ಅಂಕಣವಿಚಾರಲಹರಿ

ನಮಗೀಗ ಬೇಕಾಗಿರುವುದು ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಮುಲಾಮು; ರಕ್ತ ಚೆಲ್ಲಾಡುವ ಖಡ್ಗ ಹಿಡಿದ ಕೈಗಳಲ್ಲ….!.

SHASHIDHAR BHAT-JOURNALIST - WRITER-ಶಶಿಧರ್ ಭಟ್

ಹಿರಿಯ ಪತ್ರಕರ್ತರು ಹಾಗೂ ಲೇಖಕರು

[email protected]

ನಿನ್ನೆ ಬೆಳಿಗ್ಗೆ ವಾಟ್ಸ್ ಅಪ್‌ನಲ್ಲಿ ಗೆಳೆಯ ಇರ್ಷಾದ್ ಉಪ್ಪಿನಂಗಡಿ ಕಳುಹಿಸಿದ ಸಂದೇಶ ಹೀಗಿತ್ತು; ಸಮಿಉಲ್ಲಾ ಹರೀಶ್ ಸ್ನೇಹಿತರು. ಕ್ರಿಕೆಟ್ ಆಡಿ ಮನೆಗೆ ಹಿಂತಿರುಗುತ್ತಿದ್ದರು, ಅಂಗಡಿಯೊಂದರಲ್ಲಿ ಕೂಲ್ ಡ್ರಿಂಕ್ಸ್ ಕುಡಿದು ಸಮೀಉಲ್ಲಾ ಬೈಕ್‌ನಲ್ಲಿ ಹೊರಡುತ್ತಿದ್ದಾಗ ದುಷ್ಕರ್ಮಿಗಳ ತಂಡ ಅವನಿಗೆ ಇರಿದಿದೆ. ಅಷ್ಟರಲ್ಲಿ ಸ್ನೇಹಿತನ ರಕ್ಷಣೆಗೆ ಹರೀಶ್ ಧಾವಿಸಿ ಬಂದಿದ್ದಾನೆ. ದುಷ್ಕರ್ಮಿಗಳು ಆತನಿಗೂ ಇರಿದಿದ್ದಾರೆ. ತೀರ್ವ ಗಾಯಗೊಂದ ಹರೀಶ್ ಅಸು ನೀಗಿದ್ದಾನೆ. ಕರಾವಳಿ ಸ್ನೇಹಿತರಿಗೆ ಧರ್ಮ ಯಾವತ್ತೂ ಮುಖ್ಯವಲ್ಲ. ಧರ್ಮದ ಹಂಗು ತೊರೆದು ಸ್ನೇಹಿತನ ಪ್ರಾಣ ರಕ್ಷಣೆಗೆ ಮುಂದಾಗಿ ಪ್ರಾಣ ಕಳೆದುಕೊಂಡ ಎರಡನೆಯ ಪ್ರಕರಣ ಇದು….

ಈ ಬಗ್ಗೆ ರಾತ್ರಿಯೆಲ್ಲ ಯೋಚಿಸುತ್ತಿದ್ದೆ. ಈ ದೇಶದಲ್ಲಿ ಈಗಲೂ ಆರೋಗ್ಯಪೂರ್ಣವಾಗಿ ಯೋಚಿಸುವವರಿದ್ದಾರೆ. ರಕ್ತದ ರಾಜಕಾರಣ ಮಾಡುವವರು ಇರುವಂತೆ ಶಾಂತಿಯ ಪಾರಿವಾಳವನ್ನು ಹಾರಿ ಬಿಡುವವರೂ ಇದ್ದಾರೆ. ಮನುಷ್ಯನ ಇತಿಹಾಸದಲ್ಲಿ ಶಾಂತಿ ಸಹಬಾಳ್ವೆಯ ಸಂದೇಶ ನಮ್ಮೆಲ್ಲರ ಮನಸ್ಸಿನಲ್ಲಿ ಸ್ಥಾಯಿಭಾವವಾಗಿ ಇರುವುದು ಇದೆಯಲ್ಲ ಅದೇ ಮುಖ್ಯ ಅನ್ನಿಸಿತು. ಧರ್ಮ ನಮ್ಮಲ್ಲಿ ಪಾಶವೀ ಮನಸ್ಥಿಗೆ ಕಾರಣವಾಗುವುದಿದ್ದರೆ ನಮಗೆ ಧರ್ಮ ಬೇಕಾ? ಎಲ್ಲ ಧರ್ಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ಯಾಕೆ ಸಾಧ್ಯವಿಲ್ಲ? ಆಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ;
ಧರ್ಮ ಎಂದರೇನು ? ಈ ಶತಮಾನದ ದಾರ್ಶನಿಕರಲ್ಲಿ ಒಬ್ಬರಾದ ಜಿಡ್ಡು ಕೃಷ್ಣಮೂರ್ತಿ ಈ ಪ್ರಶ್ನೆಗೆ ನೀಡಿದ ಉತ್ತರ ಕುತೂಹಲಕರ.
ಧರ್ಮ ಎಂದರೇನು ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯಾವುದು ಧರ್ಮ ಅಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾವುದು ಧರ್ಮವಲ್ಲ ಎಂಬುದು ತಿಳಿದರೆ ಈ ಪ್ರಶ್ನೆಗೆ ಉತ್ತರ ದೊರಕುತ್ತದೆ. ಈಗ ದೇವಾಲಯಕ್ಕೆ ಹೋಗಿ ಪೂಜೆ ಮಾಡುವುದು ಧರ್ಮ ಎಂದು ಹೇಳಲಾಗಿದೆ. ಆದರೆ ದೇವಾಲಯಕ್ಕೆ ಹೋಗುವುದೇ ಧರ್ಮ ಅಲ್ಲ. ರಾಮ ಕೃಷ್ಣ ಎಂದು ಭಜನೆ ಮಾಡುವುದು ಧರ್ಮ ಎಂದು ಹೇಳಲಾಗಿದೆ. ಆದರೆ ಇದು ಧರ್ಮ ಅಲ್ಲ….ಯಾಕೆಂದರೆ ಇವೆಲ್ಲವೂ ಸಂಕೇತಗಳು. ಸಂಕೇತವೇ ಧರ್ಮ ಅಲ್ಲ….
ನಿಜ. ಧರ್ಮ ಎನ್ನುವುದು ಸಂಕೇತವಲ್ಲ. ಸನಾತನ ಧರ್ಮ ಎಂದು ಮಾತನಾಡುವವರು, ವೈದಿಕ ಧರ್ಮದ ಬಗ್ಗೆ ಮಾತನಾಡುವವರಿಗೆ ಧರ್ಮದ ಬಗ್ಗೆ ಗೊತ್ತಿದೆಯೆ? ಧರ್ಮ ಎನ್ನುವ ಶಬ್ದದ ಮೂಲ ಧಾತು, ದೃ ಎಂದು. ದೃ ಎಂದರೆ ಬದುಕನ್ನು ಎತ್ತರಿಸು ಎಂಬ ಅರ್ಥವನ್ನು ಹೊಂದಿದೆ. ಯಾವುದು ಬದುಕನ್ನು ಎತ್ತರಿಸುತ್ತದೆಯೋ ಅದೇ ಧರ್ಮ.

