-ಚಿನ್ಮಯ.ಎಂ.ರಾವ್ ಹೊನಗೋಡು
ಜಗತ್ತಿನಲ್ಲಿ ಹಲವು ಶೈಲಿಯ ಶಾಸ್ತ್ರೀಯ ಹಾಗು ಜಾನಪದ ನೃತ್ಯಗಳಿವೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅದರಲ್ಲೂ ಭಾರತದ ಮಹಾನಗರಗಳಲ್ಲಿ ಯುವಜನರು ಸಮಾಕಾಲೀನ ಅಥವ ಆಧುನಿಕ ನೃತ್ಯದೆಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಶಾಲಾಜೀವನದ ಶಿಸ್ತುಬದ್ಧ ಚೌಕಟ್ಟಿನಿಂದ ಹೊರಬಂದು ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಮುಕ್ತವಾಗಿ ಹೊಸ ಕನಸುಗಳಲ್ಲಿ ತೇಲುವ ಯುವ ಸಮೂಹ ಕಾಂಟೆಂಪರರಿ ಡ್ಯಾನ್ಸ್ ಕಲಿಯುವತ್ತ ಹೆಜ್ಜೆ ಹಾಕಿರುವುದು ಸೋಜಿಗವೆನಿಸುತ್ತಿದೆ. ಕಾರ್ಯಕ್ರಮಗಳ ಆಯೋಜಕರೂ ಕೂಡ ತಮ್ಮ ವೇದಿಕೆಗಳಲ್ಲಿ ಹತ್ತು ನಿಮಿಷವಾದರು ಸರಿ ,ಮನೋರಂಜನೆಗೆ ಸಮಾಕಾಲೀನ ನೃತ್ಯ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಹೋಗಿದ್ದಾರೆ. ಇನ್ನು ದುಂಬಾಲು ಬಿದ್ದು ದುಬಾರಿ ಮೊತ್ತಕ್ಕೆ ಟಿಕೇಟ್ ಖರೀದಿಸಿ ಗಂಟೆಗಟ್ಟಲೆ ಈ ನೃತ್ಯವನ್ನು ಸವಿದು ಬರುವವರಿಗೆ ನಮ್ಮಲ್ಲೇನು ಕೊರತೆಯಿಲ್ಲ. ಈ ನೃತ್ಯ ಕಲೆಯ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕೋಣವೆಂದು ಹೋದಾಗ ವಿಚಾರ ತುಂಬಾ ಆಸಕ್ತಿದಾಯಕವಾಗಿತ್ತು.
* ಸಮಕಾಲೀನ ನೃತ್ಯ (ಕಾಂಟೆಂಪರರಿ ಡ್ಯಾನ್ಸ್) ಹಾಗಂದರೇನು?
೨೦ನೆಯ ಶತಮಾನದ ಆರಂಭದಲ್ಲಿ ಆಧುನಿಕ ನೃತ್ಯ ಹಾಗು ಅಂದಿನ ನೃತ್ಯ ತಂತ್ರಗಳಿಂದ ಉದ್ಭವಗೊಂಡ ಒಂದು ವಿಚಿತ್ರ…ವಿಭಿನ್ನ…ವಿಶಾಲ…ಇದು ಇಷ್ಟೇ…ಇದು ಹೀಗೇ…ಎಂದು ಅರ್ಥೈಸಲಾಗದಂತಹ ಒಂದು ನೃತ್ಯ ಪದ್ಧತಿಯೇ ಸಮಾಕಲೀನ ನೃತ್ಯ ಪದ್ಧತಿ. ಬ್ಯಾಲೇಟ್ ನೃತ್ಯದ ಕಟ್ಟುಪಾಡಿಗಳಿಂದ ಹೊರತಾಗಿ…ಆದರೂ ಅದರ ಶಾಸ್ತ್ರೀಯತೆಯ ಅಂಶಗಳನ್ನೊಳಗೊಂಡು ರೂಪುಗೊಂಡ ಈ ನೃತ್ಯ ಶೈಲಿಯಲ್ಲಿ ನರ್ತಕರು ಅವರ ತನುಮನದ ಭಾವನೆಗಳನ್ನು ಹೊಸ ರೀತಿಯಲ್ಲಿ ಹೊರ ಹಾಕಲು ನೃತ್ಯದ ಹೊಸ ಮಜಲೊಂದನ್ನು ಕಂಡುಕೊಂಡರು. ಹೀಗೆ ಆವಿರ್ಭವಿಸಿದ ನೃತ್ಯವೇ ಸಮಾಕಾಲೀನ ನೃತ್ಯ. ಇಸಾದೋರಾ ದುನ್‌ಕಾನ್ ಹಾಗು ಮರ್ತ ಗ್ರಹಮ್ ಈ ಪದ್ಧತಿಯ ಪ್ರಮುಖ ಪರಿಶೋಧಕರೆನ್ನಬಹುದು.
