ಪುಟ್ಟ ತಂಗಿಗೆ-ಭಾಗ-೧
ಮುದ್ದು ಪುಟಾಣಿ..ಪುಟ್ಟ ತಂಗಿ..ಸೌಖ್ಯವಾ? ನೀನು ಪೂರ್ಣ ಸೌಖ್ಯವಾಗಿಲ್ಲವೆಂದು ನನಗೆ ನಿನ್ನೆ ಗೊತ್ತಾಯಿತು. ಹಿಂದೆಲ್ಲಾ ನನ್ನ ಭಾವನೆಗಳಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದ..ಪ್ರತಿಸ್ಪಂದಿಸುತ್ತಿದ್ದ ನೀನು ಇತ್ತೀಚೆಗೆ ಇದ್ದಕ್ಕಿದ್ದಂತೇ ಮೌನಕ್ಕೆ ಶರಣಾಗಿದ್ದನ್ನು ನೋಡಿದರೆ ನೀನು ಪರಿಸ್ಥಿಯ ಗಾಂಭೀರ್ಯಕ್ಕೆ ಶರಣಾಗಿರುವೆ ಎಂದು ನನಗೆ ನಿನ್ನೆಯಷ್ಟೇ ಗೊತ್ತಾಯಿತು. ಅದೂ ನಾನು ನಿನ್ನನ್ನು ಹಟ ಹಿಡಿದು ಏನಾಯಿತೆಂದು ಕೇಳಿದ್ದಕ್ಕೆ ! ಇಲ್ಲವಾದರೆ ನನಗೆ ನೀನು ಏನನ್ನೂ ಹೇಳದೆ ಹೇಳಲಾಗದಷ್ಟು ನೋವನ್ನೂ ಅನುಮಾನಗಳನ್ನೂ ಗೊಂದಲಗಳನ್ನೂ ನೀಡುತ್ತಲೇ ಇರುತ್ತಿದ್ದೆ. ನಿನ್ನ ನೋವು, ಅಸಹಾಯಕತೆಯನ್ನು ನನ್ನೊಡನೆ ಹಂಚಿಕೊಳ್ಳಲು ನಿನಗೆ ಇಷ್ಟು ಕಾಲ ಬೇಕಾಯಿತಾ?! ಅದೂ ನಾನೇ ನಿನ್ನನ್ನು ಕೇಳಿ ತಿಳಿದುಕೊಳ್ಳಬೇಕಾ? ನೀನಾಗಿಯೇ ನಾಲ್ಕೇ ನಾಲ್ಕು ಪದಗಳಲ್ಲಿ ಒಮ್ಮೆಯಾದರೂ ನನಗೆ ಹೇಳಬಾರದಾ? ನಾನು ನಿನಗೆ ಅಷ್ಟೂ ಆತ್ಮೀಯನಲ್ಲವಾ? ಅಥವಾ ನಿನ್ನ ಆತ್ಮೀಯತೆಯ ಪರಿಧಿಯ ಒಳಗೆ ನೀನು ನಿನ್ನಣನಿಗೂ ಸ್ಥಾನ ನೀಡದೆ ಹೊರಹಾಕಿರುವೆಯಾ? ನಿನ್ನ ಅಣ್ಣನ ಜೊತೆಗಿನ ಬಾಂಧವ್ಯ ನಿನಗೆ ಹೊರೆಯೆನಿಸಿದೆಯಾ? ಹಾಗಾಗಿಯೇ ನನಗೆ ಈ ರೀತಿ ಕಾಯಿಸಿ ಕಾಯಿಸಿ ಬರೆ ಎಳೆಯುವೆಯಾ?
