ಸ್ಮಾರಕ

ನಾಶದ ಅಂಚಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ನಾಡಕಲಸಿಯ ಅವಳಿ ದೇವಾಲಯಗಳು

kalasi-temple-photos-clicked-by-chinmaya-m-rao-102ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದೆ ನಾಡಕಲಸಿಯ ಸುಂದರವಾದ ಅವಳಿ ದೇವಾಲಯ. ಸಾಗರದಿಂದ ಸೊರಬಕ್ಕೆ ಹೋಗುವ ಮೋಟಾರ್ ಮಾರ್ಗದಲ್ಲಿ ಸುಮಾರು ಐದಾರು ಕಿ.ಮೀ. ಕ್ರಮಿಸುತ್ತಿದ್ದಂತೆಯೇ ರಸ್ತೆಯ ಬಲಪಾರ್ಶ್ವದಲ್ಲಿ ನಾಡಕಲಸಿ ನಾಮಫಲಕ. ಇಲ್ಲಿಳಿದು ಅನತಿ ದೂರ (ಸುಮಾರು ೨ ಕಿ.ಮೀ.) ನಡೆದರೆ ಕಾಡಿನ ನಡುವೆ ತಲೆಯೆತ್ತಿ ನಿಂತ ಅವಳಿ ದೇವಾಲಯಗಳ ರಮಣೀಯ ನೋಟ ಕಣ್ಣಿಗೆ ಬೀಳುವುದು.

ಸಂಪೂರ್ಣ ಕರಿಗಲ್ಲಿನಿಂದ ನಿರ್ಮಾಣವಾದ ಈ ಅವಳಿ ದೇಗುಲಗಳು ದಿವ್ಯವೂ, ಭವ್ಯವೂ, ಸುಂದರವೂ, ಮೋಹಕವೂ ಆಗಿದ್ದು ನೋಡುಗರನ್ನು ಕೈಬೀಸಿ ಕರೆಯುತ್ತವೆ. ಅತ್ಯಂತ ಪುರಾತನವಾದ ಈ ದೇವಾಲಯಗಳು ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿರುವುದು ದುರ್ದೈವವೇ ಸರಿ. ಅಷ್ಟೇ ಅಲ್ಲ, ಈ ದೇವಾಲಯಗಳು ಮುಜರಾಯಿ ಹಾಗೂ ಪುರಾತತ್ವ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿಯನ್ನೇನೂ ಕಂಡಿಲ್ಲ.

ಸುಮಾರು ಏಳುನೂರೈವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ಇಂದು ಅವಸಾನದ ಅಂಚಿನಲ್ಲಿರುವ ಈ ದೇವಾಲಯಗಳು ಉತ್ಪತ್ತಿ ಇಲ್ಲವಾದ್ದರಿಂದ ಯಾರಿಗೂ ಬೇಡವಾಗಿದೆ.
ಈ ಅವಳಿ ದೇವಾಲಯಗಳು ಒಂದರ ಪಕ್ಕದಲ್ಲಿಯೇ ಮತ್ತೊಂದಿದ್ದು ಸುಮಾರು ಇಪ್ಪತ್ತೈದು ಅಡಿ ಅಂತರದಲ್ಲಿದೆ. ಇವುಗಳಲ್ಲಿ ಒಂದು ಚಿಕ್ಕದು, ಇನ್ನೊಂದು ದೊಡ್ಡದು. ಈ ಎರಡೂ ದೇವಾಲಯಗಳು ಶಿವಾಲಯಗಳಾಗಿರುವುದು ಒಂದು ವೈಶಿಷ್ಟ್ಯ. ಶಿಲಾಶಾಸನದ ಪ್ರಕಾರ ಚಿಕ್ಕದು ಸೋಮನಾಥೇಶ್ವರ ದೇವಾಲಯ. ಇದನ್ನೀಗ ನೀಲಕಂಠೇಶ್ವರ ದೇವಾಲಯವೆಂದು ಕರೆಯುತ್ತಾರೆ. ದೊಡ್ಡ ದೇವಾಲಯ ಶ್ರೀ ಮಲ್ಲಿಕಾರ್ಜುನೇಶ್ವರ ದೇವಾಲಯ. ಈ ಎರಡೂ ದೇವಾಲಯಗಳೂ ಹೊಯ್ಸಳ ಶಿಲ್ಪರಚನಾ ಶೈಲಿಯವು. ತಳಪಾಯವು ನಕ್ಷತ್ರಾಕಾರ, ಮೇಲ್ಛಾವಣಿಯೂ ನಕ್ಷತ್ರಾಕಾರ ಇವುಗಳನ್ನು ತಂದೆ ಮಕ್ಕಳ ಗುಡಿಯೆಂದು ಕರೆಯುತ್ತಾರೆ.

