ಅಂಕಣನೂರಾರು ಭಾವ

ಮತ್ತೆ ಮಗುವಾದಳು ನನ್ನಮ್ಮ

-ವಿಂಧ್ಯಾ.ಚೀಳಂಗಿ

ಅಮ್ಮನ ಬಗ್ಗೆ ಅನಿಸಿಕೆ ಬರಿಯುವುದಕ್ಕಿಂತ, ಅವಳು ಎದುರಿಸಿದ ಅನುಭವ ಬರೆಯುವುದು ಸೂಕ್ತವೆನಿಸಿ ಬರೆದಿದ್ದೇನೆ

ಅಮ್ಮಾ : ನಮ್ಮನ್ನು ಅತಿ ಹೆಚ್ಚು ಪ್ರೀತಿಸುವಳು, ಆದೇಶಿಸುವಳು, ಪೋಷಿಸುವಳು, ನಂಬಿಕೆಯ ಸ್ನೇಹಿತೆ, ಮಕ್ಕಳ, ಸಂಸಾರದ ಸಂತೋಷಕ್ಕಾಗಿ ತನ್ನನ್ನು ಸಂಪೂರ್ಣವಾಗಿ ಈಯುವವಳು.

ನನ್ನ ಅಮ್ಮ ತುಂಬಾ ಸುಂದರ, ಅವಳ ನಗು, ಮಾತು, ನಡೆ ಎಲ್ಲವೂ ಅತಿ ಮಧುರ. ಮುಗ್ಧ,ಸ್ವಚ್ಛ,ನಿಷ್ಕಲ್ಮಷ ಮನಸ್ಸು ಅವಳದ್ದು. ಬುಧ್ಧ್ದಿವಂತೆ, ಎಲ್ಲಾ ವಿಷಯವನ್ನು ಅರಿತು ತಿಳಿದು ಕೊಳ್ಳುವ ಸಾಮರ್ಥ್ಯ ಅವಳದಾಗಿತ್ತು, ಮೃದು ಸ್ವಭಾವ, ಹಾಸ್ಯ ಪ್ರಜ್ಞೆ ಎಲ್ಲವೂ ಇತ್ತು.

ನಾನು ಅವಳಿಗೆ ಪುಟ್ಟಿ, ನನಗೆ ಅವಳು ಪುಟ್ಟಮ್ಮ. ಅಮ್ಮಾ, ನನಗೆ ಯಾಕೆ ಪುಟ್ಟಿ ಅಂತಿಯಾ ?? ಎಂದು ಕೇಳಿದರೆ ಆಕೆ, ನನ್ನ ಕೆಲಸದಲ್ಲಿ ಪುಟ್ಟ ಪುಟ್ಟ ಸಹಾಯ ಮಾಡಲು ಪುಟ್ಟಿ ಅಂತೀನಿ ಅನ್ನುತಿದ್ದಳು. ಈಗ ಅವಳ ಮಾತು, ನಗು ನೆನಪಷ್ಟೇ!! ಆ ನೆನಪೇ ಇಲ್ಲಿ ಮಾತಾಗಿ ಬರೆದಿದ್ದೀನಿ.

