-ಲೇಖನ ಮತ್ತು ಫೋಟೋ- ಎನ್.ಡಿ. ಹೆಗಡೆ ಆನಂದಪುರ
ಸಾಮಾನ್ಯವಾಗಿ ಜಲಪಾತವೆಂದರೆ ಗಿರಿ ವನ ಗುಡ್ಡದ ತುದಿಯಲ್ಲಿ ಇರುತ್ತದೆ. ಜಲಪಾತದ ಪ್ರವಾಸ ಮುಗಿಸಿ ಸಮುದ್ರದ ಬೀಚ್‌ಗೆ ಹೋಗಬೇಕೆಂದರೆ ನೂರಾರು ಕಿ.ಮೀ.ದೂರ ಕ್ರಮಿಸಬೇಕು ಎಂಬುದು ಎಲ್ಲರ ಲೆಕ್ಕಾಚಾರ. ಆದರೆ ಸುಂದರ ಮನಮೋಹಕ ಜಲಪಾತ ಬೀಚ್ ಸನಿಹವೇ ಇದ್ದರೆ ಅಂತಹ ಸ್ಥಳ ಅಪ್ಯಾಯಮಾನ ಅಲ್ಲವೇ. ಇನ್ನೂ ಹೆಚ್ಚಾಗಿ ಚಾರಣ ಮಾಡಲು ಎತ್ತರದ ಗುಡ್ಡ, ಗುಹೆಗಳ ಸಾಲು ದೊರೆತರೆ ಪ್ರವಾಸ ಮಾಡುವವರಿಗೆ ಇದಕ್ಕಿಂತ ಬೇರೆ ಸ್ಥಳ ಬೇಕಿಲ್ಲ ಅಲ್ಲವೇ.
ಹಾಗಿದ್ದರೆ ಈ ಎಲ್ಲವೂ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಕೇಂದ್ರದಿಂದ ಕೇವಲ ೬ ಕಿ.ಮೀ.ದೂರದ ಅಪ್ಸರಕೊಂಡದಲ್ಲಿ ಲಭ್ಯ. ಹೊನ್ನಾವರದಿಂದ ಮಂಗಳೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ಕಾಸರಕೋಡಿನಿಂದ ೧ ಕಿ,ಮೀ.ಅಂತರದಲ್ಲಿ ಈ ಸ್ಥಳವಿದೆ.
ಇಲ್ಲಿನ ಉಗ್ರನರಸಿಂಹ ಮತ್ತು ಉಮಾಂಬಾ ಗಣಪತಿ ದೇವಾಲಯದ ಹಿಂಭಾಗದಲ್ಲಿ ಮನಮೋಹಕ ಜಲಪಾತವಿದೆ. ಹಳ್ಳವೊಂದು ಈ ದೇಗುಲದ ಪ್ರದಕ್ಷಿಣೆ ಸುತ್ತಿ ಕೋಡುಗಲ್ಲಿನ ಬಳಿ ಸುಮಾರು ೪೦ ಅಡಿ ಎತ್ತರದಿಂದ ಧುಮುಕುತ್ತದೆ. ಪುರಾಣ ಕಾಲದಲ್ಲಿ ದೇವಲೋಕದ ಅಪ್ಸರೆಯರು ಈ ಜಲಪಾತದಲ್ಲಿ ಸ್ನಾನ ಮಾಡಿ ಸನಿಹದ ದೇವಾಲಯದಲ್ಲಿ ನರ್ತಿಸಿ ಪೂಜೆ ಸಲ್ಲಿಸುತ್ತಿದ್ದರಂತೆ. ಇದರಿಂದಾಗಿ ಈ ಜಲಪಾತಕ್ಕೆ ಅಪ್ಸರಕೊಂಡ ಜಲಪಾತವೆಂಬ ಹೆಸರಿದೆ.
ಮಳೆಗಾಲದ ಆರಂಭದಿಂದ ಸುಮಾರು ಫೆಬ್ರವರಿ ಆರಂಭದವರೆಗೆ ಈ ಜಲಪಾತ ಧುಮುಕುತ್ತಿರುತ್ತದೆ.
