡೆದು ಮಾತನಾಡಿದ ಪ್ರಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ ಅವರು ನಮ್ಮ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಇಷ್ಟು ಚಿಕ್ಕ ಚಿಕ್ಕ ಮಕ್ಕಳಿಗೆ ಆಳವಾಗಿ ಸಾಧನೆ ಮಾಡಲು ಅನುವು ಮಾಡಿಕೊಟ್ಟ ಸ್ವರಮೇಧಾ ನಮ್ಮ ನಾಡಿನಲ್ಲೊಂದು ಶಿಖರಪ್ರಾಯ ಸಂಗೀತ ಶಾಲೆ ಎಂದು ಶುಭಹಾರೈಸಿದರು. ಸಭಿಕರ ಅಪೇಕ್ಷೆಯಂತೆ “ಅನುರಾಗ ಸಂಗಮ”ಚಿತ್ರದ ಜನಪ್ರಿಯ ಗೀತೆ “ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೆ ಸದಾ ಸದಾ ಸದಾ” ಹಾಡನ್ನು ಹಾಡುವ ಮೂಲಕ ಸಂಗೀತಪ್ರೇಮಿಗಳನ್ನು ಭಾವುಕರನ್ನಾಗಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ “ಅಮೇರಿಕಾ ಅಮೇರಿಕಾ” ಚಿತ್ರದ ಪ್ರಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಹೇಮಾ ಪ್ರಭಾತ್ ಅವರು ಇಂದಿನ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳನ್ನು ನೀಡಿ ಪದೆ ಪದೆ ಗುರುವನ್ನು ಬದಲಾಯಿಸುವ ಬದಲು ಒಂದೇ ಶ್ರೇಷ್ಠ ಗುರುವನ್ನು ಆಯ್ಕೆ ಮಾಡಿಕೊಂಡು ಕಲಾಪ್ರಪಂಚದಲ್ಲಿ ಗುರಿಯನ್ನು ತಲುಪಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅವರು ಇಂದಿನ ಯುವಪೀಳಿಗೆ ಸಣ್ಣ ಸಣ್ಣ ಸೋಲು ಅಥವಾ ತಪ್ಪುಗಳಿಗೆ ವಿಚಲಿತರಾಗದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಜೀವನದಲ್ಲಿ ಜಯಿಸಬೇಕಾಗಿದೆ. ನೀವೆಲ್ಲಾ ಸಂಗೀತದ ಮೂಲಕ ಜೀವನವನ್ನೇ ಯಶಸ್ವಿಯಾಗಿಸಿಕೊಳ್ಳಿ ಎಂದು ಸಂಗೀತದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಡಾ.ಚಿನ್ಮಯ ರಾವ್, ಗೌರವ ಸಲಹೆಗಾರರಾದ ಶಂಕರ್ ಆನಂದ್, ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಭರತ್ ರಾವ್ ಕೆ.ಎಸ್, ಹಾಗೂ ಉದ್ಯಮಿ ರಾಜೇಶ್ ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳ ಗಾಯನಕ್ಕೆ ಪಕ್ಕವಾದ್ಯದಲ್ಲಿ ಹಿರಿಯ ಮೃದಂಗವಾದಕ ವಿದ್ವಾನ್ ಜಿ ಎಲ್ ರಮೇಶ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಅರ್ಜುನ್ ಅವರು ಸಹಕರಿಸಿದರು. ಮೀನಾ ಶಾಂತಲ ಹಾಗೂ ಸ್ವರಮೇಧಾ ವಿದ್ಯಾರ್ಥಿಗಳು ಸಭಾಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದ ಮುಕ್ತಾಯದಲ್ಲಿ ಈ ಉತ್ಸವದಲ್ಲಿ ಗಾಯನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲಿದ್ದ ಗಣ್ಯರು ಸ್ಮರಣಿಕೆಯನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರು.
chinmaya