ಚಿತ್ರಸಂಗೀತ

‘ಥಗ್ಸ್ ಆಫ್ ರಾಮಘಡ’ ಮೊದಲ ಸಾಂಗ್ ಬಿಡುಗಡೆ- ಮುಂದಿನ ವರ್ಷ ಸಿನಿಮಾ ತೆರೆಗೆ

ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದಾಗಿದ್ದು, ಹಾಡು ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ.

‘ನಗು ನಗುತ ಆವರಿಸೋ ಈ ಹುಡುಗಿ’ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು ಪ್ರೀತಿಯ ಹಾಡಿಗೆ ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್, ಅನುರಾಧ ಭಟ್ ದನಿಯಾಗಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಈ ಹಾಡಿಗಿದೆ. ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಸೂರ್ಯ ಕಿರಣ್, ಪ್ರಭು ಹೊಸದುರ್ಗ,ಅಶ್ವಿನ್ ಹಾಸನ್,ಚಂದನ್ ರಾಜ್, ಮಹಾಲಕ್ಷ್ಮಿ, ಟೈಗರ್ ಗಂಗ, ಜಗದೀಶ್,ಸೂರ್ಯಕಿರಣ್
ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಹಾಡು ಬಿಡುಗಡೆ ಮಾತನಾಡಿದ ನಟ ಪೃಥ್ವಿ ಅಂಬರ್ ‘ಥಗ್ಸ್ ಆಫ್ ರಾಮಘಡ’ ತುಂಬಾ ಕ್ರಿಯೇಟಿವ್ ತಂಡ ಅಂತ ಹೇಳಬಹುದು, ಪ್ರತಿ ಶಾಟ್, ಎಲಿಮೆಂಟ್ ನಲ್ಲೂ ಹೊಸತನವಿದೆ. ಹಾಡು ನೋಡಿ ತುಂಬಾ ಖುಷಿ ಆಯ್ತು. ನಿರ್ದೇಶಕರು ತುಂಬಾ ಎಫರ್ಟ್ ಹಾಕಿ, ತುಂಬಾ ಚೆನ್ನಾಗಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇಡೀ ಚಿತ್ರತಂಡ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು.

ಐಟಿ ಕ್ಷೇತ್ರ ಹಾಗೂ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ ಅನುಭವವಿದೆ. ಸಿನಿಮಾ ಮೇಲಿನ ಅಪಾರ ಆಸಕ್ತಿಯಿಂದ ಚಿತ್ರರಂಗದ ಕಡೆ ಮುಖ ಮಾಡಿದೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಮೂಲತಃ ನಾನು ಯಾದಗಿರಿಯವನು. ಈ ಚಿತ್ರದ ಕಥೆ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದ್ದು ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಸಿನಿಮಾ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಒಂದು ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದು ಅದಕ್ಕೆಂದೇ ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ರಿಯಲಿಸ್ಟಿಕ್ ಆಗಿಯೇ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ ಎಂದು ನಿರ್ದೇಶಕ ಕಾರ್ತಿಕ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಾಯಕ ಚಂದನ್ ರಾಜ್ ಮಾತನಾಡಿ ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಸಿನಿಮಾದಲ್ಲೇ ಗೆಲ್ಲಬೇಕು ಅನ್ನೋದು ನನ್ನ ಕನಸು. ಈ ಚಿತ್ರದ ಸ್ಕ್ರೀಪ್ಟ್, ಸ್ಟೋರಿ ಲೈನ್ ಕೇಳಿದಾಗ ಏನೋ ವಿಶೇಷತೆ ಇದೆ ಅನ್ನೋದು ಗೊತ್ತಾಯ್ತು. ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ. ಅಶ್ವಿನ್ ಹಾಸನ್ ಅವರಿಂದ ಈ ಪಾತ್ರ ನನಗೆ ಸಿಕ್ತು ಅವರಿಗೆ ತುಂಬಾ ಧನ್ಯವಾದ ತಿಳಿಸುತ್ತೇನೆ. ಸಿನಿಮಾ ಬಿಡುಗಡೆಯಾದ ಮೇಲೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡ್ರು.

ನಾಯಕ ನಟಿ ಮಹಾಲಕ್ಷಿ ಮಾತನಾಡಿ ನನ್ನ ಜರ್ನಿ ಆರಂಭವಾಗಿದ್ದು ರಂಗಭೂಮಿಯಿಂದ. ನನ್ನ ಪಾತ್ರ ಉತ್ತರ ಕರ್ನಾಟಕದ ಒಂದು ಕುಗ್ರಾಮದಲ್ಲಿರುವ ಹುಡುಗಿಯ ಪಾತ್ರ. ಎಷ್ಟೇ ನೋವಿದ್ರು ನಗು ನಗುತಾ ಇರುವ ಪಾತ್ರ ನನ್ನದು. ಈ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕಲಿತು ಡಬ್ ಮಾಡಿದ್ದೇನೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಲ್ಲರೂ ನೋಡಿ ಆಶೀರ್ವಾದ ಮಾಡಿ ಎಂದು ತಿಳಿಸಿದ್ರು.

ಅಶ್ವಿನ್ ಹಾಸನ್ ಮಾತನಾಡಿ ಲಾಕ್ ಡೌನ್ ನಲ್ಲಿ ಕೇಳಿದ ಕಥೆ ಇದು. ನೀವು ಸಿನಿಮಾದಲ್ಲಿ ಒಂದು ಲೀಡ್ ರೋಲ್ ನಲ್ಲಿ ಇರ್ತಿರಾ ಎಂದಾಗ ಶಾಕ್ ಆಯ್ತು. ನಿರ್ದೇಶಕರು ಏನು ಕಥೆ ಬರೆದಿದ್ದಾರೆ ಅದಕ್ಕೆ ನ್ಯಾಯ ಒದಗಿಸಬೇಕು ಅನ್ನೋದು ನನ್ನ ಪಾಲಿಸಿ. ಆ ಪ್ರಯತ್ನ ಮಾಡಿದ್ದೇನೆ. ಈ ತಂಡದಲ್ಲಿರುವ ಎಲ್ಲರಿಗೂ ಸಿನಿಮಾನೇ ಉಸಿರು. ಪ್ರತಿಯೊಬ್ಬರು ತುಂಬಾ ಡೆಡಿಕೇಶನ್ ನಿಂದ ಈ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಅನ್ನೋ ಭರವಸೆ ನಮಗಿದೆ, ಗೆಲ್ಲಲೇಬೇಕು ಎಂದು ಸಿನಿಮಾ ಮಾಡಿದ್ದೀವಿ ಎಂದು ಅನಿಸಿಕೆ ಹಂಚಿಕೊಂಡ್ರು.

ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.