ಪರಿಸರಪ್ರವಾಸ

ಕರ್ನಾಟಕ ಮತ್ತು ಭಾರತದ ವನ್ಯ ಪರಿಸ್ಥಿತಿ – ಸಮಸ್ಯೆ ಪರಿಹಾರ

NAVEEN K S - WRITER PHOTOಕೆ.ಎಸ್. ನವೀನ್
ಕನ್ನಡ ಗಣಕ ಪರಿಷತ್ತು
೬೪/೨, ೧ನೇ ಮುಖ್ಯರಸ್ತೆ, ೩ನೇ ತಿರುವು,
ಚಾಮರಾಜಪೇಟೆ, ಬೆಂಗಳೂರು ೫೬೦೦೧೮
ದೂ 94489 05214

ವಿ-ಅಂಚೆ: [email protected]

ಇದೀಗ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅದರವೇ ಆದ ವಿಶೇಷತೆ-ವೈಫಲ್ಯಗಳಿಂದಾಗಿ ತೀವ್ರ ಚರ್ಚೆಯ ವಿಷಯವಾಗಿವೆ. ಕೇಂದ್ರ ಸರ್ಕಾರದ ನಡೆಗಳು ಸದ್ಯಕ್ಕೆ ಭರವಸೆ ಹುಟ್ಟಿಸುವಂತೆ ಕಾಣುತ್ತಿವೆ. ರಾಜ್ಯದಲ್ಲಿ ಆಡಳಿತ ಎಂಬುದು ಹುಡುಗಾಟಿಕೆ ಮಟ್ಟಕ್ಕೆ ಇಳಿದಿದೆ. ಹಾದಿ ತಪ್ಪಿದಾಗ ಎಚ್ಚರಿಸಿ ಮುನ್ನಡೆಸಬೇಕಾದ ಚಿಂತಕರು, ಬುದ್ಧಿಜೀವಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಹರಾಕಿರಿಗೆ ಮುಂದಾಗಿದ್ದಾರೆ. ಇದು ಒಂದು ಕಡೆಯಾದರೆ ಜನರು ಬುದ್ಧಿವಂತರಾಗುತ್ತಿರುವುದು ಸಕಾರಾತ್ಮಕ ಬೆಳೆವಣಿಗೆ. ಕರ್ನಾಟಕದ ಮಟ್ಟಿಗೆ ಇಂದಿನ ರಾಜಕೀಯ ಪರಿಸ್ಥಿತಿ ಒಂದು ರೀತಿಯ ತುರ್ತು ಪರಿಸ್ಥಿತಿಯಂತೆ. ಈ ನಡುವೆ ಆಗಬೇಕಾದ ಅಭಿವೃದ್ಧಿ ಕಾರ್‍ಯಗಳು ಆಗದಿದ್ದರೆ ಜನಜೀವನದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ. ಅಂಥವುಗಳಲ್ಲಿ ಒಂದು ಬಹು ಮುಖ್ಯವಾದದನ್ನು ಇಲ್ಲಿ ಪ್ರಸ್ತಾಪಿಸಿ, ಚರ್ಚಿಸಲಾಗಿದೆ. ನಮ್ಮ ಪರಿಸರ ಮತ್ತು ವನ್ಯಜೀವಿಗಳ ಪರಿಸ್ಥಿತಿಗಳನ್ನು ಕುರಿತಂತೆ ಯಾವುದೇ ಗಂಭೀರ ಚರ್ಚೆ ನಡೆಯದಿರುವುದು ತುಂಬ ಕಳವಳಕಾರಿ ವಿಷಯ. ಈ ಪರಿಸ್ಥಿತಿಯಲ್ಲಿ ವನ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಸ್ಥೂಲವಾಗಿ ಅವಲೋಕಿಸುವ ಪ್ರಯತ್ನವಿದು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತಾಗಿ ನಡೆದ ಪ್ರಮುಖ ಘಟನೆ ಎಂದರೆ ೧೯೭೨ರ ವನ್ಯಜೀವಿ (ರಕ್ಷಣಾ) ಕಾಯಿದೆಯ ಜಾರಿ. ಇದು ಆ ಕಾಲದ ಸಂರಕ್ಷಣಾವಾದಿಗಳ ನಿರಂತರ ಹೋರಾಟದ ಫಲ. ಕಾರ್‍ಯಗತಗೊಳಿಸಿದ್ದು ಅಂದು ಅಧಿಕಾರದಲ್ಲಿದ್ದ ಶ್ರೀಮತಿ ಇಂದಿರಾ ಗಾಂಧಿ. ಅಂಥಹ ಒಂದು ರಾಜಕೀಯ ಇಚ್ಛಾಶಕ್ತಿ ಮೂಡಿಸಲು ಸಾಧ್ಯವಾದದ್ದೂ ಅಂದಿನ ಸಂರಕ್ಷಣಾವಾದಿಗಳ ಜಾಣ್ಮೆಯೇ. ಇವರಲ್ಲಿ ಸಲೀಂ ಅಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ನಂತರದ ಮಹತ್ವದ ಯೋಜನೆ ಎಂದರೆ ಹುಲಿಯೋಜನೆ. ಇವುಗಳು ಸಕಾರಾತ್ಮಕ ಪಲಿತಾಂಶ ನೀಡಿದ ನಂತರ ಸಂರಕ್ಷಣೆಯಲ್ಲಿ ವಿಜ್ಞಾನ ಬಳಸದ ಕಾರಣ ಹಾಗೂ ಅಧಿಕಾರಿಗಳ ನಿರ್ಲಕ್ಷದ ಕಾರಣ ವನ್ಯಜೀವಿಗಳ ಸ್ಥಿತಿ ಅಧೋಗತಿಗಿಳಿಯಿತು. ಆದರೆ, ಇದನ್ನು ಸರಿಪಡಿಸಲು ಏನೂ ಮಾಡಲಿಲ್ಲ. ಬದಲಾಗಿ ಆ ಕುರಿತು ಯೋಚಿಸುವವರನ್ನೇ ತುಳಿಯಲಾಯಿತು. ಈ ನಂತರ ವನ್ಯಜೀವಿಗಳ ಕುರಿತಾಗಿ ಪ್ರಧಾನವಾದ ಚರ್ಚೆ ನಡೆದದ್ದೇ ಸಾರಿಸ್ಕಾದಲ್ಲಿ ಹುಲಿಗಳು ನಿರ್ನಾಮವಾದಾಗ. ಆಗ ಸರ್ಕಾರ ಎಚ್ಚೆತ್ತು ಕೊಂಡು ಹುಲಿ ಕಾರ್ಯಪಡೆಯನ್ನು ರಚಿಸಿತು. ಅದರ ಸಾಧನೆಗಳನ್ನು ಮುಂದೆಂದಾರು ನೋಡೋಣ. ಈ ನಡುವಿನ ದೊಡ್ಡ ವನ್ಯಪರವಾದ ವಿಜಯವೆಂದರೆ ಸುಮಾರು ಏಳುಸಾವಿರ ಮಿಲಿ ಮೀಟರ್ ಮಳೆಸುರಿಯುವ ಪ್ರದೇಶದಲ್ಲಿ ಮೂರು ದಶಕಗಳಿಂದ ನಡೆಯುತ್ತಿದ್ದ ತೆರೆದ ಗಣಿಗಾರಿಕೆ ವಿರುದ್ಧ ಯಶಸ್ವಿ ಹೋರಾಟ. ಕುದುರೆಮುಖ ಅರಣ್ಯಪ್ರದೇಶದಲ್ಲಿ ನಡೆಯುತ್ತಿದ್ದ ತೆರೆದ ಗಣಿಗಾರಿಕೆಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಸಮರ್ಥವಾಗಿ ಪ್ರಶ್ನಿಸಿ ಜಯಪಡೆದಿದ್ದು ಜಾಗತಿಕ ದಾಖಲೆ. ಇದರ ಸಂಪೂರ್ಣ ಶ್ರೇಯ ವೈಲ್ಡ್‌ಲೈಫ್ ಫಸ್ಟ್ ಸಂಘಟನೆಗೆ ಸಲ್ಲಬೇಕು. ಜನಸಾಮಾನ್ಯರಿಗೆ ಇದರ ಮಹತ್ವ ತಿಳಿಯಲಿಲ್ಲ. ಅದಿರಲಿ, ಇಂದು ಪ್ರಧಾನವಾಗಿ ನಮ್ಮ ವನ್ಯಭದ್ರತೆಯನ್ನು ಕಾಡುತ್ತಿರುವ ಸಮಸ್ಯೆಯೆಂದರೆ ವನ್ಯಛಿದ್ರೀಕರಣ (ಈoಡಿesಣ ಜಿಡಿಚಿgmeಟಿಣಚಿಣioಟಿ). ಇಡಿಯಾಗಿರುವ ಒಂದು ಅರಣ್ಯ ಪ್ರದೇಶದಲ್ಲಿ ಯಾವುದೋ ಯೋಜನೆಯಿಂದಾಗಿ ಛಿದ್ರವಾಗುವುದು (ಇದು ಅಣೆಕಟ್ಟೆ, ಗಣಿಗಾರಿಕೆಯಂಥಹ ಯೋಜನೆಗಳಿಂದ ತೊಡಗಿ ರಸ್ತೆಯಂತಹ ಕಾಮಗಾರಿಗಳೂ ಆಗಿರಬಹುದು). ಸಂಶೋಧನೆಗಳು ಈ ಛಿದ್ರೀಕರಣವೇ ನಮ್ಮ ಅರಣ್ಯ ಮತ್ತು ಅರಣ್ಯ ವ್ಯವಸ್ಥೆಗೆ ಭಯಂಕರ ದುರಂತಕಾರಿ ಎಂದು ಸಿದ್ಧಪಡಿಸಿವೆ.

ಈಗಾಗಲೇ ಆಗಿರುವ ಅನಾಹುತಗಳನ್ನು ಬದಿಗಿಟ್ಟು ಮುಂದೆ ಯೋಜಿಸಲಾಗಿರುವ ಕ್ರಮವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅತಿದೊಡ್ಡ ದುರಂತಗಳನ್ನು ಪರಿಶೀಲಿಸೋಣ. ಈ ದೇಶದ ಯಾವುದೇ ನಗರಗಳಲ್ಲಿ ಕುಡಿಯಲು ಬಳಸುತ್ತಿರುವ ನೀರು ಬರುತ್ತಿರುವುದು ಒಂದಲ್ಲ ಒಂದು ಅರಣ್ಯಪ್ರದೇಶದಿಂದ. ಇಂದು ಆ ನೀರಿಗಾಗಿಯೇ ರಾಜ್ಯ ಮತ್ತು ರಾಷ್ಟ್ರದಲ್ಲಿ ಅರಣ್ಯಗಳ ಅಸ್ತಿತ್ವಕ್ಕೇ ಸಂಚಕಾರ ತರುವ ಯೋಜನೆಗಳನ್ನು ಹಾಕಿಕೊಂಡಿರುವುದು ಎಂಥ ವಿಪರ್‍ಯಾಸ!

