ಚಿನ್ಮಯ ಎಂ.ರಾವ್ ಹೊನಗೋಡು
ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿದ್ದ ನಾಯಕಿಯರ ಬರವನ್ನು ಕಳೆದೊಂದು ದಶಕದಲ್ಲಿ ಭರಪೂರ ಸುಂದರಿಯರು ನೀಗಿಸಿದ್ದಾರೆ..ನೀಗಿಸುತ್ತಲೇ ಇದ್ದಾರೆ ಎಂದು ಘಂಟಾಘೋಷವಾಗಿ ಘೋಷಿಸಬಹುದು. ಈ ಆಶಾದಾಯಕ ನುಡಿಗೆ ನಮ್ಮ ನೆಲದವರೇ ಆದ ಪ್ರೇಮ, ರಕ್ಷಿತಾ, ರಾಧಿಕಾ, ರಮ್ಯ, ರಾಧಿಕಾ ಪಂಡಿತ್, ರಾಗಿಣಿ ಹೀಗೆ ಹಲವರು ಇಲ್ಲೇ ನಮ್ಮಲ್ಲೇ ಸೆಲೆಯಾಗಿ ನೆಲೆ ನಿಂತಿರುವುದೇ ಸಾಕ್ಷಿ. ಇನ್ನು ಪೂಜಾ ಗಾಂಧಿ, ಪ್ರಿಯಾಂಕಾ ಹಾಗು ಸಂಜನಾ ಅವರ ಕುಟುಂಬದ ಮೂಲ ಹೊರಗಿನದಾದರೂ ಅವರು ಕುಟುಂಬ ಸಮೇತ ಇಲ್ಲೇ ಬೀಡು ಬಿಟ್ಟು ಈ ನಾಡ ನುಡಿಯನ್ನೇ ನುಡಿಯುವವರಾಗಿ ಕರುನಾಡನ್ನು ಬಿಡದವರಾಗಿದ್ದಾರೆ. ಪ್ರಿಯಾಂಕ ಈ ನಾಡ ಸೊಸೆಯಾದರೆ ಇನ್ನಿಬ್ಬರು ಎಲ್ಲೇ ಸುತ್ತಾಡಿದರೂ ಕಡೆಗೆ ಸೇರುವುದು ಕನ್ನಡಮ್ಮನ ಮಡಿಲನ್ನೇ… ಈ ನಾಡ ತವರನ್ನೇ ! ಇವರ ವಾಸ..ಸಹವಾಸ..ಒಡನಾಟ ಎಲ್ಲವೂ ಈ ನೆಲದೊಂದಿಗೆ ಬೆಸೆದುಕೊಂಡಿದೆ.
ಹೀಗೆ ಭರಪೂರ ತುಂಬು ತುಳುಕುತ್ತಿರುವ..ಬಳುಕುತ್ತಿರುವ ಚೆಲುವೆಯರು ಕನ್ನಡ ಚಿತ್ರರಂಗದಲ್ಲಿರುವ ನಾಯಕಿಯರ ಬರವನ್ನು ನೀಗಿಸುತ್ತಿದ್ದರೂ ಅಲ್ಲೊಮ್ಮೆ ಇಲ್ಲೊಮ್ಮೆ..ಆಗೊಮ್ಮೆ ಈಗೊಮ್ಮೆ..ಪರಭಾಷೆಯ ಬೆಡಗಿಯರಿಗೇ ಅಪಾರ ಮನ್ನಣೆ ನೀಡಿ ಮಣೆ ಹಾಕುವುದೇಕೋ ಎಂದು ಹೊಸ ಚೆಲುವೆ “ನಿಕ್ಕಿ”ಯನ್ನು ನೋಡಿದಾಗ ಮತ್ತೊಮ್ಮೆ ನಮಗನಿಸುತ್ತದೆ !
ನವತಾರೆ ನಿಕ್ಕಿಯಾಗಿ ಉದಯಿಸುವ ಮುನ್ನ…
ದಕ್ಷಿಣ ಭಾರತದ ಹೆಸರಾಂತ ನಾಯಕಿ-ನಟಿ ಬೆಂಗಳೂರು ವಾಸಿ ಸಂಜನಾ ಅರ್ಚನಾ ಗಲ್‌ರಾಣಿಯ ಖಾಸ ತಂಗಿಯೇ ಈ ನಿಕ್ಕಿ. ಈಕೆಯ ಪೂರ್ಣ ಹೆಸರು ನಿಖಿತಾ ಗಲ್‌ರಾಣಿ. ಆಪ್ತವಲಯದಲ್ಲಿ ನಿಕ್ಕಿಯೆಂಬ ಕಿರುನಾಮದಿಂದ ಕರೆಯಲ್ಪಡುವ ಈಕೆಯನ್ನು ಚಿತ್ರರಂಗ ತಾನಾಗಿಯೇ ಕೈ ಬೀಸಿ ಕರೆಯುತ್ತದೆಯೊ ಅಥವಾ ಈಕೆಯೇ ಚಿತ್ರರಂಗಕ್ಕೆ ಕಾಲಿಡುತ್ತಾಳೋ ಎಂಬುದು ಸದ್ಯ ನಮ್ಮ ಮುಂದಿರುವ ಕುತೂಹಲ. ಅಕ್ಕ ಸಂಜನಾಳ ಮುಖಚರ್ಯೆಯನ್ನೇ ಹೋಲುವ ನಿಖಿತಾಳದ್ದು ಸ್ವಲ್ಪ ಅಗಲ ಮುಖವಷ್ಟೆ. ಅಕ್ಕ ಸಂಜನಾಳಷ್ಟು ಎತ್ತರವಿರದ ನಿಖಿತಾ ಚಿತ್ರರಂಗದಲ್ಲಿ ಮಾತ್ರ ಅವಳಷ್ಟೇ ಎತ್ತರಕ್ಕೇರುತ್ತಾಳೇನೋ ಎಂದೆನಿಸುತ್ತದೆ ಆ ನಿಟ್ಟಿನಲ್ಲಿ ಅವಳ ಸಣ್ಣ ಪುಟ್ಟ ಸಾಧನೆಗಳನ್ನು ನೋಡಿದಾಗ.
ಬೆಂಗಳೂರಿನ ಬಿಷಪ್ ಕಾಟನ್‌ನಲ್ಲಿ ಪಿ.ಯು ಮುಗಿಸಿದ ನಿಖಿತಾ ಎಂಬ ನಿಖಿಲ ಲೋಕ ಬೆರಗಾಗುವಂತಹ ಬೆಡಗಿ ಮುಂದೆ ಅಭ್ಯಾಸಕ್ಕೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಫ್ಯಾಷನ್ ಡಿಸೈನಿಂಗ್ ಕೋರ್ಸ್. ಬಾಲ್ಯದಿಂದಲೂ ವಸ್ತ್ರವಿನ್ಯಾಸಕ್ಕೆ ವಿಶೇಷ ಗಮನ ವಹಿಸುತ್ತಿದ್ದ ನಿಕ್ಕಿಯ ಕ್ರಿಯಾಶೀಲ ಮನಸ್ಸು ಫ್ಯಾಷನ್ ಡಿಸೈನಿಂಗನ್ನೇ ಓದುವಂತೆ ಮಾಡಿತು ! ತನ್ನ ವಿಭಿನ್ನ ವಿನ್ಯಾಸದ ವಸ್ತ್ರಗಳನ್ನು ಪ್ರಯೋಗಾತ್ಮಕವಾಗಿ ಮೊದಲು ತಾನೇ ಧರಿಸಿ ಸಂತಸಪಡುತ್ತಿದ್ದ ನಿಖಿತಾ ವಯಸ್ಸಿಗೆ ಬಂದಂತೆಯೇ ವರ್ಧಿಸುತ್ತಿರುವ ತನ್ನ ಸೌಂದರ್ಯವನ್ನೂ ರೂಪವನ್ನೂ ಮಾಡೆಲಿಂಗ್ ಲೋಕಕ್ಕೆ ರೂಪಾಂತರಿಸಿದಳು ! ಮಾಡೆಲಿಂಗ್ ಜಗತ್ತಿನಲ್ಲಿ ಅವಕಾಶಗಳ ಸುರಿಮಳೆಯಲ್ಲಿ ಹೊಳೆಯಲಾರಂಭಿಸಿದ ನಿಖಿತಾ ಪ್ರಿಂಟ್ ಮೀಡಿಯಾ ಹಾಗು ಟಿ.ವಿ ಮೀಡಿಯಾದ ಹಲವಾರು ಜಾಹಿರಾತುಗಳಿಗೆ ತನ್ನ ತನುಮನದ ಸೌಂದರ್ಯವನ್ನು ಧಾರೆಯೆರೆದಳು. ಫಾಸ್ಟ್ ಟ್ರ್ಯಾಕ್ ವಾಚಸ್, ಶಿವರಾಜ್ ಕುಮಾರ್ ಜೊತೆ ಕಲ್ಯಾಣ್ ಜುವೆಲ್ಸ್, ತಂಗಮಯಿಲ್ ಜುವೆಲ್ಸ್, ಪೊಥಿಸ್ ಸಿಲ್ಕ್ ಸ್ಯಾರಿ, ರಿಲಯನ್ಸ್ ಜುವೆಲರಿ ಹಾಗು ಆನ್ ಲೈನ್ ಶಾಪಿಂಗ್ ಸ್ಟೋರ್ಸ್ ಹೀಗೆ ವಿವಿಧ ಕಂಪೆನಿಗಳ ಜಾಹಿರಾತುಗಳಿಗೆ ನಾಯಕಿಯಾಗಿ ಭಾಗವಹಿಸಿ ಕ್ಯಾಮೆರಾ ಮುಂದೆ ಅಭಿನಯಿಸುವ ಅನುಭವವನ್ನು ಪಡೆದಳು.
