ಇತ್ತೀಚಿನ ದಿನಗಳಲ್ಲಿ ಪ್ರತೀಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಖಾಯಿಲೆ ಇರುವುದು ಸಾಮಾನ್ಯ.
ಸಂಪೂರ್ಣ ಆರೋಗ್ಯಕರ ಮನುಷ್ಯ ಸಿಗುವುದು ಬಲು ಅಪರೂಪ. ಮನುಷ್ಯನ ದೇಹ ದಿನೇ ದಿನೇ ಅತಿ ಸೂಕ್ಷ್ಮವೆನಿಸಿಕೊಳ್ಳುತ್ತಾ ಇದೆ. ಇನ್ನು ಕ್ಯಾನ್ಸರ್, ಹೃದಯಾಘಾತ ದಂತ ಭಯಾನಕ ರೋಗದಿಂದ ದಿನ ನಿತ್ಯ ಬಳಲುವವರ ಸಾಯುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಇದಕ್ಕೆಲ್ಲ ಮೂಲ ಕಾರಣ ನಾವು ಸೇವಿಸುವ ರಾಸಾಯನಿಕಯುಕ್ತ ಆಹಾರ ಮತ್ತು ಅದರಿಂದ ಕ್ಷೀಣಿಸುವ ದೇಹದ ರೋಗನಿರೋಧಕ ಶಕ್ತಿಯಿಂದಾಗಿ.
ನಾವು ಸೇವಿಸುವ ಆಹಾರ ಆರೋಗ್ಯಕರವಗಿಲ್ಲದೆ ಇರುವುದು. ಆರೋಗ್ಯಕರ ಆಹಾರ ಎಂದರೆ ಹಣ್ಣು,ಮೊಳಕೆ ಕಾಳು, ಹಸಿತರಕಾರಿ ತಿನ್ನುವುದು ಮಾತ್ರವಲ್ಲ. ಯಾವುದೇ ಆಹಾರ ಆಗಿರಲಿ ಅದರ ಮೂಲ, ಹೇಗೆ ಬೆಳೆದಿದ್ದು, ಅದರಲ್ಲಿ ದೇಹಕ್ಕೆ ಮಾರಕವಾದ ರಾಸಯನಿಕಗಳೆಷ್ಟಿವೆ ಅನ್ನುವುದನ್ನು ತಿಳಿದುಕೊಳ್ಳುವುದು ಉತ್ತಮ.
ಸಾಯವವ ಕೃಷಿ,ಸಾವಯವ ಆಹಾರ ದಿನೇ ದಿನೇ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಅದರಲ್ಲೂ ಅಮೆರಿಕ, ಯುರೋಪ್ ದೇಶಗಳಲ್ಲಿ ಹಾಲಿನಿಂದ ಬಟ್ಟೆಯವರೆಗೂ ಸಾವಯವ ಉತ್ತ್ಪನ್ನಗಳು ಸಿಗುತ್ತವೆ. ನಮ್ಮ ಭಾರತದಲ್ಲಿ ಅಷ್ಟರಮಟ್ಟಿಗೆ ಸಾವಯವ ಜಾಗೃತಿ ಆಗದಿದ್ದರೂ ಅಲ್ಲೊಮ್ಮೆ ಇಲ್ಲೊಮ್ಮೆ ಸಾವಯವ ಕೃಷಿ ಮತ್ತು ಆಹಾರದ ಬಗ್ಗೆ ಕೇಳುವುದುಂಟು. ವೈಜ್ಞಾನಿಕ ಸಂಶೋಧನೆಗಳಿಂದಲೂ ಸಾಯವಯ ಉತ್ಪನ್ನಗಳು ರಾಸಾಯನಿಕ ಉತ್ಪನ್ನಗಳಿಗಿಂತ ಆರೋಗ್ಯಕರ ಎಂದು ತಿಳಿದು ಬಂದಿದೆ.
ಸಾವಯವ ಆಹಾರದ ಪ್ರಾಮುಖ್ಯತೆ :
ಉತ್ತಮ ಆರೋಗ್ಯ : ಸಾಯವಯ ಆಹಾರ ಉತ್ಪನ್ನಗಳು ರಾಸಾಯನಿಕ ಗೊಬ್ಬರ ಮತ್ತು ಔಷಧಿ ಮುಕ್ತವಾಗಿರುವುದರಿಂದ ಇಂತಹ ಉತ್ಪನ್ನಗಳಲ್ಲಿ ಯಾವುದೇ ರಾಸಾಯನಿಕ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹಾನಿಗೊಳಿಸುವ ಪ್ರಮೇಯ ಇರುವುದಿಲ್ಲ.