ಜಿಡ್ಡು ಕೃಷ್ಣಮೂರ್ತಿ ಹೇಳಿದಂತೆ ನಾವು ಸಂಕೇತಗಳ ಹಿಂದೆ ಬಿದ್ದಿದ್ದೇವೆ. ಸಂಕೇತಗಳು ಇರುವುದು ಗುರುತಿಸುವುದಕ್ಕೆ ಮಾತ್ರ. ಇದನ್ನು ಬಿಟ್ತು ಸಂಕೇತಗಳಿಗೆ ಬೇರೆ ಅರ್ಥ ಮತ್ತು ಉದ್ದೇಶಗಳಿಲ್ಲ. ಆದರೆ ಧರ್ಮಗಳ ವಾರಸುದಾರರು ಈ ಸಂಕೇತಗಳ ಹಿಂದೆ ಬಿದ್ದಿರುತ್ತಾರೆ. ಅವರಿಗೆ ಸಂಕೇತದ ಹಿಂದಿನ ತತ್ವ ಮುಖ್ಯವಲ್ಲ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.

ತಲೆಯ ಮೇಳಿನ ಜುಟ್ಟು, ಮೀಸೆ ಇಲ್ಲದ ಗಡ್ಡ, ತಲೆಯ ಮೇಲಿನ ಸ್ಕಲ್ ಟೋಪಿ ಎಲ್ಲವೂ ಧಾರ್ಮಿಕ ಸಂಕೇತಗಳೇ. ಈ ಧಾರ್ಮಿಕ ಸಂಕೇತಗಳೂ ಧರ್ಮದಂತೆ ಎರಡೂ ರೀತಿಯಲ್ಲಿ ಕೆಲಸ ಮಾಡುತ್ತವೆ. ಒಂದೆಡೆ ಓಗ್ಗಟ್ಟಿಗೆ ಕಾರಣವಾದರೆ ಇನ್ನೊಂದೆಡೆ ವಿಭಜನೆಗೆ ಕಾರಣವಾಗುತ್ತದೆ. ಒಂದೇ ದೇವರನ್ನು ಪೂಜಿಸುವವರು, ಒಂದೇ ರೀತಿಯ ಧಾರ್ಮಿಕ ಸಂಕೇತವನ್ನು ಹೊಂದಿದವರು ಒಗ್ಗಟ್ಟಾಗುತ್ತಾರೆ. ಹಾಗೆ ಇನ್ನೊಬ್ಬ ದೇವರು ಮತ್ತು ಸಂಕೇತವನ್ನು ಹೊಂದಿದವರನ್ನು ಧ್ವೇಷಿಸತೊಡಗುತ್ತಾರೆ. ಅಂದರೆ ಒಂದು ಧರ್ಮದ ಅನುಯಾಯಿಗಳು ಒಂದಾಗುತ್ತಲೇ ಇನ್ನೊಂದು ಧರ್ಮದವನ್ನು ಧ್ವೇಷಿಸುವುದು ಏಕ ಕಾಲಕ್ಕೆ ನಡೆದು ಹೋಗುತ್ತದೆ.