ರಾಂಪ್ ಶೋಗಳಿಗಿಂತ ಜನಮನದಲ್ಲಿ ದಾಖಲಾಗುವಂತಹ ಜಾಹಿರಾತುಗಳಿಂದಲೇ ಜಗಜ್ಜಾಹಿರಾದ ನಿಕ್ಕಿಯ ಪ್ರತಿಭೆ ಈಗ ಚಲನಚಿತ್ರರಂಗದತ್ತ ತನ್ನ ಕಿರುನೋಟ ಬೀರುತ್ತಿದೆ ! ನಿಕ್ಕಿಯ ಹೂವಿನಂತಹ ಮನಸ್ಸು ತಾರೆಗಳ ತೋಟದಲ್ಲಿ ಅರಳಲು ಹೂನಗೆ ಬೀರುತ್ತಿದೆ ! ಒಂದೇ ತಾಯ ಕುಡಿಯಲ್ಲೇ ಅರಳಿ ಲೋಕಪ್ರಸಿದ್ಧವಾಗಿರುವ ಸಂಜನಾ ಎಂಬ ಇನ್ನೊಂದು ಹೂವು ಈಗಷ್ಟೇ ಅರಳಲು ಅಣಿಯಾಗಿರುವ ನಿಕ್ಕಿಯೆಂಬ ಮೊಗ್ಗಿನ ಮನಸ್ಸಿಗೆ ಜೊತೆ ನೀಡಿ ಆಸರೆಯಾಗುತ್ತಿದೆ !
ಅಕ್ಕ ಎಂದರೆ ಅಕ್ಕರೆ..ಹಚ್ಚೆಗಿಂತ ಬೇಕಾ ಉದಾಹರಣೆ ಬೇರೆ..?!
ಸಂಜನಾ ಹಾಗು ನಿಖಿತಾ ಎಂಬ ಈ ಇಬ್ಬರು ಅಕ್ಕ-ತಂಗಿಯರದ್ದು ಎರಡು ದೇಹ…ಒಂದೇ ಜೀವ ! ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಜೀವ..ಇಬ್ಬರದೂ ಬೇರೆಯಲ್ಲ ಒಂದೇ ಭಾವ ! ಪರಸ್ಪರ ಒಬ್ಬರಿಗೊಬ್ಬರು ಪಂಚಪ್ರಾಣ. ಇದಕ್ಕೊಂದೆರಡು ಉದಾಹರಣೆಯನ್ನು ನೋಡೋಣ.
ತನ್ನ ಪುಟ್ಟ ತಂಗಿಯನ್ನು ಪಕ್ಕದ ಮನೆಯವರು ಒಮ್ಮೊಮ್ಮೆ ಎತ್ತಿಕೊಂಡು ಹೋಗಲು ಬಂದರೆ ಅವರನ್ನು ತಡೆದು ಕಿರುಚಾಡುತ್ತಿದ್ದ ಸಂಜನಾ ಹಟ ಮಾಡಿ ನಿಕ್ಕಿಯನ್ನು ತನ್ನ ಬಳಿಯೇ ಬಿಟ್ಟುಕೊಂಡು ಆಟ ಆಡಿಸುತ್ತಿದ್ದಳಂತೆ ! ಅಂತೆಯೇ ನಿಕ್ಕಿ ಕೂಡ ಅಪ್ಪ-ಅಮ್ಮನಿಗಿಂತ ಅಕ್ಕ ಸಂಜನಾಳನ್ನೇ ಹೆಚ್ಚು ಹಚ್ಚಿಕೊಂಡು ಬೆಳೆದಳಂತೆ ! ತಾನು ಅಂದುಕೊಂಡದ್ದನ್ನು ಮಾಡಿಯೇ ಬಿಡುವ ಛಲಗಾತಿ ನಿಕ್ಕಿ ಒಮ್ಮೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಗೆಳತಿಯೊಡನೆ ಹೋಗಿ ತನ್ನ ಕೈ ಮೇಲೆ ಅಕ್ಕ ಸಂಜನಾಳ ಹೆಸರನ್ನೇ ಹಚ್ಚೆ ಹಾಕಿಸಿಕೊಂಡು ಬಂದಳಂತೆ ! ಮನೆಗೆ ಬಂದು ನಿಕ್ಕಿ ಸಂಜನಾಳಿಗೆ ಇದನ್ನು ತೋರಿಸಿದಾಗ ಒಂದು ಕ್ಷಣ ಭಾವುಕಳಾಗಿ ಕಣ್ಣೀರಾದ ಸಂಜನಾ..”ಇದೇಕೆ ಹೀಗೆಲ್ಲಾ ಮಾಡಿಕೊಂಡೆ..?!” ಎಂದು ಅದೆಷ್ಟೋ ಹೊತ್ತು ಆತ್ಮೀಯತೆಯ ಆಲಿಂಗನದಿ ಪ್ರೀತಿಯ ಪುಟ್ಟ ತಂಗಿ ನಿಕ್ಕಿಯನ್ನು ಬಂಧಿಸಿದಳಂತೆ !
