ಸ್ಯಾಂಡಲ್ ವುಡ್

‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್

ಡಾ.ವಿಷ್ಣು ಸೇನಾ ಸಮಿತಿಯು ಸತತ ಹತ್ತು ವರ್ಷಗಳಿಂದ ಹೊರತರುತ್ತಿರುವ ‘ಕೋಟಿಗೊಬ್ಬ ಕ್ಯಾಲೆಂಡರ್’ ಇಂದು ಬೆಂಗಳೂರಿನ ಲಲಿತಕಲಾ ಅಕಾಡೆಮಿಯ ಆವರಣದಲ್ಲಿ ಬಿಡುಗಡೆ ಆಯಿತು. ಪ್ರತಿ ವರ್ಷವೂ ವಿಭಿನ್ನ, ವಿಶೇಷ ಶೈಲಿಯಲ್ಲೇ ಮೂಡಿಬರುತ್ತಿರುವ ಈ ಕ್ಯಾಲೆಂಡರ್ ಗೆ ದಶಕದ ಸಂಭ್ರಮವಾಗಿದ್ದರಿಂದ, ಈ ಬಾರಿ ಮತ್ತಷ್ಟು ವಿಭಿನ್ನತೆಯಿಂದ ಕ್ಯಾಲೆಂಡರ್ ಅನ್ನು ರೂಪಿಸಲಾಗಿದೆ. ನಾಡಿನ ಸುಪ್ರಸಿದ್ಧ ಕಲಾವಿದರಾದ ಬಾಗೂರು ಮಾರ್ಕಂಡೇಯ ಮತ್ತು ತಂಡ ಈ ಕ್ಯಾಲೆಂಡರ್ ಗೆ ಚಿತ್ರಬಿಡಿಸಲೆಂದೇ ಕಲಾಶಿಬಿರ ಮಾಡಿ, ಹನ್ನೆರಡು ಚಿತ್ರಗಳನ್ನು ಬಿಡಿಸಲಾಗಿದ್ದು, ಹನ್ನೆರಡು ಚಿತ್ರಗಳೂ ಒಂದೊಂದು ಕಾನ್ಸೆಪ್ಟ್ ಹೊಂದಿರುವುದು ವಿಶೇಷ.

ಕ್ಯಾಲೆಂಡರ್ ತಯಾರಿಕೆ ಮತ್ತು ವಿನ್ಯಾಸದ ಕುರಿತು ಮಾತನಾಡಿದ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ “ಕೋಟಿಗೊಬ್ಬ ಕ್ಯಾಲೆಂಡರ್ ಪ್ರಾರಂಭ ಮಾಡಿದ್ದು 2011ರಲ್ಲಿ. ಆಗ ಸಾವಿರ ಕ್ಯಾಲೆಂಡರ್ ಮುದ್ರಣ ಮಾಡಲಾಗಿತ್ತು. ಮಾರಾಟವಾಗಿದ್ದು ಕೇವಲ 200 ಮಾತ್ರ. ಆದರೆ, ಈಗ ಇಪ್ಪತ್ತೈದು ಸಾವಿರ ಕ್ಯಾಲೆಂಡರ್ ಮುದ್ರಣವಾಗುತ್ತಿವೆ. ಯಜಮಾನರ ಅಭಿಮಾನಕ್ಕಾಗಿ ಮುದ್ರಣಕ್ಕೆ ಖರ್ಚಾದ ಹಣಕ್ಕಿಂತಲೂ ಕಡಿಮೆ ದರದಲ್ಲಿ ಮನೆಮನೆಗೂ ತಲುಪಿಸಲಾಗುತ್ತಿದೆ’ ಎಂದರು.

ಹೊಸವರ್ಷದ ಕ್ಯಾಲೆಂಡರ್ ನಲ್ಲಿ ವಿಷ್ಣುವರ್ಧನ್ ಅವರನ್ನು ಹೊಸ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು ಯುವಕರ ಪ್ರತಿನಿಧಿ, ಮಾತೃಪ್ರೇಮಿ, ಸಿಂಹರೂಪಿ, ಕನ್ನಡಪರ ಹೋರಾಟಗಾರ, ದಾನವೀರ ಶೂರ, ಮಹಿಳಾಪರ, ವೃಕ್ಷಪ್ರೇಮಿ, ಸಂತ, ರೈತ, ಸಂಗೀತ ಪ್ರೇಮಿ, ದೇಶಭಕ್ತ, ವಿಷ್ಣುವರ್ಧನ್ ಹಾಗೂ ಕಟೌಟ್ ಜಾತ್ರೆಯ ಕಾನ್ಸೆಪ್ಟ್ ಗಳನ್ನು ಇದು ಹೊಂದಿದೆ. ಮತ್ತೊಂದು ವಿಶೇಷವೆಂದರೆ ‘ಸಿಂಬಲ್ ಆಫ್ ವಿಷ್ಣು ಕುಲ’ ಎನ್ನುವ ಸ್ಲೋಗನ್ ಆಗಿಸುವ ಚಿತ್ರ ಕೂಡ ಇದೆ.

