ಡಾ.ಚಿನ್ಮಯ ಎಂ.ರಾವ್
ಸಮಗ್ರ ಕವನ ಸಂಕಲನ
ಕವಿತೆ-1
ನೀನಿಲ್ಲದೆಯೆ ನಿನಗಿಲ್ಲ ದಯೆ
– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಒಂದಕ್ಷರವನೂ ಬರೆಯಲಾರೆ ಕಲ್ಪನೆಯ ತರಲಾರೆ
ಮತ್ತೆ ಮತ್ತಾಲೋಚಿಸಿಯೂ ಆರಂಭಿಸಲಾರೆ
ನೀನಿಲ್ಲದೆಯೆ ನಿನಗಿಲ್ಲ ದಯೆ
ಮನದಾಗಸದಿ ನೀ ನಿಲ್ಲದೆಯೆ
ಶ್ರದ್ಧೆ ನಿನ್ನಲ್ಲಿಲ್ಲದೆಯೆ ಔದಾರ್ಯ ನಿನಗಿಲ್ಲದೆಯೆ
ದಾರಿ ಗೊತ್ತಿದ್ದರೂ ಸೇರಲಾರೆ ನಿಂತಲ್ಲಿಯೂ ನಿಲ್ಲಲಾರೆ
ಹೋಗ ಹೊರಟರೆ ಹೋಗಲಾರೆ ಅದ್ಯಾಕೋ ಗೊತ್ತಿಲ್ಲ
ನೀನಿಲ್ಲದೆಯೆ ನಿನಗಿಲ್ಲ ದಯೆ
ಪದಗಳ ಕಟ್ಟಲಾರೆ ಸೊಗಸಾಗಿ ಹೆಣೆಯಲಾರೆ
ಚಿತ್ತಚಾಂಚಲ್ಯವ ದಾಟಿ ನೀ ನಿಲ್ಲದೆಯೆ
ಭಕುತಿ ನಿನ್ನಲ್ಲಿಲ್ಲದೆಯೆ ಕೊಡುವ ಮತಿ ನಿನಗಿಲ್ಲದೆಯೆ
ಬೇಕೆಂದಾಗ ಬರಲಾರೆ ಬಂದರೂ ಕ್ಷಣಾರ್ಧ ನಿಲ್ಲಲಾರೆ
ಸಂಚಿಲ್ಲದಿದ್ದರೂ ಮಿಂಚಿ ಮಾಯವಾಗುವ
ಮಾಯಾಂಗನೆ ನೀ ನಿನಗಿಲ್ಲ ದಯೆ
ಅರ್ಪಿಸುವೆನಾ? ಬೇರೊಬ್ಬರಿಗೆ ನಿನಗಲ್ಲದೆಯೆ?
ಚಲಿಸುವ ಮಹಾ ಮೂರ್ತಿಯೇ ಬರೆಯಲಾರೆ
ನಿನ್ನ ಅಮೂರ್ತ ಸೌಂದರ್ಯವ
ನೀ ನಿಲ್ಲದೆಯೆ ನೀನಿಲ್ಲದೆಯೆ
ಅಭಿಮಾನ ಅನುಲಕ್ಷ ನಿನ್ನಲ್ಲಿಲ್ಲದೆಯೆ
ನಿನ್ನೇ ಬರೆಯುತ್ತೇನೆಂದರೂ ಬರಲಾರೆ
ಹಸಿರಿಲ್ಲವೆಂದರೂ ನೀ ಬರವಾಗಲಾರೆ
ನನ್ನುಸಿರುಸಿರಲ್ಲೂ ನೀನೆ…ನೀನೇ?
ಆದರೂ ನನ್ನ ಮೇಲೆ ನಿನಗೆಲ್ಲಿ ದಯೆ?
ಈ ಹಾಳೆಯ ಆವರಣದಲ್ಲೀಗಲೇ
ಅನಾವರಣವಾಗು ಬಾ
ಅನಾವಿಲಾವಿನಾಶಿಯಾಗಿ ಬಾ
ನನ್ನನುರೋಧವ ಕೇಳು ಬಾ
ಬರೆಯಲಾರೆ ನೀನಿಲ್ಲದೆಯೆ
ಸ್ಥಿರವಾಗಿ ನೀ ನಿಲ್ಲದೆಯೆ
ಅನುತಪ್ತನ ಅನುಪ್ರಾಸಕನುಪತ್ಯವೇನಿಲ್ಲ
ನಿನ್ನನುಗ ನಿನ್ನನುಗಾಮಿ ನಾನಾದರೂ
ನಿನಗಿಲ್ಲ ಬಿಡು ದಯೆ, ಬೀಡು ಬಿಡದು
ನಿನ್ನಲ್ಲಿ ದಯೆ, ಅನುಕಂಪ ನಿನ್ನಲ್ಲಿದೆಯೇ?
ಬಿಟ್ಟು ಬಿಟ್ಟು ಆಗಾಗ ಹೊಳೆಯಬೇಡ
ಹೊಳೆದಿ(ಸಿ)ದ್ದ ಬರೆಯುವುದರೊಳಗೇ ಕಳೆಯಬೇಡ
ಬರೆಯಲಾರೆ ನೀನಿಲ್ಲದೆಯೆ, ಕಡೇ ಪಕ್ಷ ಒಂದೇ ಕಡೆ
ಅಚಲವಾಗಿ ನೀ ನಿಲ್ಲದೆಯೆ
ಹೇ..ಭಾವನೆ ನನ್ನಲ್ಲಿ ನಿನ್ನ ಬಸಿರಾಗಿಸು ಬಾ
ಕವಿಯೊಬ್ಬನ ಹುಟ್ಟಿಸಿ ಬೆಳೆಸು ಭಾ-
-ವಗೊಳಿಸು ನನ್ನಲ್ಲಿ ನಿನಗಿಲ್ಲವೇ ದಯೆ?!
ಚಿನ್ಮಯ ಎಂ ರಾವ್
2005
*******************