-ಕವಿತಾ (ಆಲ್ಪೈನ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ)
ನಾನೊಬ್ಬ ಹೆಮ್ಮೆಯ ಪುತ್ರ
ನನಗಿಬ್ಬರು ಜನನಿಯರು
ಜನ್ಮ ನೀಡಿದವಳೊಬ್ಬಳು
ಜೀವಕ್ಕೆ ಜೀವವಾಗಿರುವಳಿನ್ನೊಬ್ಬಳು
ಇಬ್ಬರದೂ ಒಂದೇ ಪ್ರೀತಿ
ನಾನೊಬ್ಬ ಹೆಮ್ಮೆಯ ಪುತ್ರ
ದೇಹಕ್ಕೆ ಒಬ್ಬಳು ಆಸರೆ
ಬುದ್ಧಿಗೆ ಇನ್ನೊಬ್ಬಳಾಸರೆ
ಇಬ್ಬರದೂ ಒಂದೇ ಗುರಿ
ಮಗನೊಬ್ಬ ಸತ್ಪ್ರಜೆಯಾಗಬೇಕೆಂಬುದು
ಇಬ್ಬರದೂ ಒಂದೇ ಆಸೆ
ನಾನೊಬ್ಬ ಹೆಮ್ಮೆಯ ಪುತ್ರ
ಒಬ್ಬಳ ಕಣ್ಣಲ್ಲಿ ಪ್ರೀತಿಯ ಸೆರೆ
ಇನ್ನೊಬ್ಬಳ ಕಣ್ಣಲ್ಲಿ ಹೆಮ್ಮೆಯ ತೃಪ್ತಿ
ಇಬ್ಬರದೂ ನಿಷ್ಕಲ್ಮಶ ಪ್ರೀತಿ
ಮಗನ ಏಳಿಗೆ ಕಾಣುವ ತವಕ
ಇಬ್ಬರದೂ ಒಂದೇ ತುಡಿತ
ನಾನೊಬ್ಬ ಹೆಮ್ಮೆಯ ಪುತ್ರ
ಕೀರ್ತಿಯ ಕಂಡು ಒಬ್ಬಳ ಕಣ್ಣಲ್ಲಿ ಮಿಂಚಿನ ಸೆಳೆ
ಇನ್ನೊಬ್ಬಳ ಕಣ್ಣಲ್ಲಿ ಸಾರ್ಥಕತೆಯ ಭಾವ
ಇಬ್ಬರದೂ ಒಂದೇ ತೂಕ
ಇಬ್ಬರ ಆಸೆಯನ್ನೂ ಪೂರೈಸಿದ
ನಾನೊಬ್ಬ ಹೆಮ್ಮೆಯ ಪುತ್ರ
**********