ಸಂಗೀತ ಸಮಯ

ಹಾರ್ಮೋನಿಯಂ ವಾದ್ಯ-ವಾದನದ ಸಂಭ್ರಮ – ಹಬ್ಬ – ಸಮ್ಮೇಳನ

2ನೇ ವಿಶ್ವ ಸಂವಾದಿನಿ ಶೃಂಗ 2020

ಜನವರಿ 3,4 ಮತ್ತು 5, 2020 ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಸಂವಾದಿನಿ ಶೃಂಗ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಸತತವಾಗಿ ಹಾರ್ಮೋನಿಯಂ ಸೋಲೋ, ಯುಗಳ ವಾದನ, ಬೇರೆ ಬೇರೆ ವಾದ್ಯಗಳ ಜೊತೆ ಹಾರ್ಮೋನಿಯಂ ಜುಗಲ್ಬಂದಿ, ಹಿಂದೂಸ್ತಾನಿ – ಕರ್ನಾಟಕಿ – ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಪ್ರಸ್ತುತಿ, ವಿವಿಧ ರಾಜ್ಯಗಳ ವಿಭಿನ್ನ ಶೈಲಿಯ ಸಂಗೀತವನ್ನು ಹಾರ್ಮೋನಿಯಂನಲ್ಲಿ ಪ್ರದರ್ಶನ, ವಿಡಿಯೋ ಷೋಗಳು, ಪ್ರಾತ್ಯಕ್ಷಿಕೆಗಳು, ದೇಶ-ವಿದೇಶಗಳಿಂದ ಕಲಾವಿದರ ಆಗಮನ, ವಾದ್ಯ ಒಂದೇ ಆದರೂ ವಿಭಿನ್ನ ಆಯಾªು-ವಿಷಯ-ವಿಚಾರ-ನುಡಿಸಾಣಿಕೆಯ ಪ್ರದರ್ಶನ, ಹೀಗೆ ಮೂರು ದಿನಗಳ ಕಾಲ ಹಾರ್ಮೋನಿಯಂ ಹಬ್ಬ, ಸಮ್ಮೇಳನ, ವಿಶ್ವ ಸಂವಾದಿನಿ ಶೃಂಗ.

“ಅರಿವೇ ಗುರುವು ಗುರುವೇ ಅರಿವು, ಅರಿವು ಮೂಡಿಸುವವನೇ ಸದ್ಗುರುವು”. ಸಂಗೀತ ಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆಗೆ ಮಹತ್ವದ ಸ್ಥಾನವಿದೆ. ಹೀಗೆ ಅತ್ಯಂತ ಶ್ರೇಷ್ಠ ಗುರು-ಶಿಷ್ಯ ಪರಂಪರೆಯಲ್ಲಿ ಹಾರ್ಮೋನಿಯಂ ಸಂತ.ಪಂ|ರಾಮಭಾವು ಬಿಜಾಪುರೆ ಅವರ ಶಿಷ್ಯರಾಗಿ ಸಂಗೀತಕ್ಕಾಗಿ, ಹಾರ್ಮೋನಿಯಂ ವಾದ್ಯಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡವರು ಡಾ|ರವೀಂದ್ರ ಕಾಟೋಟಿಯವರು. ತಮ್ಮ ಗುರುಗಳ ಜನ್ಮಶತಮಾನೋತ್ಸವವನ್ನು ವರ್ಷವಿಡೀ ಆಚರಿಸಿ ಸಂಭ್ರಮಿಸಿದರು. ‘ವಿಶ್ವ ಸಂವಾದಿನಿ ಶೃಂಗ’ ಎಂಬ ಜಾಗತಿಕ ಮಟ್ಟದ ಹಾರ್ಮೋನಿಯಂ ಮಹಾಪರ್ವವನ್ನು ಆಯೋಜಿಸಿ, ತನ್ಮೂಲಕ ಗುರುವಿಗೆ 100ನೇ ವರ್ಷದ ಹುಟ್ಟು ಹಬ್ಬದಲ್ಲಿ ಗುರು ನಮನವನ್ನು ಸಲ್ಲಿಸಿದ ಧನ್ಯತೆ ಡಾ|ರವೀಂದ್ರ ಕಾಟೋಟಿಯವರದು. ಈಗ ಮತ್ತೊಮ್ಮೆ ನಿಮ್ಮ ಮುಂದೆ ಬರಲಿದೆ ೨ನೇ ವಿಶ್ವ ಸಂವಾದಿನಿ ಶೃಂಗ ೨೦೨೦.