ರಾಜ್ಯದಲ್ಲಿ ನೇತ್ರಾವತೀ ನದಿ ತಿರುವು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜನರ ಪ್ರತಿಭಟನೆಯಿಂದ ಅಪ್ರತಿಭವಾದ ಸರ್ಕಾರ ಜನರ ಹಾಗೂ ಜನರಪರ ಹೋರಾಟದ ಹಾದಿ ತಪ್ಪಿಸಲು ಈ ಯೋಜನೆಯ ಹೆಸರನ್ನು ಎತ್ತಿನಹೊಳೆ ಯೋಜನೆ ಎಂದು ಬದಲಿಸಿದ್ದಾರೆಂಬುದು ಈಗಾಗಲೇ ಜನತೆ ತಿಳಿದಿದೆ. ಇದು ಪಶ್ಚಿಮಘಟ್ಟಗಳಿಂದ ಉತ್ತರದ ಕೋಲಾರ ಮತ್ತಿತರ ಭಾಗಗಳಿಗೆ ನೀರು ಪೂರೈಸುವ ಯೋಜನೆ. ಇದು ಆ ನೀರಿನ ಮೂಲವಾದ ಪಶ್ಚಿಮಘಟ್ಟದ ಕಾಡುಗಳಿಗೇ ಸಂಚಕಾರ ತಂದು ಯಾರಿಗೂ ನೀರಿಲ್ಲದ ಪರಿಸ್ಥಿತಿ ತಂದೊಡ್ಡುತ್ತದೆ. ಇದರಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ಸೂಕ್ತವಾಗಿ ಪರಿಶೀಲನೆ ನಡೆಸಿಯೇ ಇಲ್ಲ. ಸಮಾನತೆಯ ಮಂತ್ರ ಸಹಕಾರ ಮತ್ತಿತರ ಮಾನವ ಕೃತ ಕ್ಷೇತ್ರದಲ್ಲಿ ಸಾಧುವೇ ಹೊರತು ಪ್ರಕೃತಿ ಸಂಪನ್ಮೂಲಗಳ ನೈಸರ್ಗಿಕ ಹರವಿನಲ್ಲಿ ಅಲ್ಲ. ಈ ಯೋಜನೆ ಕರ್ನಾಟಕದ ಪಶ್ಚಿಮಘಟ್ಟದ ವಿನಾಶಕ್ಕೆ ಬರೆಯುವ ಮುನ್ನುಡಿಯಾಗಲಿದೆ.

ಹಾಗೆಯೇ, ಹಿಂದಿನ ಎನ್‌ಡಿಎ ಸರ್ಕಾರ ಯೋಜಿಸಿದ್ದ ಭಾರತದ ನದಿಗಳ ಜೋಡಣೆ ಕಾರ್‍ಯಕ್ರಮ. ಇದು ಗಂಗಾ ಕಾವೇರಿ ಯೋಜನೆ ಎಂದೇ ಹೆಸರುಗಳಿಸಿತ್ತು. ಅಣೆಕಟ್ಟುಗಳ ಸರಮಾಲೆಯೇ ಈ ಯೋಜನೆಯ ಬೆನ್ನುಮೂಳೆ. ಜಗತ್ತಿನ ಇತರೆಡೆಗಳಲ್ಲಿ ಅಣೆಕಟ್ಟುಗಳನ್ನು ಬೀಳಿಸುವುದೇ ಸೂಕ್ತ ಎಂಬ ಆಲೋಚನೆ ಕಾರ್‍ಯರೂಪದಲ್ಲಿರುವಾಗ ಅಣೆಕಟ್ಟುಗಳನ್ನು ಕಟ್ಟುವ ಹಳಸಲು ಯೋಜನೆಯನ್ನು ಭಾರತದಲ್ಲಿ ನೀರೆರೆದು ಪೋಷಿಸಲಾಗುತ್ತಿದೆ. ಉತ್ತರಭಾರತದಲ್ಲಿ ಈ ಪ್ರಮಾಣದಲ್ಲಿ ಭೂಕಂಪನಗಳನ್ನು ನೋಡಿಯಾದರೂ ನಾವು ಅಲ್ಲಿನ ಭೂವಿಜ್ಞಾನ ಅರ್ಥಮಾಡಿಕೊಂಡು ಈ ಅವೈಜ್ಞಾನಿಕವಾದ ಯೋಜನೆಯನ್ನು ತಡೆಗಟ್ಟಬೇಕು. ನದಿ ಜೋಡಣೆ ಕುರಿತಗಿ ಅನೇಕ ಅಧ್ಯಯನಗಳು ನಡೆದಿದ್ದು ಯಾವೂ ಸಹ ಜೋಡಣೆಯ ಪರವಾಗಿ ಇಲ್ಲ. ಕೋಲ್ಕತ್ತದ ಇಂಡಿಯನ್ ಇನ್ಸಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ತಜ್ಞರು ಈ ಯೋಜನೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಇದು ಎಂದಿಗೂ ಆಗಬಾರದು ಎಂದು ಅಭಿಪ್ರಾಯಪಟ್ಟಿದೆ. ಇದು ಇಡೀ ಭಾರತದ ಪರಿಸರ ವ್ಯವಸ್ಥೆಯನ್ನು ಗಂಡಾಂತರಕ್ಕೆ ನೂಕುವ ಯೋಜನೆ.

