ನಾಯಕ-ನಾಯಕಿ

ಪ್ರಜ್ವಲಿಸಲು ಪ್ರಾರಂಭಿಸಿರುವ ಪ್ರಜ್ಜು ಪೂವಯ್ಯ !

ತಮಿಳಿನಿಂದ ಪ್ರವೇಶ...ಈಗ ಮೀರಿ ನಿಂತಿರುವಳು ಭಾಷೆ ದೇಶ..!

ಕೊಡಗು ಹಲವು ಬೆಡಗಿಯರನ್ನು ಚಿತ್ರರಂಗಕ್ಕೆ ಕೊಡುತ್ತಲೇ ಇದೆ. ಕೊಡಗು ಅದೆಷ್ಟು ಸುಂದರವೊ ಅಲ್ಲಿನ ಬೆಡಗಿಯರೂ ಅಷ್ಟೇ ಸುಂದರ. ಅವರಾಡುವ ಮಾತೂ ಸುಮಧುರ. ನೋಡುವುದಕ್ಕಂತೂ ನಯನಮನೋಹರ. ಅಲ್ಲಿನ ಸುಂದರಿಯರನ್ನು ಹೊಗಳಲು ಸಾಲದು ಪದಗಳ ಆಗರ. ಇಂತಹ ಎಲ್ಲಾ ಗುಣಗಳನ್ನು ಹೊಂದಿರುವ ಗುಣವತಿ ರೂಪವತಿಯೊಬ್ಬಳು ಕನ್ನಡ ಚಿತ್ರರಂಗಕ್ಕೆ ಇತ್ತೀಚೆಗಷ್ಟೇ ಕಾಲಿಟ್ಟಿದ್ದಾಳೆ. ಈಕೆಯ ಸೌಂದರ್ಯವನ್ನು ವರ್ಣಿಸಲು ಪದಗಳ ಅಭಾವವಾದರೆ ಅದಕ್ಕೆ ಈ ಲೇಖಕ ಖಂಡಿತಾ ಕಾರಣನಲ್ಲ. ಅಥವಾ ಈಕೆಯ ಸೌಂದರ್ಯವನ್ನೇನಾದರೂ ವರ್ಣಿಸಲು ಆರಂಭಿಸಿದರೆ ಅದಕ್ಕೆ ಅಂತ್ಯವೆಂಬುದೇ ಇರುವುದಿಲ್ಲ. ಹೇಗೆ ಬಣ್ಣಿಸಿದರೂ ಅದು ಪರಿಪೂರ್ಣವೇನಲ್ಲ. ಈಕೆಯ ಬಾಹ್ಯ ಸೌಂದರ್ಯ ಅಪರಿಮಿತವಾಗಿದ್ದರೆ ಅಂತರಂಗದ ಸೌಂದರ್ಯ ಆಕಾಶದಷ್ಟು ಅಗಣಿತವಾಗಿದೆ !

 

ಕೇವಲ ಬಾಹ್ಯಸೌಂದರ್ಯ ಮಾತ್ರವಲ್ಲದೆ ಯಾರ ಅಂತರಂಗದ ಸೌಂದರ್ಯವೂ ವಿಶಾಲವಾಗಿ ವ್ಯಾಪಿಸಿಕೊಂಡಿರುತ್ತದೆಯೋ ಅಂಥವರು ಮಾತ್ರ ಈ ವಿಶ್ವದ ತುಂಬಾ ವಿಶಾಲವಾಗಿಯೇ ವ್ಯಾಪಿಸಿಕೊಳ್ಳುತ್ತಾರೆ. ಈಕೆಯೂ ಈ ವಿಶ್ವದ ತುಂಬಾ ವ್ಯಾಪಿಸಿಕೊಳ್ಳುವಂತೆ ಕಾಣುತ್ತಿದೆ. ಯಾರು ವಿಶ್ವದೆಲ್ಲೆಡೆ ವ್ಯಾಪಿಸಿಕೊಳ್ಳುವರೋ ಅಂಥವರು ನಿಜವಾದ ತಾರೆಗಳು. ಅವರಿಗೂ ಆಗಸದಲ್ಲಿರುವ ತಾರೆಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಅಂಥವರು ಭುವಿಯಲ್ಲಿಯಲ್ಲಿರುವ ತಾರೆಗಳು. ಆಗಸದ ತಾರೆಗಳೂ ಒಮ್ಮೆಮ್ಮೆ ಇವರನ್ನು ನೋಡಿ ಅಸೂಯೆ ಪಡಬಹುದು ! ಇವರ ಅಂದವನ್ನು ನೋಡಿ ಆಶ್ಚರ್ಯಪಡಬಹುದು. ಇವರು ಆಗಸದಷ್ಟು ಎತ್ತರಕ್ಕೇರಿದರೂ ಭುವಿಯಲ್ಲೇ ಇರುತ್ತಾರೆ. ಈ ಪರಿಯ ಸುದೀರ್ಘ ಪೀಠಿಕೆ ನೀಡಿದ್ದು ಯಾರಿಗೆ? ಇಂತಹ ಅತಿಶಯೋಕ್ತಿಯೆನಿಸುವ ಆರಂಭಿಕ ಪದಮಾಲೆ ಯಾರಿಗೆ? ತಾರೆ ನೀನ್ಯಾರೆ? ಎಂದು ನೀವು ಕೇಳಿದರೆ ಅದಕ್ಕೆ ಏಕಮೇವಾದ್ವಿತೀಯ ಉತ್ತರ “ಕೊಡಗಿನ ಕೊಡುಗೆ ಪ್ರಜ್ಜು ಪೂವಯ್ಯ”.

 

ಹೌದು…ಪ್ರಜ್ವಲ್ ಪೂವಯ್ಯ ಅಥವಾ ಮಾನ್ಷ್ ಪೂವಯ್ಯ ಎಂಬ ನಾಮಾಂಕಿತದಿಂದ ಚಿತ್ರರಂಗಕ್ಕೆ ಕಾಲಿಟ್ಟು ಅತ್ಯಲ್ಪ ಕಾಲದಲ್ಲೇ ಸಾಕಷ್ಟು ಹೆಸರು ಮಾಡಿದ ಈ ಕೀರ್ತಿವಂತೆ ಈಗ “ಪ್ರಜ್ಜು ಪೂವಯ್ಯ” ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾಳೆ. ಆದರೂ ಈಕೆ ಕನ್ನಡಿಗರ ಕಣ್ಮಣಿಯಾಗಿದ್ದು ಮಾತ್ರ “ಭೀಮಾ ತೀರದಲ್ಲಿ” ಚಿತ್ರದ ಗೌಡರ ಮಗಳಾಗಿ. ಅದೇ ಮುದ್ದು ಹುಡುಗಿಯಾಗಿ. ಪ್ರಜ್ವಲ್ ಪೂವಯ್ಯ ಇದೀಗ “ಪ್ರಜ್ಜು” ಆಗಿ ನಾಮಾಂತರವಾದ ನಂತರ ಇನ್ನಷ್ಟು ಮತ್ತಷ್ಟು ಜನಪ್ರಿಯವಾಗುವ ಲಕ್ಷಣ ಕಾಣುತ್ತಿದೆ. ಏಕೆಂದರೆ ಈ ಹೆಸರು ಆಕೆಯ ಸಮಸ್ತ ಅಭಿಮಾನಿಗಳಿಗೂ ಇಷ್ಟವಾಗಿ ಪ್ರೀತಿಯಿಂದ ಆಕೆಯನ್ನು ಕರೆಯಲು ಅಥವಾ ಆಕೆಯ ಬಗ್ಗೆ ಮನತುಂಬಿ ಮನೆಮನೆಯಲ್ಲಿ ಮಾತನಾಡಲು ಅನುಕೂಲವಾಗುತ್ತದೆ ಎಂಬುದು ಆಕೆಯ ಆರಂಭಿಕ ಅಭಿಮಾನಿಗಳ ಅನಿಸಿಕೆ.

ಪ್ರಜ್ಜು ನಿಜಕ್ಕೂ “ಮಾಡೆಲ್”..?!

 

ಕೂರ್ಗ್ ಎಂಬ ಕಾಫಿ ನಾಡಿನಿಂದ ಬಂದ ಈ ಕೂರ್ಗಿಯನ್ನು ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ. ನಟನೆಯಲ್ಲಿ, ಹಾವಭಾವದಲ್ಲಿ, ಆಂಗಿಕ ಅಭಿನಯದಲ್ಲಿ, ಸ್ವಚ್ಛ ಸುಂದರ ಕನ್ನಡ ಮಾತಿನಲ್ಲಿ ಹೀಗೆ ಯಾವ ದಿಕ್ಕಿನಿಂದ ಪ್ರಜ್ಜುವನ್ನು ಪರಿಶೀಲಿಸಿದರೂ ಒಂದೇ ಪದದ ಒಂದೇ ಉತ್ತರ ಸಿಗುತ್ತದೆ…ಅದು “ಅನನ್ಯತೆ” ! ಪ್ರಜ್ಜು ಅನನ್ಯತೆಯ ಆಳದಲ್ಲಿ ಆವಿರ್ಭವಿಸಿದ ಅತ್ಯದ್ಭುತ ಕಲಾವಿದೆಯೆಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಹೀಗೆ ಹೇಳಿದಾಕ್ಷಣ ಅಹಂಕಾರ ಪಡುವ ಗುಣ ಕೂಡ ಅವಳಲ್ಲಿಲ್ಲ. ಆದರೆ ತನ್ನ ಕಲಾವೃತ್ತಿಯ ಬಗ್ಗೆ ಪ್ರಜ್ಜುಗೆ ಅಗತ್ಯವಿರುವಷ್ಟು ಆತ್ಮವಿಶ್ವಾಸ ಸ್ವಾಭಿಮಾನ ಎಲ್ಲವೂ ಇದೆ. ಅದು ಇರಬೇಕು ಕೂಡ.

