ಪ್ರವಾಸಸ್ಮಾರಕ

ಗತ ವೈಭವದ ಕುರುಹು ಸಾರುವ ಕಣ್ಣೂರು ಅಗ್ರಹಾರ

KANNURU TEMPLE (1)ಫೋಟೋ ಮತ್ತು ಲೇಖನ- ಎನ್.ಡಿ,ಹೆಚ್ ಆನಂದಪುರಂ

ಹೆಜ್ಜೆ ಹೆಜ್ಜೆಗೂ ಶಿಥಿಲವಾಗಿ ಬಿದ್ದ ದೇವರ ಶಿಲಾ ಮೂರ್ತಿಗಳು, ಹೂಳು ತುಂಬಿ ಮೂಲ ರೂಪ ಕಳೆದುಕೊಂಡ ಪುಷ್ಕರಣಿಗಳು, ಅಲ್ಲಲ್ಲಿ ಗೋಚರವಾಗುವ ಹಳೆಯ ಕಟ್ಟಡಗಳ ನೆಲಗಟ್ಟಿನ ಅವಶೇಷಗಳು ,ಹಲವು ಭಗ್ನ ಶಿಲಾ ಮೂರ್ತಿಗಳು, ನೆಲಕ್ಕೆ ಉರುಳಿ ಬೀಳುತ್ತಿರುವ ಗುಡಿಗಳು ಇವು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಣ್ಣೂರಿನಲ್ಲಿರುವ ಪ್ರಾಚೀನ ಅಗ್ರಹಾರದ ಸಧ್ಯದ ದೃಶ್ಯವಾಗಿದೆ.

KANNURU TEMPLE (10)ಆನಂದಪುರಂ-ಶಿಕಾರಿಪುರ ರಾಜ್ಯ ಹೆದ್ದಾರಿಯಿಂದ ಕೇವಲ ೨ ಕಿ.ಮೀ.ದೂರದಲ್ಲಿರುವ ಈ ಸ್ಥಳ ತಾಲೂಕು ಕೇಂದ್ರವಾದ ಸಾಗರದಿಂದ ಸುಮಾರು ೩೧ ಕಿ.ಮೀ ದೂರದಲ್ಲಿದೆ. ತಾಲೂಕಿನ ಗಡಿ ಭಾಗವಾಗಿರುವ ಕಾರಣ ಬಹುತೇಕ ಪ್ರವಾಸಿಗರಿಗೆ ಇನ್ನೂ ಅಪರಿಚಿತ ಸ್ಥಳವಾಗಿ ಉಳಿದಿದೆ.  ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಡೊಳ್ಳಿನ ಕುಣಿತ ಕಲಾವಿದರಿಂದ ಹೆಸರುವಾಸಿಯಾದ ಈ ಗ್ರಾಮ ಇತಿಹಾಸ, ಸಂಸ್ಕೃತಿ ಮತ್ತು ಜನಪದ ವಿಷಯಗಳ ಅಧ್ಯಯನ ಮಾಡುವವರಿಗೆ , ಆಧ್ಮಾತಿಕ ಮತ್ತು ಧಾರ್ಮಿಕ ಸಾಧನೆ ನಡೆಸುವವರಿಗೆ ಯೋಗ್ಯ ಸ್ಥಳವಾಗಿದೆ.

KANNURU TEMPLE (2)ಗ್ರಾಮದ ಕೊನೆಯಲ್ಲಿರುವ ಈ ಪ್ರಾಚೀನ ಅಗ್ರಹಾರ ಇಂದು ಅಕ್ಷರಶಃ ನಿರ್ಜನ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಸುಮಾರು ಒಟ್ಟು ೧೨ ದೇವಾಲಯಗಳಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಅರ್ಚಕರ ಮನೆಯೊಂದನ್ನು ಬಿಟ್ಟರೆ ಉಳಿದ ಪ್ರದೇಶ ಜನ ರಹಿತ. ಇಲ್ಲಿನ ಬನಶಂಕರಿ ತೀರ್ಥ ಪುಷ್ಕರಣಿಯ ಮೇಲ್ಭಾಗದ ಸೂರ್ಯನಾರಾಯಣ ಶಿಲಾಗುಡಿ ಶಿಥಿಲಗೊಂಡು ದೇವರ ಮೂರ್ತಿ ಭಗ್ನವಾಗಿ ಅರ್ಧ ಬಿದ್ದ ಸ್ಥಿತಿಯಲ್ಲಿದೆ.

