ಚಿತ್ರ-ಲೇಖನ
ಎನ್.ಡಿ ಹೆಗಡೆ ಆನಂದಪುರ
ನಾವು ದಿನನಿತ್ಯ ಬಳಸುವ ಅದೆಷ್ಟೋ ವಸ್ತುಗಳು ಬಳಕೆಯ ಕಾರಣ ಹಾಳಾಗುತ್ತಿರುತ್ತವೆ. ಹಲವು ವಸ್ತುಗಳು ದುರಸ್ತಿಗೆ ಸಾಧ್ಯವಾಗದು. ಆದರೆ ಕೆಲವು ವಸ್ತುಗಳು ದುರಸ್ತಿಗೆ ಸಾಧ್ಯವಾಗುತ್ತದೆ. ನಮಗೆ ಅತ್ಯಗತ್ಯ ವಸ್ತುಗಳನ್ನು ದುರಸ್ತಿಮಾಡುವವರು ಸದಾ ಆತ್ಮೀಯರಾಗಿ ಕಾಣುತ್ತಾರೆ.
ಬಿರು ಮಳೆ, ಸುಡು ಬಿಸಿನಿಂದ ಸದಾ ನಮ್ಮನ್ನು ರಕ್ಷಿಸುವ ಛತ್ರಿ ಕೆಲವರಿಗೆ ಅನಿವಾರ್ಯ ವಸ್ತು. ಈ ಛತ್ರಿ ಸ್ವಲ್ಪ ಹಾಳಾದರೆ ದುರಸ್ತಿ ಮಾಡುವ ವೃತ್ತಿಯವರು ಅಲ್ಲಲ್ಲಿ ಕಂಡು ಬರುತ್ತಾರೆ. ಅಂಗಡಿ ಕಟ್ಟೆ, ರಸ್ತೆಯ ತಿರುವು, ಫೂಟ್ ಪಾತ್ ಹಾಗೂ ಬಸ್ ನಿಲ್ದಾಣ ಸನಿಹ ಕುಳಿತು ಛತ್ರಿ ದುರಸ್ತಿ ಮಾಡುವ ಇವರು ಜನರ ಬಾಯಲ್ಲಿ ಛತ್ರಿಗಾರರೆಂದೇ ಪ್ರಖ್ಯಾತಿ.
ಹಾಳು ಹರಕಾದ ಛತ್ರಿಯನ್ನೂ ಸಹ ದುರಸ್ತಿಗೊಳಿಸಿ ಹೊಸ ರೂಪ ನೀಡುವ ಇವರ ಬದುಕು ಸದಾ ಛಲದಿಂದ ಕೂಡಿದ ಸವಾಲಿನ ಬದುಕು. ಆಪ್ತೇಷ್ಟರ ,ಬಂಧು ವರ್ಗದ ಮನೆಯ ಸಮಾರಂಭ, ಕಚೇರಿ ಕೆಲಸಗಳಿಗೆ ಹೊರಟಾಗ ಛತ್ರಿ ತುರ್ತಾಗಿ ಹಾಳಾಗುವುದೂ ಉಂಟು, ಹಾಳಾದ ಮುರುಕಾದ ಛತ್ರಿಯನ್ನು ಸ್ನೇಹಿತರು ಮತ್ತು ಬಂಧುಗಳ ಮುಂದೆ ಪ್ರದರ್ಶಿಸಲು ಎಲ್ಲರೂ ಮುಜುಗರ ಪಡುತ್ತಾರೆ. ಅಂತಹ ಸಂದರ್ಭದಲ್ಲಿ ಈ ಛತ್ರಿಗಾರರು ಆಪದ್ಬಂಧುಗಳಂತೆ ಗೋಚರಿಸುತ್ತಾರೆ.