ಕ್ಯಾನ್ಸರ್ ಎಂಬ ಕಾಯಿಲೆ ಅವಳನ್ನು ಆಳಿತು. ಮನಸ್ಸಲ್ಲಿ ಭಯ ಇದ್ದರು ಏಂದೂ ಮಕ್ಕಳ ಮುಂದೆ ತೋರಿಸಲಿಲ್ಲ, ಅಪ್ಪನ ಧೈರ್ಯದ ಮಾತು ,ಸಾಂತ್ವನ ಅವಳಲ್ಲಿ ಹೆಚ್ಚಿನ ಶಕ್ತಿ ತುಂಬಿತು. ೨೧ ವರ್ಷ ಆ ಕಾಯಿಲೆಯನ್ನು ಎದುರಿಸಿ ಬದುಕಿದಳು. ತೀವ್ರ ಥೈರಾಯ್ಡ್ ಸಮಸ್ಯೆ ಕ್ಯಾನ್ಸರ್ ಆಗಿ ಪರಿವರ್ತಿಸಿತ್ತು. ಹೆಸರು ಕೇಳಿದ ಕೂಡಲೆ ಹೆದರಿ, ಮಕ್ಕಳು ಇನ್ನೂ ಸಣ್ಣವರು, ಬನ್ನಿ ವಾಪಸ್ಸು ಊರಿಗೆ ಹೋಗೋಣ ಎಂದು ಅಪ್ಪನನ್ನು ಕರೆತಂದಳು. ಅಪ್ಪ ಅವಳಿಗೆ ಧೈರ್ಯ ತುಂಬಿ, ಆತ್ಮ ವಿಶ್ವಾಸ ಬೆಳೆಸಿ, ಚಿಕಿತ್ಸೆ ತೆಗೆದು ಕೊಳ್ಳಲು ಸಿದ್ಧ ಪಡಿಸಿದರು. ನಾನು ಅಣ್ಣ ಇನ್ನೂ ಚಿಕ್ಕವರು. ಅಮ್ಮನಿಗೆ ಏನು ತೊಂದರೆ ಅನ್ನುವುದೆ ಗೊತ್ತಿರಲಿಲ್ಲ. ಮಣಿಪಾಲಿನಲ್ಲಿ ಚಿಕಿತ್ಸೆ ಪಡೆದರು.
ಬೆಳಗಿನ ಜಾವ ಬೇಗ ಎದ್ದು ಮಣಿಪಾಲ್‌ಗೆ ಹೊರಡುತಿದ್ದರು. ಪುಟ್ಟಿ ಬರ್‍ತೀಯಾ ಅಂತ ಕೇಳಿದಾಗ ಐಸ್‌ಕ್ರೀಮ್ ತಿನ್ನುವ ಆಸೆಯಾದರೆ ಹೋಗುತ್ತಿದ್ದೆ, ವಿಧ ವಿಧವಾದ ಐಸ್‌ಕ್ರೀಮ್ ಅಲ್ಲಿ ಸಿಗುತಿತ್ತು. ಚಿಕ್ಕ ಹುಡುಗಿ ನಾನು ಆಗ, ಐಸ್‌ಕ್ರೀಮ್ ತಿನ್ನೋಕೆ ಮಣಿಪಾಲ್‌ಗೆ ಹೋಗ್ತೀವಿ ಅಂದುಕೊಂಡಿದ್ದೆ. ಅಮ್ಮ, ನಾನು ಬರಲ್ಲಾ ಅಂದ್ರೆ ೫೦ರೂಪಾಯಿ ಕೊಟ್ಟು ಏನು ಬೇಕೋ ತೆಗೆದುಕೋ , ಅಜ್ಜಿನ ಗೋಳಾಯಿಸಬೇಡ ಅಂತ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ ಮಾತು ಇನ್ನೂ ಕಿವಿಯಲ್ಲಿದೆ.

ಚಿಕಿತ್ಸೆಯ ನಂತರ ವೈದ್ಯರು, ಇನ್ನು ಇವರು ೭ ವರ್ಷ ಬದುಕಬಹುದು, ಅಕಸ್ಮಾತ್ ೭ ವರ್ಷ ದಾಟಿ ಬದುಕಿದರೆ ಕ್ಯಾನ್ಸರ್ ಗುಣವಾಗಿದೆ ಎಂದು ತಿಳಿಯಿರಿ, ಆದರೆ ಮೈ ಮೇಲೆ ಯಾವುದೇ ರೀತಿಯ ಗಂಟು ಬರದಂತೆ, ಬಂದರೂ ತಕ್ಷಣ ಎಚ್ಚರವಹಿಸಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದರು.
ನನಗೇನಾದರು ಆದರೇ, ಮಕ್ಕಳು ಗಂಡನ ಸ್ಥಿತಿ ಏನು ಅನ್ನುವುದೇ ಅವಳ ಚಿಂತೆ. ದೇವರ ಹತ್ತಿರ – ದೇವರೇ ಮಕ್ಕಳು ಇನ್ನೂ ಸಣ್ಣವರು , ಅವರು ಬೆಳೆದು ದೊಡ್ಡವರಾಗುವ ತನಕ ಅಂದರೆ ಒಂದು ೨೦ವರ್ಷ ಆಯಸ್ಸು ಕೊಡು ಅಂತ ಅಂದು ಪ್ರಾರ್ಥಿಸಿದ ಅಂತರಂಗದ ಮಾತು ಸತ್ಯವಾಯಿತು. ನಾವು ಬೆಳೆದು ದೊಡ್ಡವರಾದೆವು. ಅಮ್ಮ ನಮ್ಮನ್ನು ಬಿಟ್ಟುಹೋದಳು. ದೊಡ್ಡವರಾದ್ರು ಸಣ್ಣವರಾದ್ರು ಆ ನೋವು ಅಳಿಯದು. ೨೦ವರ್ಷ ಅವಳಿಗೆ ಹೆಚ್ಚಿನ ಆಯಸ್ಸು ಕೊಟ್ಟು, ತಾಯಿಯ ಪ್ರೀತಿ, ವಾತ್ಸಲ್ಯ ಪಡೆಯಲು ಅವಕಾಶ ಕೊಟ್ಟ ಪರೋಕ್ಷ ದೇವರಿಗೂ , ಅಂತಹ ಪರಿಸ್ಥಿತಿಯಲ್ಲಿ ತನಗೂ ಧೈರ್ಯ ತುಂಬಿ ಕೊಳ್ಳುತ್ತಾ ನಮಗೆ ಧೈರ್ಯ ಸ್ಫೂರ್ತಿ ತುಂಬಿದ ಪ್ರತ್ಯಕ್ಷ ದೇವರು ಅಮ್ಮನಿಗೊಂದು ಧನ್ಯವಾದ.!!!.ಇವತ್ತಿಗೂ ಸಹ ಅವಳು ಅಗಲಿದ್ದಾಳೆಂದು ಅನಿಸುವುದಿಲ್ಲ. ಎಲ್ಲೋ ಹೋಗಿದ್ದಾಳೆ ಬರುತ್ತಾಳೆಂದೇ ಮನಸ್ಸು ಹೇಳುವುದು.