ಈಗ ಕೆಲವು ದಿನಗಳ ಹಿಂದೆ ಯಾವುದೋ ಮಠವೊಂದರ ಭಕ್ತರು ನಾಮವನ್ನು ಹಾಕಿಕೊಳ್ಳುವುದರ ಸಂಬಂಧದಲ್ಲಿ ಬೀದಿ ರಂಪ ಮಾಡಿಕೊಂಡಿದ್ದರು. ವಿ ಆಕಾರದ ನಾಮ ಸರಿಯೋ, ಯು ಆಕಾರದ ನಾಮ ಸರಿಯೋ ಎಂಬುದು ಅವರ ಕಚ್ಚಾಟಕ್ಕೆ ಮೂಲವಾಗಿತ್ತು. ನಾಮ ಯಾವ ಆಕಾರದಲ್ಲೇ ಇರಲಿ ಅದು ನಮ್ಮ ಹಣೆಯ ಮೇಲಿದ್ದರೆ ಚಂದ. ಅದನ್ನು ಬೇರೆಯವರ ಹಣೆಯ ಮೇಲೆ ಹಾಕಿದರೆ ಸಮಸ್ಯೆ ಪ್ರಾರಂಭವಾಗುತ್ತದೆ. ಆದರೆ ಧರ್ಮದ ಬಗ್ಗೆ ಮೂಲಭೂತ ಜ್ನಾನ ಇಲ್ಲದವರು ಸಂಕೇತಗಳ ಬಗ್ಗೆ ಜಗಳವಾಡುತ್ತಾರೆ. ಬೀದಿ ರಂಪ ಮಾಡುತ್ತಾರೆ. ಹೊಡೆದಾಟ ಮಾಡುತ್ತಾರೆ. ಕತ್ತಿ ಝಳಪಿಸುತ್ತಾರೆ. ರಕ್ತ ಚೆಲ್ಲುತ್ತಾರೆ.

ಈಗ ಟಿಪ್ಪೂ ವಿವಾದವನ್ನೇ ತೆಗೆದುಕೊಳ್ಳಿ. ಈ ವಿವಾದದ ಹಿಂದೆ ಇರುವುದು ಧರ್ಮ. ಟಿಪ್ಪು ಮುಸ್ಲಿಂನಾಗಿದ್ದೇ ಈ ವಿವಾದಕ್ಕೆ ಕಾರಣ ಎಂದು ನನಗೆ ಅನ್ನಿಸುತ್ತದೆ. ಹಾಗಂತ ಟಿಪ್ಪು ಇವತ್ತಿನ ಅರ್ಥದಲ್ಲಿ ದೇಶಪ್ರೇಮಿಯಾಗಿದ್ದ ಎನ್ನುವುದು ಮೂರ್ಖತನ. ಹಾಗೆ ಆತ ಹಿಂದೂ ವಿರೋಧಿಯಾಗಿದ್ದ ಎನ್ನುವುದೂ ಸುಳ್ಳು. ಆತ ಒಬ್ಬ ಮಹಾತ್ವಾಕಾಂಕ್ಷಿ ರಾಜನಾಗಿದ್ದ. ಆ ಕಾಲದಲ್ಲಿ ಬದುಕಿ ಬಾಳಿದ ಎಲ್ಲ ರಾಜರ ಹಾಗೆ ಆತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಎಲ್ಲವನ್ನೂ ಮಾಡಿದ. ತನ್ನ ಪಕ್ಕದ ರಾಜ್ಯವಾದ ಕೇರಳ ಮತ್ತು ಕೊಡಗಿನ ಮೇಲೆ ಧಾಳಿ ನಡೆಸಿ ಅಲ್ಲಿನ ಜನರನ್ನು ಬರ್ಬರವಾಗಿ ಕೊಂದ. ಅಂದಿನ ಎಲ್ಲ ರಾಜರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಅವನು ನಡೆದುಕೊಂಡ. ಹೀಗಾಗಿ ಟಿಪ್ಪೂ ಇಂದಿನ ಅರ್ಥದಲ್ಲಿ ಮಹಾನ್ ದೇಶ ಭಕ್ತ ಎಂದು ಪ್ರತಿಪಾದಿಸುವುದಾಗಲೀ ಆತ ಧರ್ಮಾಂಧ ಎನ್ನುವದಾಗಲೀ ಎರಡೂ ಸತ್ಯವಲ್ಲ.

ಈ ಬಗ್ಗೆ ಯೋಚಿಸುತ್ತಲೇ ನಿದ್ರೆಯ ಸೆರಗಿಗೆ ನಾನು ಜಾರಿದೆ. ಬೆಳಿಗ್ಗೆ ೬ ಗಂಟೆ ಇರಬೇಕು. ಸ್ನೇಹಿತರೊಬ್ಬರು ಪ್ಯಾರಿಸ್‌ನಲ್ಲಿ ಉಗ್ರಗಾಮಿ ಧಾಳಿಯಲ್ಲಿ ೧೫೦ ಜನರ ಹತ್ಯೆ ಮಾಡಿದ ಸುದ್ದಿ ನೀಡಿದರು. ತಕ್ಷಣ ಟೀವಿ ಹಾಕಿದೆ. ಈ ಬರ್ಬರ ಕ್ರೃತ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ಭಿತ್ತರವಾಗುತ್ತಿತ್ತು. ಇದು ಐಸಿಎಸ್ ಉಗ್ರರ ಕೃತ್ಯ ಎನ್ನುವುದು ಈಗಾಗಲೇ ಸ್ಪ್ಶಷ್ಟವಾಗಿದೆ. ಐಸಿಎಸ್ ಈ ಧಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಸುದ್ದಿ ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ, ರಾಷ್ಟೀಯ ವಾಹಿನಿಗಳಲ್ಲಿ ಬರುತ್ತಿದ್ದಾಗ ಕನ್ನಡ ಕೆಲವು ವಾಹಿನಿಗಳಲ್ಲಿ ಜ್ಯೋತಿಷಿಗಳು ಕನ್ನಡಿಗರ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರು. ದಿನ ಭವಿಷ್ಯದ ಬಗ್ಗೆ ಪ್ರವಚನ ನಡೆಯುತ್ತಿತ್ತು. ಇವರಿಗೆ ಪ್ಯಾರಿಸ್‌ನಲ್ಲಿ ನಡೆದ ಧಾಳಿಯ ಬಗ್ಗೆ ಏನಾದರೂ ಭವಿಷ್ಯವಾಣಿ ಆಗಿರಬಹುದೆ ಎಂಬ ಕೆಟ್ಟ ಕುತೂಹಲನನ್ನಲ್ಲಿತ್ತು. ಆದರೆ ಇವರೆಲ್ಲ ಕನ್ನಡಿಗರ ಗೃಹ ಗತಿಗೆ ಮಾತ್ರ ಸೀಮಿತವಾಗಿದ್ದರು. ಯಾಕೋ ಈ ಹಕ್ಕಿ ಶಕುನದವರು ಮತ್ತು ಅವರನ್ನು ನಂಬುವ ಮುಗ್ಧ ಕನ್ನಡಿಗರ ಬಗ್ಗೆ ಪಾಪ ಅನ್ನಿಸತೊಡಗಿತ್ತು.

