ಕಲಾಪ್ರಪಂಚಸಂಗೀತ ಸಮಯ

ನಾ ಕಂಡಂತೆ ಗಾನ ಗಂಧರ್ವ ಪದ್ಮಭೂಷಣ ಡಾ.ಕೆ.ಜೆ.ಏಸುದಾಸ್-ಭಾಗ-2

ABOUT K J YESUDAS BY CHINMAYA M RAO.-2jpg-ಚಿನ್ಮಯ ಎಂ.ರಾವ್ ಹೊನಗೋಡು

ಭಾಗ-2-ಶಾರದೆಯ ವೀಣೆ ಏಸುದಾಸ್ ಕೊರಳಲ್ಲಿ ನುಡಿಯಿತಾ?!
ಒಂದು ದಿನ ಮಧ್ಯಾಹ್ನ ೨ ಗಂಟೆಗೆ ಅಂದು ಸಂಜೆ ೫-೩೦ಕ್ಕೆ ಶ್ರೀಕ್ಷೇತ್ರ ಶೃಂಗೇರಿಯಲ್ಲಿ ಏಸುದಾಸ್ ಅವರ ಸಂಗೀತ ಕಛೇರಿಯಿದೆ ಎಂದು ದಿನಪತ್ರಿಕೆ ಓದಿದಾಗ ಗೊತ್ತಾಯಿತು. ಇನ್ನು ಇಂಥಹ ಅವಕಾಶ ಸಿಗಲಾರದೆಂದು ಕೂಡಲೆ ಗೆಳೆಯ ವಿಕ್ಕಿಗೆ ಉತ್ಸಾಹ ತುಂಬಿ ಅವನ ಎನ್ ಫೀಲ್ಡ್ ಬೈಕಿಗೆ ಪೆಟ್ರೋಲ್ ತುಂಬಿ ಶಿವಮೊಗ್ಗದಿಂದ ಹೊರಟು ಕೇವಲ ಎರಡೇ ಗಂಟೆಯಲ್ಲಿ ಅವನೊಟ್ಟಿಗೆ ಶೃಂಗೇರಿ ತಲುಪಿಕೊಂಡೆ !

ಶೃಂಗೇರಿಯಲ್ಲಿ ಅಂದು ನವರಾತ್ರಿಯ ವೈಭವ. ಕಿಕ್ಕಿರಿದು ಸೇರಿದ ಸಭಾಂಗಣದ ತುತ್ತತುದಿಯಲ್ಲಿ ಪಾದದ ಮುಮ್ಮಡಿಯನ್ನೆತ್ತಿ ಮುಂದಿರುವ ತಲೆಗಳ ಸಂಧಿಯಿಂದ ದೂರದಲ್ಲಿ ಕಾಣುತ್ತಿದ್ದ ವೇದಿಕೆಯನ್ನು ಇಣುಕುವ ಸೌಭಾಗ್ಯ ನನ್ನದಾಯಿತು. ನೆರೆದಿದ್ದ ಜನಸಾಗರದ ನಡುವೆ ಓಡಾಡಲು ಬಿಟ್ಟ ಕಿರುದಾರಿಯಲ್ಲಿ ಬಿಳಿ ಪಂಚೆ, ಬಿಳಿ ಜುಬ್ಬ ತೊಟ್ಟ..ದಟ್ಟವಾಗಿ ಗಡ್ಡವನ್ನು ಬಿಟ್ಟ ವ್ಯಕ್ತಿಯೊಬ್ಬ ತಂಬೂರಿ ಹಿಡಿದು ವೇದಿಕೆಯತ್ತ ಸಾಗುತ್ತಿದ್ದರು. ಅವರನ್ನು ನೋಡಿ ಕೆಲವರು ಸಿಳ್ಳೆ ಹೊಡೆದರೆ ಕೆಲವರು ಚಪ್ಪಾಳೆ ತಟ್ಟಿದರು. ಸೀದಾ ಮುಂದಾದ ಆ ವ್ಯಕ್ತಿ ಕಛೇರಿಗೆ ಸಿದ್ದವಾಗಿದ್ದ ವೇದಿಕೆಯ ಒಂದು ಮೂಲೆಯಲ್ಲಿ ಹೋಗಿ ಸಿದ್ಧತೆಯಲ್ಲಿ ತೊಡಗಿದಾಗಲೇ ಗೊತ್ತಾಗಿದ್ದು ಆತ ಏಸುದಾಸ್ ಅವರ ಸಹಾಯಕ ಎಂದು ! ವೇದಿಕೆಯ ಹಿಂಬದಿಯಿಂದ ಗಡ್ಡ ಸವರುತ್ತಾ ಇನ್ನೊಬ್ಬ ಇದೇ ರೀತಿಯ ವ್ಯಕ್ತಿ ಬಂದಾಗಲೂ ಅವರೇ ಏಸುದಾಸ್ ಎಂದು ನಂಬಿ ಕೆಲವರು ಮೋಸಹೋದರು. ಹೀಗೆ ಎರಡು ಬಾರಿ ಒಂದಷ್ಟು ಚಪ್ಪಾಳೆ-ಸಿಳ್ಳೆಗಳು ವ್ಯರ್ಥವಾದವು. ಆನಂತರ ನಿಜವಾಗಿಯೂ ಏಸುದಾಸ ಬಂದಾಗ ಅವರನ್ನು ಈ ಮೊದಲು ನೋಡಿದವರು ನೋಡದವರು ಎಲ್ಲಾ ಸೇರಿ ಚಪ್ಪಾಳೆಯ ಸುರಿಮಳೆಗೈದರು.