ನಂತರ ವೈದ್ಯರ ಸಲಹೆಯಂತೆ ತ್ರೈಮಾಸಿಕ ತಪಾಸಣೆ ಮಾಡಿಸುತಾ ೧೫ ವರ್ಷಗಳ ಸುಂದರ ಜೀವನ ಕಳೆದಳು. ಆ ೧೫ ವರ್ಷದಲ್ಲಿ ಅವಳಿಗೆ ಅಂತಹ ಕಾಯಿಲೆ ಇದೆಯೆಂದು ಯಾರು ಹೇಳಲು ಆಗುತ್ತಿರಲಿಲ್ಲ. ಅಷ್ಟು ಚೆನ್ನಾಗಿದ್ದಳು. ಹಾಡುವುದು, ಹೊಸ ಹೊಸ ಭಾವಗೀತೆ, ದೇವರನಾಮ ಕಲೆಯುವುದು, ಡೈರಿ ಬರೆಯುವುದು, ಪುಸ್ತಕ ಓದುವುದು, ಕರಕುಶಲ ವಸ್ತುಗಳನ್ನು ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ, ಇನ್ನಿತರ ಹವ್ಯಾಸದೊಂದಿಗೆ ಮನೆ ನಡೆಸುತ್ತಾ ೧೫ ವರ್ಷ ಕಳೆದಳು. ೨೦೦೭ ಇಸವಿ , ಕ್ಯಾನ್ಸರ್ ಇದೆ ಎಂದೇ ಮರೆತಿದ್ದ ಅವಳಿಗೆ ಬಲಗಾಲಿನ ತೊಡೆ ಮತ್ತು ಸೊಂಟದ ಸಂಧಿಯಲ್ಲಿ ನೋವು ಕಾಣಿಸಿತು. ಏನು ಎಂದು ವೈದ್ಯರಲ್ಲಿ ತೋರಿಸಿದಾಗ , ಕ್ಯಾನ್ಸರ್ ಎಂಬ ಮಾರಿ ಆ ದೇಹ ಬಿಟ್ಟು ಹೋಗಿಲ್ಲ, ಬೇರೆ ರೀತಿಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅಮ್ಮನಿಗೆ ಆಗ ನಾನು ದೇವರ ಹತ್ತಿರ ಕೇಳಿದ ಕಾಲ ಹತ್ತಿರ ಬರುತ್ತಿದೆಯೆಂದು ನೆನಪಾಯಿತು.
ರಕ್ತನಾಳದ ಮೇಲೆ ಆಗಿದ್ದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದರು. ಎಡಗಾಲಿನ ನರ ತೆಗೆದು ಬಲಗಾಲಿಗೆ ಹಾಕಿದರು. ನಂತರ ವೈದ್ಯರು ಅವರಿಗೆ ಕಾಲು ಮುಂಚಿನ ಹಾಗೆ ಓಡಾಡಲಿಕ್ಕೆ ಬರಲೂ ಬಹುದು ಬರದೆಯೇ ಇರಬಹುದೆಂದು ಹೇಳಿದರು, ಇದನ್ನು ಕೇಳಿ ಎಲ್ಲರಿಗೂ ಭಯ, ಅವಳೂ ಹೆದರಿದಳು, ಭಯದಿಂದಲೇ ಎರಡನೇ ದಿನವೇ ನಿಲ್ಲಲು ಪ್ರಯತ್ನಿಸಿದಳು, ಆತ್ಮಸ್ಥೈರ್ಯದಿಂದ ೩ನೇ ದಿನವೇ ಎದ್ದುನಿಂತು ಹೆಜ್ಜೆಯಿಟ್ಟಳು. ಸಣ್ಣ ಮಕ್ಕಳು ನಡೆಯಲು ಕಲಿಯುವಾಗ ಹೇಗೆ ಮಾಡುತ್ತಾರೋ ಹಾಗೆ. ಮನಸಲ್ಲಿ ಒಂದು ಕಡೆ ಸಂತಸ ಅವಳಲ್ಲಿ ನಾನು ನಡೆಯುತ್ತೇನೆ ಎಂದು. ಆ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ.