ಯಾವುದೇ ರೀತಿಯ ಶಾಸ್ತ್ರೀಯ ನೃತ್ಯ ಅಥವ ಬ್ರೇಕ್ ಡ್ಯಾನ್ಸ್ ಬಲ್ಲವರೂ ಸಮಾಕಾಲೀನ ನೃತ್ಯವನ್ನು ಕಲಿಯಬಹುದು. ಆ ತಳಹದಿಯ ಮೇಲೆಯೇ ದೇಹವನ್ನು ಬೇರೆ ಬೇರೆ ರೀತಿಯಲ್ಲಿ ಬೆಂಡ್ ಮಾಡುವುದು ಹಾಗು ಯೋಗದ ತಂತ್ರಗಳನ್ನು ಅಭ್ಯಾಸ ಮಾಡುವುದು ಇದರ ಕಲಿಕೆಯ ತಳಹದಿ. ದೇಹ ಮತ್ತು ಮನಸ್ಸಿನ ಮೇಲೆ ಕೇಂದ್ರೀಕರಿಸಿಕೊಂಡು ಸಂಪ್ರದಾಯದ ಸಂಬಂಧವನ್ನು ಆದಷ್ಟು ಕಳಚಿಕೊಂಡು ನರ್ತನವನ್ನು ಬೆಳೆಸುತ್ತ ಸಾಧನೆ ಮಾಡುತ್ತಾ ಸಾಗಬೇಕಾದ ಹಾದಿ ಅನಂತ ಎಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಸುಲಭವೂ ಅಲ್ಲದ ಕಷ್ಟವೂ ಅಲ್ಲದ ಕಷ್ಟಸಾಧ್ಯ ವಿದ್ಯೆ ಸಮಾಕಾಲೀನ ನೃತ್ಯ.
*ಭಾರತದಲ್ಲಿ ಸಮಕಾಲೀನ ನೃತ್ಯದ ಉಗಮ?
ಭಾರತದಲ್ಲಿ ಕಿರು ಇತಿಹಾಸವನ್ನಷ್ಟೇ ಹೊಂದಿರುವ ಸಮಾಕಾಲೀನ ನೃತ್ಯ ಇಲ್ಲಿ ಇನ್ನೂ ಕಣ್ ತೆರೆಯುತ್ತಿದೆ ಎಂದಷ್ಟೇ ಹೇಳಬಹುದು. “ಆಧುನಿಕ ನೃತ್ಯ” ಹಾಗು “ಸಮಾಕಾಲೀನ ನೃತ್ಯ”ದ ಬಗ್ಗೆ ಅಭಿಪ್ರಾಯ, ಅಭಿರುಚಿ ಇಲ್ಲಿ ನರ್ತಕರಿಂದ ನರ್ತಕರಿಗೆ ಭಿನ್ನವಾಗುತ್ತದೆ. ಭಾವನೆಗಳನ್ನು ಆ ಬಗ್ಗೆ ವ್ಯಕ್ತಪಡಿಸುವಾಗ ಭಿನ್ನಾಬಿಪ್ರಾಯದ ಮಾತುಗಳೂ ಕೇಳಿಬರುತ್ತಿವೆ. ತಮ್ಮ ತನವನ್ನು ಎಂದಿಗೂ ಬಿಟ್ಟು ಕೊಡದ ಭಾರತೀಯರು ದುರಭಿನಾಗಳೇನಲ್ಲ. ಹಿಂದಿನಿಂದಲೂ ಒಳ್ಳೆಯ ಕಲೆ ಸಂಸ್ಕೃತಿಗಳನ್ನು ಸ್ವಾಗತಿಸುತ್ತಲೇ ಬಂದಿದ್ದಾರೆ. ವಿಶ್ವದ ಯಾವ ಮೂಲೆಯಿಂದಾದರೂ ಬರಲಿ ಅಥವ ಅದು ತನ್ನ ಶತ್ರು ರಾಷ್ಟ್ರದ ಕಲೆಯೇ ಆಗಿರಲಿ ಅದರಲ್ಲಿರುವ ಗುಣಾತ್ಮಕ ಅಂಶಗಳನ್ನು ತನ್ನ ಕಲೆಯೊಟ್ಟಿಗೆ ಮೈಗೂಡಿಸಿಕೊಂಡು, ತನ್ನದನ್ನೂ ಅಲ್ಲಿ ಬೆರೆಸಿ ಬೇರೆಯದೇ ಆದ ರೀತಿಯಲ್ಲಿ ಅದಕ್ಕೊಂದು ಹೊಸ ರೂಪು ಕೊಟ್ಟು ಉಳಿಸಿ ಬೆಳೆಸುವುದರಲ್ಲಿ ಭಾರತೀಯ ಕಲಾವಿದರು ಎಂದೆಂದೂ ಮುಂದು ಎಂದು ಹೆಮ್ಮೆಯಿಂದ ಹೇಳಬಹುದು. ಹೀಗೆ ಹುಟ್ಟಿರುವುದೇ “ಭಾರತೀಯ ಸಮಕಾಲೀನ ನೃತ್ಯ”.