KANNURU TEMPLE (5)ಇಲ್ಲಿನ ಶ್ರೀಬನಶಂಕರಿ, ಶ್ರೀಕಣ್ವೇಶ್ವರ, ಶ್ರೀಗುಹೇಶ್ವರ, ಶ್ರೀಭೈರವೇಶ್ವರ ,ಶ್ರೀಬಿಲ್ಲೇಶ್ವರ ,ಶ್ರೀಮಲ್ಲೇಶ್ವರಿ, ಶ್ರೀಹೊಳೇಶ್ವರಿ ದೇವಾಲಯಗಳನ್ನು ಇತ್ತೀಚೆಗೆ ಪುನಃ ಕಟ್ಟಲಾಗಿದ್ದು ಸುತ್ತಲೂ ಪ್ರಾಚೀನ ಕಾಲದ ನೆಲಗಟ್ಟು, ಸುತ್ತು ಪೌಳಿ ಮತ್ತು ಮೆಟ್ಟಿಲಿನ ಕುರುಹುಗಳಿವೆ. ಅಲ್ಲಲ್ಲಿ ಹಳೆಯ ಕಾಲದ ಶಿಲಾ ಮೂರ್ತಿಗಳು, ಶಾಸನಗಳು, ಕಟ್ಟಡದ ಕಂಬಗಳು ಬಿದ್ದಿದ್ದು ಪ್ರಾಚೀನತೆಯನ್ನು ಸಾರುತ್ತಿವೆ.

ಕಣ್ವತೀರ್ಥ ಪುಷ್ಕರಣಿ ಸುಂದರವಾಗಿದ್ದು ಆಳವಾಗಿದೆ. ಕಣ್ವೇಶ್ವರ ದೇವಾಲಯದ ಮುಂಭಾಗದಲ್ಲಿ ಭಗ್ನಗೊಂಡ ಕ್ಷೇತ್ರಪಾಲ ಮೂರ್ತಿ ಮತ್ತು ಪದ್ಮಸ್ತಂಭವಿದೆ. ಮುಂಭಾಗದ ಎತ್ತರದಲ್ಲಿ ವೇದಿಕೆಯಾಕಾರದ ರಚನೆಯಿದೆ.

KANNURU TEMPLE (6)ಇಲ್ಲಿನ ಶ್ರೀಮಹಾಗಣಪತಿ ದೇವಾಲಯದ ಎದುರು ಪ್ರಾಚೀನ ಕಾಲದ ಬಾವಿಯಿದ್ದು ಸಂಪೂರ್ಣ ಜಂಬಿಟ್ಟಿಗೆ ಕಲ್ಲಿನಿಂದ ನಿರ್ಮಿತವಾಗಿದೆ. ಈ ಬಾವಿಯ ಗೋಡೆಯ ಅರ್ಧ ಭಾಗದಿಂದ ಬೃಹತ್ ಮರವೊಂದು ಬೆಳೆದು ನಿಂತಿದೆ. ಹಿಂಭಾಗದಲ್ಲಿ ಗಣಪತಿ ತೀರ್ಥ ಪುಷ್ಕರಣಿಯಿದ್ದು ಹೂಳಿನಿಂದ ತುಂಬಿದೆ. ಈ ವ್ಯಾಪ್ತಿಯಲ್ಲಿ ಸುಮಾರು ೧೮ ಶಾಸನಗಳು ದೊರೆತಿದ್ದು ಗಣಪತಿ ದೇವಾಲಯದ ಮುಂಭಾಗದಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಶಾಸನಗಳಲ್ಲಿ ಕೆಲವನ್ನು ಮಾತ್ರ ಅಧ್ಯಯನ ಮಾಡಲಾಗಿದ್ದು ಇನ್ನೂ ಕೆಲ ಶಾಸನಗಳ ಸಮಗ್ರ ವಾಚನ ಮತ್ತು ಅಧ್ಯಯನ ನಡೆಯಬೇಕಿದೆ.

