ಅವಧಾನ ಕಲೆಕಲಾಪ್ರಪಂಚ

ಅವಧಾನ ಕಲೆ : ಏಕಾಗ್ರತೆಯ ಸಿದ್ಧಿ

-ಸುನೀತಾ ಕೃಷ್ಣಮೂರ್ತಿ, ಶಿವಮೊಗ್ಗ
ನಿರಂತರ ಅಧ್ಯಯನಶೀಲ ಗೃಹಿಣಿ
[email protected]

ಸಂಗೀತ, ಸಾಹಿತ್ಯ, ಸಂಸ್ಕೃತ, ನಾಟಕ, ಪ್ರವಚನ. . . ಮುಂತಾದುವು ಒಂದು ವರ್ಗದ ಜನರಿಗೇ ಮೀಸಲು ಎಂದು ಎಲ್ಲರ ನಂಬಿಕೆ. ಪ್ರವಚನವೇ? ನಮಗೆ ಅರ್ಥ ಆಗುವಂತಹುದಲ್ಲ. ಇವೆಲ್ಲಾ ವಯಸ್ಸಾದ ನಂತರ ಎಂಬ ಅಲಿಖಿತ ವಿಶ್ವಾಸ. ಆದರೆ ಇವುಗಳ ಸ್ನೇಹವನ್ನು ಚಿಕ್ಕವಯಸ್ಸಿನಿಂದಲೇ ರೂಢಿಸಿಕೊಂಡರೆ ಮಾನವ ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬಹುದು. ಬದುಕನ್ನು ನೋಡುವ ದೃಷ್ಟಿ ಬೇರೆಯೇ ಆಗುತ್ತದೆ. ಜೀವನ ಸಹನೀಯ, ಸುಂದರ ಆಗುತ್ತದೆ. ಇವುಗಳ ಹತ್ತಿರವೇ ಹೋಗದೆ ಅವುಗಳ ರಸ ಹೇಗೆ ತಾನೇ ತಿಳಿಯಲು ಸಾಧ್ಯ?

ಯಾವುದೇ ಕಲೆ ಮಾನವನ ಮನಸ್ಸು, ಚಿತ್ತವನ್ನು ಮತ್ತು ಹೃದಯವನ್ನು ಆರ್ದ್ರಗೊಳಿಸುತ್ತದೆ. ಅಂತೆಯೇ ಅವಧಾನವೂ ಒಂದು ಕಲೆ. ಸಂಗೀತ, ನೃತ್ಯದಂತೆ ಇದೂ ಒಂದು ಶಿಸ್ತನ್ನು ಅಪೇಕ್ಷಿಸುತ್ತದೆ. ಇದು ಶಾಸ್ತ್ರೀಯ ಚೌಕಟ್ಟಿನೊಂದಿಗೆ ಬೆಳೆದುಬಂದಿದೆ. ಅವಧಾನ ಎಂದರೆ ಏಕಾಗ್ರತೆ. ಮನಸ್ಸನ್ನು ಕೇಂದ್ರೀಕರಿಸುವುದು. ಹೊರಗಿನ ಯಾವುದೇ ಚಟುವಟಿಕೆ ಮನಸ್ಸಿನ ಏಕಾಗ್ರತೆಯನ್ನು ಅಲುಗಿಸಲು ಸಾಧ್ಯವಿಲ್ಲ. ಈ ಏಕಾಗ್ರತೆಯಿಂದ ಹಲವು ಸಿದ್ಧಿಗಳು ದೊರಕುತ್ತವೆ.

ಅವಧಾನ ಕಲೆಯ ಬೆಳವಣಿಗೆ
ಸಾಹಿತ್ಯ ವಿಫುಲವಾದಂತೆ ಅವಧಾನ ಕಲೆ ಕಾಲ ಕಾಲಕ್ಕೆ ಬೆಳೆಯುತ್ತಾ ಬಂದಿದೆ. ಕವಿ ಕಾಮ ಸುಮಾರು ೮೦೦-೯೦೦ ವರ್ಷಗಳ ಹಿಂದೆ ಅವಧಾನ ಕಲೆಯು ಇತ್ತೆಂದು ತನ್ನ ಶೃಂಗಾರ ರತ್ನಾಕರದಲ್ಲಿ ದಾಖಲಿಸಿದ್ದಾನೆ. ಅವಧಾನ ಕಲೆಯು ವೇದದ ಕಾಲದಿಂದಲೂ ಮಾರ್ಪಾಡಾಗುತ್ತಾ, ತನ್ನ ಕ್ಷೇತ್ರದಲ್ಲಿ ರೂಪ ಪಡೆಯುತ್ತಾ ಬಂದಿದೆ. ಇಂದಿಗೂ ಗೋದಾವರಿ ತೀರದ ವಿದ್ವಾಂಸರು ವೇದವನ್ನು ಅಷ್ಟ ವಿಕೃತಿ ಎಂದರೆ ಎಂಟು ರೀತಿಯ ವಿಕೃತಿ ಮಾಡಿ ಪಠಿಸುತ್ತಾರೆ. ಅವರನ್ನು ಅವಧಾನಿಗಳು ಎಂದೇ ಕರೆಯುತ್ತಾರೆ. ೧೨-೧೩ನೇ ಶತಮಾನದಲ್ಲಿ ಕೋಲಾಚಲ ಮಲ್ಲಿನಾಥ ಶತಾವಧಾನ ಪ್ರದರ್ಶನದಿಂದ ಕನಕಾಭಿಷೇಕ ಸತ್ಕಾರ ಹೊಂದಿದನೆಂದು ತಿಳಿದುಬರುತ್ತದೆ. ಸಂಸ್ಕೃತ ಸಾಹಿತ್ಯದಿಂದ ಅಪಾರ ಸ್ಫೂರ್ತಿ ಪಡೆದ ತೆಲುಗು ಸಾಹಿತ್ಯ ಅವಧಾನ ಕಲೆಯಲ್ಲಿ ಸಮೃದ್ಧಿಯಾಗಿ ಬೆಳೆದಿದೆ.