“ಉದಯ” ಶಂಕರ-ಭಾರತೀಯ ಸಮಕಾಲೀನ ನೃತ್ಯದ ಹರಿಕಾರ
ಭಾರತದಲ್ಲಿ ಸಮಾಕಾಲೀನ ನೃತ್ಯ ಉದಯಿಸಿದ್ದು ೨೦ ನೆಯ ಶತಮಾನದ ಮಧ್ಯಭಾಗದಲ್ಲಿ “ಉದಯ ಶಂಕರ” ಅವರಿಂದ. ಹಾಗಾಗಿ ಅವರನ್ನು “ಭಾರತೀಯ ಸಮಕಾಲೀನ ನೃತ್ಯದ ಜನಕ” ಎಂದೇ ಬಣ್ಣಿಸುತ್ತಾರೆ. ಭರತನಾಟ್ಯಮ್ ಹಾಗು ಕಥಕ್ಕಳಿಯಲ್ಲಿ ಪರಿಣಿತಿ ಹೊಂದಿದ್ದ ಉದಯ ಶಂಕರ ಅವರದ್ದು ಕ್ರಿಯಾಶೀಲ ಆದರ್ಶ ವ್ಯಕ್ತಿತ್ವವಾಗಿತ್ತು. ಅವರಲ್ಲಿದ್ದ ವಿಶಾಲ ದೃಷ್ಟಿಕೋನ ಭಾರತದಲ್ಲಿ ಈ ನೃತ್ಯದ ಉಗಮಕ್ಕೆ ನಾಂದಿಯಾಯಿತೆನ್ನಬಹುದು. ಸ್ವತಹ ಪರಿಶೋಧನೆಯ ಪರಿಶ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಉದಯ ಶಂಕರ ತಮ್ಮ ವಿದ್ಯಾಲಯಕ್ಕೆ ಬೇರೆ ಬೇರೆ ನಾಟ್ಯ ಶೈಲಿಯ ನಾಟ್ಯಾಚಾರ್ಯರುಗಳು ಬಂದು ಪಾಠಮಾಡಿ ಹೋಗುವಂತಹ ಶಿಬಿರಗಳನ್ನೇರ್ಪಡಿಸುತ್ತಿದ್ದರಂತೆ. ಅದರ ಫಲಶೃತಿಯಾಗಿ ಇಂದು ಭಾರತೀಯ ಸಮಕಾಲೀನ ನೃತ್ಯ ಈ ಹಂತಕ್ಕೆ ಬಂದು ತಲುಪಿದೆಯೆನ್ನಬಹುದು.
ಇತ್ತೀಚೆಗಿನ ವರ್ಷಗಳಲ್ಲಿ ಕಲ್ಕತ್ತಾದ ಡಾ. ಮಂಜುಶ್ರೀ ಚಕಿ ಸರ್ಕಾರ್ “ನವ ನೃತ್ಯಮ್” ಎಂಬ ಹೊಸ ಹೆಸರಿನಡಿ ಕಾಂಟೆಂಪರರಿ ನೃತ್ಯಕ್ಕೆ ಹೊಸ ರೂಪ ನೀಡಿ ಅವರ ಪುತ್ರಿ ರಂಜಬತಿ ಸರ್ಕಾರ್ ಜೊತೆಗೂಡಿ ನೃತ್ಯಸಂಯೋಜಿಸಿ ಪ್ರದರ್ಶಿಸಿದ್ದರು. ಇನ್ನೇನು ನವ ನೃತ್ಯಮ್ ಪ್ರಚಲಿತಕ್ಕೆ ಬರುವಷ್ಟರಲ್ಲಿ ಅಮ್ಮ-ಮಗಳು ಇಬ್ಬರೂ ಅಕಾಲಿಕಮರಣಕ್ಕೀಡಾದರು. ಇದು ಕಾಂಟೆಂಪರರಿಯ ಬೆಳವಣಿಗೆಗೆ ದೊಡ್ಡ ಕೊಡಲಿಯೇಟಿನಂತಾಯಿತು.
ಆದರೂ ಇದರ ಬೆಳವಣಿಯೇನು ಕುಂಠಿತವಾಗಲಿಲ್ಲ.
ಬೆಂಗಳೂರು- ಭಾರತೀಯ ಸಮಕಾಲೀನ ನೃತ್ಯದ ಕೇಂದ್ರ ಸ್ಥಾನ ? !
ಪ್ರಸ್ತುತ ದೇಶದ ಮಹಾನಗರಿಗಳಲ್ಲಿ ಬೆಂಗಳೂರು ಸಮಾಕಾಲೀನ ನೃತ್ಯದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು. ಇಲ್ಲಿ ಇಂದಿನ ಯುವಕಲಾವಿದರು ಶಾಸ್ತ್ರೀಯ ಹಾಗು ಸಮಕಾಲೀನವನ್ನು ಸಮ ಸಮವಾಗಿ ಸಮೃದ್ಧಿಗೊಳಿಸುತ್ತಿರುವುದೇ ಇದಕ್ಕೆ ಸಾಕ್ಷಿ.
