ಅಂಕಣದೇಶ-ವಿದೇಶ

ದಿ ಸಿಎಂ : ಕಾಮನ್ ಮ್ಯಾನ್

17106ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ವಿದ್ ನಗರ ನರೇಂದ್ರ ಮೋದಿ 17 ಸೆಪ್ಟೆಂಬರ್, 1950ರಲ್ಲಿ ಹುಟ್ಟಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು.

ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು. 1967ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರೆಸ್ಸೆಸ್ ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು.

ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಚಿಕ್ಕಂದಿನಿಂದಲೇ ಹಲವಾರು ಕಷ್ಟ ಕೋಟಲೆಗಳನ್ನು ಸಮರ್ಥವಾಗಿ ಎದುರಿಸಬೇಕಾಯಿತು, ಆದರೆ, ಅಡೆತಡೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಕೇವಲ ವ್ಯಕ್ತಿತ್ವದ ಶಕ್ತಿ ಮತ್ತು ಧೈರ್ಯದಿಂದಲೇ ಸವಾಲುಗಳನ್ನು ಅವಕಾಶಗಳನ್ನಾಗಿ ಅವರು ಬದಲಿಸುತ್ತಿದ್ದರು. ಆದರಲ್ಲೂ ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಇನ್ನಷ್ಟು ಕಠಿಣ ಹಾದಿಯಲ್ಲಿ ಮೋದಿ ಸಾಗಬೇಕಾಯಿತು. ಬದುಕೆಂಬ ಯುದ್ಧದಲ್ಲಿ ನೈಜ ಸೈನಿಕನಂತೆ ಹೋರಾಟ ನಡೆಸಿಕೊಂಡು ಬಂದರು.

ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಜಾಯಮಾನ ಮೋದಿ ಅವರದಲ್ಲ. ಸೋಲುವುದು, ಹಿಂಜರಿಕೆ ವಿರುದ್ಧ ಪ್ರಬಲವಾಗಿ ಮುನ್ನುಗ್ಗುತ್ತಿದ್ದರು. ಈ ಬದ್ಧತೆಯೇ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವರಿಗೆ ಸಹಕಾರಿಯಾಯಿತು.

ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ನಿಸ್ವಾರ್ಥತೆ, ಸಾಮಾಜಿಕ ಜವಾಬ್ದಾರಿ, ಸಮರ್ಪಣಾ ಮನೋಭಾವ ಮತ್ತು ರಾಷ್ಟ್ರೀಯತೆಯ ಬೀಜ ಅವರಲ್ಲಿ ಮೊಳಕೆಯೊಡೆಯಿತು.

narendra_modi_prime_minister_india_103457_1920x1080ಆರೆಸ್ಸೆಸ್ ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು. ಪ್ರಮುಖವಾಗಿ 1974ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ 19 ತಿಂಗಳ (ಜೂನ್ 1975 ರಿಂದ ಜನವರಿ 1977) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದರು.

1987ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮೋದಿ ಧುಮುಕಿದರು. ಪಕ್ಷ ಸೇರಿದ ಒಂದು ವರ್ಷದಲ್ಲೇ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಆ ಹೊತ್ತಿಗಾಗಲೆ ಅವರು ಅತ್ಯಂತ ಸಮರ್ಥ ಸಂಘಟನಾಕಾರ ಎಂದು ಎಲ್ಲೆಡೆ ಗುರುತಿಸಿಕೊಂಡಿದ್ದರು.

