ಅಂಕಣಭಲೇ... ಬಾಲಸುಬ್ರಹ್ಮಣ್ಯಮ್

ನಾನು ಹಾಡಿದ್ದು `ಸರಿಯಾಗಿದೆಯೇನಮ್ಮ? | ಭಾಗ-೩

181574_10150148418016802_665036801_8086016_3275429_n-ಚಿನ್ಮಯ ಎಂ.ರಾವ್ ಹೊನಗೋಡು

ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಅಪರೂಪದ ಘಟನೆ ಇದು. ಆ ಗಾಯಕಿಯ ಪಾಲಿಗೆ ಅದು ಅನಿರಿಕ್ಷೀತವಾದರೂ, ನಮ್ಮೆಲ್ಲರ ಪಾಲಿಗೆ ಅತ್ಯಾಶ್ಚರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಎಷ್ಟು ಮಾತಾಡಿದರೂ ಆ ಗಾಯಕನ ಗುಣಗಾನ ಅವರ ಗಾನದಷ್ಟೇ ಮಧುರ.. ಅನಂತ.. ಮುಗಿಯುವುದೇ ಇಲ್ಲ. ಏಕೆಂದರೆ ಸಜ್ಜನರಲ್ಲಿ ಸರ್ವೇ ಸಾಮನ್ಯ .. ಇಂತಹ ಅಸಾಮಾನ್ಯ ಸನ್ನಿವೇಶಗಳು ದಿನದಿನವೂ ಅವರಿಂದ ನಡೆಯುತ್ತಲೇ ಇರುತ್ತವೆ. ಅಂತಹ ನಡೆಗಳನ್ನು, ನಡತೆಗಳನ್ನು ಒಮ್ಮೆ ನೆನಪಿಸಿಕೊಂಡರೂ ಸಾಕು … `ಓ ಹೌದಾ … ಅಂಥಹಾ ದೊಡ್ಡವರೂ ಹಾಗಂದರಾ?’ ಎನ್ನುತ್ತೇವೆ. ಅವೆಲ್ಲಾ ನಮ್ಮೊಳಗೆ ಆದರ್ಶಗಳನ್ನು ಬಿತ್ತುವ ಮಹಾಬುತ್ತಿ .
ಹಾಂ… ಪ್ರೀಯ ಓದುಗರೇ ಈಗ ಆ ಘಟನೆಗೆ ಬರೋಣ.

In_Concert bಹಿಂದೊದಿತ್ತು ಕಾಲ.. ಅದು ವಿಜಯಭಾಸ್ಕರ್ ಕಾಲ .ಮಲಯಮಾರುತದಂತಹ ಸೂಪರ್ ಹಿಟ್ ಗೀತೆಗಳನ್ನು ಸಂಗೀತ ಪ್ರಿಯರಿಗೆ ಉಣಬಡಿಸಿದಂತಹ ಇದೇ ಸಂಗೀತ ನಿರ್ದೇಶಕರಿಗೆ, ದಿಟ್ಟ ಪ್ರತಿಭೆಯ ಪುಟ್ಟ ಹುಡುಗಿಯೊಬ್ಬಳು ಟ್ರ್ಯಾಕ್ ಹಾಡುತ್ತಿದ್ದಳು. ರೈಲ್ವೇ ಟ್ರ್ಯಾಕಿನಲ್ಲಿ ಸಾಗುವ ಎಕ್ಸ್‌ಪ್ರೆಸ್ ರೈಲ್‌ವೇ ಗಾಡಿಯಷ್ಟೇ ವೇಗವಾಗಿ ಮ್ಯುಸಿಕ್ ಟ್ರ್ಯಾಕ್‌ನ್ನು ನಿರಾತಂಕವಾಗಿ ಹಾಡಿ ಮುಗಿಸುತ್ತಿದ್ದ ಈ ಪುಟ್ಟ ಬಾಲೆ ವಿಜಯಭಾಸ್ಕರ್ ಪಟ್ಟ ಆರಂಭದ ಶ್ರಮಕ್ಕೆ ಅಂದವಾದ ರೂಪ ಕೊಡುತ್ತಿದ್ದಳು. ಮುಖ್ಯ ಗಾಯಕರು ಚಂದವಾಗಿ ಹಾಡಲಿಕ್ಕೆ ಈ ಅಂದವೇ ಆಧಾರಸ್ತಂಭವಾಗುತ್ತಿತ್ತು. ಹೀಗೆಯೇ ಒಂದು ಚಿತ್ರದಲ್ಲಿ ಎಸ್.ಪಿ.ಬಿ ಹಾಡುವ ಹಾಡಿಗೆ ಈಕೆ ಟ್ರ್ಯಾಕ್ ಹಾಡಿದಳು. ಎಷ್ಟಂದರೂ ತನ್ನ ಅಚ್ಚುಮೆಚ್ಚಿನ ಶಿಷ್ಯೆಯ ಲೈಫ್ ಟ್ರ್ಯಾಕ್‌ನ್ನು ಬದಲಾಸಿ ಎತ್ತರಕ್ಕೇರಿಸಬೇಕೆಂದು ಕೊಂಡಿದ್ದ ವಿಜಯ್‌ಭಾಸ್ಕರ್ “ಅದೇ ಹಾಡನ್ನು ಎಸ್.ಪಿ.ಬಿ ಅವರು ದ್ವನಿ ಮುದ್ರಣದಲ್ಲಿ ಹೇಗೆ ಹಾಡುತ್ತಾರೆಂದು ನೋಡು ಬಾ …” ಎಂದು ಸಂಕೇತ್ ಸ್ಟೂಡಿಯೋಕ್ಕೆ ಆಹ್ವಾನಿಸಿದರು.

