ಡಾ.ಚಿನ್ಮಯ ಎಂ.ರಾವ್
ಸಮಗ್ರ ಕವನ ಸಂಕಲನ
ಕವಿತೆ-೨
ಪ್ರಕೃತಿ ಸುಪ್ರಭಾತ
– ಡಾ.ಚಿನ್ಮಯ ಎಂ.ರಾವ್
(೭೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಮೂಡಣದಿ ಬರುತಿಹನು ಅಶ್ವವನು ಏರಿ
ನಗುಮೊಗದ ಚಂದ್ರಮನು ಮರೆಯಾದ ಜಾರಿ
ರವಿಯು ರಥದಲಿ ಕುಳಿತ ನಾಚಿ ಕೆಂಪೇರಿ
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೧ ||
ಕತ್ತಲೆಯ ಹೊದಿಕೆಯನು ತೆಗೆದು ಬರುತಿಹನು
ಚಂದಿರನ ಚಂದವನು ಹಿಂದಟ್ಟುತಿಹನು
ಕೆಂಬಣ್ಣದಾರತಿಯ ನಿನಗೆ ಬೆಳಗಿಹನು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೨ ||
ನಿದ್ದೆ ಮಾಡಿದ ಬೆಳಕ ಎಬ್ಬಿಸುತಲಿಹನು
ಸದ್ದು ಮಾಡದೆ ತಮವ ಮುಗಿಸುತ್ತಲಿಹನು
ಎದ್ದು ತಡ ಮಾಡದೆಯೆ ಕೆಂಪಾಗುತಿಹನು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೩ ||
ತಮದ ಕತ್ತಲೆಯನ್ನು ದಹಿಸಿ ಬರುತಿಹನು
ಬೆಳಕ ಹಬ್ಬದ ತೇರನೇರಿ ನೇಸರನು
ನಿನ್ನೆಡೆಗೆ ಬರುತಿಹನು ನೇರ ನಿಶ್ಚಲನು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೪ ||
ಆದಿತ್ಯ ಅಂಬರದಿ ಮೊಗ್ಗಂತೆ ಅರಳಿ
ಮಲ್ಲಿಗೆಯ ಹೂವಂತೆ ಬಿಳಿ ಬೆಳಕ ಚೆಲ್ಲಿ
ನೋಡುತಿಹ ನಿನ್ನನ್ನೆ ಕಣ್ ಕಾಂತಿಯಿಂದ
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೫ ||
ತರುಣ ಅರುಣನ ಕಿರಣ ಆಭರಣವಾಗಿ
ನಿನ್ನೊಡಲ ಆವರಿಸಿ ಹೊಂಬಿಸಿಲ ಚೆಲ್ಲಿ
ನಿನ್ನ ಕೆನ್ನೆಯ ಕೆಂಪ ನೋಡುವೆನು ಅಲ್ಲಿ
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೬ ||
ಮಾಮರದಿ ಕೋಗಿಲೆಯು ಶೃತಿ ಮಾಡುತಿಹುದು
ಲಯ ತಾಳ ಕೊಡು ಎಂದು ಬೇಡುತ್ತಿಲಿಹುದು
ಇಂಪಾಗಿ ಕುಹೂಕುಹೂ ಸೇವೆ ಮಾಡುವುದು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೭ ||
ಪಕ್ಷಿಸಂಕುಲವೆಲ್ಲ ಚಿಲಿಪಿಲಿಯ ಗೈದು
ಪ್ರಕೃತಿಗೂಡನೆ ತಮ್ಮ ಗುಡಿಯೆಂದು ತಿಳಿದು
ಜಯಘೋಷ ಮಂತ್ರವನು ಮಾಡುತ್ತ ನಲಿದು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೮ ||
ಮಣ್ಣ ಕಣಕಣವೆಲ್ಲ ಗಾಳಿ ಜೊತೆ ಬೆರೆತು
ತವಕದಿಂದಲಿ ನುಗ್ಗಿ ನಿನ್ನೆಡೆಗೆ ಬಂದು
ಪಾವನವು ತಾನೆಂದು ಪ್ರಕೃತಿಯಲಿ ಮಿಂದು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೯ ||
ನವಿಲು ಗರಿಯನು ಬಿಚ್ಚಿ ನಾಟ್ಯವಾಡಿಹುದು
ತವಿಲು ನಾದಕೆ ಹೆಜ್ಜೆ ಹಾಕುತ್ತಲಿಹುದು
ಪಂಚರಂಗಿನ ರಂಗು ಬೀರುತ್ತಲಿಹುದು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೧೦ ||
ತಾಳಮೇಳಗಳೆಲ್ಲ ಮೇಳವಾಗಿಹವು
ತಾಳು ನೀ ಎಂದರೂ ತಾಳಲಾರದವು
ತಳಿರು ತೋರಣವೆಲ್ಲ ತಾಳ ಹಾಕಿದವು
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೧೧ ||
ಗಾನಗಂಧರ್ವರಾ ಶೃತಿಗಾನದಲ್ಲಿ
ಶೋಧಿಸುತ ನಿನ್ನನ್ನು ಸ್ವರಗುಂಪಿನಲ್ಲಿ
ರಾಗದಲಿ ರಂಜಿಸುವೆ ನಿಜಪ್ರಕೃತಿಯಲ್ಲಿ
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೧೨ ||
ವೀಣೆಯಾ ಮೆಟ್ಟಿಲಲಿ ಅತ್ತಿತ್ತ ಕದಲಿ
ಬೆರಳುಗಳು ನಮಿಸುತ್ತ ನಿನ್ನನ್ನು ನುಡಿಸಿ
ನಾದಸೇವೆಯ ಇಂಪ ಅರ್ಪಿಸಿವೆ ನಿನಗೆ
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೧೩ ||
ಎಲ್ಲ ದೇವರ ರೂಪ ನೀನೆ ಆಗಿರುವೆ
ಮತಭೇದವೆಣಿಸದೆಯೆ ಸಾಕಿ ಸಲಹಿರುವೆ
ಮೇಲುಕೀಳೆನ್ನದೆಯೆ ವ್ಯಾಪ್ತಿ ಆವರಿಸಿರುವೆ
ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ..
ನಿತ್ಯ ಸುಪ್ರಭಾತವು ನಿನಗೆ ಹೇ…ಪ್ರಕೃತಿಯೆ.. || ೧೪ ||
ಚಿನ್ಮಯ ಎಂ ರಾವ್
೨೦೦೫
*******************