– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಅರ್ಥವಿಹುದಲ್ಲಿ ನಿಶ್ಚಿತವಾಗಿ ಶೃಂಗಾರದ ಸಂಕೋಲೆಯಲ್ಲಿ
ಇತ್ಯರ್ಥವಿರಬಹುದಲ್ಲಿ ತೀರಿದ ಸುಖತೀರದಲ್ಲಿ
ಸಾರ್ಥಕತೆಯ ಜೋಡಿಹಕ್ಕಿಗಳ ಸ್ವರತಾರಕದಲ್ಲಿ
ಭರ್ತಿ ನಗುವಿನ ಭರದಲಿ ಸಂತಸದ ಸಂಭ್ರಮದಲಿ
ತುಸು ವಿಷಯಕೂ ತಾಸು ಮಾತು ತಡವರಿಕೆ
ನಿಶ್ಚಿತ ಅರ್ಥಗಳ ಹೆಕ್ಕುವಲ್ಲಿ ಆ ಜೋಡಿಹಕ್ಕಿಗಳಲ್ಲಿ
ಬಿತ್ತುವಲಿ ಬೆಳೆಯುವಲಿ ಬಳಲಿಕೆಯ ಬಳಕೆಯಲಿ
ಅತ್ತು ಕರೆದು ಮುತ್ತನೆರೆದು ಪ್ರೇಮ ಬತ್ತಲಾರದಂತೆ
ಹೊತ್ತು ಕೊಂಡೊಯ್ಯುವಾಗ ಸಾಕಿಸಲಹಿಕೊಳ್ಳಬೇಕು
ಪರಸ್ಪರ ಪರರಾಗದೆ ಪಾರಂಗತರಾದಾಗ ಒಲವಲ್ಲಿ
ಅಪಸ್ವರ ನುಡಿಸದೆ ಪ್ರೇಮವೀಣೆಯಲ್ಲಿ ಪ್ರವೀಣರಾದಾಗ
ನಿಶ್ಚಿತ ಅರ್ಥಗಳು ಸಿಗಬಹುದು ಆ ಜೋಡಿಜಾಡಿಗೆ
ಒಡಗೂಡಿ ಗುಡಿಮಾಡಿ ಒಡನಾಡಿಯೇ ಜೀವನಾಡಿ
ಅಡಿಗಡಿಗೂ ಸವಿಭಾವಗಳ ಜೊತೆ ಗೀತೆಹಾಡಿ
ಸನಿಹದಲ್ಲಿರಲು ಸಹನೆ ತಾನೇ ಪ್ರೇಮ ಅವಾಹನೆ
ಆಸೆಯುಸಿರನುಸಿರಾಡುತ್ತಾ ಕಾಮನೆಗಳ
ಹಸೆಮಣೆ ಏರಿದಾಗ ನುಡಿಪ ವೀಣೆ ನಲಿವ ನಾದ
ನಿಶ್ಚಿತ ಅರ್ಥಗಳ ಪಡೆಯೆ ಸಾರ್ಥಕತೆಯ ಸ್ವಾದ
ಜೋಡಿತಂತಿಗಳ ಸುನಾದ ಸದಾ ಜೀವೋನ್ಮಾದ
ಅರ್ಥವಿಹುದಲ್ಲಿ ನಿಶ್ಚಿತವಾಗಿ ಶೃಂಗಾರದ ಸಂಕೋಲೆಯಲ್ಲಿ
ಸಾರ್ಥಕತೆಗಳ ಹೆಕ್ಕುವಲ್ಲಿ ಆ ಜೋಡಿಹಕ್ಕಿಗಳಲ್ಲಿ
ಚಿನ್ಮಯ ಎಂ ರಾವ್
2005
*******************