ಬೆಂಗಳೂರು : ಯುನೈಟೆಡ್ ಕಿಂಗ್ ಡಮ್ನ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಹಾಗೂ ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ವಿಶ್ವದಾಖಲೆಯ ಪಟ್ಟಿಗಳಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಅವರ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆ “ಶ್ರೀ ಗುರುಸಂಹಿತಾ” ಇದೀಗ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ.
ಭಾರತ ಸರ್ಕಾರದ ಅಧೀನದಲ್ಲಿ ನೊಂದಾಯಿತ ಸಂಸ್ಥೆಯಾದ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವಿಶ್ವದಾಖಲೆಯನ್ನು ಪಡೆದ ಆಯ್ದ ಭಾರತೀಯ ಸಾಧಕರನ್ನು ಕಳೆದ ಹಲವಾರು ವರ್ಷಗಳಿಂದ ತನ್ನ ವಿಶ್ವದಾಖಲೆಯ ಪಟ್ಟಿಗೂ ಸೇರಿಸಿಕೊಂಡು ಸನ್ಮಾನಿಸುತ್ತಾ ಬಂದಿದೆ. ಇದೇ ಭಾನುವಾರ ನವೆಂಬರ್ 12ರಂದು ನವದೆಹಲಿಯಲ್ಲಿ ನಡೆಯಲಿರುವ ವಾರ್ಷಿಕ ಸಮಾರಂಭದಲ್ಲಿ ವಿಶ್ವದಾಖಲೆ ಪಡೆದ 100 ಅತ್ಯುನ್ನತ ಭಾರತೀಯರನ್ನು ನವದೆಹಲಿಯ ಸಿರಿ ಫೆÇೀರ್ಟ್ ಸಭಾಂಗಣದಲ್ಲಿ ಸನ್ಮಾನಿಸಲಾಗುತ್ತಿದೆ. ಅದರಲ್ಲಿ ಗಾಯಕ ಚಿನ್ಮಯ ಎಂ.ರಾವ್ ಕೂಡ ಒಬ್ಬರು ಎಂದು “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ಪ್ರಧಾನ ಸಂಪಾದಕರಾದ ಡಾ. ಬಿಸ್ವರೂಪ್ ರಾಯ್ ಚೌದ್ರಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಟು ರಾಷ್ಟ್ರಗಳ ಎಂಟು ವಿಶ್ವದಾಖಲೆಗಳ ಪಟ್ಟಿಗಳ ಎಂಟು ಪ್ರಧಾನ ಸಂಪಾದಕರು ಹಾಗೂ ವಿಶ್ವದಾಖಲೆಗಳನ್ನು ಪಡೆದ 2000ಕ್ಕೂ ಹೆಚ್ಚು ಸಾಧಕರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಈ ಕಾರ್ಯಕ್ರಮ ನಡೆಯಲಿದೆ.
ಒಟ್ಟು 28 ಗಂಟೆ 8 ನಿಮಿಷ 30 ಸೆಕೆಂಡ್ ಧ್ವನಿಮುದ್ರಣವಾಗಿರುವ ಈ ಡಿ.ವಿ.ಡಿಯನ್ನು ಕಳೆದ ಮೇ ತಿಂಗಳ 24ರಂದು ಹರಿಹರದ ನಾರಾಯಣಾಶ್ರಮದಲ್ಲಿ ದತ್ತ ಪರಂಪರೆಯ ಶ್ರೀ ಪ್ರಭುದತ್ ಮಹರಾಜ್ ಲೋಕಾರ್ಪಣೆಗೊಳಿಸಿದ್ದರು.
ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆ
“ಶ್ರೀ ಗುರುಸಂಹಿತಾ” ಎಂಬ ಹೆಸರಿನ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ ಪವಿತ್ರ ಗ್ರಂಥದಲ್ಲಿನ 52 ಅಧ್ಯಾಯಗಳಲ್ಲಿರುವ ಅನುಷ್ಟುಪ್ ಛಂದಸ್ಸಿನ ಒಟ್ಟು 6,621 ಸಂಸ್ಕೃತ ಶ್ಲೋಕಗಳನ್ನು ಚಿನ್ಮಯ ಎಂ.ರಾವ್ ತಮ್ಮ ಹೊನಗೋಡಿನ ಮನೆಯಲ್ಲಿರುವ ಪುಟ್ಟ ಸ್ಟೂಡಿಯೋದಲ್ಲಿ ತಾವೇ ಧ್ವನಿಮುದ್ರಣ ಮಾಡಿಕೊಂಡು ಇದರ ಸಂಕಲನದ ಕೆಲಸವನ್ನೂ ತಾವೇ ಮಾಡಿಕೊಂಡು ಅಂತಿಮ ಹಂತದ ಮಾಸ್ಟರ್ ಡಿ.ವಿ.ಡಿ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಚಿನ್ಮಯ ಎಂ.ರಾವ್ 2010ರಿಂದ 2013ರರವರೆಗೆ 3 ವರ್ಷ ಈ ಅಡಕ ಮುದ್ರಿಕೆಯ ಧ್ವನಿಮುದ್ರಣಕ್ಕಾಗಿ ಒಟ್ಟು 2,400 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.
ಮೂಲತಹ ಮರಾಠಿ ಭಾಷೆಯ ಗಂಗಾಧರ ಸರಸ್ವತಿ ಎಂಬ ಕವಿಯಿಂದ ರಚಿಸಲ್ಪಟ್ಟ ಶ್ರೀ ಗುರುಚರಿತ್ರಾ ಎಂಬ ಈ ಪವಿತ್ರ ಗ್ರಂಥ ಇಂದಿಗೂ ಮಹಾರಾಷ್ಟ್ರದಾದ್ಯಂತ ಪ್ರಚಲಿತವಾಗಿದೆ. ಶ್ರೀ ಗುರುಚರಿತ್ರೆಯು, ಶ್ರೀ ದತ್ತಾತ್ರೇಯರ, ಶ್ರೀಪಾದಶ್ರೀವಲ್ಲಭರ, ಶ್ರೀ ನೃಸಿಂಹ ಸರಸ್ವತಿಗಳ ಅದ್ಭುತವೂ ಪರಮಾನಂದವೂ ಆದ ದಿವ್ಯ ಚರಿತ್ರೆ. ಶ್ರೀ ವಾಸುದೇವಾನಂದ ಸರಸ್ವತಿಗಳು ದತ್ತನ ಪ್ರೇರಣೆಯಿಂದ ಸಂಸ್ಕೃತ ಭಾಷೆಗೆ ಇದನ್ನು ಅನುವಾದಿಸಿದ್ದಾರೆ.
ಚಿತ್ರದುರ್ಗದ ಹಿರಿಯ ಜ್ಯೋತಿಷಿ ಶ್ರೀ ಎಸ್ ಶ್ರೀಧರ ಮೂರ್ತಿ ನಿರ್ಮಾಣದ ಈ ಆಡಿಯೋ ಡಿ.ವಿ.ಡಿಯನ್ನು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಹೊರತಂದಿದೆ.
ಪ್ರಸ್ತುತ ಚಿನ್ಮಯ ಎಂ.ರಾವ್ ಅವರು ರಾಜರಾಜೇಶ್ವರಿನಗರದಲ್ಲಿ ತಮ್ಮ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ವತಿಯಿಂದ ನೂರಾರು ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತಿದ್ದಾರೆ.