ಅಂಕಣಪುಟ್ಟ ತಂಗಿಗೆ

ಸಂಬಂಧವೆಂಬ ಸಂಭ್ರಮ !

ಪುಟ್ಟ ತಂಗಿಗೆ-ಭಾಗ-೨

ಮುದ್ದು ಪುಟಾಣಿ..ಪುಟ್ಟ ತಂಗಿ..ಈ ಸಂಬಂಧಗಳು ಎಲ್ಲಿ ಯಾವಾಗ ಹೇಗೆ ಹುಟ್ಟಿಕೊಳ್ಳುತ್ತವೆ ಎನ್ನುವುದೇ ಭೇದಿಸಲಾಗದ ನಿಗೂಢ ರಹಸ್ಯ..ನಿರುಪಮ ಸ್ವಾರಸ್ಯ. ಹುಟ್ಟುತ್ತಲೇ ಹುಟ್ಟುವ ಸಂಬಂಧಗಳು…ಮುಂದೆಲ್ಲೋ ಜೀವನಯಾನದಲ್ಲಿ ಹುಟ್ಟುವ ಸಂಬಂಧಗಳು..ಸತ್ತ ನಂತರ ಸಾಯುವ ಸಂಬಂಧಗಳು..ಸಾಯುವ ಮೊದಲೇ ಸತ್ತು ಹೋಗುವ ಸಂಬಂಧಗಳು..ಬದುಕಿರುವಾಗಲೇ ಸತ್ತಂತಿರುವ ಸಂಬಂಧಗಳು..ಸತ್ತ ನಂತರವೂ ಬದುಕುವ ಸಂಬಂಧಗಳು..ಸತ್ತ ನಂತರವೇ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದು ಹುಟ್ಟುವ ಸಂಬಂಧಗಳು ಹೀಗೆ ಸಂಬಂಧಗಳ ಲೀಲೆ ಹಲವು ಬಗೆ. ದೇವನಾಡಿಸುವನು ನಮ್ಮನ್ನೆಲ್ಲಾ ತನಗೆ ಬೇಕಾದ ಹಾಗೆ !

ಯಾವಾಗ ಯಾರೊಂದಿಗೆ ಹೇಗೆ ಸಂಬಂಧ ಆರಂಭವಾಗಬೇಕು? ಸಂಬಂಧ ಯಾವ ಯಾವ ಹಂತದಲ್ಲಿ ಎಷ್ಟು ಪ್ರಮಾಣದಲ್ಲಿ ಗಾಢವಾಗುತ್ತಾ ಹೋಗುತ್ತದೆ, ಆ ಪ್ರತ್ಯೇಕ ಸಂಬಂಧಗಳಿಂದ ನಮಗಾಗುವ ಒಳಿತೆಷ್ಟು ಕೆಡುಕೆಷ್ಟು, ಹಿತವೆಷ್ಟು ಅಹಿತವೆಷ್ಟು, ನೋವೆಷ್ಟು ನಲಿವೆಷ್ಟು, ಲಾಭವೆಷ್ಟು ನಷ್ಟವೆಷ್ಟು, ಸುಖವೆಷ್ಟು ದುಃಖವೆಷ್ಟು ಹೀಗೆ ಹಲವು ಆಯಾಮಗಳಲ್ಲಿ ಹಾದು ಹೋಗುತ್ತದೆ.