ಧೃಢವಾಗಿ ಹೆಜ್ಜೆಗಳನ್ನಿಡುತ್ತಾ ಸ್ವಲ್ಪ ವೇಗವಾಗಿ ಮುನ್ನಡೆಯುತ್ತಿದ್ದ ಅವರನ್ನೇ ಕಣ್ ತುಂಬ ನೋಡಿದ ನನ್ನ ಕಂಗಳು ಅಷ್ಟು ವರ್ಷಗಳಿಂದ ಅಂತರಂಗದಲ್ಲಿ ಅದುಮಿಟ್ಟುಕೊಂಡಿದ್ದ ಅಸಾಮಾನ್ಯ ಅಭಿಮಾನವನ್ನು ಆನಂದಭಾಷ್ಪವಾಗಿ ಒಮ್ಮೆಲೇ ಹೊರಹಾಕಿಬಿಟ್ಟಿತು. ಬೇರೆಯವರಂತೆ ಆತುರದಿಂದ ಕಛೇರಿಯನ್ನು ಆರಂಭಿಸದೆ ಸುತ್ತಲೂ ಆವರಿಸಿಕೊಂಡಿದ್ದ ತಂಬೂರಿಯ ನಾದಕ್ಕೆ ಷಡ್ಜ,ಪಂಚಮಗಳನ್ನು ಮಾತ್ರ ದೀರ್ಘ ಉಸಿರಿನಲ್ಲಿ ಶೃತಿಗೆ ಸೇರಿಸಿಕೊಂಡು ನಾಲ್ಕೈದು ನಿಮಿಷ ಏಸುದಾಸ್ ಧ್ಯಾನಸ್ಥರಾಗಿ ಹಾಡಿದಾಗ ತುಂಬಿದ ಸಭೆಯಲ್ಲಿ ಮೌನ ತುಂಬಿಕೊಂಡಿತು. ಅಂದು ಸಂಜೆ ಆಗಸದಲ್ಲಿ ಮೋಡವೇ ಇರಲಿಲ್ಲ. ಆದರೂ ಗಂಧರ್ವಗಾಯನವನ್ನು ಕೇಳಲೋ ಏನೋ ದಿಢೀರನೆ ಕವಿದ ಮೇಘಮಾಲೆ ತುಂತುರು ಹನಿಗಳಾಗಿ ಏಸುದಾಸ್ ಹಾಡಲು ಆರಂಭಿಸಿದ “ವಾತಾಪಿ ಗಣಪತಿಮ್” ಕೃತಿಯ ತಾಳಕ್ಕೆ ಜೊತೆ ಸೇರಿ ಚಿಟಪಟ ಸದ್ದುಮಾಡಲು ಪ್ರಾರಂಭಿಸಿತು. ಇದೇ ಕೃತಿಯನ್ನು ಇದೇ ಗಾಯಕನ ದನಿಯನಿಯಲ್ಲಿ ಈ ಹಿಂದೆ ನೂರಾರು ಬಾರಿ ಧ್ವನಿಸುರುಳಿಯಲ್ಲಿ ಕೇಳಿದ್ದರೂ ಅಂದು ಹಾಡುವ ಹುಮ್ಮಸ್ಸು ಬೇರೆಯದೇ ಆಗಿತ್ತು. ಅಂದಿನ ಮನೋಧರ್ಮಕ್ಕನುಗುಣವಾಗಿ ಏಸುದಾಸ್ “ಹಂಸಧ್ವನಿ”ಯ ಸ್ವರಗಳನ್ನು ವಿಸ್ತರಿಸುತ್ತಾ ಹೋದಂತೆ ಹೊರಗಡೆ ಜಿನುಗುತ್ತಿದ್ದ ಮಳೆಯೂ ವಿಸ್ತಾರವಾಗುತ್ತಾ ಹೋಯಿತು! ತಾರ ಷಡ್ಜದಲ್ಲಿ ನಿಂತು ಮೂರನೆಯ ಕಾಲದಲ್ಲಿ ( ಅಂದರೆ ತುಂಬಾ ವೇಗವಾಗಿ) ಕಲ್ಪನಾಸ್ವರದ ಪ್ರಸ್ತಾರವನ್ನು ವಿಸ್ತಾರವನ್ನು ಭಾವುಕರಾಗಿ ಏಸುದಾಸ ಹಾಡುತ್ತಿದ್ದಾಗ ಅವರ ಕಂಚಿನ ಕಂಠದ ಗಾನಸುಧೆ ಮುಗಿಲು ಮುಟ್ಟಿತ್ತು. ಮುಗಿಲಿನಿಂದ ಭೋರ್ಗರೆಯುತ್ತಾ ಧಾರಾಕಾರವಾಗಿ ಸುರಿಯುತ್ತಿದ್ದ ವರ್ಷಧಾರೆಯ ಅಬ್ಬರವೂ ಮುಗಿಲುಮುಟ್ಟಿತ್ತು!