ಸ್ಥಳ:

ಜನವರಿ 3-4 – ಸೇವಾಸದನ ಮಲ್ಲೇಶ್ವರಂ

ಜನವರಿ 5 – J.N TATA Auditorium

ನಾದ ತಪಸ್ವಿ

ಪಂ|ರಾಮಭಾವು ಬಿಜಾಪುರೆ, ಹಾರ್ಮೋನಿಯಂ ಎಂದಾಕ್ಷಣ ನೆನಪಾಗುವ ಹೆಸರು. ಹಾರ್ಮೋನಿಯಂ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ತಮ್ಮ ಇಡೀ ಜೀವನವನ್ನು ಹಾರ್ಮೋನಿಯಂ ವಾದ್ಯ-ವಾದನಕ್ಕಾಗಿ ಮುಡಿಪಾಗಿಟ್ಟರು. ಹಾರ್ಮೋನಿಯಂ ವಾದನದಲ್ಲಿ ತಮ್ಮದೇ ಆದ ಹೊಸ ಶೈಲಿಯನ್ನು ಸೃಷ್ಟಿಸಿ, ವಾದ್ಯದ ಸೌಂದರ್ಯ ಹೆಚ್ಚಿಸಿದರು. 2010 ರಲ್ಲಿ ಈ ನಾದ ಜ್ಯೋತಿಯು ಅನಂತದಲ್ಲಿ ಲೀನವಾದರೂ, ಅದರ ಪ್ರಭಾವಲಯವಿನ್ನೂ ಚೈತನ್ಯಪೂರ್ಣವಾಗಿ ಹರಡುತ್ತಿದೆ. ಋಷಿ ತುಲ್ಯರಿಂದ ಸಂಗೀತ ದೀಕ್ಷೆ, ಛಲಬಿಡದ ಸಾಧನೆ, ದೇಶಾದ್ಯಂತ ಮೆರೆದ ಕಲಾಪ್ರತಿಭೆ, ವಿಶಿಷ್ಟ ವಾದನ ಶೈಲಿಯ ಆವಿಷ್ಕಾರ, ಐದು ತಲೆಮಾರಿನ ಉಚ್ಛತಮ ವಿದ್ವಾಂಸರ ಸಹವಾಸ-ಸಾಂಗತ್ಯ, 76 ವರ್ಷಗಳ ಧೀರ್ಘ ವಿದ್ಯಾದಾನ ಯಜ್ಞ, ಬಂದಿಷಗಳು, ರಾಗ-ರಾಗಿಣಿಗಳು, ಸಂಗತಿಗಳು, ಅನುಭವಗಳ ಸಂಗ್ರಹ, ಸ್ನೇಹಮಯಿಯಾಗಿ/ಸಮಾಜಮುಖಿಯಾಗಿ ಅಸಂಖ್ಯರ ಮನಮುಟ್ಟಿದ ‘ನಾದ ತಪಸ್ವಿ’. ಇದು ಪಂ|ಬಿಜಾಪುರೆಯವರ ನಾದ ಪಯಣದ ಸಂಕ್ಷಿಪ್ತ ತುಣುಕು ನೋಟ.