೧೫ನೆಯ ಶತಮಾನದ ಆರಂಭದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಶೋಣಾದ್ರಿನಾಥ ಡಿಂಡಿಮ ಭಟ್ಟಾರಕನು ಶತಾವಧಾನಿಯಾಗಿದ್ದನೆಂದು ತಿಳಿಯುತ್ತದೆ. ೧೫ನೆಯ ಶತಮಾನದಲ್ಲಿ ಶತಾವಧಾನಿ ಅಲ್ಲದೆ ಶತಾವಧಾನಿನಿಯರೂ ಇದ್ದರೆಂದು ಮಧುರವಾಣಿ ತನ್ನ ಕೃತಿಯಲ್ಲಿ ಹೇಳಿದ್ದಾಳೆಂದರೆ ಮಹಿಳೆಯರೂ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿದಂತಾಗುತ್ತದೆ. ಆಂಧ್ರದ ಬಹುತೇಕ ಸಂಸ್ಕೃತಾವಧಾನಿಗಳು ೧೮-೧೯ನೆಯ ಶತಮಾನದವರೇ ಎಂದು ತಿಳಿದಾಗ, ಸಾಹಿತ್ಯ ಸಮೃದ್ಧಿಯಾದಂತೆ ಅವಧಾನ ಕಲೆ ಬೆಳೆಯುತ್ತಾ ಬಂದುದು ಅರಿವಾಗುತ್ತದೆ.

ಅವಧಾನ ಕಲೆಯ ವಿಧಗಳು
ಅಷ್ಟಾವಧಾನ, ದ್ವಿಗುಣೀಕೃತಾಷ್ಟ, ತ್ರಿಗುಣೀಕೃತಾಷ್ಟ, ಶತಾವಧಾನ, ದ್ವಿಶತಾವಧಾನ, ಸಹಸ್ರಾವಧಾನ, ದ್ವಿಸಹಸ್ರಾಧಿಕಾವಧಾನ ಎಂದು ಅವಧಾನಿಗಳ ಸಾಮರ್ಥ್ಯ ತಿಳಿಸುತ್ತದೆ. ಆದರೆ ಜನರಂಜನೆ, ವಿಶೇಷ ಆದರಣೆ ಸಿಗುವುದು ಅಷ್ಟಾವಧಾನಕ್ಕೆ ಮಾತ್ರ. ಏಕೆಂದರೆ ಅಷ್ಟಾವಧಾನಕ್ಕೆ ಮೂರು ಗಂಟೆಗಳ ಸಮಯ ಸಾಕು. ಶತಾವಧಾನ ಮೂರು ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಯಾವುದೇ ವಿಷಯ ದೀರ್ಘವಾದಷ್ಟೂ ಅದರಲ್ಲಿ ಏಕಾಗ್ರತೆ ಎಲ್ಲರಿಗೂ ಸಾಧ್ಯವಿಲ್ಲ. ಆಗ ಅದರಲ್ಲಿ ಸ್ವಾರಸ್ಯ ಇಲ್ಲವಾಗುತ್ತದೆ.

