ವಿಚಾರಲಹರಿ

ಕನ್ನಡ ವಿಕಿಪೀಡಿಯ ಸಮೃದ್ಧಗೊಳಿಸುವ ಜವಾಬ್ದಾರಿ ಕನ್ನಡಿಗರದ್ದೇ…

kannadaಚಿನ್ಮಯ ಎಂ.ರಾವ್ ಹೊನಗೋಡು
( ಲೇಖಕರು ಸಂಗೀತ ನಿರ್ದೇಶಕರು ಹಾಗು ಹವ್ಯಾಸಿ ಪತ್ರಕರ್ತರು )

ಆಧುನಿಕ ಜಗತ್ತು ಹೊಸ ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆಯುತ್ತಿದೆ. ತಂತ್ರಜ್ಞಾನ ದಿನದಿನವೂ ಶ್ರೀಮಂತವಾಗುತ್ತಿದೆ. ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಜ್ಞಾನದ ವಿಚಾರದಲ್ಲಿ ನಾವು ಶ್ರೀಮಂತರಾಗಬೇಕಾಗಿದೆ. ನಮ್ಮ ಜ್ಞಾನಶ್ರೀಮಂತಿಕೆಯನ್ನು ಜಗತ್ತಿಗೆ ಹಂಚುವ ಜವಾಬ್ದಾರಿಯೂ ನಮ್ಮ ಮೇಲಿದೆ. “ಕೆರೆಯ ನೀರನು ಕೆರೆಗೆ ಚೆಲ್ಲಿ…” ಎಂಬಂತೆ ನಾವು ಗಳಿಸಿದ್ದನ್ನು ಇತರರಿಗೂ ಉಳಿಸಿ ಅವರೆಲ್ಲರನ್ನೂ ಬೆಳೆಸುವ ಕಾಯಕ ನಮ್ಮದಾಗಬೇಕಾಗಿದೆ. ಕೊಟ್ಟು ಪಡೆವ ಹಾಗು ಪಡೆದು ಕೊಡುವ ಜ್ಞಾನ-ವಿಜ್ಞಾನ ವಿಚಾರ ವಿನಿಮಯ ನಮ್ಮ ಜೀವನಕ್ಕೊಂದು ಸಾರ್ಥ್ಯಕ್ಯ ನೀಡುತ್ತದೆ. ಅಂತೆಯೇ ಜೆಮ್ಮಿ ವೇಲ್ಸ್ ಹಾಗು ಲಾರ್ರಿ ಸೇಂಗರ್ ಅವರಿಂದ ೨೦೦೧ ಜನವರಿ ೧೫ ರಂದು ವಿಕಿಪೀಡಿಯ ಡಾಟ್ ಆರ್ಗ್ ಎಂಬ ಅಂತರಜಾಲ ಮಾಹಿತಿ ಕಣಜವೊಂದು ಸ್ಥಾಪನೆಯಾಯಿತು. ಇದೊಂದು ಮುಕ್ತ ವಿಶ್ವಕೋಶ. ಮೊದಲು ಆಂಗ್ಲ ಭಾಷೆಯಲ್ಲಿ ಆರಂಭವಾದ ಈ ಜ್ಞಾನದ ಕಣಜ ಇಂದು ದೇಶ, ಭಾಷೆ, ಜಾತಿ, ಜನಾಂಗ ಎಲ್ಲವನ್ನೂ ಮೀರಿ ಜಗತ್ತಿನಾದ್ಯಂತ ವ್ಯಾಪಿಸಿಕೊಂಡು ಅತ್ಯದ್ಭುತ ಅಂತರಜಾಲ ವಿಶ್ವಕೋಶವಾಗಿ ವಿಶ್ವಪ್ರಸಿದ್ಧಿ ಪಡೆದಿದೆ.