ಅವರು ಪಕ್ಷದ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಸರಿದಾರಿಯಲ್ಲಿ ಸಾಗುವಂತೆ ಮಾಡುವ ಸವಾಲಿನ ಕಾರ್ಯ ಕೈಗೊಂಡರು. ರಾಜಕೀಯವಾಗಿ ಪ್ರಗತಿ ಕಂಡ ಪಕ್ಷದಿಂದ 1990ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಸಾಧ್ಯವಾಯಿತು. ಆದರೆ, ಈ ಮೈತ್ರಿ ಕೆಲವೇ ತಿಂಗಳುಗಳಲ್ಲಿ ಮುರಿದು ಬಿತ್ತು, ಆದರೆ, ಗುಜರಾತ್ ನಲ್ಲಿ 1995ರಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಮೂರನೇ ಎರಡು ಭಾಗ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದಿತು. ಆಂದಿನಿಂದ ಗುಜರಾತಿನಲ್ಲಿ ಬಿಜೆಪಿ ಆಡಳಿತ ಮುಂದುವರೆದಿದೆ.

1988 ಮತ್ತು 1995ರ ನಡುವೆ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರು ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಅವಧಿಯಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಮಟದಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿ ನೀಡಲಾಯಿತು. ಎಲ್ ಕೆ ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯಾವರೆಗಿನ ರಥಯಾತ್ರೆ (ಅತಿ ದೊಡ್ಡ ಯಾತ್ರೆ) ಮತ್ತು ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ(ದಕ್ಷಿಣ ಭಾರತ ತುತ್ತತುದಿ)ಯಿಂದ ಉತ್ತರದ ತುದಿಯಲ್ಲಿರುವ ಕಾಶ್ಮೀರದವರೆಗೆ ಯಾತ್ರೆ ನಡೆಸುವ ಗುರುತರ ಜವಾಬ್ದಾರಿಯನ್ನು ಮೋದಿಯವರು ಹೊತ್ತುಕೊಂಡರು. 1998ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ಮೋದಿ ನಿಭಾಯಿಸಿದ ಇದೇ ಎರಡು ರಥಯಾತ್ರೆಗಳು ಕಾರಣ ಎನ್ನಲಾಗಿದೆ.

download-narendra-modi-hd-photos1995ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದ ನರೇಂದ್ರ ಮೋದಿ ಅವರಿಗೆ ಭಾರತದ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಯಿತು. ಯುವ ನರೇಂದ್ರ ಮೋದಿ ಅವರಿಗೆ ಸಿಕ್ಕ ಹಿರಿಮೆ ಇದಾಗಿದೆ. 1998ರಲ್ಲಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಹುದ್ದೆ ಅಲಂಕರಿಸಿದರು. 2001ರ ಅಕ್ಟೋಬರ್ ವರೆಗೂ ಈ ಹುದ್ದೆಯನ್ನು ನಿಭಾಯಿಸಿದರು. ಈ ಹುದ್ದೆಯನ್ನು ಅವರು ಭಾರತದ ಅತ್ಯಂತ ಅಭಿವೃದ್ಧಿಶೀಲ ಮತ್ತು ಸಂಪದ್ಭರಿತ ರಾಜ್ಯವಾದ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೆ ನಿಭಾಯಿಸಿದರು.

ರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯವರು ಕರ್ತವ್ಯ ನಿಭಾಯಿಸುತ್ತಿದ್ದಾಗ, ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ, ಮತ್ತು ಅಷ್ಟೇ ಸೂಕ್ಷ್ಮವಾಗಿದ್ದ ಈಶಾನ್ಯ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿನ ಪಕ್ಷದ ವ್ಯವಹಾರ ಉಸ್ತುವಾರಿಯನ್ನು ವಹಿಸಲಾಯಿತು.

ಅನೇಕ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಪುನರಾಚಿಸಿ ಪಕ್ಷದ ಬಲವರ್ಧನೆಗೆ ಮೋದಿ ಕಾರಣರಾದರು. ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅನೇಕ ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಿದರು.