ಹಾರ್ಮೋನಿಯಂ(ಸಂವಾದಿನಿ)

“ಪಡುವಣ ದೇಶ ನಿನ್ನ ತವರೇ, ಈ ಭರತ ಭೂಮಿ ನಿನ್ನಾಶ್ರಯವೇ” ಎಂದು ಡಾ|ರವೀಂದ್ರ ಕಾಟೋಟಿಯವರ ಸಾಲುಗಳು ಹೇಳುವಂತೆ ಹಾರ್ಮೋನಿಯಂ ಪಾಶ್ಚಿಮಾತ್ಯ ದೇಶದಿಂದ ಭಾರತಕ್ಕೆ ಬಂದ ಕೊಡುಗೆಯಾಗಿದೆ. ಆದರೆ ಇದು ಭಾರತೀಯ ಸಂಗೀತದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂದಿದೆ. ಮೊದಲಿನ ಕಾಲದಲ್ಲಿ ಕೇವಲ ಸಹವಾದನಕ್ಕೆ ಮಾತ್ರ ಮೀಸಲಾಗಿದ್ದ ಈ ವಾದ್ಯ-ವಾದನವು ಕ್ರಮೇಣ ಪಂ|ರಾಮಭಾವು ಬಿಜಾಪುರೆ, ಪಂ|ವಸಂತ್ ಕನಕಾಪುರ್, ಪಂ|ತುಳಸೀದಾಸ್ ಬೋರ್ಕರ್, ಪಂ|ಅಪ್ಪಯ್ಯ ಜಲಗಾವ್ಕರ್ ಮುಂತಾದ ಶ್ರೇಷ್ಟ ಹಾರ್ಮೋನಿಯಂ ಕಲಾವಿದರ ಸತತ ಪರಿಶ್ರಮದಿಂದಾಗಿ ಸಂಗೀತ ವೇದಿಕೆಯ ಎಡ ಬದಿಯಲ್ಲಿ ಇರುತ್ತಿದ್ದ ವಾದ್ಯವಿಂದು ವೇದಿಕೆಯಲ್ಲಿ ಮಧ್ಯ ಸ್ಥಾನವನ್ನು ಪಡೆಯುತ್ತಾ ಹಾರ್ಮೋನಿಯಂ ಸೋಲೋ ವಾದನದಿಂದ ಅದರ ಹೆಚ್ಚಿನ ಸೌಂದರ್ಯ ಜನರನ್ನು ತಲುಪುವಂತಾಯಿತು.

ನಾ ಕಂಡ ಗುರು

“ಗುರು ಹೀ ಗುನ್ ಗುನ್ ಗುರು, ಉನ್ಹೇ ಮಾನೇತೋ ಜಗ್ ಭೀ ತುಮಕೋ ಮಾನೇಂಗೇ”. ಗುರು ಒಪ್ಪಿದವನನ್ನು ಜಗತ್ತು ಒಪ್ಪುವುದು ಎಂಬುದಕ್ಕೆ ಡಾ|ರವೀಂದ್ರ ಕಾಟೋಟಿಯವರೇ ಉದಾಹರಣೆ. ಹಾಮೋನಿಯಂ ಕ್ಷೇತ್ರದಲ್ಲಿ ಇವರದು ಅತ್ಯಂತ ದೊಡ್ಡ ಹೆಸರು. ಬಹಳ ಸರಳ ಮತ್ತು ನಿಗರ್ವಿ. ದೇಶ-ವಿದೇಶಗಳಲ್ಲಿ, ಪ್ರತಿಷ್ಟಿತ ವೇದಿಕೆಗಳಲ್ಲಿ ತಮ್ಮ ಹಾರ್ಮೋನಿಯಂ ಸೋಲೋ ವಾದನ ಕಾರ್ಯಕ್ರಮ ನೀಡಿರುತ್ತಾರೆ. ಆಲ್ ಇಂಡಿಯಾ ರೇಡಿಯೋ ನಿಂದ ಹಾರ್ಮೋನಿಯಂ ನಲ್ಲಿ ‘ಎ’ ಗ್ರೇಡ್ ಪಡೆದ ಮೊದಲ ಕಲಾವಿzರು. ದೇಶ-ವಿದೇಶದ ಹೆಸರಾಂತ ಕಲಾವಿದರಿಗೆ ಹಾರ್ಮೋನಿಯಂ ಸಾಥ್ ನೀಡಿರುತ್ತಾರೆ. ವಿವಿಧ ವಾದ್ಯಗಳ ಜೊತೆ ಹಾರ್ಮೋನಿಯಂ ಜುಗಲಬಂದಿ ಕೂಡಾ ನುಡಿಸಿರುತ್ತಾರೆ.