ಕೇವಲ ಹಣಕ್ಕಾಗಿ ಅಥವಾ ಯಾವುದೋ ಸ್ವಾರ್ಥಕ್ಕಾಗಿ ಏರ್ಪಡುವ ಸಂಬಂಧಗಳ ಆಯಸ್ಸನ್ನು ಇಂತಿಷ್ಟೇ ಎಂದು ಹೇಳಲಾಗುವುದಿಲ್ಲ. ಅದು ಭದ್ರಬುನಾದಿಯಿಲ್ಲದೆ ಅಂದ ಆಕಾರವಿಲ್ಲದೆ ಗೊತ್ತುಗುರಿಯಿಲ್ಲದೆ ಕಟ್ಟಿದ ಮನೆಯಂತೆ. ಇಂದು ಯಾರನ್ನು ಕಂಡರೆ ನಮಗೆ ಪಂಚಪ್ರಾಣ ಎಂದು ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತೇವೋ ಅವರೇ ನಾಳೆ ನಮಗೆ ಪ್ರಾಣ ಹಿಂಡುವ ವ್ಯಕ್ತಿಯಾಗಿ ಬಿಡಬಹುದು ! ಸಂಬಂಧ ಅಪಾಯದ ಹಂತ ತಲುಪಬಾರದು ಎಂದಾದರೆ, ಸಂಬಂಧಗಳಲ್ಲಿ ಅಪಚಾರವಾಗಬಾರದು ಎಂದಾದರೆ, ಸಂಬಂಧಗಳಲ್ಲಿ ಆಪಾದನೆ ಇರಬಾರದು ಎಂದಾದರೆ ನಮ್ಮ ಸಂಬಂಧಕ್ಕೊಂದು ಸ್ಪಷ್ಟವಾದ ಉದ್ದೇಶ ಧ್ಯೇಯ ಇರಬೇಕು. ಯಾವ ಕಾರಣಕ್ಕಾಗಿ ಸಂಬಂಧ ಹುಟ್ಟುತ್ತಿದೆ..ಅದನ್ನು ಎಷ್ಟು ಕಾಲ ಹೇಗೆ ಬಾಳಿಸಬೇಕು..ಅದರ ಆಳ ಅಗಲ ಎಷ್ಟು ಪ್ರಮಾಣದಲ್ಲಿರಬೇಕು? ಆಯ ತಪ್ಪದಂತೆ ಅದನ್ನು ಹೇಗೆ ಜತನವಾಗಿ ಕಾಯಬೇಕು? ಯಾವ ಯಾವ ಕಾಲಘಟ್ಟದಲ್ಲಿ ಅದನ್ನು ಆಸ್ತೆಯಿಂದ ಕಾಪಾಡಿಕೊಂಡು ಹೋಗುವ ವ್ಯವಸ್ಥೆಯನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು? ಹೀಗೆ ಸಂಬಂಧದ ವಿಚಾರವಾಗಿ ವಿಚಾರಗಳು ವಿಶಾಲವಾಗಿದೆ. ಸಂಬಂಧಗಳನ್ನು ಸಾಕುವುದು ನಮ್ಮನ್ನು ನಾವು ಸಾಕಿಕೊಂಡಂತೆಯೇ. ಸಂಬಂಧಗಳನ್ನು ಬೇಜವಾಬ್ದಾರಿಯಿಂದ ಕೆಡಿಸಿಕೊಂಡರೆ ನಾವದನ್ನು ಸಾಕಿ ಕೊಂದಂತೆಯೇ ! ಸಂಬಂಧಗಳು ಹಾಳಾದಾಗ ನಮ್ಮ ಮನಸ್ಸು ಪಾಳು ಬಿದ್ದಂತಾಗಿರುತ್ತದೆ. ಸಂಬಂಧಗಳು ಮಿನುಗುವಾಗ ನಮ್ಮ ಮೊಗದಲ್ಲಿ ನಲಿವಿನ ರಾಗ ಸದಾ ಸಂತಸದ ಆಲಾಪನೆಯನ್ನು ಗುನುಗುತ್ತಾ ಇರುತ್ತದೆ. ಎರಡು ಜೀವಗಳು ಪರಸ್ಪರ ಆತ್ಮಪೂರ್ವಕವಾಗಿ ಬೆಸೆದುಕೊಳ್ಳುವ ಸಂಭ್ರಮವೇ ಸಂಬಂಧ. ಪ್ರತಿಯೊಬ್ಬರ ಜೊತೆಗಿನ ಉತ್ತಮ ಸಂಬಂಧವೂ ಪ್ರತ್ಯೇಕ ಸಂಭ್ರಮಗಳೇ. ಬಾಳ ಪಯಣದಲ್ಲಿ ಈಗಷ್ಟೇ ಪ್ರೀತಿಯ ಅಣ್ಣನಿಗೆ ಹೊಸ ಸಂಭ್ರಮವೊಂದು ಪುಟ್ಟ ತಂಗಿಯಿಂದ ಆರಂಭವಾಗಿದೆ ! ಈ ಸಂಭ್ರಮ ಅನಂತವಾಗುವಂತೆ ನೋಡಿಕೊಳ್ಳುವುದು ನಮ್ಮಿಬ್ಬರ ಜವಾಬ್ದಾರಿಯಲ್ಲವೆ ಪುಟ್ಟ ತಂಗಿ..?

ಚಿನ್ಮಯಣ್ಣ

೧೩-೩-೨೦೧೨

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.