 

ಅಪ್ಪ ಎಮ್.ಸಿ ಪೂವಯ್ಯ ಆರ್ಮಿ ಉದ್ಯೋಗಿಯಾಗಿದ್ದ ಕಾರಣ ಈಕೆಯ ಬಾಲ್ಯದ ಸಾಕಷ್ಟು ವರ್ಷ ಕಡಲ ತೀರದ ಮಂಗಳೂರು ಅಲೆಗಳೊಂದಿಗೆ ಭಾವನಾಮಯವಾಗಿತ್ತು. ಪ್ರೀತಿಯ ಅಮ್ಮ ಲತಾ ಪೂವಯ್ಯ ಈಕೆಯ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೂ ಪೆÇ್ರೀತ್ಸಾಹಿಸಿಸುತ್ತಿದ್ದರು. ಪರಿಣಾಮವಾಗಿ ಪ್ರಜ್ಜು ಬರೊಬ್ಬರಿ ಎಂಟು ವರ್ಷಗಳ ಕಾಲ ಶಾಸ್ತ್ರೀಯ ಹಾಗು ಪಾಶ್ಚಾತ್ಯ ನೃತ್ಯ ಸಾಧನೆ ಮಾಡಿದಳು. ಪ್ರಜ್ಜು ತಾನು ದೊಡ್ಡವಳಾದಾಗ ಯಾವುದಾದರೊಂದು ಪದವಿಯನ್ನು ಪಡೆದು ಜೊತೆಗೆ ಮಾಡೆಲಿಂಗ್ ಲೋಕದಲ್ಲೂ ಮಿನುಗಬೇಕೆಂದುಕೊಂಡಿದ್ದಳು. ಆದರೆ ಈಕೆ ಇಂಜಿನಿಯರಿಂಗ್ ಪದವಿಯನ್ನು ಮುಗಿಸುವ ಮುನ್ನವೇ ಚಿತ್ರಜಗತ್ತಿನಲ್ಲಿ ಅತ್ಯುನ್ನತ ಪದವಿಯನ್ನು ಪಡೆದಳು ! ಅದೃಷ್ಟ ಎಂದರೆ ಇದೇ ಅಲ್ಲವೆ? ಮಾಡೆಲ್ ಆಗಬೇಕೆಂದುಕೊಂಡಿದ್ದ ಪ್ರಜ್ಜು ಒಂದೆಡೆ ಕೆ.ಎಮ್.ಎಫ್, ಆರ್.ಆರ್ ಗೋಲ್ಡ್ ಹಾಗು ಚೆನ್ನೈನ ಹಲವು ಪ್ರತಿಷ್ಠಿತ ಕಂಪೆನಿಗಳಿಗೆ ಮಾಡೆಲ್ ಕೂಡ ಆದಳು. ಇನ್ನೊಂದೆಡೆ ಚಲನಚಿತ್ರದಲ್ಲಿ ನಾಯಕಿಯೂ ಆದಳು ! ಈಗಲೂ ಪ್ರಜ್ಜು ಮಾಡೆಲ್… ತನ್ನ ಗುಣಸ್ವಭಾವದಲ್ಲೂ ಸರಳ ಸಹಜ ಸುಂದರಿಯಾಗಿರುವ ಈಕೆ ನಿಜಕ್ಕೂ ಬೇರೆಯ ಕಲಾವಿದರಿಗೆ ಮಾಡೆಲ್…! ಅಷ್ಟೆ ಅಲ್ಲ ಈಕೆ ಭಾಷೆಯ ವಿಷಯದಲ್ಲೂ ಮಾಡೆಲ್ ! ಪ್ರಜ್ಜು ಏಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಳು ! ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ತುಳು ಹಾಗು ಕೂರ್ಗಿ ಇವಿಷ್ಟೂ ಭಾಷೆಗಳನ್ನು ಆಯಾ ಭಾಷೆಯವರೇ ಆಡುವಷ್ಟು ನಿಖರವಾಗಿ ಪ್ರಖರವಾಗಿ ಸುಲಲಿತವಾಗಿ ಆಡುತ್ತಾಳೆ !