ಹಾರ್ಮೋನಿಯಂ ಒಂದು ವೈಶ್ವಿಕ ವಾದ್ಯ, ಇದರ ಪರಿಧಿ ಬಹಳ ವಿಸ್ತಾರವಾದದ್ದು ಎಂಬುದನ್ನು ಮನಗಂಡ ಕಾಟೋಟಿಯವರು ಸಮರಸ ಸಂವಾದಿನಿ, ಭಕ್ತಿ ಸಂವಾದಿನಿ, ದ್ವಾದಶ ಸ್ವರ ಸಂಭ್ರಮ, ಜರ್ನಿ ಇನ್ ಹಾರ್ಮೋನಿ ಎಂಬ ವಿಶಿಷ್ಟ ಪ್ರಯೋಗಗಳನ್ನು ಮಾಡಿ, ವಾದ್ಯದ ವಿವಿಧ ಮಜಲುಗಳನ್ನು ತೋರಿಸಿ ಜನಮನ್ನಣೆಯನ್ನು ಪಡೆದರು. ಇದರ ಮೂಲಕ ಹಾರ್ಮೋನಿಯಂ ವಾದ್ಯವು ಕೇವಲ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪಕ್ಕ ವಾದ್ಯ ಮಾತ್ರವಲ್ಲದೇ, ಎಲ್ಲಾ ರೀತಿಯ ಸಂಗೀತಕ್ಕೂ ಪಕ್ಕಾ ವಾದ್ಯ ಎಂಬುದನ್ನು ನಿದರ್ಶಿಸಿದ್ದಾರೆ.

ರವೀಂದ್ರ ಕಾಟೋಟಿಯವರು ಭಾರತೀಯ ಸಂಗೀತ ಕ್ಷೇತ್ರಕ್ಕೆ ತಮ್ಮ ಅಪರೂಪದ ಕಲೆಯ ಮೂಲಕ ಅಪಾರ ಕೊಡುಗೆ ನೀಡಿದ ನಿಷ್ಣಾತ ಕಲಾವಿದರು. ಅದರಲ್ಲಿಯೂ ಹಾರ್ಮೋನಿಯಂ ಸಂಗೀತದಲ್ಲಿ ಅವರ ಸಾಧನೆ ಅಪಾರ, ಅನನ್ಯ ಹಾಗೂ ಅಪರಿಮಿತ. ಅವರು ಕೇವಲ ಒಬ್ಬ ಪರಿಪೂರ್ಣ ಕಲಾವಿದ ಮಾತ್ರ ಅಲ್ಲದೇ, ತಮ್ಮಲ್ಲಿರುವ ಪದ-ಸಮೂಹಗಳನ್ನು ಸುಂದರವಾಗಿ ಹೆಣೆದು ಕಾವ್ಯ ರಚನೆ ಮಾಡಬಲ್ಲ ರಚನಾಕಾರರೂ ಹೌದು, ಸಾಹಿತ್ಯಕ್ಕೆ ಸರಿಯಾಗಿ ಭಾವ ಹೊಂದುವಂತೆ ಸ್ವರ ಸಂಯೋಜನ ಮಾಡಬಲ್ಲ ಸ್ವರ-ಸಂಯೋಜಕರೂ ಹೌದು, ಮನದಲ್ಲಿಯೇ ಗೋಪುರವನ್ನು ಕಟ್ಟಿ ತಮ್ಮ ಗುರುವನ್ನು ಕೂರಿಸಿ ಸದಾಕಾಲ ಸ್ಮರಿಸುವ ಗುರು ಭಕ್ತರೂ ಹೌದು, ಸಮಾಜದಲ್ಲಿ ಅವರ ಪಾತ್ರ ಇಷ್ಟಕ್ಕೇ ಮುಗಿಯುವುದಿಲ್ಲ. ತಮ್ಮಲ್ಲಿರುವ ವಿದ್ಯೆ, ಅಪಾರ ಜ್ಞಾನ, ಅನುಭವಗಳನ್ನು ನಿಷ್ಕಲ್ಮಶವಾಗಿ ತಮ್ಮ ಶಿಷ್ಯರಿಗೆ ಧಾರೆಯೆರೆಯುವುದರ ಮೂಲಕ ಸ್ವತಃ ಒಬ್ಬ ಶ್ರೇಷ್ಟ ಗುರುವಾಗಿ ನಿಂತು ಸುಸಂಸೃತ ಪೀಳಿಗೆಯನ್ನು ಸಮಾಜಕ್ಕೆ ನೀಡುವ ಜವಾಬ್ದಾರಿಯುತ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ.

