ಭಲೇ... ಬಾಲಸುಬ್ರಹ್ಮಣ್ಯಮ್

ಎಸ್.ಪಿ ಬಾಲಸುಬ್ರಹ್ಮಣ್ಯಮ್ ನಿಜಕ್ಕೂ ಅದ್ಭುತ ! ಯಾವ ಕಾರಣಕ್ಕೆ? | ಭಾಗ-೧

-ಚಿನ್ಮಯ.ಎಮ್.ರಾವ್

ಆಗಸದಲ್ಲಿರುವ ತಾರೆಗಳಂತೆ ಎಸ್.ಪಿ ಬಾಲಸುಬ್ರಹ್ಮಣ್ಯಮ್ ಹಾಡಿರುವ ಹಾಡುಗಳ ಸಂಖ್ಯೆಯೂ ಅಗಣಿತ. ಪ್ರತೀ ಹಾಡುಗಳೂ ನಕ್ಷತ್ರಗಳಂತೆ ಚಿರಕಾಲ ಮಿನುಗುತ್ತಲೇ ಇರುತ್ತವೆ. ಸುಮಾರು ಅರ್ಧಲಕ್ಷದಷ್ಟು ಗೀತೆಗಳನ್ನು ಹಾಡಿರುವ ಈ ಜೀವಂತ ದಂತಕಥೆಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ನಾನೂ ಒಬ್ಬ ಹುಚ್ಚು ಅಭಿಮಾನಿ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊನಗೋಡು ಎಂಬ ಪುಟ್ಟ ಹಳ್ಳಿಯಲ್ಲಿ ಕೃಷಿಕನಾಗಿರುವ ನಾನು ಶಾಸ್ತ್ರೀಯ ಸಂಗೀತವನ್ನೂ ಸಾಧನೆ ಮಾಡುತ್ತಿದ್ದೇನೆ. ಸುಮಾರು ೨೫ ಸೀ.ಡಿಗಳಿಗೆ ಸಂಗೀತ ನೀಡಿರುವ ನಾನು ನನ್ನ ಮೂರನೆಯ ಸೀ.ಡಿಗೆ ಎಸ್.ಪಿ.ಬಿ ಅವರಿಂದ ಹಾಡಿಸಿದ್ದೇ ಒಂದು ವಿಸ್ಮಯ!

೨೦೦೬ರಲ್ಲಿ ನಿರ್ಮಾಪಕಿಯೊಬ್ಬರು ತಮ್ಮ ತಂದೆಯವರ ಭಕ್ತಿಗೀತೆಗಳನ್ನು ಸಿ.ಡಿ ಮಾಡಿಕೊಡಬೇಕೆಂದು ನನ್ನನ್ನು ಕೇಳಿದರು. ಅವರ ಬಜೆಟ್ ಕಡಿಮೆ ಇದ್ದರೂ ಆ ಹಿರಿಯ ಸಾಹಿತಿಯ ಭಕ್ತಿಸಾಹಿತ್ಯ ವಿಭಿನ್ನವಾಗಿದ್ದ ಕಾರಣ ನಾನು ಕೂಡಲೇ ಒಪ್ಪಿಕೊಂಡು ಧ್ವನಿಮುದ್ರಣವನ್ನಾರಂಭಿಸಿದೆ.

ಎಲ್ಲಾ ಗಾಯಕರೂ ಚೆನ್ನಾಗಿಯೇ ಹಾಡಿದರು. ಆದರೆ ಮೊದಲ ಗಣಪತಿಯ ಹಾಡು ಏಕೋ ನೀರಸವೆನಿಸಿತ್ತು. ನಿರ್ಮಾಪಕರು ಸೂಚಿಸಿದ್ದ ಆ ಗಾಯಕನ ಧ್ವನಿಗೆ ಆ ಹಾಡು ಸೂಟ್ ಆಗುತ್ತಿರಲಿಲ್ಲ. ಆ ಹಾಡನ್ನು ಎಸ್.ಪಿ.ಬಿ ಹಾಡಿದರೆ ಹೇಗಿರಬಹುದೆಂದು ಕಲ್ಪಿಸಿಕೊಂಡೆ. ನನ್ನ ಮನದ ಸ್ಟೂಡಿಯೋದಲ್ಲಿ ಆ ಹಾಡು ಓಕೆ ಆಗಿ ಆ ಹಾಡು ಅವರಿಗೇ ಸರಿ ಎಂದುಕೊಂಡೆ. ಕನಸನ್ನೇನೊ ಸುಲಭವಾಗಿ ಕಾಣಬಹುದು, ಆದರೆ ಅದು ನನಸಾಗಬೇಕಲ್ಲ. ಅದೂ ಮೇರುಗಾಯಕನೊಬ್ಬ ನನ್ನಂತಹ ಕಿರಿಯ ಯುವ ಸಂಗೀತ ನಿರ್ದೇಶಕನಿಗೆ ಹಾಡುತ್ತಾರಾ? ಚಿನ್ಮಯ ಗೊಂದಲಮಯ.
ಗೆಳೆಯರು ಬಂಧುಬಳಗದವರೆಲ್ಲಾ ನನ್ನ ಆಲೋಚನೆಯನ್ನು ಕೇಳಿ ಇದಾಗದ ಮಾತು,ತಿರುಕನ ಕನಸು ಎಂದು ನಕ್ಕು ಬಿಟ್ಟರು. ಕೆಲವರು ಗೇಲಿ ಕೂಡ ಮಾಡಿದರು.

