ಜಲಪಾತಪ್ರವಾಸ

ಕುಗ್ರಾಮದ ಮಡಿಲಲ್ಲೊಂದು ಸುಂದರ ಜಲಪಾತ : ಹಿಂಡ್ಲುಮನೆ ಫಾಲ್ಸ್

HIDLUMANE FALLSಫೋಟೋ-ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ

ಉತ್ತಮ ರಸ್ತೆ,ತಲುಪಲು ಸರಿಯಾದ ಮಾರ್ಗಗಳಿಲ್ಲದಿದ್ದರೆ ಪ್ರವಾಸಿ ತಾಣಗಳು ಜನರಿಗೆ ಪರಿಚಯವಾಗುವುದು ದುಸ್ತರವೇ ಆಗಿದೆ. ಈ ಕಾರಣದಿಂದಲೇ ನಮ್ಮ ರಾಜ್ಯದ ಹಲವು ಜಲಪಾತಗಳು ಹೊರ ಪ್ರಪಂಚಕ್ಕೆ ಅಪರಿಚಿತವಾಗಿಯೇ ಉಳಿದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಿಂಡ್ಲುಮನೆ ಜಲಪಾತ(ರಾಮತೀರ್ಥ ಫಾಲ್ಸ್) ಕುಗ್ರಾಮದ ಮಡಿಲಲ್ಲಿದ್ದು ನೈಸರ್ಗಿಕ ಸೌಂದರ್ಯ, ಸುತ್ತಲಿನ ಪ್ರಾಕೃತಿಕ ರಮಣೀಯತೆಗಳಿಂದ ಅತ್ಯಾಕರ್ಷಕ ಸ್ಥಳವಾಗಿದೆ.

ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು ೫೪ ಕಿ.ಮೀ.ದೂರದಲ್ಲಿದೆ ಈ ಜಲಪಾತ. ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಶಾಂತಪುರ ಹಳ್ಳದ ಸೇತುವೆ ಕ್ರಾಸ್ ನಿಂದ ೫ ಕಿ.ಮೀ.ದೂರದಲ್ಲಿದೆ.ಜೈನರ ಪುಣ್ಯ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಹೊಂಬುಜದ ಮುತ್ತಿನ ಕೆರೆಯಿಂದ ಹುಟ್ಟುವ ಶ್ರವಣಾನದಿ ಎಂಬ ಚಿಕ್ಕ ಹೊಳೆ ಇಲ್ಲಿ ಜಲಪಾತವಾಗಿ ದುಮ್ಮಿಕ್ಕುತ್ತದೆ.ಹುಂಚ, ಹೊಂಡಲಗದ್ದೆ,ಗರ್ತಿಕೆರೆ ಮೂಲಕ ಹರಿದು ಬರುವ ಈ ಹೊಳೆ ಹಿಂಡ್ಲುಮನೆ ಗ್ರಾಮದ ಈ ಸ್ಥಳದಲ್ಲಿ ಬೃಹತ್ ಬಂಡೆಗಲ್ಲುಗಳ ಸಂದಿಯಲ್ಲಿ ಹೊರಳಿ ವಿಜೃಂಬಿಸುತ್ತದೆ.ಮುಂದೆ ಗವಟೂರು ಹೊಳೆಯಾಗಿ,ಮಾವಿನಹೊಳೆ ನದಿಯೊಂದಿಗೆ ಬೆರೆತು ಶರಾವತಿ ನದಿ ಸೇರುವ ಈ ಜಲಪಾತದ ಹಳ್ಳ ಹಲವರಿಗೆ ಇನ್ನೂ ಅಪರಿಚಿತವಾಗಿಯೇ ಉಳಿದಿದೆ.

