– ಡಾ.ಚಿನ್ಮಯ ಎಂ.ರಾವ್
(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)
ಬಾಳ ಬಂಡಿಯಲಿ ನಮ್ಮದೀ ಪಯಣ
ಹೊತ್ತು ಸಾಗಿಸುವ ಕಾಯಕದ ಋಣ
ಎಳೆವ ಜೀವಕೆ ದಣಿವಾಗಿಸುವ
ಆ ಪ್ರತೀಕ್ಷಣ ಬಂಡಿಯಲಿ ತಲ್ಲಣ
ಕಿಂಚಿತ್ತಾದರೂ ಬೇಡವೆ? ಕರುಣಾ
ಆಯ ತಪ್ಪಲು ಕಾಣದ ಕಾರಣ
ಅರಿತು ನುರಿತರೂ ಬುದ್ಧಿಮಾತ್ರ ತರುಣ
ಬಿದ್ದಮಾತ್ರಕೆ ಮಾಡದಿರೆ ಚಿಂತನ
ನೆಲಸೇರುವ ನಿತ್ಯಕಥನ, ಪತನ
ಕೂಡಿದಷ್ಟೂ ಭಾರ ಎಳೆವ ಕಂಕಣ
ಸೂತ್ರಧಾರನ ಸೂತ್ರದಲೆಮ್ಮ ತ್ರಾಣ
ಅತಿಭಾರದತಿಯಾಸಗೆಲ್ಲಿ ನಿಲ್ದಾಣ?
ಮೇಲೇರುವಾಗ ಹೊರಲಾಗದೆ ನಿತ್ರಾಣ
ಕಷ್ಟಕಾಷ್ಠಗಳಿಂದ ತುಂಬಿರುವ ಯಾನ
ಇಷ್ಟಸಿದ್ಧಿಗಾಗಿ ಸಂಕಷ್ಟಕಾಹ್ವಾನ
ಸಿಹಿಕಹಿಗಳ ಹೊರೆಯೇ ಈ ಜೀವನ
ಅನುಭವಿಸಲು ಬೇಕು ಸಮಾಧಾನ
ಚಿತ್ರ-ಕವನ : ಚಿನ್ಮಯ ಎಂ ರಾವ್ (2005)
********