KANNURU TEMPLE (4)ಈ ದೇವಾಲಯದ ಬಲ ಭಾಗದ ಗುಡ್ಡದಲ್ಲಿ ಜಂಬಿಟ್ಟಿಗೆಯ ನೆಲವಿದೆ. ಅಲ್ಲಿ ಜಂಬಿಟ್ಟಿಯನ್ನು ಕೆತ್ತಿ ನಿರ್ಮಿಸಲಾದ ಅಂದಾಜು ೧೦ ರಿಂದ ೧೨ ಅಡಿ ಆಳದ ೪೦ ಕ್ಕೂ ಅಧಿಕ ಹಗೇವುಗಳಿವೆ. ಈ ಪ್ರದೇಶ ಗಿಡ ಗಂಟಿಗಳಿಂದ ಆವೃತವಾಗಿದ್ದು ಹಗೇವುಗಳು ಕಣ್ಮರೆಯಾಗುವ ಹಂತ ತಲುಪಿದೆ. ಹಿಂದಿನಕಾಲದಲ್ಲಿ ದವಸ ಧಾನ್ಯಗಳನ್ನು ಇವುಗಳಲ್ಲಿ ತುಂಬಿ ಮೇಲ್ಭಾಗವನ್ನು ಮುಚ್ಚಿ ಸಂರಕ್ಷಿಸಿಡಲಾಗುತ್ತಿತ್ತು ಎನ್ನಲಾಗಿದೆ.

KANNURU TEMPLE (5)ಸ್ಥಳ ಪುರಾಣ :

ಮಹಾಭಾರತ ಕಾಲದಲ್ಲಿ ಜನಮೇಜಯನ ಯಜ್ಷಕ್ಕೆ ಇಲ್ಲಿನ ಅಗ್ರಹಾರದ ಬ್ರಾಹ್ಮಣರನ್ನು ಕರೆಸಲಾಗಿತ್ತು. ಇದರಿಂದ ಸರ್ಪ ಶಾಪಕ್ಕೆ ಗುರಿಯಾಗಿ ಎಲ್ಲಾ ಕುಟುಬಂಗಳೂ ನಾಶವಾದವು ಎಂದು ಪ್ರತೀತಿಯಿದೆ. ಆ ನಂತರ ಲೋಕೊದ್ಧಾರದ ಪರ್ಯಟನೆಗಾಗಿ ಇಲ್ಲಿಗೆ ಆಗಮಿಸಿದ ಕಣ್ವ ಮಹರ್ಷಿಗಳು ದೀರ್ಘ ತಪಸ್ಸನ್ನಾಚರಿಸಿ ಇಲ್ಲಿನ ಬ್ರಾಹ್ಮಣ ಕುಟುಬಂಗಳ ಪಾಪ ನಿವೃತಿ ಮಾಡಿದರು .ಅದರಿಂದಾಗಿ ಕಣ್ವರ ಊರು ಎಂಬ ಹೆಸರು ಬಂದು ಕ್ರಮೇಣ ಕಣ್ಣೂರು ಎಂದು ಹೆಸರು ಪಡೆಯಿತು ಎಂಬ ನಂಬಿಕೆಯಿದೆ.

ತ್ಯಾಗರ್ತಿ, ಗೌತಮಪುರ, ಕಣ್ಣೂರು ,ಯಲಸಿ ಮತ್ತು ಕುಪ್ಪಗಡ್ಡೆ ಇವು ಪ್ರಾಚೀನ ಕಾಲದ ಪಂಚ ಅಗ್ರಹಾರವಾಗಿತ್ತು ಎನ್ನಲಾಗಿದೆ, ಇವುಗಳಲ್ಲಿ ಕಣ್ಣೂರಿನ ಈ ಸ್ಥಳ ಅತ್ಯಂತ ವೈಭವ ಮತ್ತು ಶ್ರೀಮಂತಿಕೆಯಿಂದ ಕೂಡಿತ್ತು. ಈ ಪಂಚ ಗ್ರಾಮದವರಲ್ಲಿ ಮಾತ್ರ ವೈವಾಹಿಕ ಸಂಬಂಧಗಳು ನಡೆಯುತ್ತಿದ್ದವು. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರು ಸೋಮಪರಾಗ(ಚಂದ್ರ ಗ್ರಹಣ) ದೋಷ ನಿವೃತ್ತಿಗಾಗಿ ಈ ಸ್ಥಳದಲ್ಲಿ ಯಾಗ ಮಾಡಿಸಿದ್ದರಂತೆ. ಯಾಗದ ಫಲವಾಗಿ ಬಯಕ್ಕರಾಯನಿಗೆ ಒದಗಿದ್ದ ಮೃತ್ಯು ಸಂಧಿ ದೂರವಾಯಿತಂತೆ. ಇದರಿಂದ ಸಂತೃಪ್ತನಾಗಿ ೧೮ ರಿಂದ ೨೦ ಬ್ರಾಹ್ಮಣ ಕುಟುಂಬಗಳಿಗೆ ಇಲ್ಲಿಯೇ ನೆಲೆಯಾಗಲು ಸಾಕಷ್ಟು ಭೂಮಿಯನ್ನು ದಾನ ನೀಡಿದನಂತೆ ಮತ್ತು ಹಲವು ದೇವಾಲಯಗಳನ್ನು , ಪುಷ್ಕರಣಿಗಳನ್ನು ಕಟ್ಟಿಸಿ ತ್ರಿಕಾಲ ಪೂಜೆಗೆ ವ್ಯವಸ್ಥೆ ಕಲ್ಪಿಸಿದ ಎನ್ನಲಾಗಿದೆ.

