ಅಂಕಣಪುಟ್ಟ ತಂಗಿಗೆ

ಯಾವುದು ಮಹತ್ತರ ಸಾಧನೆ?

ಪುಟ್ಟ ತಂಗಿಗೆ-ಭಾಗ-೩

ಮುದ್ದು ಪುಟಾಣಿ..ಪುಟ್ಟ ತಂಗಿ..ಇಂದು ಮುಂಜಾನೆ ಕಣ್ ತೆರೆಯುವಷ್ಟರಲ್ಲಿ ನನ್ನ ಕಂಗಳು ಇನ್ನೂ ಹೊದ್ದು ಮಲಗಿದ್ದ ಬೆಂಗಳೂರೆಂಬ ಮಾಯಾನಗರಿಯ ಮಾಯೆಗೆ ಕಣ್ ತೆರೆದುಕೊಂಡು ಆಲೋಚಿಸತೊಡಗಿತು. ಅದೆಷ್ಟೊ ಬಾರಿ ನನ್ನ ಅನುಭವಕ್ಕೆ ಬಂದಿದೆ. ಇಲ್ಲಿ ಎಲ್ಲವೂ ಇದೆ ಅಪಾರ..ಆದರೂ ಎಲ್ಲದಕ್ಕೂ ಬರ ! ಹಣಕ್ಕೆ ಬರ, ಸಮಯಕ್ಕೆ ಬರ, ಮನಬಿಚ್ಚಿ ಮಾತಡಲು ಬರ, ಪೂರ್ಣ ಸತ್ಯ ಹೇಳಲು ಬರ, ನೇರ ನಡೆನುಡಿಗೆ ಬರ, ತಮ್ಮ ತನವನ್ನುಳಿಸಿಕೊಳ್ಳುವ ಮನೋಸ್ಥಿತಿಗಳಿಗೆ ಬರ, ಸಾಮಾನ್ಯ ಸಂಸ್ಕಾರಕ್ಕೆ ಬರ.. ಆದರೆ ಮೋಸ ಕಪಟ ವಂಚನೆಗಳಿಗಿಲ್ಲ ಬರ, ಸುಳ್ಳೇ ನಕ್ಕು ಬಿಡುವ ನಗುವಿಗಿಲ್ಲ ಬರ, ಇನ್ನೊಬ್ಬರನ್ನು ಮೋಸದ ಜಾಲದಲ್ಲಿ ಹೆಣೆದು ಹೆಣಗಾಡುವಂತೆ ಮಾಡುವ ದುರ್ಬುದ್ಧಿಗಳಿಗಿಲ್ಲ ಬರ, ಒಳಗೊಂದು ಹೊರಗೊಂದು ಇರುವ ನಿಗೂಢ ವ್ಯಕ್ತಿತ್ವಗಳಿಗಿಲ್ಲ ಬರ, ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ವಾಹನಗಳ ಹೊಗೆ ಮಿಶ್ರಿತ ತಂಗಾಳಿಯಲ್ಲಿ ತೇಲುವವರಿಗಿಲ್ಲ ಬರ, ಅಂಥಹ ತಂಗಾಳಿ ಬೇಡವೆಂದು ಏ.ಸಿ ಕಾರುಗಳಲ್ಲಿ ಕುಳಿತು ಇನ್ನೊಬ್ಬರ ಮನವನ್ನು ಘಾಸಿಗೊಳಿಸುವಲ್ಲಿ ಅತಿಯಾದ ಶ್ರದ್ಧೆಯಿಂದಿರುವ ಸಿರಿವಂತರಿಗಿಲ್ಲ ಬರ, ಅತಿಥಿ ಸತ್ಕಾರಕ್ಕಂತೂ ಇನ್ನಿಲ್ಲದಂತೆ ಬರ ! ಅತಿಥಿ ದೇವೋ ಭವ ಎನ್ನುವ ನಮ್ಮ ಸಂಸ್ಕೃತಿಗೆ ತಿಥಿ ಮಾಡಿದ್ದೇ ಇಂಥಹ ಮಹಾನಗರಿಗಳು ಮಾಯಾನಗರಿಗಳು.

