ಭಲೇ... ಬಾಲಸುಬ್ರಹ್ಮಣ್ಯಮ್

ಎಸ್ ಪಿ ಬಿ ಅವರ ಜೊತೆ ಚೈತ್ರ ಕಾಲ…| ಭಾಗ-೨

-ಚಿನ್ಮಯ.ಎಮ್.ರಾವ್ ಹೊನಗೋಡು.

“ಶಿಲೆಗಳು ಸಂಗೀತವ … ಹಾಡಿದೆ” ಈ ಹಾಡು ಕೇಳಿ ಬರುತ್ತಿದ್ದರೆ ಈಕೆ ನಿಂತಲ್ಲೇ ಶಿಲೆಯಾಗುತ್ತಿದ್ದಳು. ಪಾಪ ಇನ್ನೂ ಚಿಕ್ಕ ಬಾಲೆ, ಶಿಲೆ ಎಂದರೆ ಅವಳ ಕಲ್ಪನೆಯಲ್ಲಿ ವೀಳ್ಯದೆಲೆ, ವೀಳ್ಯದೆಲೆ ಸಂಗೀತವ ಹಾಡಿದೆ ಎಂದು ತಿಳಿದುಕೊಂಡಿದ್ದ ಅವಳ ಪ್ರಪಂಚದ ಪದಕೋಶದಲ್ಲಿ ಶಿಲೆ ಎಂಬ ಪದವೇ ಇರಲಿಲ್ಲ, ಆ ಪದಕ್ಕೆ ಅರ್ಥವಂತೂ ಗೊತ್ತೇ ಇರಲಿಲ್ಲ. ಅಂತೂ ಆ ಹಾಡನ್ನು ಪದೇ ಪದೇ ಕೇಳದೆ ಅವಳಿಗೆ mood ಇರುತ್ತಿರಲಿಲ್ಲ. ಆ ರೀತಿ ಅವಳ ಅಂತರಂಗದಲ್ಲಿ ಮೂಡಿತ್ತು ಆ ಮಹಾನ್‌ಗಾಯಕನ ಇಂಪಾದ ದನಿ.

ದಶಕದ ಹಿಂದೆ ಈ ಟಿವಿ ಯಲ್ಲಿ ಆರಂಭವಾದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದದಲ್ಲಿ ಎಸ್ ಪಿ ಬಿ ಅವರೇ ಹಾಡುತ್ತಿದ್ದರು, ಆಗಿನ್ನೂ ಸ್ಪರ್ಧಾಕಾರ್ಯಕ್ರಮವಾಗಿರದ ಅದರಲ್ಲಿ ನಟಿ ವಿನಯಾಪ್ರಸಾದ್ ನಿರೂಪಣೆ ಮಾಡುತ್ತಿದ್ದರು. ಅದಕ್ಕೆ ಕೋರಸ್ ಹಾಡಲು ಹಿಂದೂಸ್ಥಾನಿ ಸಂಗೀತ ಕಲಿಯುತ್ತಿದ್ದ ವೀಳ್ಯದೆಲೆಯ ಬಾಲೆಗೂ ಅವಕಾಶ ಸಿಕ್ಕಿತು, ಶಿಲೆಗಳಲ್ಲಿ ಸಂಗೀತವನ್ನು ಹಾಡಿಸಿದ್ದ ಎಸ್ ಪಿ ಬಿ ಅವರೊಡನೆ ಬೆರೆಯುವ-ಕಲಿಯುವ-ಹಾಡುವ ಘಳಿಗೆ ಆಕೆಗೆ ತನ್ನ ಪಾಲಿಗೆ ಬಂದ ಪಂಚಾಮೃತವಾಗಿತ್ತು. ಹೈದ್ರಾಬಾದ್‌ನ ರಾಮೋಜಿ ರಾವ್ ಸ್ಟುಡಿಯೋದಲಿ ಆಗತಾನೆ ಆಕೆಯ ಸಂಗೀತಮಯ ಜೀವನದ ‘ಚೈತ್ರ’ಕಾಲ ಆರಂಭವಾಗಿತ್ತು. ಬಿಡುವಿನ ವೇಳೆಯಲ್ಲಿ ಅಷ್ಟು ದೊಡ್ಡವರೊಡನೆ ಮಾತಾಡುವುದು ಹೇಗಪ್ಪ ಎಂಬ ಆತಂಕ ಈಕೆಗೆ…ಆದರೂ ಅವರೇ ಒಮ್ಮೊಮ್ಮೆ ಕರೆದು ಮಾತಾಡಿಸುತ್ತಿದ್ದರು!

*ನೆಕ್ಸ್ಟ ಸೀನ್

ಕೆಲವು ವರ್ಷಗಳ ನಂತರ ಅಶ್ವನಿ ಸ್ಟುಡಿಯೋ ದಿಂದ ಹೊರಬರುತ್ತಿದ್ದ ಎಸ್ ಪಿ ಅವರನ್ನು ಕಂಡು ಓಡೋಡಿ ಹೋಗಿ ಅವರ ಮುಂದೆ ನಿಂತಳು ಇದೇ ಗಾಯಕಿ, ಹಿಂದೆ ತನ್ನ ಗಾಯನಕ್ಕೆ ಕೋರಸ್ ಹಾಡಿದ್ದ ಈಕೆಯನ್ನು ಎಸ್ ಪಿ ಬಿ ಹೆಸರು ಹೇಳಿಯೇ ಮಾತಾಡಿಸಿದರು-“ಏನಮ್ಮ ಚೈತ್ರ ಚೆನ್ನಾಗಿದ್ದೀಯಾ?”
ಲಕ್ಷ ಲಕ್ಷ ಹಾಡುಗಳನ್ನು ಹಾಡಿದ ಒಬ್ಬ ಗಾಯಕ ತನಗಾಗಿ ಎಂದೋ ಕೋರಸ್ ಹಾಡಿದವರನ್ನೂ ಅಲಕ್ಷ್ಯ ಮಾಡದೆ ನೆನಪಿಟ್ಟುಕೊಂಡು ಮಾತನಾಡಿಸುತ್ತಾರಲ್ಲ…ಅದಕ್ಕೆ ಎಸ್ ಪಿ ಬಿ ಗ್ರೇಟ್ ಎನ್ನುತ್ತಾರೆ ಈಗಿನ ಕನ್ನಡದ ಖ್ಯಾತ ಗಾಯಕಿ ಚೈತ್ರ.

ಲಾಸ್ಟ್ ಕಿಕ್

ಎಸ್‌ಪಿಬಿ ತೂಕದ ವ್ಯಕ್ತಿ ಎನ್ನುವ ಮಾತು ಅಂತರಂಗ ಮತ್ತು ಬಹಿರಂಗವಾಗಿಯೂ ಸತ್ಯಕ್ಕೆ ಹತ್ತಿರವಾದದ್ದು. ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರ ಸರಳತೆ-ಸಹಜತೆ-ಸನಿಹತೆ-ಸೌಮ್ಯತೆಯ ಆಳ ಗೊತ್ತಾಗುತ್ತದೆ !

ಎಸ್.ಪಿ.ಬಿ. ಅಂಥವರು ಕೋಟಿಗೊಬ್ಬರು. ಅವರ ಕಂಠಸಿರಿಗೆ ತಲೆದೂಗದ ವ್ಯಕ್ತಿಯಷ್ಟೇ ಅಲ್ಲ, ಜೀವಿಯೇ ಇಲ್ಲ!

-ಚಿನ್ಮಯ.ಎಮ್.ರಾವ್ ಹೊನಗೋಡು.

25-6-2011

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.