ರಾಧ ಶ್ರೀಧರ್, ಬಾನುಮತಿ, ಪದ್ಮಿನಿ ರವಿ, ಪದ್ಮಿನಿ ರಾಮಚಂದ್ರನ್ ಹಾಗು ಮಾಯಾ ರಾವ್ ಇವರೆಲ್ಲ ಬೆಂಗಳೂರಿನಲ್ಲಿ ಶಾಸ್ತ್ರೀಯ ನೃತ್ಯ ಪಟುಗಳಾಗಿ ಸಾಧಕರಾಗಿದ್ದರು. ಇವರ ಬಹುತೇಕ ಶಿಷ್ಯಂದಿರೆಲ್ಲಾ ಶಾಸ್ತ್ರೀಯ ನೃತ್ಯದ ಚೌಕಟ್ಟಿನೊಳಗೇ ಸಮಕಾಲೀನ ನೃತ್ಯದ ಪ್ರಯೋಗಕ್ಕಿಳಿದರು. ನಿರುಪಮಾ ರಾಜೇಂದ್ರ, ಸಂಧ್ಯಾ ಕಿರಣ್, ಮಧು ನಟರಾಜ್ ಹಾಗು ಮಾಧುರಿ ಉಪಾದ್ಯ ಈ ರೀತಿ ಹಲವು ಶಾಸ್ತ್ರೀಯ ಕಲಾವಿದರು ಈ ಸಾಲಿಗೆ ಸೇರಿದ ಅಗ್ರಗಣ್ಯರು. ಇವರೆಲ್ಲಾ ಪೂರ್ಣ ಪ್ರಮಾಣದ ಕಾಂಟೆಂಪರರಿ ಮಾಡಿದರು ಎನ್ನುವುದಕ್ಕಿಂತ ಶಾಸ್ತ್ರೀಯದ ಭಾಷೆಯಲ್ಲೇ ಇದನ್ನು ಸ್ಪರ್ಷಿಸಲಾರಂಭಿಸಿದರು.
ಪ್ರಸ್ತುತ ಬೆಂಗಳೂರಿನಲ್ಲಿ ಪ್ರಮುಖವಾಗಿ ೩ ಸಮಕಾಲೀನ ನೃತ್ಯ ಸಂಸ್ಥೆಗಳಿವೆ. ಮಾಧುರಿ ಉಪಾದ್ಯ ಅವರ ನೃತನೃತ್ಯ, ಜಯಚಂದ್ರನ್ ಅವರ ಅಟ್ಟಕ್ಕಲರಿ ಹಾಗು ಮಧು ನಟರಾಜ್ ಅವರ ನಾಟ್ಯ ಸ್ಟೆಮ್.
ಕಾಂಟೆಂಪರರಿ- ಟೆಂಪರರಿ !
ಬೆಂಗಳೂರಿನ ಕಲಾಕ್ಷಿತಿ ವಿಶ್ವದಲ್ಲೇ ಸುಪ್ರಸಿದ್ಧವಾದ ಭರತಾನಾಟ್ಯ ಕಲಾಶಾಲೆ. ನಾಟ್ಯಾಚಾರ್ಯ,ಹಿರಿಯ ಭರತನಾಟ್ಯ ವಿದ್ವಾಂಸ ಪ್ರೊಫ಼ೆಸರ್ ಎಂ.ಆರ್ ಕೃಷ್ಣಮೂರ್ತಿ
ಸಾವಿರಾರು ನೃತ್ಯ ಕಲಾವಿದರನ್ನು ಸೃಷ್ಟಿಸಿದ ಕಲಾತಪಸ್ವಿ ಎಂದೇ ಹೇಳಬಹುದು. ಕಾಂಟೆಂಪರರಿಯ ಬಗ್ಗೆ ಕಿಟ್ಟು ಸಾರ್ ( ಅವರನ್ನು ಹೀಗೆ ಪ್ರೀತಿಯಿಂದ ಕರೆಯುತ್ತಾರೆ ) ಅವರ ಮನದಾಳವನ್ನು ಹೊಕ್ಕಾಗ..
ಕಾಂಟೆಂಪರರಿ ಡ್ಯಾನ್ಸ್ ಎನ್ನುವ ಹೆಸರಿನಲ್ಲೇ “ಟೆಂಪರರಿ” ಇದೆ. ಇದು ಶಾಶ್ವತವಲ್ಲ. ಮೂಲ ಶಾಸ್ತ್ರೀಯ ನೃತ್ಯಗಳನ್ನು ಕುರೂಪಗೊಳಿಸುವ ಒಂದು ಕಲೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ. ಆದರೆ ಇಂದಿನ ಯುವ ಕಲಾವಿದರು ಹಿಂದು ಮುಂದಿಲ್ಲದೆ ಕೇವಲ ಜನಗಳಿಗೆ ಇಷ್ಟವಾಗುತ್ತಿದೆ ಎಂಬ ನೆಪವೊಡ್ಡಿ ಕಾಂಟೆಂಪರರಿಯತ್ತ ಮುಖಮಾಡುತ್ತಿರುವುದು ದುರಂತವೇ ಸರಿ.