ಅವಧಾನದ ಅಂಶಗಳು
ಅವಧಾನವು ವಿವಿಧ ಅಂಶಗಳನ್ನು ಒಳಗೊಂಡಿದೆ. ಇವು ಅವಧಾನಿಯ ಬುದ್ಧಿ ಸಾಮರ್ಥ್ಯಕ್ಕೆ ಬಿಟ್ಟ ವಿಷಯ.
೧. ಸಮಸ್ಯಾಪೂರಣ
೨. ದತ್ತಪದೀ
೩. ವರ್ಣನೆ ಮತ್ತು ಆಶು ಕವಿತ್ವ
೪. ನಿಷಿದ್ಧಾಕ್ಷರೀ
೫. ಅಪ್ರಸ್ತುತ ಪ್ರಸಂಗ
೬. ನಿರ್ದಿಷ್ಟಾಕ್ಷರೀ
೭. ಘಂಟಾಗಣನ
೮. ಸಂಖ್ಯಾಬಂಧ
೯. ಪುಷ್ಪಗಣನ
೧೦. ಕಾವ್ಯವಾಚನ
೧೧. ಇಚ್ಛಾಂಕ ಶ್ಲೋಕ
೧೨. ಛಂದೋಭಾಷಣ
೧೩. ವ್ಯಸ್ತಾಕ್ಷರೀ
೧೪. ನ್ಯಸ್ತಾಕ್ಷರೀ
೧೫. ಉದ್ದಿಷ್ಟಾಕ್ಷರೀ
೧೬. ಚಿತ್ರಕವಿತೆ
೧೭. ಕೇಳಿದ ಆಂಗ್ಲ ದಿನಾಂಕಕ್ಕೆ ಪಂಚಾಂಗ ರೀತ್ಯಾ ವಾರ ಹೇಳುವುದು
ಆದರೆ ಅಷ್ಟಾವಧಾನದಲ್ಲಿ ಅವಧಾನಿ ಎಂಟು ಅಂಶಗಳನ್ನು ಆಯ್ದುಕೊಳ್ಳುವನು. ಅತಿರಂಜಕವಾದ ಮತ್ತು ಕ್ಲಿಷ್ಟವಾದ ಚಿತ್ರಕವಿತ್ವ ಮತ್ತು ಸಂಖ್ಯಾಬಂಧ ಎಂಬ ನೂತನ ಅಂಶ ಸೇರಿಸಿ ಹೊಸ ಕ್ರಮ ಹುಟ್ಟು ಹಾಕಿದ ಕೀರ್ತಿ ಶತಾವಧಾನಿ ಡಾ. ಆರ್|| ಗಣೇಶ್ ಅವರಿಗೇ ಸಲ್ಲುತ್ತದೆ.

ಅವಧಾನದ ವಿಧಗಳು
ಪೃಚ್ಛಕರ ಸಂಖ್ಯೆ ಆಧರಿಸಿ ಅವಧಾನಕ್ಕೆ ಹೆಸರು. ಎಂಟು ಜನ ಪೃಚ್ಛಕರಿದ್ದರೆ ಅಷ್ಟಾವಧಾನ. ನೂರು ಪೃಚ್ಛಕರಿದ್ದರೆ ಶತಾವಧಾನ. ಸಾವಿರ ಪೃಚ್ಛಕರಿದ್ದರೆ ಸಹಸ್ರಾವಧಾನ. ೧೦೧೬ ಪೃಚ್ಛಕರನ್ನು ಸಮಾಧಾನಗೊಳಿಸಿದ ಕೀರ್ತಿಯ ಆಂಧ್ರದ ಗರಿಕಿಪಾಟಿ ನರಸಿಂಹರಾಯರು-ಮಹಾಸಹಸ್ರಾವಧಾನಿ ಎಂದು ಹೆಸರು ಪಡೆದಿದ್ದಾರೆ. ಶ್ರೀ ಮೆಡಸಾನಿ ಮೋಹನ್ ಪಂಚ ಸಹಸ್ರಾವಧಾನಿ ಎಂದರೆ ನಂಬಲು ಸಾಧ್ಯವೇ? ೫,೦೦೦ ಪದ್ಯ ರಚಿಸಿ ಹೇಳುವ ಸಾಮರ್ಥ್ಯ ಇದ್ದವರು.

ಇವೇ ಅಲ್ಲದೆ ಸಾಹಿತ್ಯದ ಹಲವು ಮಜಲುಗಳಿಂದ ಅವಧಾನ ಸಾಧ್ಯ. ಶಬ್ದಾವಧಾನ, ರಾಮಾಯಣಾವಧಾನ, ಭಗವದ್ಗೀತಾವಧಾನ, ಯಕ್ಷಗಾನ ಅವಧಾನ, ಸಂಗೀತಾವಧಾನ, ನಾಟ್ಯಾವಧಾನಗಳೂ ಇವೆ.
ವೇದಕ್ಕೆ ಸಂಬಂಧಿಸಿದಂತೆ ಸ್ವರಾವಧಾನ, ಅಕ್ಷರಾವಧಾನ, ಸಾಂಕೇತಿಕ ಅವಧಾನ, ನೇತ್ರಾವಧಾನ, ಅಂಗುಷ್ಟಾವಧಾನ ಮುಂತಾದವು.
ಶಾಸ್ತ್ರಗಳನ್ನು ಆಧರಿಸಿ ಗಣಿತಾವಧಾನ, ಜ್ಯೋಷಿಷ್ಯಾವಧಾನ, ವೈದ್ಯಾವಧಾನ, ಅಕ್ಷರ ಗಣಿತಾವಧಾನ, ಕಲೆ ಆಧರಿಸಿ ಚಿತ್ರಕಳಾವಧಾನ, ಚತುರಂಗಾವಧಾನ, ಧ್ವನ್ಯಾವಧಾನ ಮುಂತಾದವು. ಆದರೆ ಸಾಹಿತ್ಯಾವಧಾನ ಹೆಚ್ಚು ಮನ್ನಣೆ ಗಳಿಸಿದೆ.