482px-jimmy_wales_fundraiser_appeal_editವಿಕಿಪೀಡಿಯ ( http://www.wikipedia.org/ ) ಅನ್ಯ ವಿಶ್ವಕೋಶಗಳಿಂದ ಬೇರೆಯಾಗಿದ್ದು, ಇದನ್ನು ಸದಸ್ಯರು ಮಾತ್ರವಲ್ಲದೆ ಯಾವುದೇ ಓದುಗರೂ ಕೂಡ ಸಂಪಾದಿಸಬಹುದು. ಸಂಪಾದಿಸಿದ ಲೇಖನಗಳು ಓದುಗರಿಗೆ ತಕ್ಷಣವೇ ಕಾಣಸಿಗುತ್ತದೆ. ಅದಲ್ಲದೆ ಒಂದು ವಿಷಯವನ್ನು ಪ್ರತಿ ಬಾರಿ ಸಂಪಾದಿಸಿದಾಗಲೂ ಆ ವಿಷಯ ಪುಟದ ಬದಲಾವಣೆಗಳು “ಇತಿಹಾಸ” ಪುಟದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಯಾವುದೇ ಹಿಂದಿನ ಮತ್ತು ಅದರ ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು ಹಾಗು ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು. “ಚರ್ಚೆ” ಪುಟಗಳು ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕರಿಸುತ್ತದೆ.

ವಿಕಿಪೀಡಿಯ ವಿಶೇಷ ?

“ವಿಕಿಪೀಡಿಯ ೨೦೦೧ ಜನವರಿಯಲ್ಲಿ ಪ್ರಾರಂಭವಾದ ಒಂದು ಮುಕ್ತ ಅಂತರಜಾಲ ವಿಶ್ವಕೋಶ. ಇದು ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ. ಇದು ಯಾವುದೇ ಒಂದು ಕಂಪೆನಿಯ ಅಥವಾ ಸರಕಾರದ ಸ್ವತ್ತು ಅಲ್ಲ. ಇದರಲ್ಲಿರುವ ಮಾಹಿತಿಯನ್ನು ಜನರೇ ಸ್ವಯಂಸ್ಫೂರ್ತಿಯಿಂದ ಸೇರಿಸಿರುವುದು. ವಿಕಿಪೀಡಿಯದಲ್ಲಿ ಎಲ್ಲ ವಿಷಯಗಳ ಬಗ್ಗೆ ಲೇಖನಗಳಿವೆ. ವಿದ್ಯಾರ್ಥಿಗಳು, ಅಧ್ಯಾಪಕರು, ಜನಸಾಮಾನ್ಯರು ಯಾವುದೇ ವಿಷಯದ ಬಗ್ಗೆ ತಿಳಿಯಬೇಕಾದರೆ ನೇರವಾಗಿ ತೆರೆಯುವುದು ವಿಕಿಪೀಡಯವನ್ನೆ. ಗೂಗಲ್ ಮೂಲಕ ಮಾಹಿತಿ ಹುಡುಕಿದರೂ ಮೊದಲು ದೊರೆಯುವದು ವಿಕಿಪೀಡಿಯ ತಾಣವೇ ! ವಿಕಿಪೀಡಿಯದಲ್ಲಿ ಒಟ್ಟಿಗೆ ಸುಮಾರು ೩ ಕೋಟಿ ಲೇಖನಗಳಿವೆ. ಅದರಲ್ಲಿ ಸುಮಾರು ೪೬ ಲಕ್ಷ ಲೇಖನಗಳು ಇಂಗ್ಲಿಷ್ ಭಾಷೆಯಲ್ಲಿವೆ. ೨೮೬ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಕನ್ನಡವೂ ಸೇರಿದಂತೆ ೨೨ಕ್ಕಿಂತ ಹೆಚ್ಚು ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ. ಪ್ರಪಂಚಾದ್ಯಂತ ಚೆದುರಿಹೋಗಿರುವ ಸುಮಾರು ೧೬ ಲಕ್ಷ ಸಂಪಾದಕರು ವಿಕಿಪಿಡಿಯವನ್ನು ಸಂಪಾದಿಸುತ್ತಾರೆ. ಭಾರತಕ್ಕೆ ಬಂದಾಗ ಕೇವಲ ೫೫೦೦ ಸಂಪಾದಕರು ವಿಕಿಪೀಡಿಯವನ್ನು ಸಂಪದಿಸುತ್ತಿದ್ದಾರೆ. ಅದರಲ್ಲಿ ಸುಮಾರು ೨೦೦೦ ಸಂಪಾದಕರು ಭಾರತೀಯ ಭಾಷೆಗಳ ವಿಕಿಪೀಡಿಯವನ್ನು ಸಂಪಾದಿಸುತ್ತಿದ್ದಾರೆ. ಭಾರತದಿಂದ ಕೆಲಸ ಮಾಡುವ ವಿಕಿಪೀಡಿಯ ಸಂಪಾದಕರ ಸಂಖ್ಯೆ ಇಷ್ಟು ಕಡಿಮೆ ಇದ್ದರೂ ವಿಕಿಪೀಡಿಯವನ್ನು ವೀಕ್ಷಿಸುವ ಭಾರತೀಯರ ಸಂಖ್ಯೆ ಸುಮಾರು ೨ ಕೋಟಿಯಷ್ಟಿದೆ. ಅಂದರೆ ಭಾರತೀಯರು ವಿಕಿಪೀಡಿಯದಿಂದ ಮಾಹಿತಿ ಪಡೆಯುತ್ತಿದ್ದಾರೆ ಆದರೆ ಅದಕ್ಕೆ ಅದೇ ಮಟ್ಟದಲ್ಲಿ ಮಾಹಿತಿ ಸೇರಿಸುತ್ತಿಲ್ಲ ಎಂದು ಅರ್ಥೈಸಿಕೊಳ್ಳಬಹುದು. ಇದು ಬದಲಾಗಬೇಕಾಗಿದೆ ” ಎಂಬುದು ಕನ್ನಡ ವಿಕಿಪೀಡಿಯದ ಸಂಪಾದಕರಾದ ಡಾ.ಯು.ಬಿ ಪವನಜ ಅವರ ಅಭಿಪ್ರಾಯ.