ABOUT K J YESUDAS BY CHINMAYA M RAO.-6pgಶಾರದಾಂಬೆಯ ಸನ್ನಿಧಿಯಲ್ಲಿ ಸ್ವರಾಮೃತವರ್ಷಿಣಿಯ ಮಹಾಪ್ರವಾಹ. ಅತ್ಯಾನಂದದ ಆ ಮಹಾಪ್ರವಾಹದಲ್ಲಿ ಕಳೆದುಹೋದ ನನಗೆ ಇಹಲೋಕದ ಅರಿವೇ ಇರದಂತಾಗಿ ಮೈಮರೆತು ಹೋಗಿದ್ದೆ. ಏಸುದಾಸ್ ಸಂಗೀತಕ್ಕೆ ಮಳೆ ಬರಿಸುವ ಆ ಶಕ್ತಿ ಇದೆಯಾ? ಅಥವಾ ಏಸುದಾಸ್ ಸಂಗೀತವನ್ನು ಕೇಳಲು ಮಳೆಗೂ ಆಸಕ್ತಿ ಇದೆಯಾ? ಅಥವಾ ಏಸುದಾಸ್ ಸಂಗೀತಕ್ಕೆ ಸಹಗಾಯನ ಮಾಡಲು ವರುಣದೇವನ ರೂಪದಲ್ಲಿ ಮಳೆ ಬಂದಿದೆಯಾ? ಎಲ್ಲಾ ವಿಶ್ಲೇಷಣೆಗಳಿಂದ ಅತೀತವಾಗಿ ಅತೀಂದ್ರಿಯಶಕ್ತಿಯೊಂದರ ಪ್ರಾಬಲ್ಯ ಅಲ್ಲಿ ಎದ್ದು ಕಾಣುತ್ತಿತ್ತು! ಗಾನಗಂಧರ್ವನ ಸಂಗೀತ ಗಂಧರ್ವಲೋಕದಿಂದ ಇಳಿದು ಬಂದ ವರುಣದೇವನೊಡನೆ ಮಾತುಕತೆಗೆ ಇಳಿದಂತಿತ್ತು! ಅಥವಾ ಶೃಂಗೇರಿಯಿಂದ ಗಂಧರ್ವಲೋಕಕ್ಕೆ ನಮ್ಮನ್ನೆಲ್ಲಾ ಕರೆದುಕೊಂಡು ಹೋದಂತಾಗಿತ್ತು! ಗರ್ಭಗುಡಿಯಲ್ಲಿದ್ದ ವೀಣಾಪಾಣಿ ಶಾರದೆ ಆ ಕ್ಷಣಕ್ಕೆ ವೀಣೆ ನುಡಿಸುವುದನ್ನೇ ನಿಲ್ಲಿಸಿ ತಾನು ಬಿಂದುರೂಪದಲ್ಲಿ ದಯಪಾಲಿಸಿದ ವಿದ್ಯೆ ಸಿಂಧುರೂಪವಾದ ಬಗೆಯನ್ನು ವಿಸ್ಮಯದಿಂದ ನೋಡುತ್ತಾ ಆ ಗಾಯನವನ್ನು ಕೇಳುತ್ತಾ ಮೂಕವಿಸ್ಮಿತಳಾದಳೇನೋ! ಅಥವಾ ತನ್ನಲಿರುವ ಸಾಗರಸದೃಶ ವಿದ್ಯೆಯ ಆಗರದಿಂದ ಒಂದು ಹನಿಯನ್ನು ಆ ಕ್ಷಣದ ಮಟ್ಟಿಗೆ ಆ ಗಾಯಕನಿಗೆ ವರವಾಗಿ ನೀಡಿದಳೇನೋ! ಅಥವಾ ತನ್ನ ವೀಣೆಯನ್ನು ಏಸುದಾಸ್ ಕೊರಳಿನಲ್ಲಿ ನುಡಿಸಿದಳೇನೋ! ಅಂತೂ ಏಸುದಾಸ್ ಎಂಬ ಗಾನಯೋಗಿ ತನ್ನ ಇಡೀ ಜೀವಮಾನದ ಸಾಧನೆಯ ಒಟ್ಟು ರೂಪವನ್ನು…ಒಟ್ಟು ಸಾರವನ್ನು..ಒಟ್ಟು ಮಾಡಿ ಸಂಗೀತರೂಪಿಣಿ ಶಾರದೆಗೆ ಅರ್ಪಿಸಿಬಿಟ್ಟರು. ಶ್ರೇಷ್ಠ ಸಂಗೀತಗಾರನೊಬ್ಬ ಸಂಗೀತದಾಯಿನಿ ಶಾರದೆಗೆ ಕೊಡಲ್ಪಟ್ಟ ವಿದ್ಯೆಯನ್ನು ಹಿಂದಿರುಗಿಸಿ ಕೊಡುವ..ಅರ್ಪಿಸುವ ಕಾಲದಲ್ಲಿ..ಸಮರ್ಪಿಸುವ ಶುಭಕಾಲದಲ್ಲಿ..ನಾವೆಲ್ಲಾ ಆ ಅಲೌಕಿಕ ವ್ಯವಹಾರವನ್ನು ಕಣ್ಣಾರೆ ನೋಡುತ್ತಿರುವ “ನೋಡಲೆರಡು ಕಣ್ಣು ಸಾಲದವರು”!