ಬೆಳಗಿನ ಕಾಫಿ ಕುಡಿಯುತ್ತ ಈ ಐಸಿಸ್ ಉಗ್ರರ ಬಗ್ಗೆ ಯೋಚಿಸತೊಡಗಿದೆ. ಈಗ ಇಸ್ಲಾಂ ಮತಾವಲಂಬಿಗಳು ಹೊರಕ್ಕೆ ಬರಬೇಕು. ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಆ ಧರ್ಮದ ಒಳಗೆ ಪ್ರತಿಭಟನೆಯ ಬೆಂಕಿ ಹೊತ್ತಿಕೊಳ್ಳಬೇಕು. ಈ ಬಗ್ಗೆ ಬೇರೆ ಧರ್ಮದವರು ಮಾತನಾಡಿದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ನನಗೆ ಅನ್ನಿಸುವ ಹಾಗೆ ಧರ್ಮ ಎಂದೂ ನಿಂತ ನೀರಾಗಬಾರದು. ಅದಕ್ಕೊಂದು ಚಲನಶೀಲತೆ ಬೇಕು. ಈಗ ವಿಶ್ವದ ಎಲ್ಲ ಧರ್ಮಗಳೂ ನೀಂತ ನೀರಾಗಿವೆ. ಇದು ಬದಲಾಗದಿದ್ದರೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ. ಐದು ಸಾವಿರ ವರ್ಷಗಳಷ್ಟು ಹಳೆಯದಾದ ಹಿಂದೂ ಧರ್ಮ ಇವತ್ತಿನ ಜಗತ್ತಿಗೆ ತೆರೆದುಕೊಳ್ಳಬೇಕು. ಹಾಗೆ ವಿಶ್ವದ ಅತಿ ಕಿರಿಯ ಧರ್ಮವಾದ ಇಸ್ಲಾಂ ಕೂಡ ಬದಲಾಗಬೇಕಾಗಿದೆ. ಈ ಬದಲಾವಣೆ ಹೊರಗಿನ ಸೂಚನೆ ಹೇಳಿಕೆ ಮತ್ತು ಒತ್ತಾಯದಿಂದ ಆಗುವುದಿಲ್ಲ. ಆಯಾ ಧರ್ಮದ ಒಳಗೆ ಇಂತಹ ಬದಲಾವಣೆ ಆಗಬೇಕಿದೆ. ಈ ಬದಲಾವಣೆಯ ನೇತೃತ್ವವನ್ನು ಆಯಾ ಧರ್ಮದವರೇ ವಹಿಸಬೇಕು. ಈ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ, ಇಸ್ಲಾಂ ಧರ್ಮದಲ್ಲಿ ಆಗಬೇಕಾದ ಸುಧಾರಣೆ ಮತ್ತು ಬದಲಾವಣೆಯ ಬಗ್ಗೆ ಹಿಂದೂಗಳು ಮಾತನಾಡತೊಡಗಿದರೆ ಅದಕ್ಕೆ ಕೋಮು ಬಣ್ಣ ಬರತೊಡಗುತ್ತದೆ. ಹಾಗೆ ಹಿಂದೂ ಧರ್ಮದ ಬಗ್ಗೆ ಆಗಬೇಕಾದ ಸುಧಾರಣೆಯ ಬಗ್ಗೆ ಮುಸ್ಲೀಂ ಮತಾವಲಂಬಿಗಳು ಮಾತನಾಡಿದರೆ ಅದನ್ನು ಸ್ವೀಕರಿಸಲು ಹಿಂದೂ ಅಭಿಮಾನಿಗಳು ಸಿದ್ಧರಿರುವುದಿಲ್ಲ.