ಮೂರು ತಿಂಗಳ ನಂತರ ರೇಡಿಯೇಷನ್, ಕಿಮೋಥೆರಫೀ ಚಿಕಿತ್ಸೆ ಕೊಡಬೇಕೆಂದಿದ್ದರು. ಮನೆಯಲ್ಲಿಯೇ ಚೇತರಿಸಿಕೋಳ್ಳುತಿದ್ದ ಅವಳಿಗೆ ಗ್ರಹಚಾರಕೆಟ್ಟಿತ್ತು, ಕಾಲು ಜಾರಿ ಬಿದ್ದು ಬಲಗಾಲಿನ ಮೂಳೆ ಮುರಿಯಿತು.
ವಿಧಿ, ತಪ್ಪಿಸಿಕೊಂಡರೆ ಬಿಡುವುದಿಲ್ಲ ಅನ್ನುವುದಕ್ಕೆ ಸರಿಯಾಯಿತು. ಮತ್ತೆ ೬ ತಿಂಗಳು ಬಿಟ್ಟು ಚಿಕಿತ್ಸೆಗೆ ಹೋದೆವು , ಅಷ್ಟರಲ್ಲಿ ಅದು ಶ್ವಾಸಕೋಶದ ವರೆಗೆ ಹರಡಿತ್ತು. ರೇಡಿಯೇಷನ್, ಕಿಮೋಥೆರಫೀ ಕೊಟ್ಟು ಹರಡುವುದನ್ನು ತಡೆಗಟ್ಟಿದರು.
ವೈದ್ಯರು ಹೆಚ್ಚು ಅಂದರೆ ೨ ವರ್ಷ ಬದುಕಬಹುದೆಂದು ಹೇಳಿದರು. ಇಷ್ಟೆಲ್ಲಾ ಆದ ನಂತರವೂ ಚೇತರಿಸಿಕೊಂಡು ಚೆನ್ನಾಗಿ ಆಗಿದ್ದರು. ಧೈರ್ಯ ಮಾತ್ರಗೆಡಲಿಲ್ಲ. ಸುಟ್ಟ ಗಾಯದ ಕಲೆ, ತಲೆ ಕೂದಲು ಉದರುವುದು ಎಲ್ಲವನ್ನು ನೋಡಿಕೊಂಡು ತನಗೆ ತಾನೆ ಹಾಸ್ಯ ಮಾಡಿಕೊಳ್ಳುತ್ತಾ, ಮನೆಕೆಲಸವೆಲ್ಲ ಮಾಡಿಕೊಂಡು ಚೆನ್ನಾಗಿದ್ದಳು.

