ಡಾ.ಚಿನ್ಮಯ ಎಂ.ರಾವ್
ಸಮಗ್ರ ಕವನ ಸಂಕಲನ
ಕವಿತೆ-5
ಹೊಸದು
– ಡಾ.ಚಿನ್ಮಯ ಎಂ.ರಾವ್
(೭೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಹೊಸ ಕನಸೊಂದು ಬಾಳ ಕತ್ತಲೆಯಲಿ ಕನವರಿಸುತ್ತಿರುವಾಗ
ಹಳೆಯ ನನಸುಗಳೆಲ್ಲಾ ಹಳಿ ತಪ್ಪಿ ಸೋತು ಕೈಚೆಲ್ಲಿದಾಗ
ಅನುಭವಾಮೃತವು ಬಾಗಿಸಿ ಮಾಗಿಸಿ ಮುಂದೆ ಸಾಗುತ್ತಿರುವಾಗ
ಹೊಸಯುಕ್ತಿಗಳೆಲ್ಲ ಸೂಕ್ತಿಗಳಾಗಿ ಭಕ್ತಿ ಉಕ್ಕುತ್ತಿರುವಾಗ
ಮತ್ತೊಂದು ಜೀವನದಾಟ ಹೊಸ ಆಸೆಯ ನವಪಲ್ಲವಿಗೆ
ರಾಗ ತಾಳ ಜೋಡಿಸಿ ಹಾಡಲು ಮೆತ್ತಗೆ ಮತ್ತೇರುತಿಹುದು !
ಹೊಸ ಸೊಬಗೊಂದು ಮನನವಾಗಿ ಕವನವಾಗುತ್ತಿರುವಾಗ
ಅರ್ಧ ಬರೆದ ನಿನ್ನೆಯ ಕವಿತೆಗಳೆಲ್ಲಾ ಮುಂದೆ ಹೋಗದಾದಾಗ
ಹಿಂದಿನ ಕಸರತ್ತುಗಳಿಂದ ನಲುಗಿ ಪಳಗಿ ಹೋದಾಗ
ಸುಖಭಾವ ಸಮಾಧಿಯ ಹೊಸ ಅಲೆಯಲಿ ಮುಳುಗಿ ಹೋದಾಗ
ಮತ್ತೊಂದು ಜೀವನದಾಟ ಹಿಂದೆಂದಿನ ಮುಂದುಗಳನು
ಹಿಂದಟ್ಟಿ ಮುಂದೆ ಮುಂದೆ ಮುನ್ನುಗ್ಗುತಿಹುದು
ಕಾಟಾಚಾರದ ಮುನ್ನುಡಿಯ ಮುಗಿಸಿ !
ಹೊಸದಿಕ್ಕೊಂದು ದಿಗಂತದತ್ತ ದಿಕ್ಸೂಚಿ ತೋರುತ್ತಿರುವಾಗ
ಹಳೆ ದಿಕ್ಕುಗಳೆಲ್ಲ ದಿಕ್ಕಾಪಾಲಾಗಿ ಚದುರಿ ಛಿಧ್ರವಾದಾಗ
ಬಿದ್ದಾಟದ ನೆನಪುಗಳು ಪಾಠ ಮಾಡಿ ಭದ್ರಬುನಾದಿ ಹಾಕಿದಾಗ
ಗುರಿದಾರಿಯಲಿ ಹೊಸಛಲವೊಂದು ಚಕ್ರದ ಚಲನೆಯಾದಾಗ
ಮತ್ತೊಂದು ಜೀವನದಾಟ ಹಳೆಯ ಗೋಳಾಟಗಳ
ಮರೆಸಿ ಅರಸಿ ಮುಂದೆ ಮುಂದೆ ಹೋಗುತ್ತಿದೆ
ಹಿಂದೆಂದಿನ ಹಿಂದುಳಿದದ್ದನ್ನು ಹಿಂದುಳಿಸಿ ಇಂದಳಿಸಿ !
ಹೊಸಬಾಳಿಗೆ ಹೊಂಬಿಸಿಲ ಹೊನ್ನು ಬೆಳಕ ಚೆಲ್ಲುತ್ತಿರುವಾಗ
ಹಳೆಬಾಳೆಲ್ಲಾ ಬತ್ತಿ ಬಳಲಿ ಬಾಡಿ ಬೆಂಡಾದಾಗ
ಹಳೆಸತ್ವ ಹೊಸತತ್ವ ಹದವರಿತು ಕದ ತೆರೆಯುತ್ತಿರುವಾಗ
ಮರೆಮಾಚಿ ಬರೆದಿದ್ದ, ಬರೆಯುತ್ತಿರುವೆ ನಾನೀಗ
ಹೊಸಬಾಳಿನಾಟಕೆ ಹೊಸಸೂತ್ರವ ಕಳಚಿ ಹಳೆ ಪಾತ್ರವ !
ಚಿನ್ಮಯ ಎಂ ರಾವ್
೨೦೦೫
*******************