ಶಿಷ್ಯ ಗುರು ಮುಖೇನ ವಿದ್ಯೆಯನ್ನು ಪಠಣ ಮಾಡಬೇಕಾದರೆ ಏಕಾಗ್ರತೆ, ಶ್ರದ್ಧೆ, ತ್ಯಾಗ, ಪ್ರಾಮಾಣಿಕತೆ ಎಷ್ಟು ಮುಖ್ಯವೋ ಗುರು ಭಕ್ತಿ ಕೂಡಾ ಅಷ್ಟೇ ಮುಖ್ಯ. ಅದರಲ್ಲಿಯೂ ನಾವು ಭಾರತೀಯರು ರಾಮಾಯಣ ಮಹಾಭಾರತ ಕಾಲದಿಂದಲೂ ಗುರುಭಕ್ತಿ-ಗುರುಶಕ್ತಿಯ ಮಹತ್ವವನ್ನು ಇಡೀ ಪ್ರಪಂಚಕ್ಕೇ ಸಾರಿದ್ದೇವೆ, ಇಂದಿಗೂ ಸಾರುತ್ತಿದೇವೆ ಎನ್ನುವುದಕ್ಕೆ “ವಿಶ್ವ ಸಂವಾದಿನಿ ಶೃಂಗ” ಒಂದು ಜ್ವಲಂತ ಉದಾಹರಣೆ ಎಂದರೆ ಅತಿಶಯೋಕ್ತಿ ಅಲ್ಲ. ಈ ದಿಶೆಯಲ್ಲಿ ಕಾಟೋಟಿಯವರು ಗುರುವಿನಿಂದ ತಾವು ಕಲಿತ ವಿದ್ಯೆಯನ್ನು ಸ್ಮರಿಸಿ ಅದಕ್ಕೆ ಪ್ರತಿಯಾಗಿ ಹಾರ್ಮೋನಿಯಂ ವಾದ್ಯದ ವಿಶೇಷತೆಯನ್ನು ಜನರಿಗೆ ಪರಿಚಯಿಸುತ್ತಾ ಗುರುಗಳ ಹೆಸರಿನಲ್ಲಿ ಬೃಹತ್ ಹಾರ್ಮೋನಿಯಂ ಸಮ್ಮೇಳನವನ್ನು ಏರ್ಪಡಿಸಿ ಯುವಪೀಳಿಗೆಯು ಹಾರ್ಮೋನಿಯಂ ಎಡೆಗೆ ಸೆಳೆಯುವಂತೆ ಮಾಡುವುದರ ಮೂಲಕ ಮತ್ತೊಮ್ಮೆ ಗುರುಭಕ್ತಿಯ ಪರಾಕಾಷ್ಠೆ ಮೆರೆಸುತ್ತಿದ್ದಾರೆ. ಈ ಕಾರ್ಯಕ್ರಮವು ವಿಶ್ವದ ತುಂಬೆಲ್ಲಾ ಪಸರಿಸಿ, ಜನಮಾನಸದಲ್ಲಿ ಸ್ಥಿರವಾಗಲಿದೆ.

ನೀತಾ ಬೆಳೆಯೂರು

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.