ಒನ್ ಫ಼ೈನ್ ಡೆ ನನ್ನ ಆತ್ಮೀಯ ಗೆಳೆಯ ಮೊಗ್ಗಿನ ಮನಸಿನ ಶಶಾಂಕ್‌ಗೆ ಕಾಲ್ ಮಾಡಿ ನನ್ನ ಎತ್ತರದ ಕನಸನ್ನು ಬಿತ್ತರಿಸಿದೆ. ಆತ ತತ್ತರಿಸಲಿಲ್ಲ…ಕೂಲಾಗಿ “ಇದು ನಿನ್ನಿಂದ ಸಾಧ್ಯ ,ಡು ಇಟ್…”ಎಂದು ಜಗನ್ನಾಥ್ ಎಂಬ ವ್ಯಕ್ತಿಗೆ ಕರೆ ಮಾಡಿ ಹೇಳಿದರು. ಹಾಗು ಅವರ ನಂಬರ್ ನನಗೆ ಕೊಟ್ಟರು. ಎಸ್.ಪಿ.ಬಿ ಸಂಪರ್ಕ ಸಾಧ್ಯವಾಯಿತು. ಆದರೆ ದೂರದ ಹೈದರಾಬಾದ್‌ಗೆ ಟ್ರ್ಯಾಕ್ ಸಮೇತ ಬರುವಂತೆ ನನಗೆ ಡೇಟ್ ಕೊಟ್ಟರು. ಇದನ್ನು ನಮ್ಮ ನಿರ್ಮಾಪಕಿ ಕೂಡ ನಂಬಲಿಲ್ಲ. ನನ್ನ ಬಗ್ಗೆ ಅನುಮಾನ ಪಟ್ಟು ಅದಕ್ಕೆ ಬೇಕಾದ ಹಣವನ್ನು ಕೂಡ ನನಗೆ ಕೊಡಲಿಲ್ಲ. ನನ್ನ ಸಂಗೀತಕ್ಕೆ ಹಾಡಲು ಎಸ್.ಪಿ.ಬಿಯವರೇ ಡೇಟ್ ಕೊಟ್ಟಿದ್ದಾರೆ ಎಂದರೆ ಅದಕ್ಕಿಂತ ಸಂತಸ ಇನ್ನೇನುಬೇಕು? ಹೇಗೋ ನನ್ನ ಹಣವನ್ನೇ ಹೊಂದಿಸಿಕೊಂಡು ಹೈದರಾಬಾದ್ ಬಸ್ಸನ್ನೇರಿದೆ. ಒಂದೆಡೆ ಖುಷಿ, ಇನ್ನೊಂದೆಡೆ ಅಷ್ಟು ದೊಡ್ಡವರ ಹತ್ರ ಹಾಡಿಸಬೇಕಲ್ಲ, ಏನಾಗುವುದೋ ಏನೋ ಎಂಬ ಭಯ,ಆತಂಕ.