ಭರತನಾಟ್ಯ ಅಥವ ಪ್ರಾಚೀನ ಕಾಲದಿಂದ ಪರಂಪರಾಗತವಾಗಿ ಬಂದಂತಹ ಯಾವುದೇ ನೃತ್ಯಗಳಿರಬಹುದು ಅದಕ್ಕೊಂದು ಶಾಸ್ತ್ರದ ಚೌಕಟ್ಟಿದೆ. ಅದರೊಳಗೊಂದು ಆಧ್ಯಾತ್ಮದ ಸೌಂದರ್ಯ, ಪರಮಾರ್ಥದ ಆಂತರ್ಯ, ಗಾಂಭೀರ್ಯವಿದೆ. ಅವುಗಳನ್ನು ಸಾಧನೆ ಮಾಡುವುದು ದೇವರ ಪೂಜೆ ಮಾಡಿದಂತೆ. ದೇವರ ಗುಡಿಯಲ್ಲಿ ದೇವರ ಪೂಜೆ ಮಾಡಬೇಕೆ ವಿನಹ ಇನ್ನೇನನ್ನೋ ಮಾಡಬಾರದು. ಒಂದು ನಿರ್ದಿಷ್ಟವಾದ ಶಾಸ್ತ್ರದ ಚೌಕಟ್ಟೇ ಇಲ್ಲದ ಇದನ್ನು ಯಾರು ಎಲ್ಲಿ ಹೇಗೆ ಬೇಕಾದರೂ ಮಾಡಬಹುದು ಎಂಬಂತಿದೆ. ಇದರ ಬೆನ್ನು ಹತ್ತಿ ಹೋದವರು ತಮ್ಮ ಮೂಲ ತಾಯಿಯನ್ನೇ ಮರೆತಂತೆ. ನಮ್ಮ ಕಲಾಕ್ಷಿತಿಯ ವಿದ್ಯಾರ್ಥಿಗಳಿಗೆ ನಾನು ಇದನ್ನು ಪ್ರೋತ್ಸಾಹಿಸುವುದಿಲ್ಲ. ನಮ್ಮ ಶಾಸ್ತ್ರೀಯ ನೃತ್ಯವನ್ನು ಶ್ರದ್ಧೆಯಿಂದ ಸಾಧನೆ ಮಾಡುವವರಿಗೆ ಅದು ಇಷ್ಟವಾಗುವುದಿಲ್ಲ ಕೂಡ. ಆದರೂ ಇಲ್ಲಿ ಕಲಿತು ಹೋದ ಹಿರಿಯ ವಿದ್ಯಾರ್ಥಿಗಳಲ್ಲಿ ಕೆಲವೇ ಕೆಲವರು ಅದನ್ನು ಮಾಡಲಾರಂಭಿಸಿದ್ದಾರೆ. ಅದು ಅವರವರ ಅಭಿರುಚಿ. ಒಂದು ಹಂತದ ನಂತರ ಯಾರನ್ನೂ ತಡೆಯಲಾಗುವುದಿಲ್ಲ. ಅದು ಅವರ ಸ್ವಾಂತಂತ್ರ್ಯವನ್ನು ಕಿತ್ತುಕೊಂಡಂತೆ. ಹಾಗಂತ ನಾನು ಇದನ್ನು ಸಮ್ಮತಿಸುವುದಿಲ್ಲ.
**************
ಚೌಕಟ್ಟಿಲ್ಲ..ನಿಜ, ಆದರೆ ಕ್ರಿಯೇಟಿವಿಟಿಯೇ ಅದರ ಜೀವಾಳ
ಮೂಲತಹ ಭರತನಾಟ್ಯವನ್ನು ಸಾಧನೆ ಮಾಡಿರುವ ರೂಪಾ ಅಯ್ಯರ್ ಮುಖಪುಟ ಚಿತ್ರದ ರೂವಾರಿಯಾಗಿ ಚಲನಚಿತ್ರ ನಿರ್ದೇಶಕಿಯಾಗಿಯೂ ಸೈ ಎನಿಸಿಕೊಂಡವರು. ಯಾವುದನ್ನೂ ವಿಮರ್ಶಾತ್ಮಕ ದೃಷ್ಟಿ ಕೋನದಿಂದ ಅಳೆದು ತೂಗಿಯೇ ಒಪ್ಪಿಕೊಳ್ಳುವ ರೂಪಾಹೀ॒ಗೆ ವಿವರಿಸುತ್ತಾರೆ..ಸಮಕಾಲೀನ ನೃತ್ಯದ ಸ್ವರೂಪ..
ನಾನು ಇಷ್ಟಪಟ್ಟಂತಹ ನೃತ್ಯ ಶೈಲಿಯದು. ಕಾಂಟೆಂಪರರಿಯಲ್ಲಿ ನಾವು ಎಲ್ಲಾ ಶೈಲಿಯ ನೃತ್ಯಗಳನ್ನೂ ಅಳವಡಿಸಿಕೊಳ್ಳಬಹುದು. ಅದಕ್ಕೊಂದು ಚೌಕಟ್ಟಿಲ್ಲ..ನಿಜ. ಆದರೆ ಕ್ರಿಯೇಟಿವಿಟಿಯೇ ಅದರ ಜೀವಾಳ. ಇಂದು ಜನಮನಕ್ಕೆ ತಲುಪುತ್ತಿರುವ ಜನಪ್ರಿಯ ನೃತ್ಯವದು. ಏಕೆಂದರೆ ಈವತ್ತಿನ ದಿನ ಒಂದೇ ಶೈಲಿಯ ನೃತ್ಯವನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕಲಾಸಕ್ತರು ನೋಡಲು ಇಷ್ಟಪಡುವುದಿಲ್ಲ.
ನಿರುಪಮ ರಾಜೇಂದ್ರ ಹಾಗು ಬಾನುಮತಿಯಂತಹ ಶಾಸ್ತ್ರೀಯ ನೃತ್ಯ ಕಲಾವಿದರೇ ಇದರ ಮೌಲ್ಯವನ್ನು ಅರಿತು ಅಳವಡಿಸಿಕೊಂಡಿದ್ದಾರೆ. ಸಮಕಾಲೀನ ನೃತ್ಯ ಪ್ರದರ್ಶಿಸುವುದು ತಪ್ಪೆಂದು ನನಗೆ ಅನಿಸುತ್ತಿಲ್ಲ.
