ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ತಾರಾಗಣದ ‘ಹೊಂದಿಸಿ ಬರೆಯಿರಿ’ ಸಿನಿಮಾ ದಿನದಿಂದ ದಿನಕ್ಕೆ ಸ್ಯಾಂಡಲ್ ವುಡ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸಿನಿಮಾದ ಪ್ರತಿಯೊಂದು ಸ್ಯಾಂಪಲ್ ಗಳು ಪ್ರಾಮಿಸಿಂಗ್ ಆಗಿದ್ದು ಚಿತ್ರರಸಿಕರ ಮನಗೆದ್ದಿವೆ. ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ ತಂಡ ಭರ್ಜರಿ ಪ್ರಚಾರದ ಮೂಲಕವೂ ಗಮನ ಸೆಳೆಯುತ್ತಿದೆ. ‘ಹೊಂದಿಸಿ ಬರೆಯಿರಿ’ ಹಾಡುಗಳ ಮೆರವಣಿಗೆ ಆರಂಭವಾಗಿದ್ದು, ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳು ಕೇಳುಗರ ಮನ ಗೆದ್ದಿದೆ, ಇದೀಗ ಚಿತ್ರದ ಬಹು ನಿರೀಕ್ಷಿತ ಮೂರನೇ ಸಾಂಗ್ ಬಿಡುಗಡೆ ಮಾಡಿದೆ ಚಿತ್ರತಂಡ.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯದಲ್ಲಿ ಅರಳಿರುವ ‘ತಲೆಹರಟೆ ಮಾಡುತ್ತಿದೆ ಈ ಹೃದಯ’ ಎಂಬ ಪೆಪ್ಪಿ ಸಾಂಗ್ ಇದಾಗಿದೆ. ಐಶ್ವರ್ಯ ರಂಗರಾಜನ್, ವರುಣ್ ರಾಮಚಂದ್ರ ಈ ಹಾಡಿಗೆ ದನಿಯಾಗಿದ್ದಾರೆ. ಜೋ ಕೋಸ್ಟ ಅವರ ಫ್ರೆಶ್ ಮ್ಯೂಸಿಕ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಬೆಳಕಲಿ’ ಹಾಗೂ ‘ಓ ಕವನ’ ಹಾಡುಗಳು ಸಿನಿರಸಿಕರಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಈ ಹಾಡು ಕೂಡ ಕೇಳುಗರನ್ನು ಮೋಡಿ ಮಾಡುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ನವೆಂಬರ್ 18ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಆದ್ರೆ ಸಿನಿಮಾದ ಅಂತಿಮ ಹಂತದ ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ನವೆಂಬರ್ 18ರ ಬದಲಾಗಿ ಹೊಸದಾದ ರಿಲೀಸ್ ಡೇಟ್ ಸಿನಿಮಾ ತಂಡ ಅನೌನ್ಸ್ ಮಾಡಲಿದೆ ಎಂದು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಿಳಿಸಿದ್ದಾರೆ.
ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಒನ್ ಲೈನ್ ಕಹಾನಿ ಸುತ್ತ ಹೆಣೆಯಲಾದ ಸುಂದರವಾದ ಕಥಾಹಂದರವೇ ‘ಹೊಂದಿಸಿ ಬರೆಯಿರಿ’. ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಚಿತ್ರಣವಿದೆ ಹಾಗೂ ಭಾವನಾತ್ಮಕ ಜರ್ನಿ ಇದೆ.
ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಗುಳ್ಟು ಚಿತ್ರ ಖ್ಯಾತಿಯ ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡಿದ್ದಾರೆ.