ಹೀಗೆ ಕೇಂದ್ರ ಮತ್ತು ರಾಜ್ಯದ ಅವೈಜ್ಞಾನಿಕ, ಅಪ್ರಬುದ್ಧ ಯೋಜನೆಗಳಿಂದ ಇಡೀ ರಾಷ್ಟ್ರದ ಪರಿಸರ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ. “ಜನರಿಗೆ ಕುಡಿಯುವ ನೀರು ಬೇಕು. ನದಿಯಿಂದ ತರೋಣ. ಅದು ಎಷ್ಟು ದೂರದಿಂದಾರೂ ಸರಿ” ಎಂಬ ಹೇಳಿಕೆ ನೀರಿನ ಚಕ್ರ ಅರಿಯದವರಿಗೆ, ಜನಸಾಮಾನ್ಯರಿಗೆ ಅದ್ಭುತವಾಗಿ ಕಾಣುವಲ್ಲಿ ಆಶ್ಚರ್ಯವೇನಿಲ್ಲ. ಇದು ಒಂದು ಸಮೂಹದ ಕತೆಯಾದರೆ, ಇಂತಹ ಯೋಜನೆಗಳನ್ನು ರೂಪಿಸುವ ಸಿವಿಲ್ ಎಂಜಿನಿಯರ್‌ಗಳು ನದಿಯ ಹುಟ್ಟು, ಹರಿವು ಒಟ್ಟಾರೆ ಪರಿಸರ ವ್ಯವಸ್ಥೆಯನ್ನು ಕುರಿತು ಓದಿರುವುದೇ ಇಲ್ಲ. ಅವರು ಅವನ್ನು ಒಂದು ಸಿವಿಲ್ ಎಂಜಿನಿಯರಿಂಗ್ ಸಮಸ್ಯೆ ಎಂದು ಪರಿಗಣಿಸುತ್ತಾರೆಯಾಗಿ ಸದರಿ ಯೋಜನೆಗಳಿಂದ ನೀರಸೆಲೆಯೇ ಬತ್ತಿ ಹೋಗುತ್ತದೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಇನ್ನು ವನ್ಯಜೀವಿ ವಿಜ್ಞಾನಿಗಳನ್ನು ಪರಿಸರ ತಜ್ಞರನ್ನು ಈ ಯೋಜನೆಯ ಭಾಗವಾಗಿ ಎಂದೂ ಮಾಡಿಕೊಳ್ಳುವುದಿಲ್ಲ. ಇವೇ ನಮ್ಮ ಪಾರಿಸಾರಿಕ ಅವನತಿಗೆ ಮುಖ್ಯ ಕಾರಣ. ಇನ್ನು ಭ್ರಷ್ಟಾಚಾರ, ಕಳ್ಳಬೇಟೆ ಇತ್ಯಾದಿಗಳನ್ನು ಪರಿಗಣಿಸಿದರೆ ಇಷ್ಟು ಉಳಿದುಕೊಂಡಿರುವದಕ್ಕೆ ಕಾರಣಕರ್ತರಾಗಿರುವ ಸರ್ವೋಚ್ಛ ನ್ಯಾಯಾಲಯ, ಜನಪರ ಹೋರಾಟಗಾರರಿಗೆ ಕೃತಜ್ಞರಾಗಿರಬೇಕು. ಸರ್ವೋಚ್ಛ ನ್ಯಾಯಾಲಯ ಎಂದೆ, ಹೌದು. ನ್ಯಾಯಾಲಯ ಪರಿಸರಪರವಾದ ತೀರ್ಮಾನ ನೀಡಿರದಿದ್ದರೆ ಇಂದು ನಮ್ಮಲ್ಲಿರುವ ಕಾಡುಗಳಲ್ಲಿ ಶೇಖಡ ೫ರಷ್ಟೂ ಇರುತ್ತಿರಲಿಲ್ಲ ಎಂಬುದು ಒಂದು ಕಹಿ ಸತ್ಯ.