ಆದರೆ ಈಗಿನ ಸಮಸ್ಯೆ ಎಂದರೆ ಹಿಂದೂ ಅಭಿಮಾನಿಗಳು ಇಸ್ಲಾಂ ಧರ್ಮದಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ಸುಧಾರಣೆಯ ಬಗ್ಗೆ ಮಾತನಾಡುತ್ತಾರೆ. ಇಸ್ಲಾಂ ಧರ್ಮದ ವಿಚಾರವಂತರು ಹಿಂದೂ ಧರ್ಮದಲ್ಲಿ ಇರುವ ಲೋಪದೋಷ ಮತ್ತು ಸುಧಾರಣೆಯ ಬಗ್ಗೆ ಭಾಷಣ ಮಾಡುತ್ತಾರೆ. ಇವರೆಲ್ಲ ಯಾಕೆ ತಮ್ಮ ತಮ್ಮ ಧರ್ಮದ ಒಳಗೆ ಇರುವ ಮನುಷ್ಯ ವಿರೋಧಿ ನಿಲುಮೆಯ ಬಗ್ಗೆ ಯಾಕೆ ಮಾತನಾಡುವುದಿಲ್ಲ. ತಮ್ಮ ತಮ್ಮ ಧರ್ಮವನ್ನು ಗರ್ಭಗುಡಿಯಲ್ಲಿ ಭದ್ರವಾಗಿ ಇಟ್ಟುಕೊಂಡು ಇನ್ನೊಂದು ಧರ್ಮದ ಬಗ್ಗೆ ಯಾಕೆ ಮಾತನಾಡುತ್ತಾರೆ ? ಅವರು ಹೀಗೆ ಮಾಡುವುದರಿಂದ ಕೋಮು ಧ್ವೇಷ ಇನ್ನಷ್ಟು ಹೆಚ್ಚುತ್ತದೆ. ನನ್ನ ಧರ್ಮದ ಬಗ್ಗೆ ಮಾತನಾಡಲು ಇವನ್ಯಾರು ಎಂದು ಪ್ರಶ್ನಿಸುವುದರೊಂದಿಗೆ ಅಸಹನೆ ಪ್ರಾರಂಭವಾಗುತ್ತದೆ. ಧರ್ಮಾಂಧರು ರಕ್ತಪಾತಕ್ಕೂ ಕೈಹಾಕುತ್ತಾರೆ.

ಸಮಾಜದಲ್ಲಿ ಸಮಾನತೆ ಮತ್ತು ಸಹಭಾಳ್ವೆ ನಮ್ಮ ಗುರಿಯಾಗಿದ್ದರೆ ನಮ್ಮ ಕಾರ್ಯವಿಧಾನದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ಮೊದಲನೆಯದಾಗಿ ಎಲ್ಲ ಧರ್ಮಗಳನ್ನು ತಿರಸ್ಕರಿಸುವುದು ಸಾಧ್ಯವೆ ಎನ್ನುವುದು. ಇದಕ್ಕೆ ಸಾಮಾನ್ಯ ಜನ ಒಪ್ಪುವುದಿಲ್ಲ. ಯಾಕೆಂದರೆ ದುಃಖ ನೋವು ಅಸಹಾಯಕತೆಯಲ್ಲಿ ಬದುಕುವವರಿಗೆ ಅವಲಂಬನೆಗಾಗಿ ಧರ್ಮ ಬೇಕೇ ಬೇಕು. ಅಂದರೆ ರಿಲಿಜನ್ ಎನ್ನುವುದು ಸಾಮಾನ್ಯ ಜನರಿಗೆ ಅನಿವಾರ್ಯ. ಇಂತಹ ಸ್ಥಿತಿಯಲ್ಲಿ ರಿಲಿಜನ್‌ನಲ್ಲಿ ಬದಲಾವಣೆ ಆಗಬೇಕಾಗಿದೆ. ಆದರೆ ಇಂದಿನ ಸ್ಥಿತಿಯಲ್ಲಿ ಧಾರ್ಮಿಕ ಸುಧಾರಣೆ ಮತ್ತು ಬದಲಾವಣೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ಇಸ್ಲಾಮಿಕ್ ಭಯೋತ್ಪಾದನೆಯ ವಿಚಾರವನ್ನೇ ತೆಗೆದುಕೊಳ್ಳಿ. ಇದರ ಮೂಲೋತ್ಪಾಟನೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ದೇಶದ ವೈಚಾರಿಕ ವಲಯದಲ್ಲಿ ಚರ್ಚೆ ನಡೆಯುತ್ತಿಲ್ಲ. ಭಾರತದ ಸ್ಥಿತಿಯೂ ಹಾಗೆ. ಇಲ್ಲಿನ ವೈಚಾರಿಕ ವರ್ಗ ಹಿಂದೂ ಧರ್ಮದಲ್ಲಿ ಆಗಬೇಕಾದ ಸುಧಾರಣೆ ಮತ್ತು ಅದಕ್ಕೆ ಚಲನಶೀಲತೆಯನ್ನು ನೀಡುವ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಹಿಂದೂ ಧಾರ್ಮಿಕ ಮೂಲಭೂತವಾದದ ಭಯ. ಹಿಂದೂ ಮೂಲಭೂತವಾದವನ್ನು ವಿರೋಧಿಸುವುದು ಎಂದರೆ ಇಸ್ಲಾಮಿಕ್ ಮೂಲಬೂತವಾದದ ಬಗ್ಗೆ ಮೌನ ಒಹಿಸುವುದು ಎಂಬ ತಪ್ಪು ಕಲ್ಪನೆ ನಮ್ಮ ವೈಚಾರಿಕ ವಲಯದಲ್ಲಿದೆ. ಹಾಗೆ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ಸಮಗ್ರವಾಗಿ ನೋಡದೇ ಸೆಲೆಕ್ಟೀವ್ ಆಗಿ ನಾವು ನೋಡುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ.