ಒಂದು ಸಾರಿ ದೇಹದಲ್ಲಿ ಕ್ಯಾನ್ಸರ್ ಬಂದಿತೆಂದರೆ ಅದು ಅವರನ್ನು ಬಲಿ ತೆಗೆದುಕೊಂಡು ಹೋಗೇ ಹೋಗುತ್ತದೆ ಎಂಬಂತೆ, ಒಂದು ವರ್ಷದ ನಂತರ ಮೆದುಳಿನಲ್ಲಿ ಟ್ಯೂಮರ್ ಕಾಣಿಸಿತು. ದೇವರೇ ಇದೆಂತಾ ಪರೀಕ್ಷೆ ? ಪದೇ ಪದೇ ಅವಳೇನು ತಪ್ಪು ಮಾಡಿದ್ದಾಳೆ ಎಂದು ಮನೆಯವರಿಗೆಲ್ಲಾ ಬೇಸರವಾಯಿತು. ಆಗಲೂ ಸಹ ತನಗೇನಾಗಿದೆಯೆಂದು ಅರಿವಿಲ್ಲದೆ ಕುಳಿತ್ತಿದ್ದಳು. ನಾವು ವಿಷಯ ತಿಳಿಸುವುದು ಹೇಗೆ ಎಂದು ಪೇಚಾಡುತಿದ್ದೆವು. ಡಾಕ್ಟರ್ ಬಂದು ಸಮಾಧಾನವಾಗಿ ಹೇಳುತ್ತಾರೆಂದು ನಂಬಿದ್ದೆವು. ಆದರೆ ಅವರು ಎಂಥಾ ವ್ಯಕ್ತಿ ಅಂದರೆ, ನಿಮಗೆ Brain Tumor ಆಗಿದೆ, ಹೆಚ್ಚು ದಿನ ಬದುಕುವುದಿಲ್ಲ , ಧೈರ್ಯ ತೆಗೆದುಕೊಳ್ಳಿ ಎಂದು ಅಮ್ಮನ ಮುಂದೆ ಹೇಳಿ ಬಿಟ್ಟರು. ಅವಳು ಹೆದರಿ ಅಳುವುದಕ್ಕಾರಂಭಿಸಿದಳು. ವೈದ್ಯರು ರೋಗಿಗೆ ವಿಷಯ ತಡೆದು ಕೊಳ್ಳುವ ಶಕ್ತಿ ಇದೆಯೇ ಎಂದು ಯೋಚಿಸಿ ಹೇಳುವುದು ಒಳ್ಳೆಯದು. ರೋಗಿಗೇ ಅಂತಃ ವಿಷಯವನ್ನು ನೇರವಾಗಿ ತಿಳಿಸದೆ, ಅವರ ಸಂಬಂಧಿಕರ ಪೈಕಿ ಹತ್ತಿರದವರಿಗೆ ಸಮಾಧಾನ ಆತ್ಮವಿಶ್ವಾಸ ತುಂಬಲು ಹೇಳಿ ಒಳ್ಳೆಯ ಡಾಕ್ಟರ್ ಹತ್ತಿರ ಕೌನ್ಸಿಲಿಂಗ್ ಮಾಡಿಸಿ ಮಾನಸಿಕವಾಗಿ ಸಿದ್ಧತೆ ಪಡೆಸಬೇಕು. Positive Attitude is Very Important for the Whole Family, ನಾವೇ ಹೆದರಿದರೆ ರೋಗಿಯು ಇನ್ನೂ ಹೆದರುತ್ತಾರೆ.
ಇದಾದ ನಂತರ ದೇಹದ ತೂಕವು ಕುಸಿಯುತ್ತಾ ಹೋಯಿತು. ವೈದ್ಯರು ಅವರೇನು ಇಷ್ಟ ಪಡುತ್ತಾರೋ ತಿನ್ನಲು ಕೊಡಿ ಎಂದಿದ್ದರು.. ಮೀನಾಕ್ಷಿ ಭವನದ ದೋಸೆ ಬಹಳ ಇಷ್ಟ, ಹೋಗಿ ತಿಂದಿದ್ದೆವು. ತಕ್ಕ ಮಟ್ಟಿಗೆ ಓಡಾಡಿ ಕೊಂಡು ಚೆನ್ನಾಗಿದ್ದಳು.