ಅವಧಾನದ ಉತ್ತಮ ಶ್ರೋತೃವಾಗಲು. . .
ಯಾವುದೇ ಕಲೆ ಆಸ್ವಾದಿಸಲು ಮೊದಲಿಗೆ ಸಹೃದಯತೆ ಅವಶ್ಯ. ಕಲೆಯ ಬಗ್ಗೆ ಆಸಕ್ತಿ, ಸಾಹಿತ್ಯದ ಬಗ್ಗೆ ಒಲವು ಇರಬೇಕು. ಅವಧಾನದಲ್ಲಿ ಅವಧಾನಿಗೆ ಪೃಚ್ಛಕರು ಅಂದರೆ ಪ್ರಶ್ನಿಸುವವರು ತಮ್ಮ ಅಪಾರ ವಿದ್ಯೆಯನ್ನು ಬಳಸಿ ಪ್ರಶ್ನೆ ತಯಾರಿಸಿಕೊಂಡು ಬಂದಿರುತ್ತಾರೆ. ಪ್ರತಿ ಪೃಚ್ಛಕನೂ ತನ್ನ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ, ಸಾಧನೆ ಹೊಂದಿದವನೇ ಆಗಿರುತ್ತಾನೆ ಎಂಬುದು ಗಮನಾರ್ಹ.

ಅವಧಾನದ ಮುಖ್ಯ ಅಂಗಗಳು
೧) ನಿಷೇಧಾಕ್ಷರೀ: ಇಲ್ಲಿ ಪೃಚ್ಛಕ ಪದ್ಯ ರಚನೆಗೆ ಒಂದು ವಿಷಯ ಅವಧಾನಿಗೆ ಕೊಡುತ್ತಾನೆ. ನಿರ್ದಿಷ್ಟ ಛಂದಸ್ಸಿನಲ್ಲಿ (ವೃತ್ತದಲ್ಲಿ) ಇರಬೇಕು ಎಂಬುದು ಪೃಚ್ಛಕನ ಅಪೇಕ್ಷೆ. ಅವಧಾನಿಯು ಪದ್ಯ ರಚಿಸಲು ಪ್ರಾರಂಭಿಸಿದೊಡನೆ ಪ್ರತಿ ಅಕ್ಷರದ ಮುಂದಿನ ಅಕ್ಷರ ಊಹಿಸಿ ಪೃಚ್ಛಕ ನಿಷೇಧ ಹೇರುತ್ತಾನೆ.

೨) ಸಮಸ್ಯಾಪೂರಣ: ನಾಲ್ಕು ಪಾದದ ಒಂದು ಪದ್ಯವನ್ನು ಸಮಸ್ಯೆಯಾಗಿ ಕೊಡಲಾಗುತ್ತದೆ. ಪೃಚ್ಛಕ ಕೊಟ್ಟ ಭಾಗವು ಅಬದ್ಧ, ಅಶ್ಲೀಲ, ಅಸಾಧ್ಯ ಎನ್ನುವಂತೆ ಇರುತ್ತದೆ. ಪೃಚ್ಛಕ ತನ್ನ ಬುದ್ಧಿ, ಸಾಮರ್ಥ್ಯವನ್ನೆಲ್ಲಾ ಧಾರೆ ಎರೆದು ಸಮಸ್ಯೆ ತಂದಿರುತ್ತಾನೆ. ಅವಧಾನಿ ಆ ಪಾದಕ್ಕೆ ಅಕ್ಷರವನ್ನೋ, ಪದವನ್ನೋ ಸೇರಿಸಿ ಅರ್ಥಗರ್ಭಿತ ಪದ್ಯ ರಚಿಸಬೇಕು.

೩) ದತ್ತಪತಿ: ಪೃಚ್ಛಕ ಒಂದು ನಿರ್ದಿಷ್ಟ ವಸ್ತು ಸೂಚಿಸಿ ಪದ್ಯದ ನಾಲ್ಕು ಪಾದಗಳಲ್ಲಿ ಕ್ರಮವಾಗಿ ಬರಬೇಕು ಎಂಬ ನಿಯಮದೊಂದಿಗೆ ನಾಲ್ಕು ಪದಗಳನ್ನು ಅವಧಾನಿಗೆ ಕೊಡುತ್ತಾನೆ. ಅನ್ಯಭಾಷೆಯ ಶಬ್ದಗಳೂ, ಅಮಂಗಲ ಶಬ್ದಗಳೂ ಸವಾಲಾಗಿ ಬರುತ್ತವೆ. ಅವುಗಳಿಂದ ಪೃಚ್ಛಕ ಅಪೇಕ್ಷಿಸಿದಂತೆ ದೇವತಾಸ್ತುತಿಯೋ, ನಿಸರ್ಗ ವರ್ಣನೆಯೋ ವಸ್ತುವಾಗಿ ಪದ್ಯವನ್ನು ಅವಧಾನಿ ರಚಿಸಬೇಕು.