ಮನೆಗೆ ಬರುತ್ತೇವೆ ಎಂದರೆ ಕಛೇರಿಗೆ ಬನ್ನಿ ಎನ್ನುತ್ತಾರೆ..ಕಛೇರಿಗೆ ಬರುತ್ತೇವೆ ಎಂದರೆ ಬೇಡ ಸಂಜೆ ಕಾಫಿ ಡೇಗೆ ಬನ್ನಿ..ಆರಾಮಾಗಿ ಮಾತಾಡೋಣ ಎನ್ನುತ್ತಾರೆ..ಕಾಫಿ ಡೆ ಎದುರಿಗೆ ನಿಂತು ಕರೆ ಮಾಡಿದರೆ “ಕ್ಷಮಿಸಿ ( ಬಹಳಷ್ಟು ಜನ ಇದನ್ನು ಕೂಡ ಹೇಳುವುದಿಲ್ಲ..ಹೇಳಿದರೂ ನಾಟಕೀಯವಾಗಿ..) ನಿಮ್ಮನ್ನು ಭೇಟಿ ಮಾಡಲು ಆಗುತ್ತಿಲ್ಲ..ಇನ್ನೊಂದು ಮೀಟಿಂಗ್‌ಗೆ ತುರ್ತಾಗಿ ಕರೆ ಬಂದಿದೆ..ನಾಳೆ ನಿಮ್ಮನ್ನು ಭೇಟಿ ಮಾಡುತ್ತೇನೆ..” ಎನ್ನುತ್ತಾರೆ. ಇಂಥಹ ನಾಳೆಗಳು ಅವರ ನಾಲಿಗೆಯಲ್ಲಿ ಬಹಳ ಸಾರಿ ಪುನರಾವರ್ತನೆಯಾಗುತ್ತದೆ. ಆದರೆ ವರ್ತನೆ ಯಾವಾಗ ಬೇಕಾದರೂ ಬದಲಾಗಿಬಿಡುತ್ತದೆ !.ತಮಗೆ ನಮ್ಮ ಅಗತ್ಯ ಅನಿವಾರ್ಯವಾಗಿ ಇದೆ ಎಂದಾಗ ನಾವಿರುವ ಜಾಗಕ್ಕೇ ಕಾರನ್ನು ಕಳಿಸಿ ತಮ್ಮೆಡೆಗೆ ಕರೆಸಿಕೊಳ್ಳುತ್ತಾರೆ ! ತಮಗೆ ಸಮಯವೇ ಇಲ್ಲ ಎನ್ನುವವರು ಇನ್ನೊಬ್ಬರ ಸಮಯವನ್ನು ತಾವೂ ಹಾಳು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ. ತನಗೆ ಖಾಸ ಗೆಳೆಯ ಎನ್ನುವಾತನೆ ತನ್ನ ಕೆಲಸವಾದ ನಂತರ ಆ ಗೆಳೆಯನನ್ನು ಕಸದಂತೆ ಕಾಣತೊಡಗುತ್ತಾನೆ ! ಮೊದಲು ಖಾಸ ಗೆಳೆಯ..ನಂತರ ಕಸದಂತೆ ಗೆಳೆಯ ! ನೂರಕ್ಕೆ ಹತ್ತು ಜನ ಇಂಥವರಿಂದ ಇಡೀ ನಗರದ ಘನತೆಗೆ ಕುತ್ತು ಬಂದಿದೆ. ಹಾಗಂತ ಇದು ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ನಾಡಿನ ಎಲ್ಲೆಡೆಯೂ ಇಂಥವರಿದ್ದಾರೆ. ಇಲ್ಲಿ ಜನ ಸಂಖ್ಯೆ ಹೆಚ್ಚಿರುವುದರಿಂದ ಅಂಥವರೇ ಹೆಚ್ಚಾಗಿರುವಂತೆ ಕಾಣುತ್ತದೆ. ಅದೂ ಅಲ್ಲದೆ ಅಂಥವರ ಪ್ರಮಾಣ ಕ್ರಮೇಣವಾಗಿ ಕಡಿಮೆಯಾಗಬಹುದು. ಹೇಗೆ ಗೊತ್ತಾ?..