ತೀವ್ರಗತಿಗೆ ಸಾಗಿದ್ದ ಸ್ವರಗಳು ಮಂದಗತಿಗೆ ಬಂದು ಗಣಪತಿಯ ಕೀರ್ತನೆಯನ್ನು ಏಸುದಾಸ್ ಹಾಡಿ ಮುಗಿಸಿದಾಗ ಮುಗಿಲು ಮಳೆಸುರಿಸುವ ತನ್ನ ಕಾಯಕವನ್ನು ಮುಗಿಸಿ ಪ್ರಕೃತಿ ಒಮ್ಮೆ ಶಾಂತವಾಯಿತು. ಸಂಗೀತ ಹಾಗು ಪ್ರಕೃತಿ ಒಂದಕ್ಕೊಂದು ಎಷ್ಟು ಬೆಸೆದುಕೊಂಡಿದೆಯೆಂಬುದು ಸಾಬೀತಾಯಿತು. ಏಸುದಾಸ್ ಗಾಯನವನ್ನು ಕಣ್ಣಾರೆ ನೋಡಬೇಕೆಂದು ಹಲವು ವರ್ಷಗಳಿಂದ ಕಾದಿದ್ದ ನನ್ನ ಮನೋಭೂಮಿ ಅಂದು ಆ ಗಾನಮೃತವನ್ನು ಕೇಳಿ ತಂಪಾಯಿತು. ಏಸುದಾಸ್ ಅವರಿಗೆ ಶೃಂಗೇರಿಯ ಆಸ್ಥಾನ ವಿದ್ವಾನ್ ಪದವಿಯನ್ನು ಪ್ರಧಾನ ಮಾಡಿ ಅಂದು ಅವರನ್ನು ಸನ್ಮಾನಿಸಲಾಯಿತು.