೪) ಸಂಖ್ಯಾಬಂಧ: ಪೃಚ್ಛಕ ೫*೫ ಚೌಕದ ಮನೆಯ ಜೊತೆ ಉತ್ತರವನ್ನೂ ಮೊದಲೇ ಕೊಡುತ್ತಾನೆ. ಯಾವ ಕೋನದಿಂದ ಕೂಡಿದರೂ ಉತ್ತರ ಬರುವ ಹಾಗೆ ಅವಧಾನಿ ಸಂಖ್ಯೆ ತುಂಬಿಸಬೇಕು. ಅವಧಾನಿ ಬೇರೆ ಪೃಚ್ಛಕರ ಸಮಸ್ಯೆಗೆ ಆಲೋಚಿಸುವ ಸಮಯದಲ್ಲೇ ಸಂಖ್ಯಾಬಂಧದ ಪೃಚ್ಛಕ ಉತ್ತರ ಅಪೇಕ್ಷಿಸುವುದು ಅವಧಾನಿಗೆ ಪರೀಕ್ಷಾ ಸಮಯ.

೫) ವರ್ಣನೆ ಮತ್ತು ಆಶು ಕವಿತ್ವ: ಪೃಚ್ಛಕ ಕೊಟ್ಟ ವಿಷಯ ಮತ್ತು ಛಂದಸ್ಸಿನಲ್ಲಿ ಅವಧಾನಿ ಪದ್ಯ ರಚಿಸಬೇಕು.

೬) ನ್ಯಸ್ತಾಕ್ಷರ: ನಿರ್ದಿಷ್ಟ ಸ್ಥಾನವನ್ನು ಸೂಚಿಸುವುದು ಎಂದು ಅರ್ಥ. ಪೃಚ್ಛಕ ಪದ್ಯದ ಪ್ರತಿ ಪಾದದಲ್ಲಿ ಬರಬೇಕಾದ ಯಾವುದೋ ಒಂದು ಅಕ್ಷರವನ್ನು ಕೊಡುತ್ತಾನೆ. ಅದರ ಸ್ಥಾನ ಮತ್ತು ಪದ್ಯದ ಛಂದಸ್ಸನ್ನು ಸಹ ಸೂಚಿಸುತ್ತಾನೆ. ಅವಧಾನಿ ಪದ್ಯ ವರ್ಣಿಸುತ್ತಾ ಪೃಚ್ಛಕ ಸೂಚಿಸಿದ ಸ್ಥಾನದಲ್ಲಿ ಕೊಟ್ಟ ವರ್ಣಗಳನ್ನು ಇಟ್ಟು ಪದ್ಯ ಪೂರ್ಣಗೊಳಿಸಬೇಕು.

೭) ವ್ಯಸ್ತಾಕ್ಷರಿ: ವ್ಯಸ್ತ ಎಂದರೆ ಅಸ್ತವ್ಯಸ್ತವಾಗಿ ಶಬ್ದಗಳನ್ನು ಪೃಚ್ಛಕ ಅವಧಾನಿಗೆ ತೋರಿಸುವುದು. ಉಚ್ಚಾರಣಾಕ್ಷರಗಳ ಪ್ರಮಾಣದಲ್ಲಿ ತುಂಡರಿಸಿ ಕ್ರಮರಹಿತವಾಗಿ ಚೀಟಿಯಲ್ಲಿ ಬರೆದು ಹಿಂದೆ ಕ್ರಮಸಂಖ್ಯೆಯನ್ನೂ ಬರೆದು ಅವಧಾನಿಯ ಏಕಾಗ್ರತೆಗೆ ಭಂಗ ತರುವಂತೆ ಚೀಟಿ ತೋರಿಸುವುದು. ಅವಧಾನಿಗೆ ಅಪರಿಚಿತ ಭಾಷೆ, ಅಸ್ಪಷ್ಟ ಅನ್ವಯ, ಕ್ಲಿಷ್ಟಕರ ಸಂಯೋಜನೆಗಳು ಇದ್ದಾಗ ಅಪರಿಮಿತ ನೆನಪಿನ ಶಕ್ತಿ ಅನಿವಾರ್ಯ.