ಧಾರಾಕಾರ ಮಳೆಯ ಅಬ್ಬರದ ನಡುವೆಯೂ ಹೆಗಲಿನಲ್ಲೋ, ಕಂಕುಳಿನಲ್ಲೋ ಛತ್ರಿ ಸಿಕ್ಕಿಸಿಕೊಂಡು ಮುರುಕಾದ ಛತ್ರಿಯನ್ನು ದುರಸ್ತಿ ಮಾಡುವ ಈ ಛತ್ರಿಗಾರರು ಸದಾ ಶ್ರಮ ಜೀವಿಗಳು. ಕಡ್ಡಿ ಮುರಿದ, ಕೋಲು ತುಂಡಾದ, ಅರವೆ ಹರಿದ, ಪಿನ್ನ ಕಿತ್ತು ಹೋದ , ಕುದುರೆ ಕುಂಟಾಗಿ ಇದ್ದಕ್ಕಿದ್ದಂತೆ ಮಡಚಿಕೊಳ್ಳುವ ಛತ್ರಿಗಳನ್ನೂ ಸಹ ಚಕ ಚಕನೆ ದುರಸ್ತಿ ಮಾಡುವ ಇವರು ಆಧುನಿಕ ಹೊಸ ವಿನ್ಯಾಸದ ಛತ್ರಿಗಳನ್ನು ಸಹ ದುರಸ್ತಿ ಮಾಡುವ ಚಾಕ ಚಕ್ಯತೆ ಸಾಧಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಅಗ್ಗದ ಬೆಲೆಯ ಛತ್ರಿಗಳು ಮಾರುಕಟ್ಟೆ ಪ್ರವೇಶಿಸಿ ಹಳೆ ಛತ್ರಿ ದುರಸ್ತಿಗೆ ಗ್ರಾಹಕರು ಬಾರದಿದ್ದಾಗ ಕಂಗಾಲಾದ ಇವರು ಈಗ ಅಗ್ಗದ ಛತ್ರಿಯಿಂದ ಜನ ದೂರವಾದ ಹಿನ್ನೆಲೆಯಲ್ಲಿ ಮತ್ತೆ ತುತ್ತು ನೀಡುವ ಕೆಲಸ ಸಿಕ್ಕು ನಿಟ್ಟುಸಿರಿಡುತ್ತಿದ್ದಾರೆ.
ಗಡಗಡೆ, ಕಡ್ಡಿ, ಪಿನ್ನ, ಹಿಡಿಕೆ, ಸೂಜಿ,ದಾರ, ಕಂಬ, ಬಟನ್ ಇತ್ಯಾದಿ ಸಾಮಗ್ರಿಗಳನ್ನೇ ಬಂಡವಾಳವಾಗಿಸಿಕೊಳ್ಳುವ ಇವರು ಸದಾ ಗಿರಾಕಿಗಾಗಿ ಕಾಯುತ್ತಿರುತ್ತಾರೆ. ದಿನವೊಂದಕ್ಕೆ ೮೦ ರಿಂದ ೩೦೦ ರೂ.ವರೆಗೂ ದುಡಿಯುವ ಇವರು ಅದೆಷ್ಟೋ ದಿನ ಗಿರಾಕಿಯೇ ಇಲ್ಲದೆ ಬೆಳಿಗ್ಗೆಯಿಂದ ಸಂಜೆಯ ವರೆಗೆ ಕಾದು ಕುಳಿತು ಬರಿಗೈಯಲ್ಲಿ ಹಿಂದಿರುಗುವುದೂ ಉಂಟು. ೨೫ ರಿಂದ ೩೦ ರೂ.ಒಳಗೆ ದುರಸ್ತಿಯಾಗುವಂತಿದ್ದರೆ ಮಾತ್ರ ದುರಸ್ತಿ ಮಾಡಿ ಇಲ್ಲವಾದರೆ ಬೇಡ ಹೊಸದು ಖರೀದಿಸುತ್ತೇವೆ ಎಂದು ಜನ ಆರಂಭದಲ್ಲೆ ತಿಳಿಸುತ್ತಾರೆ. ಈ ಚಿಕ್ಕ ಬಜೆಟ್‌ನಲ್ಲಿ ಜಾಣ್ಮೆಯಿಂದ ದುರಸ್ತಿ ಮಾಡುವ ಇವರು ಸದಾ ಗಿರಾಕಿಯ ಚಿಂತೆಯಲ್ಲೇ ಕಳೆಯುತ್ತಾರೆ.