kalasi-temple-photos-clicked-by-chinmaya-m-rao-66ಈ ಅವಳಿ ದೇವಾಲಯಗಳಲ್ಲಿ ದೊಡ್ಡದಾದ ಮಲ್ಲಿಕಾರ್ಜುನ ದೇವಾಲಯ ಉದ್ದ ೮೨ ಅಡಿ ಅಗಲ, ೪೬ ಅಡಿ ೬ ಇಂಚು ಉದ್ದ ವಿಸ್ತೀರ್ಣವುಳ್ಳದ್ದು. ಹೊಯ್ಸಳ ಮಾರ್ಗದ ಗರ್ಭಗುಡಿ, ಸುಕನಾಸಿ, ರಂಗಮಂಟಪ, ನಂದಿ ಮಂಟಪಗಳಿಂದ ಕೂಡಿದ್ದು ಈ ದೇವಾಲಯ ಉತ್ತರಾಭಿಮುಖವಾಗಿದೆ. ಮೂರು ದಿಕ್ಕಿಗೆ ಮೂರು ದ್ವಾರಗಳು ಸುಕನಾಸಿಯ ಮುಂಗೋಡೆಯಲ್ಲಿ ನೃತ್ಯಗಾರ್ತಿಯರ, ಹಿನ್ನೆಲೆವಾದಕರ ವಿವಿಧ ಭಂಗಿಯ ಕೆತ್ತನೆಯ ಶಿಲ್ಪಗಳ ಜಾಲಂದ್ರ, ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮಿ, ದ್ವಾರದ ಅಕ್ಕಪಕ್ಕದಲ್ಲಿ ವಿನಾಯಕ, ಮಹಿಷಾಸುರಮರ್ದಿನಿ, ಸಪ್ತ ಮಾತೃಕೆಯರು, ಉಮಾಮಹೇಶ್ವರ ಮೂರ್ತಿಗಳನ್ನು ಕಾಣಬಹುದು.

ರಂಗಮಂಟಪವು ಬೃಹದಾಕಾರದ ೮ ಕಂಬಗಳಿಂದ ಕೂಡಿದ್ದು ಪ್ರತಿಯೊಂದು ಸ್ತಂಭಗಳೂ ಬುಡದಲ್ಲಿ ಚೌಕಾಕಾರದಲ್ಲಿಯೂ ಅದರ ಮೇಲ್ಭಾಗ ದುಂಡಾಕಾರದಲ್ಲಿದ್ದು ವಿಧವಿಧವಾದ ನಕ್ಷೆಗಳ ಪಟ್ಟಿಕೆಗಳಿಂದ ಕೂಡಿದೆ. ಈ ಕಂಬಗಳ ಹೊಳಪೂ ನುಣುಪೂ ಅಸದೃಶ. ಪ್ರತಿಯೊಂದು ಕಂಬಗಳಲ್ಲಿಯೂ ಮಧ್ಯಭಾಗದಲ್ಲಿ ಸುತ್ತಲೂ ಬರುವಂತೆ ೬ ಇಂಚು ವ್ಯಾಸವುಳ್ಳ ಅರಳಿ ಎಲೆಯಲ್ಲಿ ಚಿಂತಾಮಗ್ನೆ, ಕೇಶ ಶೃಂಗಾರೆ, ದರ್ಪಣೋತ್ಸುಕೆ, ನಾಟ್ಯಮಯೂರಿ, ವಾದನ ವಿಶಾರದೆ ಮುಂತಾದ ರೇಖಾಚಿತ್ರಗಳು ಮನಮೋಹಕ.

kalasi-temple-photos-clicked-by-chinmaya-m-rao-67ಕಂಬದ ಮೇಲ್ಭಾಗದಲ್ಲಿ ವಿವಿಧ ಚಿತ್ತಾರಗಳಿಂದ ಕಂಗೊಳಿಸುವ ಕಲ್ಲಿನ ಬೋಧಿಗೆ. ಇದರ ಮೇಲೆ ಕಲ್ಲಿನ ತೊಲೆಗಳು. ಮುಚ್ಚಿಗೆಯ ತಳಭಾಗದಲ್ಲಿ ಕಾಣುವ ನವರಂಗಗಳು, ಕಮಲಗಳು ದೇವಾಲಯದ ಸೊಬಗನ್ನು ಹೆಚ್ಚಿಸಿದೆ. ಮೇಲ್ಛಾವಣಿಯ ಸೂರಂಚು ಹೆಂಚಿನಮನೆಗಳಿಗಿರುವಂತೆ ಕಲ್ಲಿನಲ್ಲಿ ಕೊರೆದು ಮಾಡಿದ ರೀಪು, ಪಕಾಶಿಗಳಿಂದ ಕೂಡಿದ್ದು ನಾಲ್ಕು ಇಂಚು ಅಗಲದ ಆ ಪಕಾಶಿಗಳು ನಕ್ಷೆಗಳನ್ನು ಹೊಂದಿವೆ. ಎರಡು ಪಕಾಶಿಗಳ ನಡುವೆ ವೃತ್ತಾಕಾರದ ಬಳೆಗಳ ಮಧ್ಯದಲ್ಲಿ ಆನೆ, ಹಂಸ ಮೊದಲಾದ ಚಿತ್ರಗಳನ್ನು ಕೆತ್ತಿದ್ದಾರೆ.