ಎಸ್.ಪಿ.ಬಿ ಹಾಡುಗಳನ್ನು ಕಿವಿಯಾರೆ ಕೇಳಿ ಬೆಳೆದಿದ್ದ ಆ ಬಾಲೆಗೆ ಅಂದು ಅವರನ್ನು ಕಣ್ಣಾರೆ ನೊಡುವ ಆತುರ. ಅದರಲ್ಲೂ ತಾನು ಹಾಡಿದ ಹಾಡನ್ನೇ ಅವರು ಹೇಗೆ ಹಾಡಬಹುದೆಂಬ ಕುತೂಹಲ.. ಕಾತರ..ಸ್ಟೂಡಿಯೋದೊಳಗೆ ಸ್ಟಡಿಯಾಗಿ ಕೂತಿದ್ದ ಆ ಬಾಲಕಿಯ ಪರಿಸ್ಥಿತಿ ಈ ಥರ. ಸಮಯಕ್ಕೆ ಸರಿಯಾಗಿ ಎಸ್.ಪಿ.ಬಿ ಆಗಮಿಸಿದರು. ನಿಮ್ಮ ಗೀತೆಗೆ ಟ್ರ್ಯಾಕ್ ಹಾಡಿದ್ದು ಇವಳೇ.. ಎಂದು ವಿಜಯ ಭಾಸ್ಕರ್ ಈಕೆಯನ್ನು ಅವರಿಗೆ ಪರಿಚಯಿಸಿದರು. ಕೈಮುಗಿದು ಮುಗುಳ್ನಕ್ಕು ಒಳಗೆ ಹೋದ ಎಸ್.ಪಿ.ಬಿ ಸ್ವಲ್ಪಕಾಲ ಅಭ್ಯಾಸ ಮಾಡಿ ಹಾಡನ್ನು ಅದ್ಭುತವಾಗಿ ಹಾಡಿದರು. ಅವರು ಮೈಕ್ ಮುಂದೆ ಹೇಗೆ ಹಾಡುತ್ತಾರೆಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು.. ಅಲ್ಲ ಕಿವಿಯಾಗಿಸಿಕೊಂಡು ಆ ಬಾಲೆ ಕೇಳಿದಳು. ಆಗಲೆ ತನ್ನ ಗಾಯನದ ನ್ಯೂನತೆಯನ್ನು ಮನದಲ್ಲೆ ಗುರುತಿಸಿಕೊಂಡು ತನ್ನ ಗುರಿಯನ್ನು ಅರಿತುಕೊಂಡಳು. ಇದೆಲ್ಲಾ ಸಹಜ ಆದರೆ ಅಸಹಜವಾದದ್ದೊಂದು ಅಲ್ಲಿ ನಡೆತು. ಹಾಡು ಮುಗಿದಾಕ್ಷಣ ಹಾಡುವವರ ಕೋಣೆಯಿಂದ ಹಾಡಿಸುವವರ ಕೋಣೆಗೆ ಬಂದ ಎಸ್.ಪಿ.ಬಿ ಈ ಬಾಲಕಿಯತ್ತ ನೇರವಾಗಿ ಬಂದು `ನಾನು ಹಾಡಿದ್ದು ಸರಿಯಾಗಿದೆಯೇನಮ್ಮಾ?’ ಎಂದು ವಿನೀತರಾಗಿ ಕೇಳಿದರು ! ……… ಈಕೆ ತಬ್ಬಿಬ್ಬು. ಆಗಷ್ಟೇ ಅವರ ಹಾಡನ್ನು ಕೇಳಿ ಧನ್ಯತಾ ಭಾವವನ್ನು ಅವರತ್ತ ಚೆಲ್ಲುತ್ತಿದ್ದ ಆ ಕಂಗಳಿಗೆ ಇದನ್ನು ನಿಜಕ್ಕು ನಂಬಲಾಗಲಿಲ್ಲ. ಅವರ ವಿಚಿತ್ರ, ವಿಭಿನ್ನ, ವಿಶೇಷ, ವಿನಯಕ್ಕೆ ಹೇಗೆ ಪ್ರತಿಕ್ರಿಯಸಬೇಕೆಂದು ಆಕೆಗೆ ಆ ಕ್ಷಣಕ್ಕೆ ಅರಿವಾಗಲಿಲ್ಲ, ನಗುತ್ತಾ ಮೌನವಾಗಿ “ಸೂಪರ್” ಎಂಬತೆ ತಲೆ ಅಲ್ಲಾಡಿಸಿದಳು.