ಈ ಅವಧಿಯಲ್ಲಿ ಮೋದಿ ಅವರು ವಿಶ್ವದಾದ್ಯಂತ ಪ್ರವಾಸ ಮಾಡಿ ವಿವಿಧ ದೇಶದ ಪ್ರಮುಖ ನಾಯಕರನ್ನು ಭೇಟಿ ಮಾಡಿದರು. ಈ ಪ್ರವಾಸ ಅನುಭವ ಹೊಸ ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಇದರ ಜೊತೆಗೆ ಭಾರತವನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಿಷ್ಠಗೊಳಿಸಲು ಮೋದಿ ಅವರನ್ನು ಇನ್ನಷ್ಟು ಪ್ರೇರೇಪಿಸಿತು.

2001 ಅಕ್ಟೋಬರ್ ನಲ್ಲಿ ಗುಜರಾತ್ ಸರಕಾರವನ್ನು ಮುನ್ನಡೆಸಬೇಕೆಂದು ಅವರಿಗೆ ಪಕ್ಷದ ವರಿಷ್ಠರಿಂದ ಕರೆ ಬಂದಿತು. ಮೋದಿ ಅವರ ಸರಕಾರ ಅಕ್ಟೋಬರ್ 7, 2001ರಂದು ಅಧಿಕಾರವಹಿಸಿಕೊಂಡಾಗ ಗುಜರಾತಿನ ಆರ್ಥಿಕ ಪರಿಸ್ಥಿತಿ ಅನೇಕ ಪ್ರಾಕೃತಿಕ ವಿಕೋಪಗಳ ಜೊತೆ ಹೋರಾಟ ನಡೆಸಿತ್ತು. ಅದೇ ವರ್ಷ ಜನವರಿಯಲ್ಲಿ ಸಂಭವಿಸಿದ ಭಾರಿ ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ಅನಾಹುತಗಳು ಸರಕಾರವನ್ನು ಕಂಗೆಡಿಸಿತ್ತು. ಆದರೆ, ದೇಶ ವಿದೇಶಗಳನ್ನು ಸುತ್ತಾಡಿ ವಿಪತ್ತು ನಿರ್ವಹಣೆ ಅನುಭವ ಪಡೆದಿದ್ದ ಮೋದಿ ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು.

ಜನವರಿ 2001ರ ಭೀಕರ ಭೂಕಂಪದಿಂದ ಉಂಟಾದ ಹಾನಿಯನ್ನು ಸರಿಪಡಿಸುವುದು ಮತ್ತು ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವುದು, ಪುನರ್ನಿಮಾಣ ಕಾರ್ಯ ಮುಖ್ಯಮಂತ್ರಿ ಮೋದಿ ಅವರು ಎದುರಿಸಿದ ಅತಿ ದೊಡ್ಡ ಸವಾಲಾಗಿತ್ತು. ತೀವ್ರ ಹಾನಿಗೊಳಗಾಗಿದ್ದ ಭುಜ್ ನಗರ ಸಂಪೂರ್ಣ ನಿರ್ನಾಮವಾಗಿತ್ತು ಮತ್ತು ಸಾವಿರಾರು ನಿರಾಶ್ರಿತರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದರು. ಆದರೆ ಇಂದು ಭುಜ್ ಅಚ್ಚರಿಪಡುವಂತೆ ಅಭಿವೃದ್ಧಿ ಕಂಡಿದೆ. ವಿಪತ್ತು ಪರಿಸ್ಥಿತಿಗಳನ್ನು ಅವಕಾಶವಾಗಿ ಎದುರಿಸಿ ಸಮರ್ಥವಾಗಿ ನಿಭಾಯಿಸುವ ಮೋದಿ ಅವರ ಸರ್ವಾಂಗೀಣ ಅಭಿವೃದ್ಧಿ ದ್ಯೋತಕವಾಗಿ ಭುಜ್ ನಗರ ನಿಂತಿದೆ.