ಜಲಪಾತದಿಂದ ಮೇಲಕ್ಕೆ ಸಾಗಿದರೆ ಎತ್ತರದ ಗುಡ್ಡವಿದೆ. ಗುಡ್ಡದ ಸಾಲಿನಲ್ಲಿ ಅಲ್ಲಲ್ಲಿ ಹಳೆಯ ಕಾಲದ ಗುಹೆಗಳಿದ್ದು ಹಿಂದೆ ಋಷಿಮುನಿಗಳು ತಪಸ್ಸಾನಚರಿಸಿದ್ದರು ಎಂಬ ನಂಬಿಕೆಯಿದೆ. ಸರಾಸರಿ ೩ ರಿಂದ ೪ ಅಡಿ ಸುತ್ತಳತೆಯ ಈ ಗುಹೆಗಳಲ್ಲಿ ಸ್ವಲ್ಪ ದೂರ ಕ್ರಮಿಸಿ ಆನಂದಿಸಬಹುದಾಗಿದೆ. ಗುಡ್ಡದ ತುದಿಯವರೆಗೆ ಚಾರಣದ ಮೂಲಕ ಸಾಗಿದರೆ ಆನಂದಾನುಭೂತಿ ಉಂಟಾಗುತ್ತದೆ. ಗುಡ್ಡದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯವರು ಈಗ ಸುಂದರ ಉಧ್ಯಾನ ನಿರ್ಮಿಸಿದ್ದು ಬಗೆ ಬಗೆಯ ಹೂವಿನ ಸಸಿಗಳು, ಸಿಮೆಂಟ್ ಪ್ಲಾಸ್ಟರ್‌ನಿಂದ ನಿರ್ಮಿಸಿರುವ ಕೊಕ್ಕರೆ , ನವಿಲು, ಕರಡಿ, ಚಿಂಪಾಂಜಿ, ಆನೆ, ಎತ್ತು ಮುಂತಾದ ಪ್ರಾಣಿಗಳು, ಕಪ್ಪೆ ಚಿಪ್ಪು ಹಾಗೂ ನಿರುಪಯುಕ್ತ ಟೈಲ್ಸ್ ಚೂರುಗಳನ್ನು ಬಳಸಿ ನಿರ್ಮಿಸಿದ ಖುರ್ಚಿ, ಸೋಪಾಸೆಟ್, ಬೆಂಚ್ ಇತ್ಯಾದಿಗಳು ಮತ್ತು ಹಳೆಯ ಕಾಲದ ಬಂಗಲೆ ಹೋಲುವಂತೆ ನಿರ್ಮಿಸಿದ ಕಟ್ಟಡಗಳು ಹೊಸ ಅನುಭೂತಿ ನೀಡಿ ಪ್ರವಾಸಿಗರಿಗೆ ಮುದ ನೀಡುತ್ತದೆ. ಈ ಉಧ್ಯಾವನದ ತುದಿಯಿಂದ ಸಮುದ್ರ ಬೀಚ್ ತಲುಪಲು ಮೆಟ್ಟಿಲು ಹಾದಿ ನಿರ್ಮಿಸಲಾಗಿದ್ದು ವಿಶಾಲವಾದ ಬೀಚಲ್ಲಿ ವಿಹರಿಸುತ್ತಾ ಸಮಯದ ಪರಿವೆಯನ್ನು ಮರೆಯುವಂತಿದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಜಲಪಾತ, ಚಾರಣದ ಗುಡ್ಡ, ಸುಂದರ ಉಧ್ಯಾನವನ ಹಾಗೂ ಸಮುದ್ರ ಬೀಚ್‌ಗಳಲ್ಲಿ ಒಂದೆಡೆ ಆನಂದಿಸುವ ಏಕೈಕ ಸ್ಥಳ ಅಪ್ಸರಕೊಂಡ ಎಂಬುದರಲ್ಲಿ ಎರಡು ಮಾತಿಲ್ಲ.
ಲೇಖನ ಮತ್ತು ಫೋಟೋ- ಎನ್.ಡಿ. ಹೆಗಡೆ ಆನಂದಪುರ