ಈ ದೇವಾಲಯದ ಸುತ್ತಲೂ ಕಲ್ಲಿನ ಅರೆಗೋಡೆ. ಇದು ಒಳಭಾಗ ತಳದಿಂದ ೫ ೫ ಎತ್ತರ ಇದೆ. ಗೋಡೆಯ ಒಳಭಾಗದಲ್ಲಿ ಎತ್ತರದ ಕಲ್ಲಿನ ಹಾಸು, ಗೋಡೆಯ ಹೊರಭಾಗದಲ್ಲಿ ಅಂದರೆ ಕಟಾಂಜನದ ಮೇಲ್ಭಾಗದಲ್ಲಿ ಬಳ್ಳಿಗಳ ಸಾಲು, ಅದರ ಕೆಳಗೆ ಗೋಪುರಗಳು, ಇನ್ನೂ ತಳಕ್ಕೆ ಬಂದಂತೆ ಸಿಂಹಗಳ ಹಾಗೂ ಆನೆಗಳ ಸಾಲನ್ನು ಬುಡದಲ್ಲಿ ಕಾಣಬಹುದು.

ನಂದಿಮಂಟಪದಲ್ಲಿರುವ ಬೃಹದಾಕಾರದ ನಂದಿಯು ಗೆಜ್ಜೆಸರ, ಗಂಟೆಸರ, ಶೃಂಗಾರಾಭರಣಗಳಿಂದ ಅಲಂಕೃತವಾಗಿ ಕತ್ತು ಕೊಂಕಿಸಿ ಶಿವಲಿಂಗವನ್ನೇ ದಿಟ್ಟಿಸುತ್ತಾ ಮಲಗಿರುವ ದೃಶ್ಯ ಅದ್ಭುತ. ಈ ನಂದಿಯ ಮೈನುಣುಪು, ಹೊಳಪು ಅಸದೃಶ.
ಈ ದೇವಾಲಯದ ಪಕ್ಕದಲ್ಲಿಯೇ ಇರುವ ಇನ್ನೊಂದು ಚಿಕ್ಕ ದೇವಾಲಯ ಇದರ ಉದ್ದಗಲ ೪೪x೨೫ ಅಡಿಗಳಿದ್ದು ಆಕಾರದಲ್ಲಿ ದೊಡ್ಡ ದೇವಾಲಯವನ್ನೇ ಹೋಲುತ್ತಿದೆಯಾದರೂ ರಂಗಮಂಟಪ ನಾಲ್ಕು ಸ್ತಂಭಗಳಿಂದ ಕೂಡಿದೆ. ಈ ದೇವಾಲಯದ ಅರೆಗೋಡೆಯ ಹೊರಭಾಗದಲ್ಲಿ ಕಾಮಸೂತ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಮಿಥುನ ಚಿತ್ರಗಳನ್ನು ಕಾಣಬಹುದು. ಈ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ ದೇಗುಲದ ಮೇಲ್ಭಾಗದಲ್ಲಿ ಸುಮಾರು ೧೫ ಅಡಿ ಚಚ್ಚೌಕಾಕಾರದ ಕಲ್ಲಿನ ಗೋಪುರ. ಈ ಗೋಪುರದ ಮುಂಭಾಗದ ಮಧ್ಯದಲ್ಲಿ ಪ್ರತ್ಯೇಕವಾಗಿ ಕೆತ್ತಿ ಮಾಡಿದ ಸುಮಾರು ೩.೫ ಅಡಿ ಎತ್ತರದ ಸಳ ಲಾಂಛನ. ಇದರ ಕೆಳಭಾಗದ ಹಲಗೆಯ ಮೇಲೆ ಕೆತ್ತಿದ ನಟರಾಜನ ವಿಗ್ರಹ ಮನ ಸೆಳೆಯುವುದು.