ಹೆಚ್ಚು ರುಚಿಕರ : ಸಾವಯವ ಆಹಾರ ಹೆಚ್ಚು ರುಚಿಕರವಗಿರುತ್ತದೆಂದು ಹೆಚ್ಚಿನ ಜನರ ಅಭಿಪ್ರಾಯ. ಪ್ರಾಕೃತಿಕ ಹಾಗು ಸಾವಯವ ಗೊಬ್ಬರವನ್ನು ಬಳಸಿ ಬೆಳೆದಿರುವುದು ಇದಕ್ಕೆ ಕಾರಣವಿರಬಹುದು. ಮತ್ತು ಯಾವುದೇ ರಾಸಾಯನಿಕ (preservative) ಬಳಸದೆ ಇರುವುದರಿಂದ ಆಹಾರ ಫ್ರೆಶ್ ಆಗಿರುತ್ತದೆಂಬ ನಂಬಿಕೆ.
ಪ್ರಕೃತಿ ಸಂರಕ್ಷಣೆ : ಸಾವಯವ ಕೃಷಿಯಿಂದ ನಮ್ಮ ಭೂಮಿ ಮತ್ತು ಮಣ್ಣನ್ನು ಹಾನಿಕಾರಕ ರಾಸಾಯನಿಕಗಳಿಂದ ಸಂರಕ್ಷಿಸಬಹುದು. ಇದರಿಂದ ಮಣ್ಣು, ವಾಯು ಮತ್ತು ಜಲ ಮಾಲಿನ್ಯ ಕಡಿಮೆ ಮಾಡಿ ನಮ್ಮ ಮುಂದಿನ ಪೀಳಿಗೆ ಜೀವಿಸಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದಂತಾಗುತ್ತದೆ.
ಪಶು ಸಂರಕ್ಷಣೆ: ಸಾವಯವ ಪಶು ಸಂಗೋಪನೆಯಿಂದ ಹಸು, ಕೋಳಿ, ಮೀನು ಮುಂತಾದ ಪಶುಗಳು ಪಂಜರ ಜೀವಿಗಳಾಗಿರದೆ ಸ್ವತಂತ್ರವಾಗಿ ಮೇಯ್ದು ಸಾವಯವ ಹಾಲು,ಮೊಟ್ಟೆ ಇತ್ಯಾದಿ ಉತ್ತ್ಪನ್ನಗಳು ನಮಗೆ ಲಭಿಸುತ್ತವೆ.
ಸಾವಯವ ಕೃಷಿ ಸಾಕರವಾಗಲು ಮುಖ್ಯವಾಗಿ ನಮ್ಮ ರೈತರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.ನಮ್ಮಲ್ಲಿ ಸಾವಯವ ಕೃಷಿಕರು ಅನೇಕರಿದ್ದಾರೆ. ಅಂಥವರಿಗೆ ಸರಿಯಾದ ಪ್ರೋತ್ಸಾಹ ದೊರೆಯಬೇಕು.ಹಾಗೆಯೇ ಮಾರುಕಟ್ಟೆಯಲ್ಲಿ ಇದಕ್ಕೆ ಪ್ರಾಮುಖ್ಯತೆ ಸಿಗಬೇಕು. ಅಂತೆಯೇ ಜನರಲ್ಲಿ ಇದರಿಂದ ಆಗುವ ಆರೋಗ್ಯಕರ ಪ್ರಯೋಜನದ ಜಾಗೃತಿ ಮೂಡಿಸಬೇಕು. ಇದರಿಂದ ನಮ್ಮ ಮುಂದಿನ ಪೀಳಿಗೆಯಲ್ಲಾದರೂ ಭಯಾನಕ ರೋಗಗಳು ಕಡಿಮೆಯಾಗಿ ನೆಮ್ಮದಿಯ ಜೀವನ ಕಾಣಲು ಸಾಧ್ಯವಾಗಬಹುದು.