ಈ ಕ್ಯಾಲೆಂಡರ್ ಬಿಡುಗಡೆಗಾಗಿ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಬಾಲಣ್ಣ ಆಸ್ಟ್ರೇಲಿಯಾದಿಂದ ಆಗಮಿಸಿದ್ದರು. ಕ್ಯಾಲೆಂಡರ್ ಕುರಿತು ಮಾತನಾಡಿದ ಅವರು ‘ಕ್ಯಾಲೆಂಡರ್ ನಲ್ಲಿ ಅದ್ಭುತ ಲೋಕವೊಂದು ತೆರೆದುಕೊಂಡಿದೆ. ವಿಷ್ಣುವರ್ಧನ್ ಅವರು ಪ್ರತಿ ಪುಟಪುಟದಲ್ಲೂ ಜೀವಿಸಿದ್ದಾರೆ. ವೀರಕಪುತ್ರ ಶ್ರೀನಿವಾಸ್ ಅವರು ದಾದಾ ಅವರ ಕನಸುಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆ ಅನಿಸುತ್ತಿದೆ’ ಅಂದರು.

ಅತಿಥಿಯಾಗಿ ಆಗಮಿಸಿದ್ದ ಮತ್ತು ಕ್ಯಾಲೆಂಡರ್ ನಲ್ಲಿ ಕೆಲವು ಚಿತ್ರಗಳನ್ನೂ ಬಿಡಿಸಿರುವ ಸುನೀಲ್ ಮಿಶ್ರ ಮಾತನಾಡಿ ‘ವಿಷ್ಣುವರ್ಧನ್ ಅವರ ವಿವಿಧ ಭಂಗಿಯನ್ನು ಕಲ್ಪಿಸಿಕೊಂಡು ಚಿತ್ರ ಬಿಡಿಸುತ್ತಿದ್ದೆವು, ವಿಷ್ಣುವರ್ಧನ್ ಅವರನ್ನು ಈ ರೀತಿ ಕೆಲಸಗಳ ಮೂಲಕ ಜೀವಂತವಾಗಿಸುತ್ತಿರುವುದು ಖುಷಿ ತಂದಿದೆ. ಕ್ಯಾಲೆಂಡರ್ ನಲ್ಲಿ ಕೇವಲ ಅಂಕಿಗಳು ಮಾತ್ರವಿಲ್ಲ, ಭಾವಗಳು ಅಲ್ಲಿವೆ. ಒಂದೊಂದು ಪುಟಕ್ಕೂ ಕಾನ್ಸೆಪ್ಟ್ ಮಾಡಿಯೇ ರೆಡಿ ಮಾಡಲಾಗಿದೆ. ಬಳಸಲಾದ ಬಣ್ಣ ಮತ್ತು ಭಾವಕ್ಕೂ ಒಂದೊಂದು ಅರ್ಥವಿದೆ. ಒಂದು ರೀತಿಯಲ್ಲಿ ವಿಷ್ಣುವರ್ಧನ್ ಅವರ ಜೀವನ ಜರ್ನಿಯೇ ಇದರಲ್ಲಿದೆ ಅಂದರು.

ಈ ವಿಶೇಷ ಕ್ಯಾಲಂಡರ್ ಗಾಗಿ ಬಾಗೂರು ಮಾರ್ಕಂಡೇಯ, ಸುನಿಲ್ ಮಿಶ್ರಾ, ಕೀರ್ತಿ ವರ್ಮಾ, ಮಂಜು, ವಿನಯ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಲಾವಿದರ ಶಿಬಿರದಲ್ಲಿ ಭಾಗಿಯಾಗಿ ಚಿತ್ರಗಳನ್ನು ಬಿಡಿಸಿದ್ದು ವಿಶೇಷ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.