ಒಬ್ಬ ಮಹಾನ್ ಗಾಯಕ ತಾನು ಹಾಡಿದ್ದು ಸರಿಯಾಗಿದೆಯಾ? ಎಂದು ಕೇಳುವುದೇ ಹೆಚ್ಚು. ಅದರಲ್ಲೂ ಆ ಹಾಡಿನ ಸಂಗೀತ ನಿರ್ದೇಶಕರಿಗೆ ಕೇಳಿದ್ದರೆ ಅದೊಂದು ರೀತಿ. ಆದರೆ ಆ ಹಾಡಿನ ಟ್ರ್ಯಾಕ್ ಸಿಂಗರ್‌ಗೆ …. ಅದೂ ಒಬ್ಬ ಪುಟ್ಟ ಬಾಲಕಿಗೆ ಕೇಳಿದ್ದು ಅಪರೂಪವಲ್ಲವೆ? ತನಗಿಂತ ಸಣ್ಣವರಿಂದಲೂ ತಾನು ಕಲಿಯುವುದು ಬಹಳಷ್ಟಿರುತ್ತದೆ ಎನ್ನುವ ಎಸ್.ಪಿ.ಬಿ ನಿಜಕ್ಕೂ ದೊಡ್ಡವರಲ್ಲವೇ?

ಮುಂದೊಮ್ಮೆ ಅದೇ ಗಾಯಕಿ `ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಅವರ ಪಕ್ಕದಲ್ಲಿ ಜಡ್ಜ್ ಆಗಿ ಕುಳಿತು `ನೀನಿಲ್ಲದೆ ನನಗೇನಿದೆ’ ಎಂದು ಪಲ್ಲವಿಯನ್ನು ಹಾಡಲಾರಂಭಿಸಿದಾಗ ಅವಳು ಬಾಲಕಿಯಲ್ಲ ಬಹುದೊಡ್ಡ ಗಾಯಕಿ ಎಂ.ಡಿ ಪಲ್ಲವಿ ! ಪಲ್ಲವಿ ಖ್ಯಾತ ಡ್ರಮ್ ಪ್ಲೇಯರ್ ಅರುಣ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಅದೇ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ನಾಡಿನ ಸಮಸ್ತ ಕನ್ನಡಿಗರಿಗೆ ಸಾರಿದರು. ಎಸ್.ಪಿ.ಬಿ ಎಲ್ಲವನ್ನೂ ಗಮನಿಸುತ್ತಾರೆ. ಎಲ್ಲರನ್ನೂ ನೋಡುತ್ತಿರುತ್ತಾರೆ, ಪ್ರತಿಯೊಬ್ಬರನ್ನು ನೆನಪಿನಲ್ಲಿಟ್ಟು ಕೊಳ್ಳುತ್ತಾರೆ, ಪ್ರತಿಯೊಂದು ಕ್ಷಣವನ್ನು ಮರೆಯದ ಅವರ ಮೆಮೊರಿ ಕಾರ್ಡ್ ಅದೆಷ್ಟು ಜೀಬಿಯೊ?! ಅವರು ದೇವರಂತೆ ಎನ್ನುತ್ತಾರೆ ಪಲ್ಲವಿ ಅರುಣ್!

ಚಿನ್ಮಯ ಎಂ.ರಾವ್ ಹೊನಗೋಡು

11-7-2011

***************

Dr.Chinmaya Rao

Dr.Chinmaya M.Rao who is the Founder, Editor and Publisher of KANNADA TIMES, who is from Honagodu, Sagar taluk, Shimoga district, is a significant figure in the world of music. Though born in a family of agriculturists, Rao showed love for music and literature throughout his childhood. For more details visit : https://www.facebook.com/chinmaya.m.rao
Back to top button

Adblock Detected

Please consider supporting us by disabling your ad blocker