dr-u-b-pavanaja-1ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಈ ವಿಶ್ವಕೋಶವು ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿಗೊಂಡಿದೆ. ಯಾವುದೇ ರೀತಿಯ ಸಾಮಾಜಿಕ, ಸಾಂಸ್ಕೃತಿಕ ಅಥವಾ ಜನಾಂಗೀಯ ನಿರ್ಬಂಧಗಳಿಲ್ಲದೆ ಯಾರು ಬೇಕಾದರೂ ವಿವಿಧ ರೀತಿಯ ಲೇಖನಗಳು, ಆಕರಗಳು, ಚಿತ್ರಗಳು ಮತ್ತಿತರ ಮಾಧ್ಯಮ ಪ್ರಕಾರಗಳ ಬಗೆಗಿನ ಮಾಹಿತಿಗಳನ್ನು ಈ ತಾಣಕ್ಕೆ ಕಳುಹಿಸಬಹುದು. ಕೊಡುಗೆದಾರರ ಪರಿಣತಿಯಾಗಲೀ ವಿದ್ಯಾರ್ಹತೆಯಾಗಲೀ ಅಥವಾ ಮತ್ತಾವುದೇ ಅಂಶವಾಗಲೀ ಇಲ್ಲಿ ಗಣನೆಗೆ ಬರುವುದಿಲ್ಲ. ಆದರೆ ಹಾಗೆ ನೀಡಲ್ಪಟ್ಟ ಮಾಹಿತಿಗಳು ನಂಬಲರ್ಹವಾದ ಮೂಲಗಳ ಮೂಲಕ ಖಚಿತಗೊಳ್ಳಲ್ಪಡಲು ಸಮರ್ಥವಾಗಿರಬೇಕು.

ಸೆಪ್ಟೆಂಬರ್ ೯, ೨೦೦೭ ರಂದು ಆಂಗ್ಲ ಭಾಷೆಯ ವಿಕಿಪೀಡಿಯ ೨೦ ಲಕ್ಷಕ್ಕೂ ಹೆಚ್ಚಿನ ಲೇಖನಗಳನ್ನು ಹೊಂದಿ ಜಗತ್ತಿನ ಅತೀ ದೊಡ್ಡ ವಿಶ್ವಕೋಶ ಎನಿಸಿಕೊಂಡಿತು. ೨೬೨ ವಿವಿಧ ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯ ಈಗ ಹಲವು ವಿದೇಶಿ ಭಾಷೆಗಳಲ್ಲಿ ಮಾತ್ರವಲ್ಲದೆ ಅನೇಕ ಭಾರತೀಯ ಭಾಷೆಗಳಲ್ಲಿ ಕೂಡ ಲಭ್ಯವಿದೆ.