೮) ಕಾವ್ಯವಾಚನ: ಇದರಲ್ಲಿ ಪಂಪ, ರನ್ನ, ಹರಿಹರ, ಕುಮಾರವ್ಯಾಸ ಮುಂತಾದವರ ಕಾವ್ಯಗಳಿಂದ ಆಯ್ದ ಪದ್ಯಗಳನ್ನು ಪೃಚ್ಛಕ ಕಾವ್ಯವಾಚನ ಮಾಡುತ್ತಾನೆ. ಇಲ್ಲಿ ಪೃಚ್ಛಕ ಗಮಕಿ ಆಗಿರುತ್ತಾನೆ ಎಂಬುದು ಗಮನಾರ್ಹ. ಅವಧಾನಿ ಆ ಪದ್ಯದ ಸಂದರ್ಭ, ಸ್ವಾರಸ್ಯವಲ್ಲದೇ ಆ ಪದ್ಯ ಯಾವ ಕಾವ್ಯದಿಂದ ತೆಗೆದುಕೊಳ್ಳಲಾಗಿದೆ ಎಂದು ಗುರುತಿಸಬೇಕು.

೯) ಅಪ್ರಸ್ತುತ ಪ್ರಸಂಗ: ಪ್ರಸ್ತುತವಲ್ಲದ್ದು ಅಪ್ರಸ್ತುತ. ಇಲ್ಲಿ ಅಪ್ರಸ್ತುತ ಪ್ರಸಂಗ ಪೃಚ್ಛಕನ ಮುಖ್ಯ ಉದ್ದೇಶ ಅವಧಾನಿಯ ಏಕಾಗ್ರತೆಗೆ ಭಂಗ ತರುವುದು. ಅವಧಾನಿ ತೀವ್ರ ಆಲೋಚನೆಯಲ್ಲಿರುವಾಗ, ಉಳಿದ ಪೃಚ್ಛಕರ ಸವಾಲು ಎದುರಿಸುವಾಗ ಅಪ್ರಸ್ತುತ ಪ್ರಸಂಗ ಪ್ರಚ್ಛಕ ತನ್ನ ಹಾಸ್ಯಭರಿತ ಅಥವಾ ವಿದ್ವತ್ಪೂರ್ಣ ಪ್ರಶ್ನೆಗಳಿಂದ ಅವಧಾನಿಯನ್ನು ಕೆಣಕುವ ಸಾಹಸ ಮಾಡುತ್ತಿರುತ್ತಾನೆ.

೧೦) ಘಂಟಾನಾದ: ಪೃಚ್ಛಕ ಅವಧಾನಿಯ ಏಕಾಗ್ರತೆ ಭಂಗಗೊಳಿಸಲು ಅನಿರ್ದಿಷ್ಟ ಕಾಲದಲ್ಲಿ ಘಂಟೆ ಬಾರಿಸುತ್ತಾನೆ. ಅವಧಾನಿಯು ಅಂತ್ಯದಲ್ಲಿ ಎಷ್ಟು ಬಾರಿ ಘಂಟೆ ಬಾರಿಸಲಾಯಿತು ಎಂದು ಹೇಳಬೇಕು. ಪೃಚ್ಛಕ ತಾನು ಬಾರಿಸಿದ ಘಂಟೆಯನ್ನು ಆಗಾಗ್ಗೆ ದಾಖಲಿಸುವುದರಿಂದ ಸರಿ-ತಪ್ಪು ತಿಳಿಯುತ್ತದೆ.

೧೧) ಉದ್ದಿಷ್ಟಾಕ್ಷರೀ: ಪೃಚ್ಛಕ ನಿರ್ದಿಷ್ಟ ಅಕ್ಷರ ಸಂಖ್ಯೆಯ ವೃತ್ತವನ್ನು ಅವಧಾನಿಗೆ ಅವಧಾನದ ಮೊದಲೇ ನೀಡಿ ನಂತರ ಯಾವಾಗ ಬೇಕೋ ಆಗ ಹತ್ತನೆಯ ಅಕ್ಷರ ಕೊಡಿ, ಏಳನೆಯ ಅಕ್ಷರ ಕೊಡಿ, ಮೂರನೆಯ ಅಕ್ಷರ ಯಾವುದು ಎಂದು ಕೇಳುತ್ತಾನೆ. ಅಂತ್ಯದಲ್ಲಿ ಅವಧಾನಿ ಆ ಕವಿತೆಯನ್ನು ಯಥಾರೀತಿ ಹೇಳಬೇಕು.