ನನ್ನ ಪುಟ್ಟ ತಂಗಿಯಂಥವರು ಈ ಊರಿಗೆ ಬಂದು ಸೇರಿದ್ದಾರೆ. ನನ್ನ ಪುಟ್ಟ ತಂಗಿ ವಾಸವಾಗಿರುವ ಈ ಬೆಂಗಳೂರಿಗೆ ಮೊದಲ ಬಾರಿ ಬಂದಿಳಿದಾಗ ನನಗೆ ಈ ನಗರ ಕಂಡಿದ್ದೇ ಬೇರೆ ರೀತಿ. ನನ್ನೊಳಗೆ ಉಂಟಾದ ಭಾವಾನಂದವದು ಹೊಸ ರೀತಿ. ಮುಂಜಾನೆಯ ಮಂಜಿನ ಮುಸುಕಲ್ಲಿ ಕಾಣುತಿದ್ದವರೆಲ್ಲಾ ನನ್ನ ಪುಟ್ಟ ತಂಗಿಯಂತೇ ಕಾಣುತ್ತಿದ್ದರು ! ಅವರೆಲ್ಲರಲ್ಲಿ ನನ್ನ ಪುಟ್ಟ ತಂಗಿಯ ಹೂನಗುವನ್ನೇ ನಾನು ಹುಡುಕುತ್ತಿದ್ದೆ ! ನನ್ನ ಪುಟ್ಟ ತಂಗಿಯಂಥವರೇ ಈ ನಗರದ ತುಂಬೆಲ್ಲಾ ತುಂಬಿಕೊಂಡರೆ ಅದೆಷ್ಟು ಚೆನ್ನ..! ಪುಟ್ಟ ತಂಗಿ..ನಾನು ನಿನ್ನನ್ನು ಕಾಣಬಹುದು..ಕಾಣದೆಯೂ ಇರಬಹುದು..ಆದರೆ ಈ ಕ್ಷಣದಲ್ಲಿ ನನ್ನದೊಂದು ಮಾತು ನಿನಗಾಗಿ..ನನಗಾಗಿ..ನಮ್ಮಿಬ್ಬರಿಗಾಗಿ..ನಾವೆಷ್ಟೇ ಬುದ್ಧಿವಂತರಾಗಿದ್ದರೂ..ಕೀರ್ತಿವಂತರಾಗಿದ್ದರೂ..ಹಣವಂತರಾಗಿದ್ದರೂ..ಇನ್ನೊಬ್ಬರ ಮನಸ್ಸಿಗೆ ನೋವು ಮಾಡದಂತೆ ನಡೆದುಕೊಳ್ಳುವುದೇ..ಅಂಥಹ ನಡತೆ ಹೊಂದುವುದೇ ಮಹತ್ತರ ಸಾಧನೆಯಲ್ಲವೆ? ಪುಟ್ಟ ತಂಗಿ..ನಾವಿಬ್ಬರೂ ಎಲ್ಲೇ ಇದ್ದರೂ ..ಹೇಗೇ ಇದ್ದರೂ..ಇಂಥಹ ಸಾಧನೆಯಲ್ಲಿ ಹಿಮ್ಮುಖವಾಗದಂತೆ ಜಾಗೃತರಾಗಿರಬೇಕಲ್ಲವೆ?

ಚಿನ್ಮಯಣ್ಣ

25-4-2012

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.