೧೮೦೯ ರಲ್ಲಿ ಈ ಸ್ಥಳಗಳಲ್ಲಿ ದೊರೆತ ಶಾಸನ ಮತ್ತು ಕುರುಹುಗಳ ಕುರಿತು ಐತಿಹಾಸಿಕ ಅಧ್ಯಯನ ನಡೆಸಲಾಗಿದೆ. ಇಲ್ಲಿ ದೊರೆತ ಶಿಲಾ ಮೂರ್ತಿ ಮತ್ತು ದೇವಾಲಯದ ಶೈಲಿ ಹೊಯ್ಸಳ ಶೈಲಿಯಾಗಿದ್ದು ಹೊಯ್ಸಳ ಸಾಮ್ರಾಜ್ಯದ ಆಡಳಿತಕ್ಕೂ ಕೆಲ ಕಾಲ ಒಳ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿನ ಬನಶಂಕರಿ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ.

KANNURU TEMPLE (3)ವೈಭವದ ಗ್ರಾಮ :

ಪ್ರಾಚೀನ ಕಾಲದಲ್ಲಿ ಕಣ್ಣೂರು ಶ್ರೀಮಂತ ಅಗ್ರಹಾರವಾಗಿತ್ತು. ಇಲ್ಲಿ ಸುಮಾರು ೨೫೦ ಕ್ಕೂ ಅಧಿಕ ಬ್ರಾಹ್ಮಣ ಕುಟುಬಂಗಳಿದ್ದು ಸುಮಾರು ೨೮೦೦ ಜನ ಸಂಖ್ಯೆ ಹೊಂದಿತ್ತು ಎನ್ನಲಾಗಿದೆ. ಶ್ರೀಕಣ್ವೇಶ್ವರ ಮತ್ತು ಶ್ರೀಬನಶಂಕರಿ ದೇವಾಲಯಕ್ಕೆ ೮೦ ಎಕರೆ ವಿಸ್ತೀರ್ಣದ ಸಾಗುವಳಿ ಜಮೀನನ್ನು ದಾನ ನೀಡಲಾಗಿತ್ತು. ಪ್ರತಿ ವರ್ಷ ೩೦೦ ಚೀಲ ಭತ್ತ ದಾನವಾಗಿ ಬರುತ್ತಿತ್ತು. ಕಾಲಾಂತರದಲ್ಲಿ ಸಾಂಕ್ರಾಮಿಕ ರೋಗ ಮತ್ತಿತರ ಕಾರಣ ಅಗ್ರಹಾರದ ಕುಟುಂಬಗಳು ನಾಶವಾದವು. ಈ ಗ್ರಾಮದಲ್ಲಿ ೫ ಅರಳೀ ಕಟ್ಟೆಗಳು, ೫೪ ಕ್ಕೂ ಅಧಿಕ ಪುರಾತನ ಬಾವಿಗಳು , ಹಲವೆಡೆ ಮನೆ ನೆಲಗಟ್ಟು ಹಾಗೂ ಮೆಟ್ಟಲಿನ ಕುರುಗಳಿದ್ದು ಆಸಕ್ತರಿಗೆ ಅಧ್ಯಯನ ಯೋಗ್ಯ ಸ್ಥಳವಾಗಿದೆ.

ಈ ಕ್ಷೇತ್ರ ಈಗ ಮುಜರಾಯಿ ಇಲಾಖೆಗೆ ಒಳ ಪಟ್ಟಿದ್ದು ಸುಮಾರು ೩೫ ವರ್ಷಗಳಿಂದ ಅರ್ಚಕರಾಗಿ ದುಡಿಯುತ್ತಿರುವ ವೆಂಕಟಾಚಲ ಭಟ್ಟರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಫೋಟೋ ಮತ್ತು ಲೇಖನ- ಎನ್.ಡಿ,ಹೆಚ್ ಆನಂದಪುರಂ
13-11-2012

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.