ಹೋಗಲಿ ಬಿಡು…ಎಷ್ಟಾದರೂ ನೀನು ನನ್ನ ಪುಟ್ಟ ತಂಗಿಯಲ್ಲವೆ? ನಿನ್ನನ್ನು ಕ್ಷಮಿಸದೆ ಇನ್ನಾರನ್ನು ನಾನು ಕ್ಷಮಿಸಲಿ? ಪಾಪ..ಅಷ್ಟಕ್ಕೂ ಕ್ಷಮಿಸುವಂಥಹ ಯಾವ ತಪ್ಪನ್ನೂ ನೀನು ಮಾಡಿಯೇ ಇಲ್ಲವಲ್ಲ. ಒಮ್ಮೆಲೇ ಎಲ್ಲಾ ಕಷ್ಟಗಳನ್ನೂ ಎದುರಿಸುತ್ತಿರುವ ನಿನಗೆ ಎದುರಿಗಿರುವ ಆತ್ಮೀಯರೆಲ್ಲಾ ಕಣ್ಣಿಗೆ ಕಾಣದೆ ಕತ್ತಲೆ ಕವಿದಿರುವುದು ಸಹಜ. ನಿನಗೆ ಕಷ್ಟಗಳನ್ನು ಕೊಟ್ಟ ಆ ಕಷ್ಟವನ್ನು ನಾನು ದೂಷಿಸುತ್ತೇನೆ.. ಹೊರತು ನಿನ್ನನ್ನು ದೂಷಿಸುವಷ್ಟು ಮಹಾಮೂರ್ಖನಂತೂ ನಿನ್ನ ಅಣ್ಣ ಅಲ್ಲವೇ ಅಲ್ಲ.
ನೀನು ಕಷ್ಟಕಾಲದಲ್ಲಿ ನನ್ನನ್ನು ಮರೆತೆ ಎಂದಾದರೆ ಕಷ್ಟಗಳನ್ನು ನೀನು ಮರೆಯುವುದಾದರೂ ಹೇಗೆ? ಕಷ್ಟಗಳು ಯಾರಿಗೆ ಬರುವುದಿಲ್ಲ ಹೇಳು. ಅದು ನಿನಗೀಗ ಬಂದೆರಗಿದೆ ಅಷ್ಟೆ. ಇಂತಹ ಕಷ್ಟಗಳು ಬಂದಾಗ ನಿನ್ನ ಅಣ್ಣನನ್ನು ನೆನಪು ಮಾಡಿಕೊಂಡು ಅಂತರಂಗದಲ್ಲೇ ನನ್ನೊಡನೆ ಮಾತಾಡಿದರೂ ಸಾಕು. ತಕ್ಕ ಮಟ್ಟಿಗೆ ನೀನು ನಿರಾಳವಾಗುವೆ. ಅಷ್ಟರ ಮಟ್ಟಿಗೆ ನೀನು ನೆಮ್ಮದಿ ಗಳಿಸುವೆ. ನೀನು ಕಷ್ಟಗಳನ್ನು ಮರೆಯಬೇಕು ಎಂದಾದರೆ ಕಷ್ಟಕಾಲದಲ್ಲಿ ನಿನ್ನ ಪ್ರೀತಿಯ ಅಣ್ಣನನ್ನು ಮರೆಯಬೇಡ ಆಯಿತಾ? ಪುಟ್ಟ ತಂಗಿ ಮೌನದಿಂದ ಮನದಾಳದ ಮಾತುಗಳನ್ನಾಡುವಾಗ ಈ ನಿನ್ನ ಅಣ್ಣನ ಹೃದಯಾಂತರಾಳ ಕಿವಿಗೊಟ್ಟು ಅದನ್ನೆಲ್ಲಾ ಆಲಿಸುತ್ತದೆ…ನಂತರ ನಿನ್ನನ್ನು ಲಾಲಿಸುತ್ತದೆ..ಪಾಲಿಸುತ್ತದೆ..ಎನ್ನುವುದನ್ನು ನೀನು ಎಂದಿಗೂ ಮರೆಯಬೇಡ.
ಚಿನ್ಮಯಣ್ಣ
12-3-2012