‘ರತ್ನನ್ ಪ್ರಪಂಚ’ ಖ್ಯಾತಿಯ ಪ್ರಮೋದ್ ನಾಯಕ ನಟನಾಗಿ ನಟಿಸಿರುವ ‘ಬಾಂಡ್ ರವಿ’ ಸಿನಿಮಾ ಡಿಸೆಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ಎಸ್.ಪಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಮಾಸ್ ಆಕ್ಷನ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯ ಜೊತೆಗೆ ಸಿನಿಮಾ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
ನಮ್ಮ ಬಾಂಡ್ ರವಿ ದೊಡ್ಡ ಬ್ರ್ಯಾಂಡ್ ಆಗಿ ಎಲ್ಲರ ಮನಸ್ಸಲ್ಲೂ ಹತ್ತಾರು ವರ್ಷ ಉಳಿದುಕೊಳ್ಳುತ್ತಾನೆ. ಇಷ್ಟು ಕಾನ್ಫಿಡೆಂಟ್ ಆಗಿ ಹೇಳ್ತಿದ್ದೀನಿ ಅಂದ್ರೆ ಸಿನಿಮಾದಲ್ಲೇನೋ ವಿಷಯ ಇದೆ ಎಂದರ್ಥ. ರತ್ನನ್ ಪ್ರಪಂಚ ಆದ ಮೇಲೆ ಒಂದು ಒಳ್ಳೆ ಕಥೆ ಹುಡುಕುತ್ತಿದ್ದೆ. ಸುಮ್ನೆ ಮಾಸ್ ಸಿನಿಮಾ ಮಾಡೋಕಾಗಲ್ಲ, ಮಾಸ್ ಡೈಲಾಗ್ ಹೇಳೋಕಾಗಲ್ಲ ಒಳ್ಳೆ ಕಥೆ ಇರಬೇಕು ಆ ರೀತಿ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆ ಬಾಂಡ್ ರವಿ. ಕಥೆ ಕೇಳಿದಾಗಿಂದ ಬಾಂಡ್ ರವಿ ಪಾತ್ರ ನನ್ನನ್ನು ಕಾಡಿತ್ತು. ಅಷ್ಟು ಇಷ್ಟವಾಗಿತ್ತು ಕಥೆ. ಈ ಸಿನಿಮಾ ನನ್ನ ಲೈಫ್ ಟೈಂ ಮೆಮೋರಿ ಆಗಿ ಉಳಿಯಲಿದೆ. ಒಳ್ಳೆ ಕಂಟೆಂಟ್, ಒಳ್ಳೆ ಪಾತ್ರ ಎರಡೂ ನನಗೆ ಈ ಸಿನಿಮಾ ಮೂಲಕ ಸಿಕ್ಕಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಪ್ರಮೋದ್ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.
ನಾಯಕಿ ಕಾಜಲ್ ಕುಂದರ್ ಮಾತನಾಡಿ ಮಾರ್ಚ್ ನಲ್ಲಿ ನಿರ್ದೇಶಕರಾದ ಪ್ರಜ್ವಲ್ ಸರ್ ಭೇಟಿ ಮಾಡಿದೆ. ಅವರು ಸ್ಟೋರಿ ಹೇಳುವಾಗ ಎಷ್ಟು ಎಕ್ಸೈಟ್ ಮೆಂಟ್ ಇತ್ತೋ ಈಗಲೂ ಅಷ್ಟೇ ಎಕ್ಸೈಟ್ ಮೆಂಟ್ ಇದೆ. ಈ ಸಿನಿಮಾದಲ್ಲಿ ಮಾಸ್, ಕ್ಲಾಸ್ ಎಲ್ಲವೂ ಇದೆ. ಚಿತ್ರಮಂದಿರದ ಒಳಗೆ ಹೋದ್ರೆ ಒಂದು ಸೆಕೆಂಡ್ ಕೂಡ ಬೋರ್ ಆಗೋದಿಲ್ಲ. ಅಷ್ಟು ಚೆನ್ನಾಗಿ ಸಿನಿಮಾ ಚಿತ್ರಕಥೆ ಹೆಣೆದಿದ್ದಾರೆ. ಟೀಸರ್, ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಡಿಸೆಂಬರ್ 9ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಆಶೀರ್ವಾದಿಸಿ ಎಂದ್ರು.
ನಿರ್ಮಾಪಕರಾದ ನರಸಿಂಹಮೂರ್ತಿ.ವಿ ಮಾತನಾಡಿ ಚಿತ್ರದಲ್ಲಿ ತುಂಬಾ ವಿಶ್ಯುವಲ್ ವೇರಿಯೇಷನ್ ಇದೆ. ಓವರ್ ಆಲ್ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪ್ರಮೋದ್ ಅದ್ಭುತ ನಟ ಖಂಡಿತ ಯಶ್ ರೀತಿಯಲ್ಲೇ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ. ನಿರ್ದೇಶಕರ ಮೊದಲ ಸಿನಿಮಾವಿದು ಅವರಿಗೂ ಈ ಸಿನಿಮಾ ಸಕ್ಸಸ್ ತಂದು ಕೊಡಲಿ ಎಂದು ತಿಳಿಸಿದ್ರು.
ನಿರ್ದೇಶಕ ಪ್ರಜ್ವಲ್ ಎಸ್.ಪಿ ಮಾತನಾಡಿ ‘ಬಾಂಡ್ ರವಿ’ ಕಥೆ ಇಂದು ನನ್ನನ್ನು ಪ್ರಜ್ವಲ್ ಆಗಿ ಮಾಡಿದೆ. ಎಲ್ಲರೂ ನನಗಿಂತ ನಂಬಿಕೆ ಇಟ್ಟಿದ್ದೇ ಕಥೆ ಮೇಲೆ. ಅಷ್ಟು ಡಿಫ್ರೆಂಟ್ ಆಗಿದೆ ಈ ಚಿತ್ರದ ಕಥೆ. ಪ್ರಮೋದ್ ಸರ್ ಮೊದಲು ಕಥೆ ಕೇಳಿ ತುಂಬಾ ಇಷ್ಟ ಪಟ್ಟಿದ್ರು. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ತುಂಬಾ ಡಿಫ್ರೆಂಟ್ ಆಗಿ ಸಿನಿಮಾ ಮಾಡಿದ್ದೇವೆ. ನನ್ನ ಕನಸಿಗೆ ಇಡೀ ತಂಡ ಸಪೋರ್ಟಿವ್ ಆಗಿ ನಿಂತ್ಕೊಂಡ್ರು. ಖಂಡಿತಾ ನಾವೆಲ್ಲರೂ ಸಕ್ಸಸ್ ಮೀಟ್ ನಲ್ಲಿ ಸಿಕ್ತೀವಿ ಅನ್ನೋ ನಂಬಿಕೆ ಇದೆ ಎಂದು ತಿಳಿಸಿದ್ರು.
ನರಸಿಂಹಮೂರ್ತಿ.ವಿ ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣವಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.