ಮುಂದಿನ ವರ್ಷ , ರೇಡಿಯೇಷನ್‌ಗೆ ಒಳಗಾದಾಗ ಸುಟ್ಟ ಜೀವಕೋಶಗಳೆಲ್ಲ್ಲಾ ಸೇರಿಕೊಂಡು, ತೊಡೆಯಭಾಗದಲ್ಲಿ ಕೀವಾಗಿ ವಿಪರೀತ ನೋವನುಭವಿಸಿದಳು. ಎಲ್ಲಾ ಚಿಕಿತ್ಸೆಯು ಮಣಿಪಾಲ್‌ನಲ್ಲಿಯೇ ಆಗಿದ್ದರಿಂದ ಅಲ್ಲಿಗೆ ಹೋದರೆ ಅಮ್ಮನಿಗೆ ಧೈರ್ಯ, ಮತ್ತೆ ಅಲ್ಲಿಗೆ ಕರೆದೊಯ್ದೆವು. ಅಲ್ಲಿಯ ವೈದ್ಯರಿಗೆ ಆಶ್ಚರ್ಯ ನಾನು ಹೇಳಿದ್ದು ೨ ವರ್ಷ, ಆದರೆ ಇವರು ಇನ್ನೂ ಬದಿಕಿದ್ದಾರೆಂದು. “God has given her a lot of chance to survive as a gift for her good nature” ಅಂದರು. ಒಂದೇ ದೇಹದಲ್ಲಿ ೩ ಬೇರೆ ಬೇರೆ ರೀತಿಯ ಕ್ಯಾನ್ಸರ್, ನಂಬಲು ಅಸಾಧ್ಯ ಎನ್ನುತ್ತಿದ್ದರು. ಮತ್ತೆ ಮನಿಪಾಲ್‌ಗೆ ಬರುವ ಅವಶ್ಯಕತೆ ಇಲ್ಲ ,ಎಷ್ಟು ದಿವಸ ಇರುತ್ತಾರೋ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿಕಳುಹಿಸಿದರು. ಅಮ್ಮನನ್ನು ಹೇಗೆ ನೋಡಿಕೊಳ್ಳಬೇಕು, ಮಾತ್ರೆ ಯಾವುದು ಎಲ್ಲಾ ಅಣ್ಣ ಹೇಳಿಕೊಟ್ಟ, ಹಾಗೆ ನೋಡಿಕೊಳ್ಳಲು ಆರಂಭಿಸಿದೆ. ಅಂತಹಾ ಸಮಯದಲ್ಲೂ ಮಗನ ಮದುವೆಯ ಆಸೆ ಅವಳದಾಗಿತ್ತು, ಮಾಡಿ ನೋಡಿ ಸಂತೋಷ ಪಟ್ಟಳು.
ಯಾರಾದರು ಮಗಳ ಮದುವೆ ಮೊದಲು ಮಾಡಬೇಕಿತ್ತು ಅಂದರೆ, ಪುಟ್ಟಿ ಮದುವೆ ಆದರೆ ನನ್ನ ನೋಡಿಕೊಳ್ಳೊರು ಯಾರು ಅನ್ನೊ ಮಾತನ್ನು ಮುಗ್ಧವಾಗಿ ಹೇಳುತ್ತಿದ್ದಳು. ಹೀಗೆ ದಿನಕಳೆದಂತೆ ದೇಹದ ತೂಕ ಕುಗ್ಗುತ್ತಾ ಹೋಯಿತು. ಕೊನೆಯ ೫-೬ ತಿಂಗಳು ತೀರಾ ಅಸ್ವಸ್ಥಳಾಗಿ ಪುಟ್ಟ ಮಗುವಿನ ಹಾಗೆ ಮತ್ತೆ ಮಗುವಾಗಿ ಬಿಟ್ಟಳು. ತಾಯಿಯನ್ನು ಮಗುವಾಗಿ ನೋಡಿಕೊಳ್ಳುವುದು ಅದೃಷ್ಟವೇ ಸರಿ.
ಸಂಪೂರ್ಣ ಚಿಕಿತ್ಸೆಗೆ ಬಲವಾದ ಕೆ.ಪಿ.ಸಿಗೆ , ಅಮ್ಮ ಮತ್ತು ನಮ್ಮೆಲ್ಲರ ಧನ್ಯವಾದ .