ಅಂದಿನ ಸ್ಪೂರ್ತಿ…ಜೀವನ ಪೂರ್ತಿ..!

 

ಒಂಬತ್ತನೆಯ ತರಗತಿಯಲ್ಲಿರುವಾಗಲೇ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಪ್ರಜ್ಜು ಒಮ್ಮೆ ರಾಷ್ಟ್ರ ಮಟ್ಟದ ನೃತ್ಯದಲ್ಲಿ ಪ್ರಥಮ ಬಹುಮಾನ ಪಡೆದಳು. ಅದರಿಂದ ಸ್ಪೂರ್ತಿಗೊಂಡ ಈಕೆ ತಾನು ಬರೀ ಮಾಡೆಲ್ ಆಗುವುದಕ್ಕಿಂತ ನಟಿಯಾಗಿಯೂ ಚಿತ್ರರಂಗದಲ್ಲಿ ಸಾಧನೆ ಮಾಡಬೇಕೆಂದು ಹೊಸ ಕನಸೊಂದನ್ನು ಸಾಕತೊಡಗಿದಳು. ಅಂದು ಪ್ರಜ್ಜು ಸಾಕತೊಡಗಿದ ಆ ಕನಸು ಇಂದು ಬೃಹದಾಕಾರವಾಗಿ ಬೆಳೆಯುತ್ತಿದೆ. ಆ ಕನಸೇ ಇಂದು ಪ್ರಜ್ಜುವನ್ನು ಸಾರ್ಥಕ್ಯದೆಡೆಗೆ ಕೊಂಡೊಯ್ಯುತ್ತಿದೆ. ಲೋಕ ಇವಳನ್ನು ಗುರುತಿಸುವಷ್ಟು ಮಟ್ಟಕ್ಕೆ ಇಂದೀಕೆ ಬೆಳೆದಿದ್ದಾಳೆ !

ತಮಿಳಿನಿಂದ ಪ್ರವೇಶ…ಈಗ ಮೀರಿ ನಿಂತಿರುವಳು ಭಾಷೆ ದೇಶ..!

 

ಇಂತಿಪ್ಪ ಐತಿಹಾಸಿಕ ಸುಂದರಿ ಪ್ರಜ್ಜು ಎರಡೂ ಕಡೆಗಳಿಂದ “ಕನಸಿನ ಕನ್ಯೆ”ಯಾಗಿದ್ದಾಳೆ ! ಎರಡೂ ಕಡೆ ಎಂದರೆ ಈಕೆ ಅಭಿಮಾನಿಗಳ ಕನಸಿನಲ್ಲಿ ಕಾಡುವ ಕನ್ನಿಕೆ….ಹಾಗು ಸ್ವತಹ ಈಕೆಯೇ ತಾನು ಚಿತ್ರರಂಗದಲ್ಲಿ ಇನ್ನೂ ಮೇಲೇರಬೇಕೆಂದು ಕನಸು ಕಾಣುತ್ತಿರುವ “ಕನಸಿನ ಕನ್ಯೆ” ! ಕಂಡ ಕನಸನ್ನು ನನಸು ಮಾಡಲು ಎಲ್ಲರಂತೆ ಆತುರ ಪಡದ ಪ್ರಜ್ಜು ಸೀದಾ ತಲುಪಿದ್ದು ಮಾಯಾನಗರಿ ಮುಂಬೈಗೆ. ನಟಿಯಾಗಿ ನಟಿಸಲು ಅಲ್ಲ. ನಟಿಯಾಗಿ ನಟಿಸುವ ಮುನ್ನ ನಟನೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು. ಅದಕ್ಕೆ ಪ್ರಜ್ಜು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ ನಿರ್ದೇಶಕ ಸುಭಾಷ್ ಗಾ0iÀiï ಅವರ ಅಭಿನಯ ಶಾಲೆಯನ್ನು.

