– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಭಾವಸುಖವಿಹುದಲ್ಲಿ ಮೌನದಾ ನಿಧಿಯಲ್ಲಿ
ಧ್ಯಾನದಾಲಿಂಗನದಲ್ಲಿ ಆತ್ಮದುತ್ಥಾನವೆ ಅಲ್ಲಿ
ಆ ಆತ್ಮ ಪರಮಾತ್ಮ ನಿನ್ನಂತರಂಗದಲಿ
ಈ ಆತ್ಮದುನ್ನತಿಯ ಚೇತನವೆ ಅಲ್ಲಿ
ಬಾ ನಗಿಸೆನ್ನ ಚೇತನ ಬಾನಾಗಿಸೆನ್ನ ಚೇತನ
ರೂಪ-ಬಣ್ಣಗಳಿಲ್ಲ ಜಾತಿ-ಸ್ವಾಮಿಗಳಿಲ್ಲ
ದೇಶ ಭಾಷೆಗಳಿಲ್ಲ ಈ ಆತ್ಮಗಳಿಗೆ
ನಾನು ನೀನೆಂದಿಲ್ಲ ಸನ್ನಿಧಿಗಳಾ ಇಲ್ಲ
ನಿನ್ನಾತ್ಮ ಸಂಸ್ಥಾನ ಸನ್ನಿಧಿಯು ನಿನಗೆಲ್ಲ
ಬಾ ನಗಿಸೆನ್ನ ಚೇತನ ಬಾನಾಗಿಸೆನ್ನ ಚೇತನ
ಸಚ್ಚಿದಾನಂದನೆ ನೀನು ಉದ್ಭವಿಸು ಬೇಗಿಲ್ಲಿ
ಬೇರೆ ಬೇರೆಗಳೆಂಬ ಬೇರನ್ನು ಮುಗಿಸಿಲ್ಲಿ
ಮಡಿಯೆಂಬ ದನಿಗೀಗ ಹೊಸ ಅರ್ಥಕೊಡು ಇಲ್ಲಿ
ನಮ್ಮಾತ್ಮ ಮಡಿಗೊಳಿಸಿ ಅಡಿಪಾಯ ಮಾಡಿಲ್ಲ
ಬಾ ನಗಿಸೆನ್ನ ಚೇತನ ಬಾನಾಗಿಸೆನ್ನ ಚೇತನ
ಕುಲಕೇಳಿ ಜನಿಸಿಲ್ಲ ಯಾವ ಚೇತನವಿಲ್ಲಿ
ಕುಲಮಾಡಿ ಕೊಲೆಮಾಡಿ ಹರಿದು ಚೀರಿದರಿಲ್ಲಿ
ಕೀಳವನು ಮೇಲವನು ಕೀಲಿಹಾಕಿದರಿಲ್ಲಿ
ಮೇಲೆಂದು ಮೆರೆದವನೆ ಕೀಳುಕೊಳಕನು ಇಲ್ಲಿ
ಬಾ ನಗಿಸೆನ್ನ ಚೇತನ ಬಾನಾಗಿಸೆನ್ನ ಚೇತನ
ವಿಶ್ವಮಾನವರೆಲ್ಲ ವಿಶ್ವೇಶರಹುದಿಲ್ಲಿ
ವಿಶ್ವಪ್ರೇಮವೆ ನಮಗೆ ಜಪತಪವು ಆದಲ್ಲಿ
ವಿಶ್ವಜೀವಿಗಳಲ್ಲಿ ವಿಶ್ವಾಸವಿದ್ದಲ್ಲಿ
ವಿಶ್ವಾತ್ಮಸೌಂದರ‍್ಯ ಬೆಳಗುವುದು ನೋಡಲ್ಲಿ
ಬಾ ನಗಿಸೆನ್ನ ಚೇತನ ಬಾನಾಗಿಸೆನ್ನ ಚೇತನ
ಚಿನ್ಮಯ ಎಂ ರಾವ್
2005
*******************