ಕನ್ನಡ ವಿಕಿಪೀಡಿಯ ( ವೆಬ್ ವಿಳಾಸ- http://kn.wikipedia.org/wiki/ಮುಖ್ಯಪುಟ)

17-wikipedia-logoಕನ್ನಡ ಭಾಷೆಗೆ ಸುಮಾರು ೨೦೦೦ ವರ್ಷಗಳ ಭವ್ಯ ಇತಿಹಾಸವಿದೆ. ಕನ್ನಡ ಮಾತನಾಡುವವರ ಸಂಖ್ಯೆ ಸುಮಾರು ೫ ಕೋಟಿ ಇದೆ. ಕರ್ನಾಟಕದ ಸಾಕ್ಷರತೆ ಶೇಕಡ ೭೫ ಇದೆ. ಕನ್ನಡ ಭಾಷೆಯ ೮ ಲೇಖಕರುಗಳಿಗೆ ಭಾರತದ ಸರ್ವೋಚ್ಚ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕೇಂದ್ರ ಸರಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದೆ. ಇವೆಲ್ಲ ಕನ್ನಡದ ಹಿರಿಮೆ ಗರಿಮೆಗಳನ್ನು ಸಾರುತ್ತವೆ.

ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಅಂತರಜಾಲ ಬಳಕೆದಾರರಲ್ಲಿ ಹೆಚ್ಚು ಮಂದಿ ಅಂತರಜಾಲವನ್ನು ಮಾಹಿತಿಯ ಹುಡುಕುವಿಕೆಗಾಗಿ ಬಳಸುತ್ತಾರೆ. ಸಹಜವಾಗಿಯೇ ಕನ್ನಡಿಗರಿಗೆ ಅಂತರಜಾಲದಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲ ವಿಷಯಗಳ ಮಾಹಿತಿ ಬೇಕಾಗಿದೆ. ಅಂತರಜಾಲದಲ್ಲಿ ಮಾಹಿತಿಯ ಪ್ರಮುಖ ಜಾಲತಾಣ ವಿಕಿಪೀಡಿಯ. ಇದು ಕನ್ನಡದಲ್ಲೂ ಇದೆ.

ಜುಲೈ ೨೦೦೩ರಲ್ಲಿ ಪ್ರಾರಂಭವಾದ ಕನ್ನಡ ವಿಕಿಪೀಡಿಯದಲ್ಲಿ ಸದ್ಯ ಸುಮಾರು ೧೪,೦೦೦ ಲೇಖನಗಳಿವೆ. ಇತರೆ ಭಾರತೀಯ ಭಾಷೆಗಳಿಗೆ ಹೋಲಿಸಿದರೆ (ತೆಲುಗು – ೫೨,೦೦೦, ತಮಿಳು – ೫೨,೦೦೦, ಮಲಯಾಳಂ – ೩೦,೦೦೦, ಬೆಂಗಾಳಿ – ೨೫,೦೦೦, ಹಿಂದಿ – ೯೭,೦೦೦) ಕನ್ನಡ ಭಾಷೆ ತುಂಬ ಹಿಂದಿದೆ. ಕನ್ನಡ ಭಾಷೆಯಲ್ಲಿ ಸದ್ಯ ೩೫೦ ಜನ ಸಂಪಾದಕರಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾಗಿದೆ. ಕನ್ನಡ ವಿಕಿಪೀಡಿಯಕ್ಕೆ ಭಾಷೆ ಮತ್ತು ಸಾಂಸ್ಕೃತಿಕವಾಗಿ ತುಂಬ ಶ್ರೀಮಂತವಾಗಿರುವ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಸಂಪೂರ್ಣ ಮಾಹಿತಿ ಸೇರಿಸಬೇಕಾಗಿದೆ. ಈಗಾಗಲೆ ಇರುವ ಹಲವು ಅರೆಬರೆ ಲೇಖನಗಳನ್ನು ಸರಿಪಡಿಸಿ ಪೂರ್ತಿ ಮತ್ತು ನಿಖರವಾದ ಮಾಹಿತಿ ಸೇರಿಸಬೇಕಾಗಿದೆ.