K .J YESUDAS after SHRINGERI CONCERT-From the right first CHINMAYA M.RAOಕಛೇರಿ ಮುಗಿದ ನಂತರ ಏಸುದಾಸ್ ಅವರ ಪಕ್ಕದಲ್ಲಿ ನಿಂತು ಭಾವಚಿತ್ರವನ್ನು ತೆಗೆಸಿಕೊಳ್ಳಬೇಕೆಂಬ ಭಾವದಿಂದ ಅವರು ಉಳಿದುಕೊಂಡಿದ್ದ ವಸತಿನಿಲಯದ ಕಡೆ ಓಡೋಡಿ ಹೋದೆ. ಅಲ್ಲಿ ಆಗಲೇ ಗುಂಪುಗೂಡಿದ್ದವರ ಸಂಖ್ಯೆಯನ್ನು ನೋಡಿ ಕಂಗಾಲಾದ ನಾನು ಅವರ ನಡುವೆಯೇ ಮುನ್ನುಗ್ಗಿ ಹೋದೆ. ಒಂದು ಗಂಟೆಯಾದರು ನಮಗೆ ಒಳಬಿಡಲಿಲ್ಲ..ಆದರೂ ಅವರನ್ನು ಹತ್ತಿರದಿಂದ ನೋಡಬೇಕೆಂಬ ನಮ್ಮ ಉತ್ಸಾಹ ಮಾತ್ರ ಕುಗ್ಗಲಿಲ್ಲ. ಆಚೆ ಹೋಗಿ ಎಂದು ಅಲ್ಲಿದ್ದ ಇಬ್ಬರು ದ್ವಾರಪಾಲಕರು ನಮ್ಮನ್ನು ತಳ್ಳಿದರೂ ನಾವು ಬಗ್ಗಲಿಲ್ಲ. ಏಸುದಾಸ್ ಅವರಿಗೆ ನಮ್ಮ ಈ ಹರಸಾಹಸ ಗೊತ್ತಾಗಿ ಒಳಬಿಡುವಂತೆ ಸೂಚಿಸಿದರು. ಬಾಗಿಲು ತೆಗೆಯುತ್ತಿದ್ದಂತೆ ನುಗ್ಗಿದ ಅಭಿಮಾನಿಗಳು ಕೋಣೆಯ ತುಂಬಾ ಜಮಾಯಿಸಿದರು. ಆದರೂ ಏಸುದಾಸ್ ಬೇಸರಿಸಿಕೊಳ್ಳದೇ..ಯಾರನ್ನೂ ಸರಿಸದೇ ಎಲ್ಲರೊಟ್ಟಿಗೆ ಬೆರೆತರು. ಬಾಗಿಲೊಳು ಕೈಮುಗಿದು ಒಳಗೆ ನುಗ್ಗಿದ ಯಾತ್ರಿಕ ನಾನು..ನನಗೆ ಸಾಕ್ಷಾತ್ ದೇವರನ್ನೇ ದರ್ಶನ ಮಾಡಿದಂತಾಯಿತು. ಎಲ್ಲರೊಟ್ಟಿಗೆ ಒಂದೇ ಫೋಟೋಗೆ ಏಸುದಾಸ್ ಅವಕಾಶ ನೀಡಿದಾಗ ಅಷ್ಟೇ ಆಯಿತೆಂದು ಗುಂಪಿನ ತುದಿಯಲ್ಲಿ ನಾನು ನಿಂತೆ.
K .J YESUDAS IN SHRINGERI TEMPLE-PHOTO CHINMAYA M RAOಉಡುಪಿ, ಕಾರ್ಕಳ, ಮೈಸೂರು ಹೀಗೆ ಎಲ್ಲೆಲ್ಲಿ ಏಸುದಾಸ್ ಅವರ ಶಾಸ್ತ್ರೀಯ ಸಂಗೀತ ಕಛೇರಿಯಿದೆಯೋ ಅಲ್ಲೆಲ್ಲಾ ದೇವರ ದರ್ಶನಕ್ಕೆ ನನ್ನ ಯಾತ್ರೆ ಆರಂಭವಾಯಿತು! ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದು ಅಪರೂಪಕ್ಕೆಂಬಂತೆ ಆಗುತ್ತಿದ್ದ ಅವರ ಕಛೇರಿಗಳಲ್ಲಿ ಮುಂದಿನ ಆಸನ ನನ್ನದಾಯಿತು.
(ಮುಂದುವರೆಯುವುದು..)

2-1-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.