ಮನಸ್ಸು ಮಗುವಿನಂತಾಗಿ ಆಡಿದ ಆ ಕೊನೆಯ ದಿನಗಳ ಮುಗ್ಧ ಮಾತನ್ನು ಹೇಳುತ್ತೇನೆ.

ಮಾತುಗಳು ಅಷ್ಟು ಸ್ಪಷ್ಟವಾಗಿರುತ್ತಿರಲಲ್ಲ. ಪುಟ್ಟೀ, ಅಮ್ಮ ಏನು ಹೇಳುತ್ತಾಳೆ. . . ಅರ್ಥವಾಗೊಲ್ಲ ! ಕೇಳು ಬಾ ಅಂದಾಗ, ಅರ್ಥವಾಗುವುದು ಕಷ್ಟವಾದರೂ, ಸಹ್ನೆಯ ಮೂಲಕ ಅವಳು ಹೇಳುವುದನ್ನು ಅರ್ಥಮಾಡಿಕೊಳ್ಳುತ್ತಿದ್ದೆ. ಆಗ ಅನ್ನಿಸುತ್ತಿತ್ತು, ನಾನು ಚಿಕ್ಕ ಮಗುವಾದಾಗ ನನ್ನ ಮಾತು , ಅಳು , ನಗು ತಾಯಿಗೆ ಬಿಟ್ಟರೆ ಯಾರಿಗೂ ಅರ್ಥವಾಗುತ್ತಿರಲಿಲ್ಲವೊ, ಹಾಗೆ …
ನೋವನ್ನು ಹೇಳಿಕೊಳ್ಳಲಾಗದೆ ಯಾವಾಗಲೂ ಅಳುತ್ತಿದ್ದಳು. ಆದರೂ, ಡಾಕ್ಟರ್ ಹಾಗೂ ನನ್ನ ಸಂಗೀತ ಮೇಷ್ಟ್ರು ಮನೆಗೆ ಬಂದರೆ, ನಕ್ಕು ನಮಸ್ಕಾರ ಮಾಡುತ್ತಿದ್ದಳು. ಅಂತ: ಸಂಸ್ಕಾರ ಅವಳದು.
ಪುಟ್ಟೀ, ಒಬ್ಬಳೇ ಮಲಗಲಿಕ್ಕೆ ಭಯವಾಗುತ್ತೆ, ಪಕ್ಕದಲ್ಲೇ ಮಲಗಿಕೋ, ನನ್ನನ್ನು ಬಿಟ್ಟು ಎಲ್ಲೂ ಹೋಗಬೇಡ. ಅವಳಿಗೆ ಗೊತ್ತಿಲ್ಲ, ಅವಳು ನಮ್ಮನ್ನು ಬಿಟ್ಟು ಹೋಗುವ ಸಮಯ ಬಂದಿದೆ ಎಂದು ..
ಕೊನೆಯ ದಿನಗಳಲ್ಲಿ ಕಣ್ಣಿಗೆ ಏನೇನೋ ಕಂಡಂತೆ ಭಾಸವಾಗುತ್ತದೆ. ಯಾವಾಗಲೂ ಕಂಬಳಿ ಹುಳು ಇದೆ ಎಂದು ಹೆದರುತ್ತಿದ್ದಳು. ಮಗುವಿನಂತೆ ಊಟ ಮಾಡಲು ರಗಳೆ ಮಾಡುತ್ತಿದ್ದಳು. ಊಟ ಮಾಡಿಸಿ ಮಾತ್ರೆ ಕೊಡಲು ೨ ಗಂಟೆ ಬೇಕಾಗುತ್ತಿತ್ತು.
ಡಾಕ್ಟರ್ ಮನೆಗೆ ಬಂದಾಗ ಖುಷಿಯಿಂದ ನಗುತ್ತಿದ್ದಳು. ಅಮ್ಮಾ ನಮ್ಮನ್ನು ನೋಡಿ ನಗೋಲ್ಲ ಡಾಕ್ಟರ್ ಬಂದರೆ ನಗುತ್ತೀಯ ಅಂದರೆ, ನೀನೇನು ಡಾಕ್ಟ್ರಾ …..?? ಅಂತ ಹಾಸ್ಯ ಮಾಡುತ್ತಿದ್ದಳು.
ಹೀಗೆ ಮಧ್ಯದಲ್ಲಿ ಒಂದು ಬಾರಿ ಆಸ್ಪತ್ರೆಗೆ ಸೇರಿದಾಗ, ಮನಗೆ ಹೋಗಬೇಕೆಂದು ಹಟ. ಇಲ್ಲ ಅಂದರೆ, ಮಂಡಕ್ಕಿ ಖಾರ ತಂದುಕೊಡು ಅನ್ನುತ್ತಿದ್ದಳು. ಅದೇ ಸಮಯದಲ್ಲಿ ಪುಟ್ಟೀ, ನಿಮ್ಮಪ್ಪನ ಹತ್ತಿರ ದುಡ್ಡು ಇದೆಯೋ ಇಲ್ಲವೋ, ನಮ್ಮಿಬ್ಬರನ್ನ ಬಿಡಿಸಿಕೊಂಡು ಹೋಗಲಿಕ್ಕೆ … ಅನ್ನುತ್ತಿದ್ದಳು.
ಕಾಫಿ ಅವಳ ಪಾಲಿಗೆ ಅಮೃತವಾಗಿತ್ತು. ಕಾಫಿ ಕೊಡ್ತೀನಿ ಅಂದರೆ ಸುಮ್ಮನಾಗುತ್ತಿದ್ದಳು. ಮಧ್ಯ ರಾತ್ರಿಯೆಲ್ಲ ಅಪ್ಪ ಅಮ್ಮನ ಜೊತೆ ಕಾಫಿ ಕುಡಿದಿದ್ದೀನಿ, ಆ ಕ್ಷಣಗಳು ಖುಷಿ ಕೊಡುತ್ತದೆ. ರಾತ್ರಿ ಇಡೀ ಅಳುತ್ತಿದ್ದಳು, ಬೆಳಗ್ಗೆ ನಿದ್ದೆ ಮಕ್ಕಳ ಹಾಗೆ.
ಆವಳ ಕೊನೆಯ ಮಾತುಗಳು ನನಗೆ ಧೈರ್ಯ ಹೇಳುವುದೇ ಆಗಿತ್ತು. ಅಮ್ಮಾ ನನ್ನನ್ನು ಬಿಟ್ಟು ಹೋಗಬೇಡ ಅಂದಾಗ, ಹೆದರಬೇಡ, ನಿನ್ನ ಜೊತೆ ಅಪ್ಪ ಇರುತ್ತ್ದಾರೆ ಎಂದು ಅವಳ ಅಂತಹಾ ಸ್ಥಿತಿಯಲ್ಲೂ ಧೈರ್ಯ ತುಂಬುವ ಮಾತನ್ನಾಡುತ್ತಿದ್ದಳು. ಇದೇ ನಿಜವಾದ ತಾಯಿಯ ಮನಸ್ಸು. ತನ್ನ ನೋವು, ಕಷ್ಟದಲ್ಲೂ ಮಕ್ಕಳಿಗೆ ಧೈರ್ಯ, ಸಾಂತ್ವನ ಹೇಳುತ್ತಾಳೆ.
ಹೀಗೆ ದಿನ ಕಳೆದಂತೆ, ಕಡೆಯ ದಿನ ಬಂದೇಬಿಟ್ಟಿತು. ನಮ್ಮನ್ನೆಲ್ಲಾ ಬಿಟ್ಟು ಹೋದಳು..