ತಾನು ಚಿತ್ರರಂಗಕ್ಕೆ ಕಾಲಿಡುವ ಮುನ್ನ ಅಭಿನಯ ಕಲೆಯನ್ನು ಕಲಿಯಬೇಕು. ಆ ಮೂಲಕ ಒಂದು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಅದನ್ನೇ ಉಳಿಸಿಕೊಂಡು ಮುಂದೆ ಅತ್ಯುತ್ತಮ ಅಭಿನೈತ್ರಿಯಾಗಿ ಬೆಳೆಯಬೇಕು…ಇಂತಹ ಮನೋಭಾವದಿಂದ ಒಂದು ವರ್ಷದ ಅವಧಿಯ ಕಲಿಕೆಯನ್ನು ಮುಗಿಸಿದ ಪ್ರಜ್ಜುಗೆ ಅವಕಾಶ ತಾನೇತಾನಾಗಿ ಒಲಿದು ಬಂತು. ಅದೂ ತಮಿಳಿನಲ್ಲಿ ! ಅದೇ”ವೆಟ್ಟೆಯಾಡು”. ಆ ಚಿತ್ರದಲ್ಲಿ ಈಕೆಯ ಮನಮುಟ್ಟುವ ಅಭಿನಯವನ್ನು ನೋಡಿದ ನಮ್ಮ ಕನ್ನಡದ ನಿರ್ದೇಶಕ ಅಣಜಿ ನಾಗರಾಜ್ “ಭೀಮಾ ತೀರದಲ್ಲಿ” ಎಂಬ ತಮ್ಮ ಹೊಸ ಚಿತ್ರದಲ್ಲಿ ಈಕೆಯನ್ನೇ ನಾಯಕಿಯನ್ನಾಗಿಸಿದರು. ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು ! ಆದರೆ ಇನ್ನೊಂದೆಡೆ ತನ್ನ ಇಂಜಿನಿಯರಿಂಗ ಕೋರ್ಸ್ ಅನ್ನು ಅರ್ಧಕ್ಕೇ ನಿಲ್ಲಿಸಿ ಬಂದಿದ್ದ ಪ್ರಜ್ಜು ತನ್ನ ತಂದೆಯ ಒತ್ತಾಸೆಯಂತೆ ಅದನ್ನು ಮುಗಿಸಿ ಬರಲು ಓದಿಗೆ ತೆರಳಿದಳು. ಅದೀಗ ಮುಗಿಯುವ ಹಂತಕ್ಕೆ ಬಂದಿದೆ. ಹಾಗಾಗಿ ಪ್ರಜ್ಜುವಿನ ಚಿತ್ರರಂಗದ ಜೀವನ ಈಗಷ್ಟೇ ಆರಂಭವಾಗುತ್ತಿದೆ. ಕನ್ನಡದ ಎರಡು ಹಾಗು ತಮಿಳಿನ ಒಂದು ಚಿತ್ರದಲ್ಲಿ ಪ್ರಜ್ಜು ನಾಯಕಿಯಾಗಿ ಮಿಂಚಲು ತಯಾರಾಗಿದ್ದಾಳೆ. ಈಗಾಗಲೇ ಆಹ್ವಾನ ಬಂದಿದ್ದ ಚಿತ್ರಗಳಲ್ಲೆಲ್ಲ ಪ್ರಜ್ಜು ನಟಿಸಿದ್ದರೆ ಇಷ್ಟೊತ್ತಿಗಾಗಲೇ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಾಗಿರುತ್ತಿತ್ತು. ಆದರೆ ಕ್ವಾಲಿಟಿ ಕಾಯ್ದು ಕೊಳ್ಳ ಬಯಸುವ ಪ್ರಜ್ಜು ಕ್ವಾಂಟಿಟಿ ಕಡೆಗೆ ತಿರುಗಿಯೂ ನೋಡುವವಳಲ್ಲ.

ಪ್ರಜ್ಜು ಈಗಿರುವ ಪರಿಸ್ಥಿತಿ ಹಾಗು ಆಕೆಯ ಮನೋಸ್ಥಿತಿಯನ್ನು ಗಮನಿಸಿದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಅತಿಶೀಘ್ರದಲ್ಲಿ ಅಲಂಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ! ಕಲಾದೇವಿಯನ್ನು ಹಾಗು ಕಲಾಭಿಮಾನಿಗಳನ್ನು ಅಂತರಂಗದಿಂದ ಆರಾಧಿಸುವ ಪ್ರಜ್ಜು ಕಲಾಜಗತ್ತಿನಲ್ಲಿ ಕೀರ್ತಿಶಿಖರದ ತುತ್ತ ತುದಿಯನ್ನು ತಲುಪಲಿ ಎಂಬುದೇ ಕನ್ನಡಿಗರೆಲ್ಲರ ಆಶಯ. ಪ್ರಜ್ಜು ಪೂವಯ್ಯಗೆ ಶುಭಾಶಯ.

6-5-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.