ಅಕ್ಕ ಸಂಜನಾಳೇ ತಂಗಿ ನಿಕ್ಕಿಯ ಪಾಲಿಗೆ ಗಾಡ್‌ಫಾದರ್..
ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆದು ನಿಂತ ಅಕ್ಕ ಸಂಜನಾಳೇ ನಿಕ್ಕಿಗೆ ಈಗ ಗಾಡ್ ಫಾದರ್ ! ಚಿತ್ರರಂಗಕ್ಕೆ ಕಾಲಿಡಲು ಒಳ್ಳೆಯ ಕಥೆಗಾಗಿ ಕಾಯುತ್ತಿರುವ ನಿಕ್ಕಿ ಸಂಜಾನಾಳೊಂದಿಗೆ ಚರ್ಚಿಸಿಯೇ ತೀರ್ಮಾನಿಸುತ್ತಾಳಂತೆ. ತನ್ನಂತೆ ತನ್ನ ತಂಗಿಗೆ ಚಿತ್ರಜಗತ್ತಿನಲ್ಲಿ ನೆಲೆಯೂರಲು ಆರಂಭದಲ್ಲಿ ಕಷ್ಟವಾಗಬಾರದು..ಆಕೆ ಯಾವ ರೀತಿಯ ಪಾತ್ರ ಮಾಡಬೇಕು..ಮಾಡಬಾರದು ಎಂಬುದನ್ನೆಲ್ಲಾ ಮೊದಮೊದಲು ತಾನೇ ನಿರ್ಧರಿಸಿ ನಿಕ್ಕಿಗೊಂದು ನಿಖರ ಮಾರ್ಗದರ್ಶನವನ್ನು ತಾನೇ ನೀಡಬೇಕು ಎಂದು ಸಂಜನಾ ತೀರ್ಮಾನಿಸಿದ್ದಾಳಂತೆ. ತಂಗಿ ನಿಕ್ಕಿ ಕೂಡ ಅಕ್ಕನ ಅಕ್ಕರೆಯ ಆದೇಶಕ್ಕೆ ತಕ್ಕನಾಗಿ ಚಿತ್ರರಂಗದಲ್ಲಿ ನಡೆದುಕೊಳ್ಳಬೇಕು…ಆ ಮೂಲಕ ತಾನೂ ಅವಳಂತೆಯೇ ಸ್ಥಾನಮಾನ ಗಳಿಸಿಕೊಳ್ಳಬೇಕೆಂದು ನಿರ್ಧರಿಸಿಕೊಂಡಿದ್ದಾಳೆ.
ನಿಖಿತಾ ಗಲ್‌ರಾಣಿ ಎಂಬ ಉದಯೋನ್ಮುಖ ತಾರೆ ತೆಗೆದುಕೊಳ್ಳುವಂತಹ ನಿರ್ಧಾರಗಳು ಬಣ್ಣದ ಲೋಕದಲ್ಲಿ ಆಕೆಯನ್ನು ಬಲು ಎತ್ತರಕ್ಕೆ ತೆಗೆದುಕೊಂಡು ಹೋಗಲಿ ಎಂದು ನಾವೆಲ್ಲಾ ಆಶಿಸೋಣ ಅಲ್ಲವೆ?
ಚಿನ್ಮಯ ಎಂ.ರಾವ್ ಹೊನಗೋಡು
1-8-2012
************