ಚೆನ್ನಾಗಿ ಮಳೆ ಬೀಳುತ್ತಿದ್ದರೆ ಮಾತ್ರ ತಮಗೆ ದುಡಿಮೆ. ಬಿಸಿಲು ಆರಂಭವಾದರೆ ದುಡಿಮೆಯೇ ಇಲ್ಲ. ಕೂಲಿ ನಾಲಿ ಮಾಡುವುದು ಗೊತ್ತಿಲ್ಲ. ಮನೆ ಮನೆ ಬಾಗಿಲಿಗೆ ಹೋಗಿ ಛತ್ರಿ ದುರಸ್ತಿ ಮಾಡುತ್ತೇವೆ. ಎಣ್ಣೆ ಡಬ್ಬಕ್ಕೆ ಮುಚ್ಚಳ ಮಾಡುವುದು, ಬೆಸುಗೆ ಹಾಕುವುದು ಇತ್ಯಾದಿ ಕೆಲಸ ಮಾಡಿ ಹೊಟ್ಟೆ ಪಾಡಿಗೆ ಪರದಾಡುತ್ತೇವೆ ಎನ್ನುತ್ತಾರೆ ಸುಮಾರು ೩೦ ವರ್ಷದಿಂದ ಛತ್ರಿ ದುರಸ್ತಿ ಕಾರ್ಯ ಮಾಡುತ್ತಿರುವ ಹೊಸೂರಿನ ಶಿವಲಿಂಗ ಜೋಗಿ.
ಛತ್ರಿ ದುರಸ್ತಿಗೆ ಗಿರಾಕಿ ಸಿಗದಿದ್ದರೆ ಗುಜರಿ ಆರಿಸುವುದು, ಕ್ಯಾಂಡಿ ಮಾರುವುದು ಇತ್ಯಾದಿ ಕೆಲಸದಲ್ಲಿ ತೊಡಗುತ್ತೇವೆ ಎನ್ನುತ್ತಾರೆ ೬೫ ರ ಇಳಿವಯಸ್ಸಿನ ಛತ್ರಿಗಾರ ಸಂತೆ ಮಾರುಕಟ್ಟೆ ತುಕಾರಾಂ.
ಛತ್ರಿ ದುರಸ್ತಿ ಇಲ್ಲದಿದ್ದ ಕಾಲದಲ್ಲಿ ಬ್ಯಾಟರಿ ದುರಸ್ತಿ, ಟ್ರಂಕ್ ಮತ್ತು ಕಬ್ಬಿಣದ ಡಬ್ಬ ದುರಸ್ತಿ, ಎಣ್ಣೆ ಡಬ್ಬದಿಂದ ಪೆಟ್ಟಿಗೆ ಅಥವಾ ಬಾಕ್ಸ್ ಮಾಡಿಕೊಡುವುದು, ಪ್ಲಾಸ್ಟಿಕ್ ಬಕೆಟ್ ಕೊಡಗಳಿಗೆ ಬೆಸುಗೆ ಹಾಕುವುದು ಇತ್ಯಾದಿ ಕೆಲಸದಲ್ಲಿ ತೊಡಗಿ ಬೀದಿ ಬೀದಿ ಊರೂ ಊರು ಸುತ್ತುತ್ತೇವೆ ಎನ್ನುತ್ತಾರೆ ಶಿವಮೊಗ್ಗದ ಮಲ್ಲೇಶಿ.
ಚಿತ್ರ-ಲೇಖನ
ಎನ್.ಡಿ ಹೆಗಡೆ ಆನಂದಪುರ