ಪುನರ್ ವಸತಿ ಕಲ್ಪಿಸುವ ಕಾರ್ಯ ನಡೆಯುತ್ತಿರುವಾಗಲೇ ಭುಜ್ ನಗರವನ್ನು ಉತ್ತಮ ನಗರವಾಗಿ ಪುನಾರಚಿಸುವ ದೂರದೃಷ್ಟಿಯನ್ನು ಕಳೆದುಕೊಂಡಿರಲಿಲ್ಲ. ಗುಜರಾತ್ ಯಾವಾಗಲೂ ಔದ್ಯಮಿಕ ಪ್ರಗತಿಯತ್ತ ತನ್ನ ದೃಷ್ಟಿ ನೆಟ್ಟಿದೆ. ಸಾಮಾಜಿಕ-ಆರ್ಥಿಕ ಬೆಳವಣಿಗೆಗಾಗಿ ಸಾಮಾಜಿಕ ವಲಯದಲ್ಲಿ ಉಂಟಾಗಿದ್ದ ಅಸಮತೋಲನವನ್ನು ಸರಿಪಡಿಸಲು ಮೋದಿ ಅಂದೇ ನಿರ್ಧರಿಸಿದ್ದರು. ರಾಜ್ಯದ ಪ್ರಗತಿಗಾಗಿ ಐದು ಅಂಶಗಳ ಸಮನ್ವಯ ಅಭಿವೃದ್ಧಿ ಯೋಜನೆ ಪಂಚಾಮೃತ್ ಯೋಜನೆ ಹುಟ್ಟುಹಾಕಿದರು. ಅವರ ನಾಯಕತ್ವದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಮುಂತಾದ ಕ್ಷೇತ್ರಗಳು ಭಾರಿ ಪರಿವರ್ತನೆಯನ್ನು ಕಂಡಿವೆ. ರಾಜ್ಯದ ಭವಿಷ್ಯತ್ತಿನ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದ ಮೋದಿ, ಅನೇಕ ಪರಿವರ್ತನಾ ಕಾರ್ಯಕ್ರಮಗಳನ್ನು ಆರಂಭಿಸಿದರು, ಸರಕಾರದ ಆಡಳಿತದ ದಿಕ್ಕನ್ನು ಬದಲಾಯಿಸಿ ಯೋಜನಾಬದ್ಧ ಸುಧಾರಣೆ ಕಾರ್ಯಕ್ರಮಗಳಿಗೆ ಹೆಚ್ಚಿನ ಒತು ನೀಡಿದರು. ಈ ಯೋಜನೆಗಳ ಯಶಸ್ವಿನಿಂದ ಗುಜರಾತ್ ಅಭಿವೃದ್ಧಿಯ ಪಥದಲ್ಲಿ ಸಾಗಿದೆ.

ಅವರು ಅಧಿಕಾರಕ್ಕೆ ಬಂದು 100 ದಿನಗಳಲ್ಲೇ ಅವರ ಸಾಮರ್ಥ್ಯ, ಆಕಾಂಕ್ಷೆಗಳು ಗೋಚರಿಸತೊಡಗಿದವು. ಆಡಳಿತ ನಡೆಸುವ ಸಾಮರ್ಥ್ಯ, ಸ್ಪಷ್ಟ ನಿಲುವು ಮತ್ತು ದೃಢ ವ್ಯಕ್ತಿತ್ವದಿಂದಾಗಿ 2002ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 182 ಸೀಟುಗಳ ಪೈಕಿ 128 ಸೀಟುಗಳನ್ನು ಪಡೆದು ಭರ್ಜರಿ ಗೆಲುವಿನಿಂದಾಗಿ ಮೋದಿ ಮತ್ತೆ ಅಧಿಕಾರಕ್ಕೆ ಮರಳಿ ಬಂದರು.