ವೇದಗಳ ಸಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಿಳಿಯಪಡಿಸಬೇಕೆಂದು ಸ್ಕ್ರಿಪ್ಟ್ ತಯಾರಿಸಿ ಕಾಂಟೆಂಪರರಿ ನೃತ್ಯದ ಮೂಲಕವೇ ಇಡೀ ವಿಶ್ವದಾದ್ಯಂತ ನಾವು ಪ್ರದರ್ಶನ ನೀಡಿದ್ದೇವೆ. ಯಶಸ್ವಿಯಾಯಿತು !
ಭಾರತ ಸಾಂಸ್ಕೃತಿಕವಾಗಿ ವೈವಿಧ್ಯತೆಯಿಂದ ಕೂಡಿದ ಶ್ರೀಮಂತ ರಾಷ್ಟ್ರ. ಇದು ನೃತ್ಯಕ್ಕೂ ಹೊರತಲ್ಲ. ನಮ್ಮಲ್ಲಿರುವಷ್ಟು ನೃತ್ಯ ಪ್ರಾಕಾರಗಳು ಜಗತ್ತಿನ ಯಾವ ದೇಶದಲ್ಲೂ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಭಾರತೀಯ ಸಮಾಕಾಲೀನ ನೃತ್ಯ ಭಾರತದ ಎಲ್ಲಾ ನೃತ್ಯ ಪರಂಪರೆಗಳ ಒಟ್ಟು ಸ್ವರೂಪ. ಅದಕ್ಕಾಗಿಯೇ ಏನೊ ವಿಶ್ವದೆಲ್ಲೆಡೆ ಜನ ಭಾರತೀಯ ಸಮಕಾಲೀನ ನೃತ್ಯವನ್ನು ತುಂಬಾ ಇಷ್ಟ ಪಡುತ್ತಾರೆ. ಹಾಗಂತ ನಾವು ಮೈಮರೆಯದೆ ನಮ್ಮ ಶಾಸ್ತ್ರೀಯ ನೃತ್ಯವನ್ನೂ ತಳಪಾಯವಾಗಿ ಸಾಧನೆ ಮಾಡುತ್ತಾ ಸಮಕಾಲೀನ ನೃತ್ಯವನ್ನೂ ಮುನ್ನಡೆಸಬೇಕಾಗಿದೆ. ಅದೇ ಈಗ ನಮ್ಮ ಮುಂದಿರುವ ಮಹತ್ತರ ಜವಾಬ್ದಾರಿಯಾಗಿದೆ.
************
ಫ್ರೂಟ್ ಸಲಾಡ್ ಇದ್ದ ಹಾಗೆ…
ಸಾಗರದ ನವೀನ್ ಹೆಗ್ಡೆ ಈಗಷ್ಟೆ ಭರತನಾಟ್ಯವನ್ನು ವಿದ್ವತ್ ಹಂತದಲ್ಲಿ ಸಾಧನೆ ಮಾಡುತ್ತಿರುವ ಯುವ ನರ್ತಕ. ಇನ್ನೂ ಕಲಾಕ್ಷೇತ್ರಕ್ಕೆ ಕಾಲಿಡುತ್ತಿರುವ ಈ ನವಯುವಕನ ಅಭಿಪ್ರಾಯವೇನೆಂದು ಕೇಳಿದಾಗ॒
ಕಾಂಟೆಂಪರರಿ ಡ್ಯಾನ್ಸ್ ಅನ್ನೋದು ಇತ್ತೀಚೆಗೆ ನಮ್ಮ ದೇಶಕ್ಕೆ ಬಂದಂತಹ ಒಂದು ಕ್ರಿಯೇಟಿವಿಟೀ. ಇದರ ಗಂಧ ಗಾಳಿನು ಸಹ ನಮ್ಮ ದೇಶದಲ್ಲಿ ಇರಲಿಲ್ಲ. ಆದರೆ ವಿದೇಶಗಳಲ್ಲಿ ಪ್ರಚಲಿತದಲ್ಲಿತ್ತು. ಇಂದಿನ ಪೀಳಿಗೆ ಇಷ್ಟ ಪಡುವಂತಹ ಕಲೆ ಆದ್ರೂ…ಕಲಾಕ್ಷೇತ್ರದಂತಹ ಶಾಸ್ತ್ರೀಯ ನೃತ್ಯ ಶಿಕ್ಷಣ ಕೇಂದ್ರಗಳು ಇದನ್ನು ಒಪ್ಪುತ್ತಿಲ್ಲ. ಹಾಗಾಂದ ಮಾತ್ರಕ್ಕೆ ಕಾಂಟೆಂಪರರಿ ಡ್ಯಾನ್ಸ್ ಮಾಡೋದು ತಪ್ಪು ಅಂತ ಅಲ್ಲ. ಅದೊಂದು ಕ್ರಿಯಾಶೀಲತೆ. ಅಂದ್ರೆ ಒಳ್ಳೆ ರುಚಿಯಾದ ಫ್ರೂಟ್ ಸಲಾಡ್ ಇದ್ದ ಹಾಗೆ. ಬೇರೆ ಬೇರೆ ಹಣ್ಣುಗಳು ಮಿಕ್ಸ್ ಆದ ಸುಂದರವಾದ ರುಚಿಯ ಹಾಗೆ. ಕಾಂಟೆಂಪರರಿ ಡ್ಯಾನ್ಸ್ ಸಹ ಸಾಮಾನ್ಯವಾಗಿ ಕಳರಿ ಫೈಟ್, ಕಥಕ್, ಭರತ ನಾಟ್ಯ, ಕರಣ, ಚಾರಿಗಳ ಪ್ರಯೋಗವನ್ನು ಬಳಸಿಕೊಂಡಿದೆ. ಅದಕ್ಕೆ ಅದರದೇ ಆದ ಚೌಕಟ್ಟು ಇಲ್ಲವೆಂದ ಮಾತ್ರಕ್ಕೆ ಹೇಗೆ ಬೇಕೋ ಹಾಗೆ ಅದನ್ನು ದುರ್ಬಳಕೆ ಮಾಡಬಾರದು. ನಾವೇ ಒಂದು ಚೌಕಟ್ಟನ್ನು ರೂಪಿಸಿಕೊಂಡು ಅರ್ಥಪೂರ್ಣಗೊಳಿಸಿಕೊಂಡರೆ ಒಳಿತೆನಿಸುತ್ತದೆ.
