ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನದಿಂದ ಹೊಸ ಸಂಚಲನವೆದ್ದಿದೆ. ಹೊಸತನ, ಪ್ರಯೋಗಶೀಲತೆ ಮತ್ತು ವಿಭಿನ್ನ ಬಗೆಯ ಕಥೆಯ ಕಾರಣದಿಂದ ಕನ್ನಡ ಚಿತ್ರರಂಗವೀಗ ಕಳೆಗಟ್ಟಿದೆ. ಅಂತಾದ್ದೇ ಆವೇಗದಲ್ಲಿ ‘ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ಎಂಬ ಸಿನಿಮಾ ಮೂಲಕ ನವ ನಿರ್ದೇಶಕನ ಆಗಮನವಾಗ್ತಿದೆ. ಅವರೇ ಸುನೀಲ್ ಕುಮಾರ್ ಬಸವಂತಪ್ಪ. ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿ, ‘ಆವಾಹಯಾಮಿ’, ‘ಜವ’ ಚಿತ್ರಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಸುನೀಲ್ ‘ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ನವೆಂಬರ್ 4ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಜೊತೆಗೆ ಚೇತನ್ ಗಂದರ್ವ ಹಾಡಿರುವ ‘ಹೇ ಯಾ’ ಹಾಗೂ ಸಖತ್ ಸಿನಿಮಾ ಖ್ಯಾತಿಯ ಪಂಚಮ್ ಜೀವ ಹಾಡಿರುವ ‘ತಂದಾರಿ ನಾರೇ’ ಹಾಡುಗಳು ಬಿಡುಗಡೆಯಾಗಿ ಕೇಳುಗರ ಮನಸೂರೆ ಗೊಂಡಿವೆ. ಈ ಎರಡೂ ಹಾಡುಗಳಿಗೆ ನಿರ್ದೇಶಕ ಸುನೀಲ್ ಕುಮಾರ್ ಬಸವಂತಪ್ಪ ಸಾಹಿತ್ಯ ಬರೆದಿದ್ದಾರೆ. ಬಿಡುಗಡೆಗೂ ಮುನ್ನವೇ ಮೆಲ್ಬರ್ನ್ ಹಾಗೂ ಬೆಂಗಳೂರಿನಲ್ಲಿ ಪ್ರೀಮಿಯರ್ ಆಗಿರುವ ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರತಂಡಕ್ಕೆ ಹೊಸ ಭರವಸೆ ನೀಡಿದೆ.
ನವ ಪ್ರತಿಭೆಗಳಿಂದ ಕೂಡಿರುವ ಈ ಚಿತ್ರವನ್ನು ಧ್ವನಿ ಸಿನಿ ಕ್ರಿಯೇಷನ್ನಡಿ ದರ್ಶನ್ ರಾಘವಯ್ಯ ನಿರ್ಮಾಣ ಮಾಡಿದ್ದು ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಉಳಿದಂತೆ ಬಾಲರಾಜ್ ವಾಡಿ, ಮನಸ್ ಗೇಬ್ರಿಯಲ್, ರೇವತಿ ಹೊಳ್ಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಂತ್ ಬದ್ರಿ ಛಾಯಾಗ್ರಹಣ, ಯತೀಶ್ ವೈಡಿ ಸಂಕಲನ, ಶ್ರೀಹರಿ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದಿರುವ ನಿರ್ದೇಶಕ ಸುನೀಲ್ ಕುಮಾರ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಸಾಕಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟರ್ ಹೊತ್ತ ‘ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ’ ಈಗಾಗಲೇ ಪ್ರೀಮಿಯರ್ ಶೋ ಗಳಲ್ಲಿ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದ್ದು ನವೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಂತರದ ದಿನಗಳಲ್ಲಿ ಯುಕೆ, ಯುಎಸ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.