ಇದೇ ರೀತಿ ಸಾಧನೆ 2007ರಲ್ಲೂ ಮುಂದುವರೆಯಿತು ಮತ್ತೊಂದು ಚುನಾವಣೆಯಲ್ಲಿ ಮೋದಿ ಅವರ ನೇತೃತ್ವದ ಬಿಜೆಪಿ ದಾಖಲೆಯ ವಿಜಯ ಸಾಧಿಸಿತು. 2012 ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ ಅವರು ಗುಜರಾತಿನ ಜನರ ಸೇವೆ ಸಲ್ಲಿಸಲು ಅಧಿಕಾರ ವಹಿಸಿಕೊಂಡು 4,000 ದಿನ ಯಶಸ್ವಿಯಾಗಿ ಪೂರೈಸಿದರು. ಸತತ ಮೂರು ಚುನಾವಣೆಯಲ್ಲಿ ಮೋದಿ ಅವರಿಗೆ ಗುಜರಾತಿನ ಜನರ ಬೆಂಬಲ, ಮನ್ನಣೆ ಸಿಕ್ಕಿತು. 2002 ಹಾಗೂ 2007 (117 ಸೀಟುಗಳು)ರಲ್ಲಿ ಪಕ್ಷವನ್ನು ಗೆಲ್ಲುವಂತೆ ಮಾಡಿದ ಮೋದಿ ಅವರು 2012ರ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ 115 ಸೀಟುಗಳೊಂದಿಗೆ ವಿಜಯ ಪತಾಕೆ ಹಾರಿಸಿತು. ನರೇಂದ್ರ ಮೋದಿ ಅವರು ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ 2012ರ ಡಿಸೆಂಬರ್ 12ರಂದು ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಜನರ ನಿರೀಕ್ಷೆಗೂ ಮೀರಿದ ಫಲವನ್ನು ಕಾಣಬಹುದಾಗಿದೆ. ಇ-ಆಡಳಿತ, ಬಂಡವಾಳ ಹೂಡಿಕೆ, ಬಡತನ ನಿರ್ಮೂಲನ, ಇಂಧನ, ಎಸ್ಇಜೆಡ್, ರಸ್ತೆ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ. ಗುಜರಾತಿನ ಪ್ರಗತಿ ಕಥೆ ಯಾವುದೇ ಒಂದು ಕ್ಷೇತ್ರದ ಅಭಿವೃದ್ಧಿಯನ್ನು ಆಧಾರವಾಗಿಲ್ಲ, ಬದಲಿಗೆ ಎಲ್ಲಾ ಮೂರು ಪ್ರಮುಖ ಕ್ಷೇತ್ರ(ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರ)ಗಳ ಅಭಿವೃದ್ಧಿಯ ಪ್ರತೀಕವಾಗಿದೆ.

ರಾಜ್ಯದ ಪ್ರಗತಿಯಲ್ಲಿ ಗುಜರಾತಿನ ಜನರ ಸಕ್ರಿಯ ಪಾಲುದಾರಿಕೆಯಿಂದ ಇದೆಲ್ಲ ಸಾಧ್ಯವಾಗಿದೆ. ಗುಜರಾತಿನ ತ್ವರಿತ ಪ್ರಗತಿಗೆ ಮೋದಿ ಅವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಹಾಗೂ ಜನಪರ, ಉತ್ತಮ ಆಡಳಿತ ಪರ(P2G2) ಮಂತ್ರವೇ ಕಾರಣವಾಗಿದೆ.

ಭಾರಿ ಪ್ರತಿರೋಧದ ನಡುವೆಯೂ ನರ್ಮದಾ ಅಣೆಕಟ್ಟನ್ನು 121.9 ಮೀಟರ್ ಎತ್ತರಕ್ಕೇರಿಸಲು ಹೋರಾಟ ನಡೆಸಿದರು. ನಿರ್ಮಾಣಕ್ಕೆ ಅಡ್ಡಿಪಡ್ಡಿಪಡಿಸುವ ವಿರೋಧಿಗಳನ್ನು ಹಿಮ್ಮೆಟ್ಟಿಸಲು ಅವರು ಉಪವಾಸ ಸತ್ಯಾಗ್ರಹವನ್ನೂ ಮಾಡಿದರು. ಜಲ ಸಂಪನ್ಮೂಲ ರಕ್ಷಣೆ ಮತ್ತು ನಿರ್ವಹಣೆ, ಸದ್ಬಳಕೆಗಾಗಿ ಗುಜರಾತಿನಲ್ಲಿ ಅವರು ಪ್ರಾರಂಭಿಸಿದ ‘ಸುಜಲಾಂ ಸುಫಲಾಂ’ ಯೋಜನೆ ಮಹತ್ವದ್ದಾಗಿದೆ.