*****************
ತಡವಾಗಿಯಾದರು ನಮ್ಮವರು ಎಚ್ಚೆತ್ತುಕೊಳ್ಳುತ್ತಿದ್ದಾರಲ್ಲ ಎಂಬುದೇ ಸಮಾಧಾನಕರ ಸಂಗತಿ..
ವಿಕ್ಟೋರಿಯ ಡಿಸೋಜಾ ಕಳೆದ ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ. ದೇಶದ ಹಲವಾರು ದೊಡ್ಡ ವೇದಿಕೆಗಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟಿದ್ದಾರೆ. ಅಣ್ಣ ಹಜಾರೆ ಅವರ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಟ್ಟ ಕೀರ್ತಿ ವಿಕ್ಟೋರಿಯಾ ಡಿಸೋಜಾ ಅವರಿಗೆ ಸಲ್ಲುತ್ತದೆ. ಸಾಂಸ್ಕೃತಿಕ ಲೋಕದಲ್ಲೇ ತೊಡಗಿಸಿ ಕೊಂಡಿರುವ, ಅದರ ನಾಡಿಮಿಡಿತವನ್ನರಿತ ಇಂತಹ ಅನುಭವಿಯೊಬ್ಬರ ಅನುಭವದ ಮಾತು…
ಕಾರ್ಪೊರೇಟ್ಸ್‌ಗಳು ಸಂಜೆಯ ಪಾರ್ಟಿಗಳಿಗೆ, ಮದುವೆ ಮನೆಗಳಿಗೆ, ಚಲನಚಿತ್ರಗಳ ಚಿತ್ರೀಕರಣಗಳಿಗೆ ಹೆಚ್ಚಾಗಿ ಕಾಂಟೆಂಪರರಿ ಡ್ಯಾನ್ಸ್ ಬೇಕೆಂದು ಕೇಳುತ್ತಾರೆ. ಈಗ ಹೊಸ ಟ್ರೆಂಡ್ ಆರಂಭವಾಗಿದೆ. ಆಫ಼ೀಸ್‌ಗಳಿಗೇ ತರಬೇತುದಾರರನ್ನು ಕರೆಸಿ ತಮ್ಮ ಕಛೇರಿಯ ಉದ್ಯೋಗಿಗಳಿಂದಲೇ ಕಾಂಟೆಂಪರರಿ ಡ್ಯಾನ್ಸ್ ಮಾಡಿಸುವ ಪರಿಪಾಠ. ತಮ್ಮವರೇ ವೇದಿಕೆಗಳಲ್ಲಿ ನರ್ತಿಸುತ್ತಾರೆಂದು ಇತರ ಉದ್ಯೋಗಿಗಳೂ ಉತ್ಸಾಹಿತರಾಗಿ ಕಾರ್ಯಕ್ರಮದಲ್ಲಿ ಸಕ್ರಿಯರಾಗುತ್ತಾರೆನ್ನುವ ಉದ್ದೇಶ ಇದರ ಹಿಂದೆ ಅಡಗಿದೆ.
ಅದೇ ಗಜ಼ಲ್ ನೈಟ್ಸ್, ಸೈಲೆಂಟ್ ಇವನಿಂಗ್ಸ್, ಫ಼್ಯಾಮಿಲಿ ಆನಿವರ್ಸರಿಗಳಲ್ಲಿ ಅಥವ ೫೦ ಕ್ಕಿಂತ ಹೆಚ್ಚು ವಯಸ್ಸಿನವರು ಇರುವಲ್ಲಿ ಶಾಸ್ತ್ರೀಯ ನೃತ್ಯವೇ ಇರಬೇಕೆನ್ನುತ್ತಾರೆ. ಕಂಪೆನಿಗಳಿಗೆ ವಿದೇಶಿ ಕ್ಲೈಂಟ್ಸ್ ಬಂದಾಗ ನಮ್ಮ ಸಾಂಸ್ಕೃತಿಕ ನೃತ್ಯವನ್ನು ಅವರಿಗೆ ಪರಿಚಯಿಸಬೇಕೆಂದು ಶಾಸ್ತ್ರೀಯ ನೃತ್ಯ ಕಲಾವಿದರ ಪ್ರದರ್ಶನವನ್ನೇರ್ಪಡಿಸುತ್ತಾರೆ.