ಇಂದು ಬೆಳಿಗ್ಗೆ ನಮ್ಮೆಲ್ಲರ ಪ್ರೀತಿಯ ದೇವನೂರು ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವುದನ್ನು ಪ್ರತಿಭಟಿಸಿ ಪ್ರಶಸ್ತಿ ವಾಪಸ್ ನೀಡಿದ ಸುದ್ದಿ ಬಂತು. ಈ ಸುದ್ದಿಯನ್ನು ನನಗೆ ಹೇಳಿದ ನನ್ನ ಕಾಮ್ರೇಡ್ ಮಿತ್ರರೊಬ್ಬರು ನೀವು ನಿಮಗೆ ಸಿಕ್ಕಿರುವ ಪ್ರಶಸ್ತಿಯನ್ನು ವಾಪಸು ಮಾಡುತ್ತೀರಿ ಎಂದುಕೊಂಡಿದ್ದೆ. ಯಾಕೆಂದರೆ ನೀವೂ ಎಡಪಂಥೀಯರಲ್ಲವೆ ಎಂದು ಪ್ರಶ್ನಿಸಿದರು.

ನಾನು ಎಡಪಂಥೀಯ ವಿಚಾರಧಾರೆಯಲ್ಲಿ ಬೆಳೆದು ಬಂದಿದ್ದು ನಿಜ. ಆದರೆ ಈಗ ನಾನು ಯಾವ ಪಂಥೀಯನೂ ಅಲ್ಲ. ನಾನು ಮನುಷ್ಯ ಪರ. ನಾನು ಪತ್ರಿಕೋದ್ಯಮಿ ಆಗಿರುವುದರಿಂದ ಒಬ್ಬರ ಪರ ಮತ್ತು ಇನ್ನೊಬ್ಬರ ವಿರೋಧಿ ಎಂದು ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಯಾವುದೇ ಒಂದು ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಲು ಪ್ರಾರಂಭಿಸಿದ ತಕ್ಷಣ ಸತ್ಯ ನಿಷ್ಟೆ ಮಾಯವಾಗುತ್ತದೆ. ಹೀಗಾಗಿ ನಾನು ಎಡಪಂಥೀಯ ವಿಚಾರಧಾರೆಯನ್ನು ಒಪ್ಪುವ ವ್ಯಕ್ತಿಯಾದರೂ ಪತ್ರಿಕೋದ್ಯಮಿಯಾಗಿ ಎಡಪಂಥೀಯ ಎಂದು ಗುರುತಿಸಿಕೊಳ್ಳಲಾರೆ. ನನ್ನ ವೈಯಕ್ತಿಕ ನಂಬಿಕೆ ಮತ್ತು ಸಿದ್ಧಾಂತವನ್ನು ನನ್ನ ವೃತ್ತಿಯ ಮೇಲೆ ಹೇರಲಾರೆ. ನಾನು ಎಕ್ಟಿವಿಸ್ಟ್ ಅಲ್ಲ. ಕೇವಲ ಸತ್ಯದ ಪರ ಮತ್ತು ಮನುಷ್ಯ ಪರವಿರುವ ಒಬ್ಬ ಪತ್ರಿಕೋದ್ಯಮಿ ಅಷ್ಟೇ ಎಂದು ನಕ್ಕೆ.

ನೀವು ಹೇಳಿದಂತೆ ನನಗೆ ಯಾವುದಾದರೂ ಪ್ರಶಸ್ತಿ ಬಂದಿದ್ದರೆ ಅದನ್ನು ಹಿಂತಿರುಗಿಸುವ ಬಗ್ಗೆ ಯೋಚಿಸಬಹುದಿತ್ತು. ಆ ಸನ್ನಿವೇಶದಲ್ಲಿ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೋ ಇಲ್ಲವೋ ಎಂಬುದನ್ನು ಈಗ ಹೇಳಲಾರೆ. ಆದರೆ ಇದುವರೆಗೆ ನನಗೆ ಯಾವ ಪ್ರಶಸ್ತಿಯನ್ನು ಯಾರೂ ನೀಡಿಲ್ಲ. ನೀವು ಅಂದುಕೊಂಡಂತೆ ನಾನು ಎಡಪಂಥೀಯನಾಗಿದ್ದರೆ ಒಂದು ಪಕ್ಷದ ಸರ್ಕಾರ ಇದ್ದಾಗ ಪ್ರಶಸ್ತಿ ಸಿಗುತ್ತಿತ್ತು. ಬಲಪಂಥೀಯನಾಗಿದ್ದರೆ ಇನ್ನೊಂದು ಪಕ್ಷದ ಸರ್ಕಾರ ಇದ್ದಾಗ ಪ್ರಶಸ್ತಿ ಬರಬಹುದಿತ್ತು. ನಾನು ಯಾವ ಪಂಥಕ್ಕೂ ಸೇರದಿರುವುದರಿಂದ ನನಗೆ ಪ್ರಶಸ್ತಿ ಬಂದಿಲ್ಲ ಎಂದು ತಮಾಷೆ ಮಾಡಿದೆ. ಅವರು ಒಂದು ನಿಮಿಷ ಮೌನವಾದರು. ನಿಜವಾಗಿಯೂ ನಿಮಗೆ ಯಾವ ಪ್ರಶಸ್ತಿಯೂ ಬಂದಿಲ್ಲವಾ ಎಂದು ಇನ್ನೊಮ್ಮೆ ಪ್ರಶ್ನಿಸಿ ಖಾತರಿ ಮಾಡಿಕೊಂಡರು.