೧೨) ನಿರ್ದಿಷ್ಟಾಕ್ಷರೀ: ಯಾವುದಾದರೊಂದು ವೃತ್ತವನ್ನು ಪೃಚ್ಛಕ ಆಯ್ದುಕೊಂಡು ಅದರ ಸಂಖ್ಯೆಗಳನ್ನು ಚೌಕದಲ್ಲಿ ಬರೆದುಕೊಳ್ಳುವನು. ಉದಾಹರಣೆ ಇಂದ್ರ ವಜ್ರಾವೃತ್ತಕ್ಕೆ ೪೪ ಮನೆಗಳು. ಮಾಲಿನೀ ವೃತ್ತಕ್ಕೆ ೬೦ ಮನೆಗಳು ಇತ್ಯಾದಿ. ನಂತರ ಪೃಚ್ಛಕ ಅಲ್ಲಿಯ ಸಮಸಂಖ್ಯೆ ಅಥವಾ ವಿಷಮಸಂಖ್ಯೆ ಮನೆಗಳಲ್ಲಿ ತನಗೆ ತೋರಿದ ಅಕ್ಷರಗಳನ್ನು ಅಥವಾ ತಾನು ರಚಿಸಿಕೊಂಡು ಬಂದಿರುವ ಅದೇ ಅಕ್ಷರಸಂಖ್ಯೆಯ ಸ್ವರ ಅಥವಾ ವ್ಯಂಜನ ಬರೆದು ಅವಧಾನಿಗೆ ಹೇಳುತ್ತಾನೆ. ಆನಂತರ ಅವಧಾನಿ ಜ್ಞಾಪಕದಿಂದಲೇ ಆ ವರ್ಣಗಳನ್ನು ಬಳಸಿ ಪದ್ಯದ ಪಾದ ಪೂರ್ಣಗೊಳಿಸಬೇಕು.

೧೩) ಚಿತ್ರಕವಿತೆ: ಪುಸ್ತಕ, ಪೆನ್ನಿನ ಸಹಾಯವಿಲ್ಲದೆ ಅಕ್ಷರಗಳ ಪರಸ್ಪರ ಹೊಂದಿಕೆಯನ್ನು ಮನಸ್ಸಿನಲ್ಲಿ ಚಿತ್ರಪದ್ಯದ ಸ್ವರೂಪ ರೂಪಿಸಿಕೊಂಡು ಪೃಚ್ಛಕ ಕೊಟ್ಟ ಚಿತ್ರವನ್ನು ಕವಿತೆಯಲ್ಲಿ ರೂಪಿಸಬೇಕು. ಅದು ಪದ್ಮದ ಚಿತ್ರವಿರಬಹುದು, ಖಡ್ಗ, ವೀಣೆ ಮುಂತಾಗಿಯೂ ಇರಬಹುದು.

೧೪) ವಾರ ಕಥನ: ಆಂಗ್ಲ ದಿನಾಂಕಗಳಿಗೆ ವಾರ ಹೇಳುವುದು. ಉದಾ: ೧೯೫೭ ಅಕ್ಟೋಬರ್ ೮ ಯಾವ ವಾರ ಎಂದು. ಇದಕ್ಕೆ ಕೆಲವು ಸೂತ್ರಗಳುಂಟು. ಅವಧಾನಿಯು ಆ ಸೂತ್ರಗಳ ಸಹಾಯದಿಂದ ಉತ್ತರಿಸುವನು.

೧೫) ಪುಷ್ಪಗಣನ: ಇದರಲ್ಲಿ ಪೃಚ್ಛಕ ಆಗಾಗ ಅವಧಾನಿಗೆ ತಾಗುವಂತೆ ಹೂವು ಎಸೆಯುತ್ತಾನೆ. ಕೊನೆಯಲ್ಲಿ ಎಷ್ಟು ಹೂವುಗಳು ಬೀಸಲ್ಪಟ್ಟವೆಂದು ಅವಧಾನಿ ಹೇಳಬೇಕು.

ಅವಧಾನ ಒಂದು ಅತ್ಯದ್ಭುತ ಕಲೆ. ಭಾಷಾಪಂಡಿತರ ಸಾಮರ್ಥ್ಯವನ್ನು, ಭಾಷೆಯ ಮೇಲೆ ಅವರಿಗಿರುವ ಹಿಡಿತವನ್ನು ಒರೆಗೆ ಹಚ್ಚುವಂತಹ ಕಲೆ. ಅಷ್ಟಾವಧಾನದಲ್ಲಿ ಒಟ್ಟಿಗೇ ೮ ಜನ ಅವಧಾನಿಗೆ ಸವಾಲುಗಳನ್ನು ಎಸೆಯುವರು. ಅಷ್ಟಾವಧಾನಿಗಳು ಅವರೆಲ್ಲರಿಗೂ ಉತ್ತರವನ್ನು ಅಲ್ಲಿಯೇ ಕಾವ್ಯದ ಮೂಲಕ ಕೊಡಬೇಕು. ಅದು ಸಂಸ್ಕೃತದಲ್ಲಿಯೂ ಇರಬಹುದು ಅಥವಾ ಕನ್ನಡದಲ್ಲಿಯೂ ಇರಬಹುದು. ಅದು ಪೃಚ್ಛಕರಿಗೆ ಬಿಟ್ಟ ವಿಷಯ. ಇಲ್ಲಿ ಹಲವು ನಿಯಮಗಳನ್ನು ಪಾಲಿಸಬೇಕು. ಇಂತಹ ಛಂದಸ್ಸಿನಲ್ಲಿ ಇಂತಹ ಅಕ್ಷರ ಉಪಯೋಗಿಸದೇ, ಇಂತಹ ಭಾಷೆಯಲ್ಲಿ ಕಾವ್ಯ ರಚಿಸಬೇಕು ಎಂದು ಕೇಳಬಹುದು. ಕಾವ್ಯದಲ್ಲಿ ಇಂತಹ ಅಲಂಕಾರಗಳು ಇರಬೇಕು ಎಂದು ಕೂಡ ನಿಯಮ ಹಾಕಬಹುದು. ಅಷ್ಟಾವಧಾನ ಎಂದರೆ ೮ ಪೃಚ್ಛಕರಿರುತ್ತಾರೆ. ನಾಲ್ಕು ಸುತ್ತುಗಳಿರುತ್ತವೆ. ಮೂರು ಘಂಟೆ ಸಮಯ ಅವಶ್ಯ. ಶತಾವಧಾನದಲ್ಲಿ ೧೦೦ ಜನ ಪೃಚ್ಛಕರು ಒಟ್ಟಿಗೇ ಅವಧಾನಿಗೆ ಪ್ರಶ್ನೆ ಕೇಳುವರು. ಇದು ಮೂರು ದಿನಗಳ ಕಾಲ ನಡೆಯುತ್ತದೆ.