ಮಣ್ಣು ಫಲವತ್ತತೆ ಕಾರ್ಡ್, ರೋಮಿಂಗ್ ರೇಷನ್ ಕಾರ್ಡ್ ಹಾಗೂ ರೋಮಿಂಗ್ ಶಾಲೆ ಕಾರ್ಡ್ ಯೋಜನೆಗಳು ಮೋದಿ ಅವರಿಗಿರುವ ಜನ ಸಾಮಾನ್ಯರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ.

ವಿವಿಧ ಆಯಾಮಗಳಲ್ಲಿ ಗುಜರಾತಿನ ಅಭಿವೃದ್ಧಿಗಾಗಿ ಕೃಷಿ ಮಹೋತ್ಸವ, ಚಿರಂಜೀವಿ ಯೋಜನೆ, ಮಾತೃ ವಂದನಾ, ಬೇಟಿ ಬಚಾವೋ (ಹೆಣ್ಣುಮಗುವನ್ನು ಉಳಿಸಿ) ಆಂದೋಲನ, ಜ್ಯೋತಿಗ್ರಾಮ ಯೋಜನೆ, ಕರ್ಮಯೋಗಿ ಅಭಿಯಾನ, ಇ-ಮಮತಾ, ಇಎಂಪವರ್, ಸ್ಕೋಪ್, ಐಕ್ರಿಯೇಟ್ ಇತ್ಯಾದಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ.

ದೃಷ್ಟಿಕೋನ, ಪರಿಕಲ್ಪನೆ ಮತ್ತು ನಿಗದಿತ ಅವಧಿಯಲ್ಲಿಯೇ ಪೂರೈಸುವ ನೈಪುಣ್ಯತೆ ಮೋದಿಯವರನ್ನು ಉತ್ತಮ ರಾಜನೀತಿಜ್ಞರನ್ನಾಗಿ ಮಾಡಿವೆ. ರಾಜಕೀಯದ ಹಿನ್ನೆಲೆಯಲ್ಲಿದ್ದುಕೊಂಡೂ ಬರೀ ಚುನಾವಣಾ ದೃಷ್ಟಿಯಿಂದ ಚಿಂತಿಸದೆ ಮುಂದಿನ ಜನಾಂಗದ ಬಗೆಗಿನ ಮೋದಿ ಅವರ ಚಿಂತನೆ ನಿಜಕ್ಕೂ ಅನನ್ಯ.

ಯುವ ಮನಸ್ಸಿನ ಮತ್ತು ಚೈತನ್ಯದ ಚಿಲುಮೆಯಾಗಿರುವ ಮೋದಿಯವರು ತಮ್ಮ ಹೊಸಬಗೆ ಚಿಂತನೆ, ದೂರದೃಷ್ಟಿತ್ವ, ಪರಿಕಲ್ಪನೆಗಳನ್ನು ಗುಜರಾತಿನ ಜನರಿಗೆ ಅತ್ಯಂತ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಗುಜರಾತಿನ ಸುಮಾರು 6 ಕೋಟಿಗೂ ಅಧಿಕ ಜನರಲ್ಲಿ ಹೊಸ ಆಶಾಭಾವ, ನಂಬಿಕೆ, ವಿಶ್ವಾಸವನ್ನು ಹುಟ್ಟುಹಾಕಿದ್ದಾರೆ. ಎಂದೋ ಕಂಡ ಜನಸಾಮಾನ್ಯರೊಬ್ಬರನ್ನು ಗುರುತಿಸಿ ಹೆಸರಿಟ್ಟು ಕರೆಯುವ ಅಸಾಧ್ಯ ನೆನಪಿನ ಶಕ್ತಿಯುಳ್ಳ ಮೋದಿ ಈ ಕಾರಣಗಳಿಂದ ಜನ ಸಮಾನ್ಯರ ಆರಾಧ್ಯ ದೈವವಾಗಿದ್ದಾರೆ.