ಜನ ಕಾಂಟೆಂಪರರಿಯತ್ತ ಹೋಗುತ್ತಿರುವುದು ಎಷ್ಟು ನಿಜವೋ ಅಷ್ಟೇ ಅಥವ ಅದಕ್ಕಿಂತ ಹೆಚ್ಚಾಗಿ ಮತ್ತೆ ನಮ್ಮ ಶಾಸ್ತ್ರೀಯ ನೃತ್ಯದೆಡೆಗೆ ಯುವಜನರು ಒಲವು ತೋರುತ್ತಿದ್ದಾರೆ..ಇದು ದಿಟ. ಚಕ್ರ ತಿರುಗಲೇ ಬೇಕು. ನಮ್ಮದನ್ನು ವಿದೇಶಿಯರು ಪ್ರೀತಿಸಿ ಕಲಿಯುತ್ತಿರುವುದನ್ನು ನೋಡಿ ಮತ್ತೆ ನಮ್ಮವರು ಶಾಸ್ತ್ರೀಯ ನೃತ್ಯದತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿದೇಶಗಳಲ್ಲಿ ವಿದೇಶಿಯರೇ ನಮ್ಮವರಿಗೆ ಭರತನಾಟ್ಯವನ್ನು ಪಾಠ ಮಾಡುತ್ತಿದ್ದಾರೆ ! ನಮ್ಮ ವಿದ್ಯೆಯನ್ನು ನಾವೇ ಬೇರೆಯವರಿಂದ ಕಲಿಯುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸವಲ್ಲದೆ ಮತ್ತೇನು? ಆದರೆ ಇಷ್ಟು ತಡವಾಗಿಯಾದರು ನಮ್ಮವರು ಎಚ್ಚೆತ್ತುಕೊಳ್ಳುತ್ತಿದ್ದಾರಲ್ಲ ಎಂಬುದೇ ಸಮಾಧಾನಕರ ಸಂಗತಿ.
ಹಾಗಂತ ಇಲ್ಲಿ ಕಾಂಟೆಂಪರರಿಯ ಪ್ರಭಾವವೇನು ಕಡಿಮೆಯಾಗಿಲ್ಲ. ಆದರೆ ಮಧ್ಯ ಒಂದಷ್ಟು ಕಾಲ ಕಾಂಟೆಂಪರರಿಯಿಂದ ಸೊರಗಿ ಹೋದಂತಾಗಿದ್ದ ನಮ್ಮ ಶಾಸ್ತ್ರೀಯ ನೃತ್ಯ ಈಗ ಮತ್ತೆ ಚಿಗುರೊಡೆಯುತ್ತಿದೆ. ಹೈ ಕ್ಲಾಸ್ ಪೀಪಲ್ ಗಳು ಬ್ರೇಕ್, ಕಾಂಟೆಂಪರರಿ ಅಥವ ಸಾಲ್ಸಾ ನೃತ್ಯಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ಮಧ್ಯಮ ವರ್ಗದ ಜನ ಮಾತ್ರ ಶಾಸ್ತ್ರೀಯ ನೃತ್ಯಕ್ಕೆ ಪ್ರಾಧನ್ಯತೆ ನೀಡುತ್ತಿದ್ದಾರೆ..ಅವರಿಗೆ ಗೊತ್ತು ಭವಿಷ್ಯದಲ್ಲಿ ಮತ್ತೆ ಇದೇ ಪ್ರಚಲಿತಕ್ಕೆ ಬರುತ್ತದೆ ಎಂಬ ಸತ್ಯ.
ಚಿತ್ರಗಳ ವಿವರ-
೧-ಇಸಾದೋರಾ ದುನ್‌ಕಾನ್
೨-ಮರ್ತ ಗ್ರಹಮ್
೩ ಮತ್ತು ೪- ಉದಯ ಶಂಕರ್
೫-ಮಂಜುಶ್ರೀ ಸರ್ಕಾರ್
೬-೭-೮- ರಂಜಬತಿ ಸರ್ಕಾರ್
೯ ರಿಂದ ೧೫- ಮಾಧುರಿ ಉಪಾದ್ಯ
೧೬-೧೭- ೧೮-ಪ್ರೊಫ಼ೆಸರ್ ಎಮ್.ಆರ್ ಕೃಷ್ಣಮೂರ್ತಿ -ಹಿರಿಯ ನಾಟ್ಯಾಚಾರ್ಯ
೧೯-೨೦-೨೧- ರೂಪಾ ಅಯ್ಯರ್
೨೨-ನವೀನ-ಯುವ ನರ್ತಕ
೨೩-ವಿಕ್ಟೋರಿಯಾ ಡಿಸೋಜ- ಈವೆಂಟ್ ಮ್ಯಾನೇಜರ್
**********************************************
23-11-2011