ಕನ್ನಡದಲ್ಲಿ ಅವಧಾನ ಕಲೆ
ಕನ್ನಡದ ಪ್ರಥಮ ಅವಧಾನಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು. ಬೆಳ್ಳಾವೆಯವರ ನಂತರ ಆರು ದಶಕಗಳ ಕಾಲ ಸುಪ್ತವಾಗಿದ್ದ ಅವಧಾನ ಕಲೆ ೧೯೮೦ರ ಮಧ್ಯಭಾಗದಲ್ಲಿ ಜಾಗೃತಗೊಂಡಿದ್ದು ಲಂಕಾ ಕೃಷ್ಣಮೂರ್ತಿಯವರಿಂದ. ಅನಂತರ ಡಾ. ಜ್ಯೋಸ್ಯಂ ಸದಾನಂದಶಾಸ್ತ್ರಿಗಳಿಂದ. ಇವರು ತೆಲುಗಿನಲ್ಲಿ ಅಷ್ಟಾವಧಾನ ನಿರ್ವಹಿಸುತ್ತಿದ್ದರು. ಲಂಕಾ ಕೃಷ್ಣಮೂರ್ತಿಯವರು ಸದಾನಂದ ಶಾಸ್ತ್ರಿಗಳಿಗೆ ಒಂದೆರಡು ವರ್ಷ ಪಂಪ, ರನ್ನ ಮುಂತಾದವರ ಮಹಾಕೃತಿಗಳ ಪಾಠ ಮುಗಿಸಿ ಕನ್ನಡದ ಅವಧಾನಿಯನ್ನಾಗಿ ರೂಪಿಸಿದರು.

ಇದರ ನಂತರ ಕನ್ನಡದಲ್ಲಿ ಅವಧಾನ ಕೊಡುಗೆ ನೀಡಿದ ಕೀರ್ತಿ ಶತಾವಧಾನಿ ಡಾ|| ಆರ್. ಗಣೇಶ್ ಅವರಿಗೇ ಸಲ್ಲುತ್ತದೆ. ಇವರಿಗೂ ಗುರುಗಳು ಲಂಕಾ ಕೃಷ್ಣಮೂರ್ತಿಯವರೇ.

ಇನ್ನಿತರ ಅವಧಾನ ಕಲಾವಿದರೆಂದರೆ ಮಹೇಶ್‌ಭಟ್ ಹಾರ್‍ಯಾಡಿ ಅಷ್ಟಾವಧಾನ, ಉಮೇಶ್ ಗೌತಮ್ ನಾಯಕ್ ಸಂಗೀತ ಸೇರಿದಂತೆ ತ್ರಿಭಾಷಾ ಅಷ್ಟಾವಧಾನ ನಡೆಸಿಕೊಡುತ್ತಾರೆ. ಯಕ್ಷಗಾನದ ಅವಧಾನಿಗಳೆಂದರೆ ಸಾಗರದ ಪ್ರಶಾಂತ ಮಧ್ಯಸ್ಥ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮತ್ತು ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜರು ಅವಧಾನ ಚಟುವಟಿಕೆಗಳಿಂದ ಪ್ರಖ್ಯಾತರು.
ಇವರಲ್ಲದೆ ಕನ್ನಡದವರೇ ಆದ ಡಾ. ಆರ್. ಶಂಕರ್, ವೆಂಕಟರಮಣ ಹಲಸಖಂಡ ಮತ್ತು ಸುಬ್ರಹ್ಮಣ್ಯ ಭಟ್ಟರು ಸಂಸ್ಕೃತದಲ್ಲಿ ಅವಧಾನ ನಡೆಸಿಕೊಡುತ್ತಾರೆ.
*******

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.