ಅಂತೂ ಹೇಳಿದ ದಿನಾಂಕಕ್ಕೆ ಸಮಯಕ್ಕೆ ಸರಿಯಾಗಿ ಎಸ್.ಪಿ.ಬಿ ಸ್ಟೂಡಿಯೋಕ್ಕೆ ಬಂದರು. ಆ ಶಿಸ್ತೇ ಅವರನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿರಬಹುದು. ಪ್ರೀತಿಯಿಂದ ನನ್ನನ್ನು ಅವರೇ ಕರೆದು ಪರಿಚಯಿಸಿಕೊಂಡು ಕೇವಲ ಅರ್ಧಗಂಟೆಯಲ್ಲಿ ಹಾಡನ್ನು ಶ್ರದ್ಧೆಯಿಂದ ಅಭ್ಯಾಸಮಾಡಿ
ಹಾಡಲಾರಂಭಿಸಿದರು. ಎರಡೆರಡು ಸಾಲುಗಳನ್ನು ಹಾಡಿ ನನ್ನತ್ತ ನೋಡಿ,” ಓಕೇನಾ ಸಾರ್…ನಿಮ್ಮ ಶೈಲಿಯೇನಾದರೂ ಇದ್ದರೆ ದಯಮಾಡಿ ಹೇಳಿ…ಡೋಂಟ್ ಹೆಸಿಟೇಟ್..ಪ್ಲೀಸ್” ಎಂದು ಹುರಿದುಂಬಿಸಿತ್ತಾ ರಾಗವನ್ನು ಆಸ್ವಾದಿಸುತ್ತಾ ಹಾಡಿದರು. ತಪ್ಪುಗಳನ್ನು ಅವರೇ ಸರಿಪಡಿಸಿ ಹಾಡನ್ನು ಅದ್ಭುತವಾಗಿಸಿದರು. ಇದೇ ರೀತಿ ಆನಂತರದ ವರುಷಗಳಲ್ಲಿ ಎಸ್.ಪಿ.ಬಿ ನನ್ನ ೬ ಸಿ.ಡಿಗಳಿಗೆ ಹಾಡಿದ್ದಾರೆ. ಸದಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ.

ನಿನ್ನೆ ಮೊನ್ನೆ ಬಂದು ರಾತ್ರೋರಾತ್ರಿ ಹಿಟ್ ಆದೆವೆಂದು ತಮಗೆ ತಾವೇ ತಪ್ಪಾಗಿ ತಿಳಿದುಕೊಂಡ ಕೆಲವು ಗಾಯಕರು, ಯುವಸಂಗೀತ ನಿರ್ದೇಶಕರೆಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಮ್ಮ ಪ್ರತಿಕ್ರಿಯೆಯನ್ನೂ ಕೇಳದೆ ತಾವು ಹಾಡಿದ್ದೇ ಹಾಡು, ಬೇಕಾದರೆ ಇಟ್ಟುಕೊಳ್ಳಿ ಬೇಡದಿದ್ದರೆ ಬಿಡಿ ಎಂದು ಹಣಕ್ಕಾಗಿ ಹಾಡಿ ಒಣಪ್ರತಿಷ್ಠೆಯನ್ನು ತೋರಿಸಿ ಸ್ಟೂಡಿಯೋದಿಂದ ಹೊರಬೀಳುತ್ತಾರೆ. ಕೆಲವು ವರುಷಗಳಲ್ಲಿ ಅಂತವರು ಅವಕಾಶಗಳಿಲ್ಲದೆ ಸಂಗೀತಲೋಕದಿಂದಲೇ ಹೊರಬೀಳುತ್ತಾರೆ. ಇದೇ ಅಲ್ಲವೇ ಎಸ್.ಪಿ.ಬಿ ಅವರಿಗೂ ಬೇರೆ ಗಾಯಕರಿಗೂ ಇರುವ ವ್ಯತ್ಯಾಸ.

ಪ್ರಿಯ ಓದುಗರೇ…ಎಸ್.ಪಿ.ಬಿ ಏಕೆ ಅದ್ಭುತ? ಎನ್ನುವುದಕ್ಕೆ ಇದು ನನ್ನೊಬ್ಬನ ಅನುಭವ ಅಷ್ಟೆ. ಹೀಗೆಯೇ ಸಂಗೀತಲೋಕದ ಹಲವರಿಗೆ ಎಸ್.ಪಿ.ಬಿ ಅವರ ಜೊತೆಗಿನ ಹಲವು ರೀತಿಯ ಅದ್ಭುತವೆನಿಸುವಂತಹ ಅನುಭವಗಳಾಗಿರುತ್ತದೆ. ಅವನ್ನೆಲ್ಲಾ ಕಲೆಹಾಕಿ ನನ್ನ ಈ ಅಂಕಣದ ಮೂಲಕ ನಿಮಗೆ ಉಣಬಡಿಸುತ್ತೇನೆ. ನಿರೀಕ್ಷಿಸಿ…

ಚಿನ್ಮಯ.ಎಮ್.ರಾವ್
17-6-2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.