ಜೀವನದಲ್ಲಿ ಸಂತೋಷದಿಂದಿರಬೇಕಾದ ಸಮಯದಲ್ಲಿ, ಕಾಯಿಲೆಯನ್ನೇ ತುಂಬಿಕೊಂಡು, ಕಷ್ಟಪಟ್ಟ ಅವಳು, ಅವಳ ಮುಂದಿನ ಜನ್ಮದಲ್ಲಿ ನನ್ನ ಮಗುವಾಗಿ ಹುಟ್ಟಿ ಬರಲಿ..
ಕುಡಿತ , ಧೂಮಪಾನಗಳಂತಹ ದುಶ್ಚಟದಿಂದ ಕ್ಯಾನ್ಸರ್ ಬರತ್ತೇ ಎನ್ನುವುದು ನಾನು ನಮ್ಮ ಅಮ್ಮನ ವಿಚಾರದಲ್ಲಿ ನಂಬುವುದಿಲ್ಲ.

ಸಾವು ಎನ್ನುವುದು ಎಲ್ಲರಿಗೂ ಖಚಿತ. ಆದರೆ ಬೇರೆ ಬೇರೆ ರೀತಿಯಲ್ಲಿ ಬರುತ್ತದೆ. ಅದಕ್ಕೆ ಧೃತಿಗೆಡಬಾರದು. ಕ್ಯಾನ್ಸರ್ ಎಂಬ ಕಾಯಿಲೆ ಬಂದೊಡನೆ, ಸಾಯುತ್ತೇವೆ ಎಂಬ ಭಯ ಬೇಡ. ಭಯದಿಂದಲೇ ಅರ್ಧ ಜೀವ ಸತ್ತು ಹೋಗುತ್ತದೆ. ಆಯಸ್ಸು ತೀರಿದ್ದರೆ, ಕ್ಯಾನ್ಸರ್ ಎಂಬ ಕಾಯಿಲೆಯೇ ಸಾವನ್ನಪ್ಪಿಸಬಹುದು, ಅಥವಾ ಕ್ಯಾನ್ಸರ್ ನಿಂದ ಗುಣಮುಖರಾಗಿಯೂ, ಬೇರೆ ರೀತಿಯಲ್ಲಿ ಸಾವು ಬರಬಹುದು. ನಾವು ಎಲ್ಲೇ ಅಡಗಿಕೊಂಡರೂ, ತನ್ನ ಕೆಲಸ, ಕರ್ತವ್ಯವನ್ನು, ಚಾಚೂ ತಪ್ಪದೆ ಮಾಡಿಯೇ ತೀರುವುದು ಸಾವು.
ಈ ಕಾಯಿಲೇ ಇದ್ದವರು, ಮುಜುಗರ ಮಾಡಿಕೊಳ್ಳದೇ, ಎಲ್ಲರ ಜೊತೆ ಸಾಮಾನ್ಯರಂತೆ ವರ್ತಿಸಿ, ಯಾರೇನೆಂದುಕೊಳ್ಳುತ್ತಾರೆನ್ನುವ ಭಯ ಬಿಡಿ, ಅರ್ಧ ಕಾಯಿಲೆ ವಾಸಿಯಾಗುತ್ತದೆ. ಕೂದಲು ಇರುವುದಿಲ್ಲ, ರೇಡಿಯೇಷನ್‌ನ ಕಪ್ಪು ಕಲೆಯನ್ನು ನೋಡಿ, ಯಾರೇನೂ ಅಂದುಕೊಳ್ಳುವುದಿಲ್ಲ. ನನಗೆ ಇಂತ: ಕಾಯಿಲೆ ಇದೆ ಎಂದು ಬೇರೆಯವರಿಗೆ ತಿಳಿದು ಬಿಟ್ಟರೆ ? ಎಂದು ಯೋಚಿಸುವ ಬದಲು, ನಾಲ್ಕು ಜನರ ಹತ್ತಿರ ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳಿ. ಅವರ ಮನೆಯಲ್ಲೂ, ಇಂತಹದ್ದನ್ನು ನೋಡಿರಬಹುದು. ಅವರ ಉಪಯುಕ್ತ ಸಲಹೆ ನಿಮಗೆ ಸಿಗಬಹುದು. ಮನಸ್ಸಲ್ಲಿಯೇ ಮಂಡಿಗೆ ಮಾಡಿ, ಗೊಂದಲಕ್ಕೊಳಗಾಗಬೇಡಿ.

**********

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.