ಅಮೇರಿಕಾ ಮೂಲದ ಒಂದು ಲಾಭೇತರ ಸಂಸ್ಥೆಯಾದ (ಎನ್.ಜಿ.ಒ) ವಿಕಿಮೀಡಿಯಾ ಫೌಂಡೇಶನ್ ಫ್ಲೋರಿಡಾ ರಾಜ್ಯದ ಕಾನೂನಿನ ಅನ್ವಯ ತನ್ನ ಆಡಳಿತವನ್ನು ನಿರ್ವಹಿಸುತ್ತಿದೆ. ವ್ಯಾಪಾರಿ ಮನೋಭಾವದಿಂದ ಹೊರತಾದ ಈ ಸಮಾಜ ಸೇವಾ ಸಂಸ್ಥೆ ತನ್ನ ತಾಣದಲ್ಲಿ ವಾಣಿಜ್ಯ ಸಂಬಂಧಿ ಜಾಹಿರಾತುಗಳನ್ನು ಯಾವುದೇ ಕಾರಣಕ್ಕೂ ಪ್ರಕಟಿಸುತ್ತಿಲ್ಲ. ಯಾವುದೇ ವಿಚಾರಕ್ಕೂ ಶುಲ್ಕವನ್ನು ನೀಡದೆ ಉಚಿತಚಾಗಿ ಈ ವಿಶ್ವಕೋಶದಿಂದ ಹೇಗೆ ಮಾಹಿತಿಯನ್ನು ಪಡೆಯಬಹುದೋ ಹಾಗೆಯೇ ಈ ಜ್ಞಾನಸಾಗರಕ್ಕೆ ಲೇಖಕರೂ ತಮ್ಮ ತಮ್ಮ ಲೇಖನವನ್ನು ಕೊಡುಗೆಯಾಗಿ ನೀಡಬೇಕೆಂಬುದು ವಿಕಿಪೀಡಿಯಾ ಸಂಸ್ಥೆಯ ಆಶಯ.

ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಕನ್ನಡ ವಿಕಿಪೀಡಿಯ ಈ ವರ್ಷ ತನ್ನ ದಶಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಯೋಜನೆಯನ್ನು ರೂಪಿಸಿಕೊಂಡಿದೆ. ಆ ಪ್ರಯುಕ್ತವಾಗಿ ಈ ವರ್ಷಪೂರ್ತಿ ಕನ್ನಡ ವಿಕಿಪೀಡಿಯ ಬಳಗ ತನ್ನ ಬರಹಗಾರರನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹಲವೆಡೆಗಳಲ್ಲಿ ಕಾರ್ಯಾಗಾರ ಹಾಗು ವಿಶೇಷ ಕಾರ್ಯಕ್ರಮಗಳನ್ನೂ ಸಂವಾದಗಳನ್ನು ಏರ್ಪಡಿಸುವ ಮೂಲಕ ನಾಡಿನಲ್ಲಿ ಜಾಗೃತಿ ಮೂಡಿಸುತ್ತಿದೆ. ಕನ್ನಡ ತಂತ್ರಜ್ಞಾನವನ್ನು ಶ್ರೀಮಂತಗೊಳಿಸಲು ವಿಕಿಪೀಡಿಯಾ ಬಳಗ ಹಗಲಿರುಳು ಶ್ರಮಿಸುತ್ತಿರುವಾಗ ನಾವೂ ಇಂತಹ ಸಮಾಜಸೇವೆಯಲ್ಲಿ ಕನ್ನಡನುಡಿಸೇವೆಯಲ್ಲಿ ಭಾಗಿಯಾಗಬಹುದಲ್ಲವೇ? ಅಂತರಜಾಲದಲ್ಲಿ ನಮ್ಮ ನಾಡುನುಡಿಗೆ ಕನ್ನಡಿ ಹಿಡಿದಂತಿರುವ ಕನ್ನಡ ವಿಶ್ವಕೋಶವನ್ನು ಸಮೃದ್ಧಿಗೊಳಿಸುವ ಸವಾಲು ಕನ್ನಡಿಗರಾದ ನಮ್ಮ ನಿಮ್ಮೆಲ್ಲರ ಮೇಲಿದೆ ಅಲ್ಲವೇ? ಹಾಗಾಗಿ ನಾವೂ ವಿಕಿಪೀಡಿಯ ವಿಶ್ವಕೋಶಕ್ಕೆ ಕೊಡುಗೆ ಸಲ್ಲಿಸೋಣ. ಜ್ಞಾನಸಿಂಧುವಿಗೆ ನಮ್ಮ ಬಿಂದುವೂ ಸೇರುವಂತಾಗಲಿ….ಕನ್ನಡ ವಿಕಿಪೀಡಿಯ ಸಮೃದ್ಧಗೊಳಿಸುವ ಜವಾಬ್ದಾರಿ ಕನ್ನಡಿಗರದ್ದೇ…

ಚಿನ್ಮಯ ಎಂ.ರಾವ್ ಹೊನಗೋಡು
( ಲೇಖಕರು ಸಂಗೀತ ನಿರ್ದೇಶಕರು ಹಾಗು ಹವ್ಯಾಸಿ ಪತ್ರಕರ್ತರು )

16-6-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.