ಇಂದು ಪರಿಸರದ ಕಾರಣ ನೀಡಿಯೇ ಅಣೇಕಟ್ಟುಗಳನ್ನು ಒಡೆಯಲಾಗುತ್ತಿದೆ. ನದಿಗಳನ್ನು ತಡೆದು ನಿಲ್ಲಿಸುವುದರ ಬದಲಾಗಿ ಹರಿಯಲು ಬಿಟ್ಟರೇ ಪರಿಸರಕ್ಕೆ ಅನುಕೂಲ ಮಾತ್ರವಲ್ಲ ಆರ್ಥಿಕವಾಗಿಯೂ ಸರಿಯಾದ ಕ್ರಮ ಎಂಬುದನ್ನು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ. ಅದಾಗ್ಯೂ ಭಾರತದಲ್ಲಿ ಅಣೆಕಟ್ಟುಗಳ ಸರಮಾಲೆಯನ್ನೇ ಹೊಂದಿರುವ ಯೋಜನೆಗಳಿಗೆ ಸಾವಿರಾರು, ಲಕ್ಷಾಂತರ ಕೋಟಿ ರೂಪಾಯಿಗಳ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಇದು ಬೌದ್ಧಿಕ ದಿವಾಳಿತನ.

ಅರಣ್ಯಗಳ ಅಸಮರ್ಪಕ ನಿರ್ವಹಣೆಯ ಮತ್ತೊಂದು ದುಷ್ಪರಿಣಾಮವೇ ಮಾನವ ವನ್ಯಜೀವಿಗಳ ಸಂಘರ್ಷ. ಇಂದು ಹುಲಿ, ಚಿರತೆಗಳು ಜನ ಪ್ರದೇಶಗಳಲ್ಲಿ ಕಂಡುಬರುವುದು, ಜಾನುವಾರುಗಳ ಹತ್ಯೆ ಅಥವಾ ನರಭಕ್ಷಣೆಯಂತಹ ಘಟನೆಗಳು ನಡೆಯುವುದರ ಮೂಲ ಕಾರಣವೇ ಅಸಮರ್ಪಕ ನಿರ್ವಹಣೆ. ಜನರಿಗೆ ತಕ್ಕ ಮಾಹಿತಿ, ಶಿಕ್ಷಣ ನೀಡುವುದೂ ಅಗತ್ಯ ಮತ್ತು ನಿರ್ವಹಣೆಯ ಭಾಗ. ಅರಣ್ಯ ಇಲಾಖೆಗೆ ಈ ನಿಟ್ಟಿನಲ್ಲಿ ಎಲ್ಲರೂ ಸಾಧ್ಯವಿರುವ ಎಲ್ಲ ಬೆಂಬಲ ನೀಡಬೇಕು. ಅರಣ್ಯ ನಿರ್ವಹಣೆಯಲ್ಲಿ ವಿಜ್ಞಾನದ ಬಳಕೆಯಾಗಬೇಕು. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಚಿರತೆ ಮತ್ತು ಮಾನವ ಸಂಘರ್ಷವಿತ್ತು. ಅಲ್ಲಿನ ಇಲಾಖೆ, ಸದರಿ ಚಿರತೆಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ಆದರೆ, ಸಮಸ್ಯೆ ಪರಿಹಾರವಾಗಲಿಲ್ಲ! ಕೊನೆಗೆ ವನ್ಯಜೀವಿ ತಜ್ಞರು ಅಧ್ಯಯನ ನಡೆಸಿ ಕಾರಣಗಳನ್ನು ಕಂಡುಹಿಡಿದರು. ಇಲಾಖೆಯ ಕ್ರಮದಿಂದ ಸಮಸ್ಯೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿದಂತಾಗುತ್ತಿತೇ ವಿನಃ ಪರಿಹಾರವಾಗುತ್ತಿರಲಿಲ್ಲ. ಬೇರೆಡೆ ಸಾಗಿಸಿದಾಗ ಅಲ್ಲಿನ ಚಿರತೆಗಳು ಇವುಗಳೊಂದಿಗೆ ತಮ್ಮ ಸ್ಥಳದ ಸಾರ್‍ವಭೌಮತ್ವಕ್ಕಾಗಿ ಹೋರಾಡುತ್ತವೆ. ಕಾಡಿನಿಂದ ಹೊರಬರುವ ಪ್ರಾಣಿಗಳು ಸಾಮಾನ್ಯವಾಗಿ ಅಶಕ್ತ ಪ್ರಾಣಿಗಳು. ಹಾಗಾಗಿ, ಇಂತಹ ಹೋರಾಟದಲ್ಲಿ ಇವುಗಳ ಸೋಲು ಖಚಿತ. ಸೋತ ನಂತರ ಹತ್ತಿರದ ಹಳ್ಳಿಯೇ ಇವುಗಳಿಗೆ ಸುಲಭವಾಗಿ ಆಹಾರ ದೊರಕುವ ತಾಣ! ಸಮರ್ಪಕ ವನ್ಯಜೀವಿ ನಿರ್ವಹಣೆಯೇ ಇದಕ್ಕೆ ಶಾಶ್ವತ ಪರಿಹಾರ. ಈಗ ಇಂತಹ ಸಮಸ್ಯೆಗೆ ವಿಜ್ಞಾನಿಗಳು ಕಾರ್‍ಯಸೂಚಿಯನ್ನು ರೂಪಿಸಿದ್ದಾರೆ. ಖ್ಯಾತ ವನ್ಯಜೀವಿ ತಜ್ಞರು ಒಂದು ಪ್ರಶ್ನೆ ಕೇಳುತ್ತಾರೆ:
“ನಾವು ಉಪಗ್ರಹವನ್ನು ಹಾರಿಬಿಡಬಲ್ಲೆವು. ಜಗತ್ತಿಗೆ ಮಾಹಿತಿ ತಂತ್ರಜ್ಞಾನದ ಗುರುಗಳಾಗಬಹುದು. ಆದರೆ. ಒಂದು ಪ್ರಭೇದ ಏಕೆ ಹೀಗೆ ನಡೆದುಕೊಳ್ಳುತ್ತದೆ ಎಂಬುದನ್ನು ಅರಿಯೆವು! ಏಕೆ? ಇನ್ನು ಹೆಚ್ಚು ಜನ ವನ್ಯವಿಜ್ಞಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ನಮ್ಮ ವನ್ಯಸಮಸ್ಯೆಗಳಿಗೆ ವೈಜ್ಞಾನಿಕವಾದ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಕಾಣುತ್ತಿದೆಯಲ್ಲವೆ?

ಅರಣ್ಯ-ಮಳೆ-ನೀರು-ಕೃಷಿ-ನಮ್ಮ ಬದುಕು ಒಂದೇ ಎಳೆ. ವನ್ಯಪರಿಸರ ಇದನ್ನು ಆಗ ಮಾಡುವುದಾದರೂ ಇದನ್ನು ಮೀರಿದ್ದು. ಇದನ್ನು ನಮ್ಮ ಸರ್ಕಾರ ಎಷ್ಟು ಬೇಗ ಅರ್ಥ ಮಾಡಿಕೊಂಡು ತನ್ನಿಡೀ ಆಡಳಿತ ಯಂತ್ರವನ್ನು ಇದಕ್ಕೆ ಹೊಂದಿಸುವುದೋ ಅಷ್ಟು ಒಳ್ಳೆಯದು. ಕೇಂದ್ರದಲ್ಲಿನ ಹೊಸ ಸರ್ಕಾರ ತನ್ನ ಪರಿಸರ ಹಾಗೂ ವನ್ಯಸಂರಕ್ಷಣೆಯ ನೀತಿಯನ್ನು ರಚಿಸಿ ಎಲ್ಲ ರಾಜ್ಯಗಳಿಗೆ ಮಾದರಿಯಾಗಬೇಕಾಗಿದೆ, ದಿಕ್ಸೂಚಿಯಾಗಬೇಕಾಗಿದೆ. ಅಂತಹ ಒಂದು ಅತಿ ದೊಡ್ಡ ಜವಾಬ್ದಾರಿ ಮತ್ತು ಅವಕಾಶ ಕೇಂದ್ರದ ಮೋದಿ ಸರ್ಕಾರದ ಮುಂದಿದೆ. ಅಂಥ ಒಂದು ಕಾರ್‍ಯಕ್ಕೆ ಇಡೀ ದೇಶ ಎದುರು ನೋಡುತ್ತಿದೆ.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.