ಧಾರ್ಮಿಕ ಗುರುಗಳ ಬಗ್ಗೆ ಅವರಿಗಿರುವ ಗೌರವ ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯವನ್ನು ಮೂಡಿಸಿದೆ. ಧರ್ಮ, ರಾಜಕೀಯ ಭೇದ ಮರೆತು ಎಲ್ಲಾ ವಯೋಮಾನದ, ಎಲ್ಲಾ ವರ್ಗದ ಜನರು ಅವರನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಮನದಟ್ಟಾಗುವಂತೆ ಆಡಳಿತ ನಡೆಸಿ ತಮ್ಮ ಜೀವನಮಟ್ಟ ಎತ್ತಿಹಿಡಿಯುವ ನಾಯಕ ಎಂದು ಗುರುತಿಸಿದ್ದಾರೆ. ಅತ್ಯಂತ ನಿಪುಣ ವಾಗ್ಮಿಯಾಗಿರುವ ಅವರು ನಗರ ಮತ್ತು ಹಳ್ಳಿ ಜನರ ಪ್ರೀತಿ ಗಳಿಸಿದ್ದಾರೆ. ಹೀಗಾಗಿ ಸಮಾಜದ ಎಲಾ ವರ್ಗ, ಜಾತಿ ಹಾಗೂ ವಿವಿಧ ಆರ್ಥಿಕ ಸ್ತರದಲ್ಲಿರುವ ಜನರು ಮೋದಿ ಅವರ ಅನುಯಾಯಿಯಾಗಿದ್ದಾರೆ.

ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ ವಿಶ್ವದೆಲ್ಲೆಡೆಯಿಂದ ಗುಜರಾತಿಗೆ ಹಲವಾರು ಪ್ರಶಸ್ತಿ ಹಾಗೂ ಮನ್ನಣೆಗಳು ಸಂದಿವೆ. ವಿಕೋಪದ ಪರಿಣಾಮ ತಗ್ಗಿಸಿದ್ದಕ್ಕಾಗಿ ನೀಡುವ ಯುಎನ್ ಸಸಕಾವಾ ಪ್ರಶಸ್ತಿ, ಆಡಳಿತದಲ್ಲಿ ಹೊಸ ಬದಲಾವಣೆ ತಂದಿದ್ದಕ್ಕಾಗಿ ಕಾಮನ್ವೆಲ್ತ್ ಅಸೋಸಿಯೇಷನ್ ಫಾರ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅಂಡ್ ಮ್ಯಾನೇಜ್ ಮೆಂಟ್ ಪ್ರಶಸ್ತಿ, ಯುನೆಸ್ಕೋ ಪ್ರಶಸ್ತಿ, ಇ-ಆಡಳಿತಕ್ಕಾಗಿ ಸಿಎಸ್ಐ ಪ್ರಶಸ್ತಿ ಮುಂತಾದ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಗುಜರಾತ್ ಪಾತ್ರವಾಗಿದೆ. ಸಾರ್ವಜನಿಕರಿಂದ ಸತತ ಮೂರು ವರ್ಷ ದೇಶದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಅವರನ್ನು ಗುರುತಿಸಲಾಗಿದ್ದು ಅವರು ಮಾಡಿರುವ ಸಾಧನೆಗೆ ಹಿಡಿದ ಕನ್ನಡಿ.

ಗುಜರಾತನ್ನು ಜಾಗತಿಕ ನಕಾಶೆಯಲ್ಲಿ ಗೋಚರಿಸುವಂತೆ ಮಾಡಿರುವ ವೈಬ್ರಂಟ್ ಗುಜರಾತ್, ಬಂಡವಾಳ ಹೂಡಿಕೆಗೆ ಅತ್ಯಂತ ನೆಚ್ಚಿನ ರಾಜ್ಯವಾಗಿ ಹೊರಹೊಮ್ಮಿದೆ. ಕಳೆದ ಕೆಲ ವರ್ಷಗಳಿಂದ ಗುಜರಾತ್ ಸಂಪದ್ಭರಿತ ರಾಜ್ಯವಾಗಿ ಮುನ್ನಡೆದಿದೆ. 2013ರ ವೈಬ್ರಂಟ್ ಗುಜರಾತ್ ಕಾರ್ಯಾಗಾರದಲ್ಲಿ ವಿಶ್ವದೆಲ್ಲೆಡೆಯಿಂದ ಸುಮಾರು 120ಕ್ಕೂ ಅಧಿಕ ರಾಷ್ಟ್ರಗಳು ಪಾಲ್ಗೊಂಡಿದ್ದು, ಈ ಯೋಜನೆಯ ಶಕ್ತಿಯನ್ನು ಸಾರುತ್ತದೆ.

ಕಳೆದ ಕೆಲವು ವರ್ಷಗಳಿಂದ ಗುಜರಾತ್ ರಾಜ್ಯವನ್ನು ಎರಡಂಕಿ ಪ್ರಗತಿ ದರದಲ್ಲಿ ಮುನ್ನಡೆಸುತ್ತಾ ಪ್ರಗತಿ ಮತ್ತು ಅಭಿವೃದ್ಧಿ ಪಥವನ್ನು ನಿರಂತರವಾಗಿ ಕಾಯ್ದುಕೊಂಡಿರುವ ಮೋದಿ ಒಂದೊಂದೇ ಮೈಲುಗಲ್ಲುಗಳನ್ನು ದಾಟುತ್ತಾ ಕಾಲವೆಂಬ ಮರಳಿನಲ್ಲಿ ಒಂದೊಂದೇ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಸಾಗುತ್ತಲೇ ಇದ್ದಾರೆ.

ಕೆಳ ಹಂತದಿಂದ ರಾಜಕೀಯ ಉತ್ತುಂಗಕ್ಕೇರಿದ ಮೋದಿ ಅವರ ಬದುಕಿನ ಪಯಣದ ಅವಲೋಕನ ಮಾಡಿದರೆ ಸಾಕು ಅವರ ಸಾಧನೆಯ ಕಥೆಗಳು ತೆರೆದುಕೊಳ್ಳುತ್ತವೆ.

ಯಾರೇ ಆಗಲಿ ಹೊಸ ಹೊಸ ಯೋಜನೆ ಮತ್ತು ನಾಯಕತ್ವದಲ್ಲಿರಬೇಕಾದ ಆದರ್ಶಗಳತ್ತ ನೋಡುತ್ತಿದ್ದರೆ ನರೇಂದ್ರ ಮೋದಿಯವರಿಗಿಂತ ರೋಲ್ ಮಾಡೆಲ್ ಇನ್ನೊಬ್ಬರಿಲ್ಲ. ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ಧೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಅವರು ಯುವಜನತೆಗೆ ತೋರಿಸಿಕೊಟ್ಟಿದ್ದಾರೆ. ನಿಷ್ಕಳಂಕ ಸೇವಾಮನೋಭಾವವುಳ್ಳ, ಉದಾತ್ತ ನಿಲುವು ಹೊಂದಿರುವ, ಅಪಾರ ಪ್ರೀತಿ ಗಳಿಸಿರುವ ಏಕೈಕ ವ್ಯಕ್ತಿಯನ್ನು ಕಾಣುವುದು ದುರ್ಲಭ. ಅತ್ಯಂತ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಸಾಧಿಸಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಅತಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.