ಇಂದು ಸಮಾಜದಲ್ಲಿ ಅಸಹಿಷ್ಣತೆ ಹೆಚ್ಚುತ್ತಿರುವುದನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸ್ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಸಮಾಜ ಮತ್ತು ಸರ್ಕಾರದಲ್ಲಿ ಜಾಗೃತಿ ಮೂಡಿಸಲು ಇಂತಹ ಕೆಲಸ ಮಾಡಲೇಬೇಕು. ಇದು ಸಾತ್ವಿಕ ಪ್ತತಿಭಟನೆಯ ಒಂದು ಮಾರ್ಗ. ಸಮಾಜ ಜೀವಂತವಾಗಿರಲು ಪ್ರತಿಭಟನೆ ಮತ್ತು ಚಳವಳಿಗಳು ಬೇಕೇ ಬೇಕು. ಆದರೆ ಈ ಅಸಹಿಷ್ಣತೆಯ ಪ್ರಶ್ನೆಯನ್ನು ಒಂದು ತತ್ವವನ್ನಾಗಿ ಸ್ವೀಕರಿಸಬೇಕು. ಅದಕ್ಕೆ ಸೈದ್ಧಾಂತಿಕ ಬದ್ಧತೆ ಬೇಕು. ಯಾವುದೇ ಸರ್ಕಾರ ಬರಲೀ ನಮ್ಮ ಸಿದ್ಧಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಆದರೆ ನಮ್ಮ ಪ್ರತಿಭಟನೆ ಸೆಲೆಕ್ಟೀವ್ ಆದರೆ ಆಗ ಸೈದ್ಧಾಂತಿಕತೆ ಮಣ್ಣು ಮುಕ್ಕುತ್ತದೆ. ಈಗ ಹೀಗಿಯೇ ಆಗುತ್ತಿದೆ ಎಂದು ನಾನು ಹೇಳುತ್ತಿಲ್ಲ. ಹಾಗೆ ಆಗದಂತೆ ಇಂತಹ ಆರೋಪ ಬರದಂತೆ ಎಚ್ಚರ ಒಹಿಸಬೇಕಾದ್ದು ವೈಚಾರಿಕ ಮತ್ತು ಸಾಹಿತ್ಯ ವಲಯದ ಜವಾಬ್ದಾರಿ ಎಂಬುದು ನನ್ನ ನಂಬಿಕೆ.

ಈ ಸಂಶಯ ನನಗೆ ಬರುವುದಕ್ಕೆ ಮೂಲಭೂತ ಕಾರಣ ನಮ್ಮ ದೇಶದ ರಾಜಕೀಯ ಪಕ್ಷಗಳನ್ನು ನಾವು ನೋಡುವ ರೀತಿಯಲ್ಲಿ ಇರುವ ಲೋಪ. ಭಾರತೀಯ ಜನತಾ ಪಕ್ಷ ಧಾರ್ಮಿಕ ಅಸಹಿಷ್ಣತೆಗೆ ತುಪ್ಪ ಸುರಿಯುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂಘ ಪರಿವಾರ ಮತ್ತು ಅದರ ನಾಯಕರು ಯುದ್ಧವನ್ನು ಗೆದ್ದ ಸೈನ್ಯ ತಾನು ಗೆದ್ದ ಪ್ರದೇಶದಲ್ಲಿ ಹಿಂಸಾಚಾರ ನಡೆಸಲು ಮುಂದಾಗುವ ರೀತಿಯಲ್ಲೇ ವರ್ತಿಸುತ್ತಿದ್ದಾರೆ. ಇವರಿಗೆ ಬಿಜೆಪಿ ಅಧಿಕಾರ ನಡೆಸುತ್ತಿರುವುದು ಹೆಚ್ಚಿನ ಶಕ್ತಿಯನ್ನು ತುಂಬಿದೆ. ನಮ್ಮದೇ ಸರ್ಕಾರ ಎಂಬ ಹಮ್ಮಿನಲ್ಲಿ ಅಹಂಕಾರದಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟಿಸಿ ಸಂತೋಷ ಪಡುತ್ತಿದೆ ಸಂಘ ಪರಿವಾರ. ಇದನ್ನು ವಿರೋಧಿಸುವ ಸಂದರ್ಭದಲ್ಲಿ ಇದು ಮೋದಿ ಮೇಲಿನ ವಯಕ್ತಿಕ ಧ್ವೇಷದಿಂದ ನಡೆಸುತ್ತಿರುವ ಶಿಸ್ತುಬದ್ಧ ಕಾರ್ಯಾಚರಣೆ ಎಂಬ ಭಾವನೆ ಯಾರಿಗೂ ಬರಕೂಡದು. ನಮ್ಮ ಸೈದ್ಧಾಂತಿಕತೆ ಕಾಲ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗಕೂಡದು.