kalasi-temple-photos-clicked-by-chinmaya-m-rao-103ಈ ದೇವಾಲಯದ ಮೇಲ್ಭಾಗದಲ್ಲಿರುವ ಹೊಯ್ಸಳ ಲಾಂಛನವು ಹೊಯ್ಸಳ ಶಿಲ್ಪದ ಬೇರೆ ಯಾವುದೇ ದೇವಾಲಯಗಳಲ್ಲಿಯೂ ಕಂಡುಬರುವುದಿಲ್ಲ. ಈ ನಾಡಕಲಸಿ ದೇವಾಲಯದಲ್ಲಿರುವುದು ಒಂದು ವಿಶೇಷ.
ಈ ದೇವಾಲಯಗಳು ಶಾ.ಶ.ವರ್ಷ ೧೧೪೦ನೇ (ಕ್ರಿ.ಶ. ೧೨೧೮) ಬಹುಧಾನ್ಯ ಸಂವತ್ಸರದಲ್ಲಿ ನಿರ್ಮಾಣವಾಯಿತೆಂದು ಶಿಲಾಶಾಸನಗಳು ಹೇಳುತ್ತವೆ. ಆ ಕಾಲದಲ್ಲಿ ಈ ಪ್ರಾಂತ್ಯಕ್ಕೆ ಕುಂದನಾಡು, ಕೊಡನಾಡು ಎಂದು ಹೆಸರಿತ್ತು. ಈ ನಾಡನ್ನಾಳಿದವನು ಕುಮಾರ ಬಾಳೆಯಮ್ಮ (ಬಾಳೆಯಣ್ಣ) ಹೆಗ್ಗಡೆ, ಈತನ ತಾಯಿ ಬೆಯಬರಸಿ, ತಂದೆ ಗೊಂಗಣ. ಬಾಳೆಯಮ್ಮ ಹೆಗ್ಗಡೆಯು ಹೊಯ್ಸಳ ೨ನೇ ವೀರಬಲ್ಲಾಳನ ಸಾಮಂತ ರಾಜನಾಗಿ ನಾಡಕಲಸಿಯನ್ನು ತನ್ನ ರಾಜನಾಧನಿಯನ್ನಾಗಿ ಮಾಡಿಕೊಂಡು ಆಳಿದ. ಕುಮಾರ ಬಾಳೆಯಮ್ಮ ಹೆಗ್ಗಡೆಗೆ ಕದನ ಪ್ರಚಂಡ, ಏಕಾಂಗವೀರ, ಗಂಡುಗಳ್ತರಿಬಾಳೆಗ, ಶರಣಾಗತ ರಕ್ಷಕ ಮುಂತಾದ ಬಿರುದುಗಳಿದ್ದವು. ಶಿಲಾಶಾಸನಗಳಲ್ಲಿ ಈಗಿನಂತೆ ಕಲಸಿ ಎಂದಿರದೇ ಕಲಿಸೆ ಎಂದಿರುವುದು ಕಂಡುಬರುತ್ತದೆ.

ಬಾಳೆಯಮ್ಮ ಹೆಗ್ಗಡೆಯ ಕಾಲಾನಂತರ ಈ ಕುಂದನಾಡು, ಕೊಡನಾಡನ್ನು ಬೀರದೇವರಸನು ಕ್ರಿ.ಶ. ೧೨೪೮ ರಿಂದ ಕ್ರಿ.ಶ. ೧೨೭೮ರವರೆಗೆ ಕಲಿಸೆಯಲ್ಲಾಳಿದನು. ತದನಂತರ ಬೀರದೇವರಸನ ಮಗ ಬೊಮ್ಮರಸನು ಕಲಿಸೆಯನ್ನು ಬಿಟ್ಟು ಇಲ್ಲಿಗೆ ಸಮೀಪದಲ್ಲಿರುವ ಹೊಸಗುಂದಕ್ಕೆ ರಾಜಧಾನಿಯನ್ನು ಬದಲಾಯಿಸಿ ಅಲ್ಲಿ ಇರತೊಡಗಿದನು. ಹೊಸಗುಂದದಲ್ಲಿಯೂ ಹೊಯ್ಸಳ ಮಾರ್ಗದ ದೇವಾಲಯವನ್ನು ಈಗಲೂ ಕಾಣಬಹುದು. ಕಲಸಿಯ ಕಾಡಿನಲ್ಲಿ ರಾಜಧಾನಿಯ ಕುರುಹಾಗಿ ಸಾಲಾಗಿರುವ ಪಾಳುಬಾವಿಗಳು, ಕಲ್ಲು ಹಾಸಿರುವ ಒಳಚರಂಡಿಗಳಿರುವುದನ್ನು ಕಾಣಬಹುದು.

ಲೇ : ಎಚ್.ಎಂ. ತಿಮ್ಮಪ್ಪ, ಕಲಸಿ
ಕನ್ನಡ ಪಂಡಿತ್, ಹಿಂದಿರತ್ನ ಬಿ.ಇಡಿ.
ನಿವೃತ್ತ ಮುಖ್ಯೋಪಾಧ್ಯಾರು

[FAG id=1885]

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.