ರಾಮಾಯಣ ಕಾಲದಲ್ಲಿ ಸೀತೆ ರಾವಣನಿಂದ ಅಪಹರಿಸ್ಪಟ್ಟಾಗ ಶ್ರೀರಾಮ ಸೀತೆಯನ್ನು ಅರಸುತ್ತಾ ಇಲ್ಲಿಗೆ ಬಂದಿದ್ದನಂತೆ. ತೀರ್ಥಹಳ್ಳಿಯ ತುಂಗಾ ನದಿ, ಶರಾವತಿ ಉದ್ಭವಿಸುವ ಅಂಬುತೀರ್ಥ ಸ್ಥಳಗಳ ಪ್ರಯಾಣದ ನಂತರ ಶ್ರೀರಾಮ ಈ ಸ್ಥಳಕ್ಕೆ ಆಗಮಿಸಿ ವಿಶ್ರಮಿಸಿದಂತೆ. ಇಲ್ಲಿನ ಜಲಪಾತದ ಬಂಡೆಯ ತುದಿಗೆ ಹೆಜ್ಜೆಯ ಗುರುತಿದ್ದು ಇದು ಶ್ರೀರಾಮನ ಹೆಜ್ಜೆ ಎಂದು ಸ್ಥಳೀಯರು ವಿವರಿಸುತ್ತಾರೆ. ಬಂಡೆಯ ಬುಡದಿಂದ ತೀರ್ಥದಂತೆ ನೀರು ಉಕ್ಕುವ ಸ್ಥಳವಿದ್ದು ಇದನ್ನು ರಾಮತೀರ್ಥವೆಂದು ಜನ ಗುರುತಿಸುತ್ತಾರೆ. ಅದಕ್ಕಾಗಿ ಈ ಜಲಪಾತಕ್ಕೆ ರಾಮತೀರ್ಥ ಜಲಪಾತವೆಂಬ ಹೆಸರೂ ಸಹ ಇದೆ. ಪ್ರತಿವರ್ಷ ಎಳ್ಳು ಅಮಾವಾಸ್ಯೆಯಂದು ಇಲ್ಲಿ ವೈಭವದ ಜಾತ್ರೆ ಜರುಗುತ್ತದೆ. ಆ ದಿನ ಸಾವಿರಾರುHIDLUMANE FALLS (1) ಜನ ಈ ಜಲಪಾತದಲ್ಲಿ ಸ್ನಾನ ಮಾಡಿ ಪುಣ್ಯ ಸಂಪಾದನೆಯ ಭಾವನೆಯಲ್ಲಿ ವಿಹರಿಸುತ್ತಾರೆ.

ಈ ಜಲಪಾತದ ಕೆಳ ಭಾಗದ ಸ್ವಲ್ಪ ದೂರದಲ್ಲಿ ಈಶ್ವರಪ್ಪ ಎಂಬವರ ಮನೆಯ ಎದುರು ಎತ್ತರದ ಬ್ಯಾಣದಲ್ಲಿ ನಾಲ್ಕು ಅಡಿ ಆಳದ ಬಾವಿಯಿದ್ದು ವರ್ಷ ವಿಡೀ ನೀರಿನ ಬುಗ್ಗೆ ಒಂದೇ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತದೆ.ಇದು ಶ್ರೀರಾಮ ಬಾಯಾರಿಕೆ ತಣಿಸಿಕೊಳ್ಳಲು ಬಾಣದಿಂದ ನಿರ್ಮಿಸಿದ ಚಿಲುಮೆ ಎಂಬ ನಂಬಿಕೆಯಿದ್ದು ಚರ್ಮ ರೋಗ ನಿವಾರಣೆಗೆ ಜನ ಇದನ್ನು ಕುಡಿಯುತ್ತಾರೆ.ತೀರ್ಥಹಳ್ಳಿಯಿಂದ ಗರ್ತಿಕೆರೆ ಮೂಲಕ, ಹೊಸನಗರ ಹೆz.ರಿಯ ಕೋಟೆತಾರಿಗ ಗ್ರಾಮದಿಂದಲೂ ಸಹ ಈ ಜಲಪಾತ ತಲುಪಲು ರಸ್ತೆಯಿದ್ದು ಸರಿಯಾದ . ಸೂಚನಾ ಫಲಕಗಳು ಇಲ್ಲವಾಗಿದೆ. ಬಂಡೆಗಲ್ಲುಗಳ ನಡುವೆ ಉಕ್ಕಿ ಹರಿಯುವ ಈ ಜಲಪಾತ ವೀಕ್ಷಿಸಲು ಸಪ್ಟೆಂಬರ್ ನಿಂದ ಜನವರಿ ವರೆಗೆ ಯೋಗ್ಯ ತಿಂಗಳಾಗಿದ್ದು ಪ್ರವಾಸಿಗರು ಜನ ಜಂಗುಳಿಯಿಂದ ಮುಕ್ತವಾದ ಸುಂದರ ಜಲಪಾತದ ಸೌಂದರ್ಯ ವೀಕ್ಷಿಸಬಹುದಾಗಿದೆ.

ಫೋಟೋ-ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ

18-10-2012

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.