ಆದರೆ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸುವಾಗ ನಾವು ಎದುರಿಸುವ ಸಮಸ್ಯೆಗಳು ಹೆಚ್ಚು ಸಂಕೀರ್ಣವಾಗಿವೆ. ಒಂದು ಧರ್ಮದಲ್ಲಿನ ಲೋಪ ಮತ್ತು ಸುಧಾರಣೆಯ ಬಗ್ಗೆ ನಾವು ಮಾತನಾಡಲು ಪ್ರಾರಂಭಿಸಿದ ತಕ್ಷಣ ಇನ್ನೊಂದು ಧರ್ಮದ ಮೂಲಭೂತವಾದಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ ಇಸ್ಲಾಂ ಧರ್ಮ ನಿಂತ ನೀರಾಗಿರುವುದು, ಇಂದಿನ ಬದುಕಿಗೆ ಪೂರಕವಲ್ಲದ ಅಂಶಗಳು ಆ ಧರ್ಮದಲ್ಲಿರುವುದು ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿದ ತಕ್ಷಣ ಹಿಂದೂ ಮೂಲಭೂತವಾದಿಗಳು ಅದನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಲೇ ಈ ದೇಶದ ವೈಚಾರಿಕ ವರ್ಗ ಇಸ್ಲಾಂ ಧರ್ಮದಲ್ಲಿ ಇರಬಹುದಾದ ಮನುಷ್ಯ ವಿರೋಧಿ ನಿಲುವುಗಳ ಬಗ್ಗೆ ಮಾತನಾಡದೇ ಇರಬಹುದು. ಹಾಗೆ ಹಿಂದೂ ಧರ್ಮದಲ್ಲಿ ಇರುವ ಜಾತೀಯತೆ ಮನುಷ್ಯ ವಿರೋಧಿ ಅಂಶಗಳ ಬಗ್ಗೆ ಮಾತನಾಡಿದರೆ ಅದನ್ನು ಇಸ್ಲಾಂ ಮೂಲಭೂತವಾದಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಾರಂಬಿಸುತ್ತಾರೆ. ಈ ಸಂಕೀರ್ಣ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ಎಂಬ ಬಗ್ಗೆ ಮನುಷ್ಯ ಪರವಾದವರೆಲ್ಲ ಯೋಚಿಸಬೇಕಾಗಿದೆ.

ಭಾರತ ಕಂಡ ಇನ್ನೊಬ್ಬ ದಾರ್ಶನಿಕ ಓಶೋ ಅವರು ಹೇಳಿದ ಮಾತುಗಳೊಂದಿಗೆ ನನ್ನ ಈ ಲೇಖನವನ್ನು ಮುಗಿಸಬಹುದು ಎಂದು ನನಗೆ ಅನ್ನಿಸುತ್ತದೆ. ಧರ್ಮದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿರುವ ಓಶೋ ಒಂದೆಡೆ ಹೇಳುತ್ತಾರೆ. ನಮಗೆ ಬೇಕಾಗಿರುವುದು ಧರ್ಮವಲ್ಲ, ಧಾರ್ಮಿಕತೆ.. ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಧರ್ಮ ಎಂದ ತಕ್ಷಣ ಅಲ್ಲಿ ಮೂಢನಂಬಿಕೆ ಇದೆ. ಮನುಷ್ಯ ವಿರೋಧಿ ಆಚರಣೆ ಇದೆ. ಇನ್ನೊಂದು ಧರ್ಮವನ್ನು ವಿರೋಧಿಸುವ ಟೀಕಿಸುವ ಗುಣವಿದೆ. ತಮ್ಮ ಧರ್ಮಕ್ಕಾಗಿ ಇನ್ನೊಂದು ಧರ್ಮದವರ ರುಂಡವನ್ನು ಚೆಂಡಾದುವ ಪಾಷವೀ ಮನಸ್ಸಿದೆ. ಧರ್ಮ ಆಗಾಗ ರಕ್ತವನ್ನು ಬೇಡುತ್ತಲೇ ಇರುತ್ತದೆ. ಧಾರ್ಮಿಕತೆ ಎನ್ನುವುದು ಹಾಗಲ್ಲ. ಅದು ಒಂದು ಅದ್ಭುತವಾದ ಮನಸ್ಥಿತಿ. ಧಾರ್ಮಿಕತೆ ನಮ್ಮಲ್ಲಿ ಪ್ರೀತಿಯನ್ನು ಉಕ್ಕಿಸುತ್ತದೆ. ಮನುಷ್ಯರನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಧಾರ್ಮಿಕತೆಗೆ ಒಡೆಯುವ ಗುಣ ಇಲ್ಲ. ಅದಕ್ಕಿರುವುದು ಎಲ್ಲವನ್ನೂ ಒಂದುಗೂಡಿಸುವ ಸಮಗ್ರ ದೃಷ್ಟಿ. ನಿಜವಾದ ಧರ್ಮವನ್ನು ಅರ್ಥ ಮಾಡಿಕೊಂಡವರಿಗೆ ಧಾರ್ಮಿಕತೆಯ ಮನಸ್ಸು ಅರಳುತ್ತದೆ. ಆತ ಮನುಷ್ಯ ಪ್ರೇಮಿಯಾಗುತ್ತಾನೆ.

ಒಬ್ಬ ನೈಜ ಮುಸಲ್ಮಾನ್, ಒಬ್ಬ ನೈಜ ಹಿಂದೂ ಒಬ್ಬ ನೈಜ ಕ್ರಿಶ್ಚಿಯನ್‌ರ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಅವರೆಲ್ಲ ತಮ್ಮ ಧರ್ಮವನ್ನು ನಂಬುತ್ತಲೇ ಪರ ಧರ್ಮವನ್ನು ಗೌರವಿಸುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿಯ ವರತೆ ಸದಾ ಉಕ್ಕುತ್ತಲೇ ಇರುತ್ತದೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.